ಕನ್ನಡ ಸುದ್ದಿ  /  Sports  /  Mandhana Reaction After Striking Gold In Wpl Auction

Smriti Mandhana to RCB: ಆರ್‌ಸಿಬಿಗೆ '18'ರ ನಂಟು; ಭಾರಿ ಮೊತ್ತಕ್ಕೆ ಖರೀದಿಯಾದ ಬೆನ್ನಲ್ಲೇ 'ನಮಸ್ಕಾರ ಬೆಂಗಳೂರು' ಅಂದ್ರು ಸ್ಮೃತಿ

ಇತ್ತ ಡಬ್ಲ್ಯೂಪಿಎಲ್‌ ಹರಾಜು ಪ್ರಕ್ರಿಯೆ ನಡೆಯುತ್ತಿದ್ದರೆ, ಅತ್ತ ದಕ್ಷಿಣ ಆಫ್ರಿಕಾದಲ್ಲಿ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ತೆರಳಿರುವ ಟೀಮ್‌ ಇಂಡಿಯಾ ಬಳಗದಲ್ಲಿ ಸಂಭ್ರಮ ಮನೆ ಮಾಡಿದೆ. ಸ್ಮೃತಿ ಮಂಧನ ಇಂದು ಹರಾಜಿಗೆ ಒಳಪಟ್ಟ ಮೊದಲ ಆಟಗಾರ್ತಿ. ಅವರು ದೊಡ್ಡ ಮೊತ್ತವನ್ನು ಪಡೆಯುತ್ತಿದ್ದಂತೆಯೇ, ತಂಡದ ಸದಸ್ಯರು ಅಭಿನಂದಿಸಿದರು.

ಸ್ಮೃತಿ ಮಂಧನಾ - ವಿರಾಟ್‌ ಕೊಹ್ಲಿ
ಸ್ಮೃತಿ ಮಂಧನಾ - ವಿರಾಟ್‌ ಕೊಹ್ಲಿ (RCB twitter)

ಭಾರತ ಕ್ರಿಕೆಟ್ ತಂಡದ ಸ್ಟೈಲಿಷ್‌ ಹಾಗೂ ಸ್ಫೋಟಕ ಬ್ಯಾಟರ್ ಸ್ಮೃತಿ ಮಂಧನಾ, ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಹರಾಜಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪಾಲಾಗಿದ್ದಾರೆ. ಈವರೆಗೆ ನಡೆದ ಹರಾಜಿನಲ್ಲಿ ಸ್ಮೃತಿ ದುಬಾರಿ ಮೊತ್ತ ಪಡೆದ ಆಟಗಾರ್ತಿಯಾಗಿ ಹೊರಹೊಮ್ಮಿದ್ದು, ಬರೋಬ್ಬರಿ 3.4 ಕೋಟಿ ರೂಪಾಯಿಗೆ ಆಟಗಾರ್ತಿಯನ್ನು ಬೆಂಗಳೂರು(RCB) ತಂಡ ಖರೀದಿಸಿದೆ.

ಸ್ಮೃತಿಯನ್ನು ಆರ್‌ಸಿಬಿ ತಂಡವು ಭಾರಿ ಮೊತ್ತಕ್ಕೆ ಬಿಡ್‌ ಮಾಡಲು ಹಲವು ಕಾರಣಗಳಿವೆ. ಇದಕ್ಕೆ ಮೊದಲನೇ ಕಾರಣ ಅವರ ಸ್ಫೋಟಕ ಆಟ. ವೀರೇಂದ್ರ ಸೆಹವಾಗ್‌ರಂತೆಯೇ ಅಗ್ರ ಕ್ರಮಾಂಕದಲ್ಲಿ ನಿರ್ಭೀತಿಯಿಂದ ಬ್ಯಾಟ್‌ ಬೀಸುವ ಸ್ಮೃತಿ, ಟಿ20 ಮಾದರಿಯಲ್ಲೂ ಸುದೀರ್ಘ ಇನ್ನಿಂಗ್ಸ್‌ ಕಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಭಾರತ ತಂಡದಲ್ಲಿ ಹಲವು ವರ್ಷಗಳಿಂದ ಆಡುತ್ತಿರುವ ಅನುಭವ ಇವರಿಗಿದೆ. ಇದಲ್ಲದೆ ವನಿತೆಯರ ಬಿಗ್‌ಬ್ಯಾಷ್‌ ಹಾಗೂ ದಿ ಹಂಡ್ರೆಡ್ಸ್‌ ಲೀಗ್‌ನಲ್ಲೂ ಆಡಿದ ಅನುಭವ ಇವರಿಗಿದೆ. ಇದುವರೆಗೂ ಸ್ಮೃತಿ ಭಾರತದ ಪರ ಆಡಿರುವ 112 ಟಿ20 ಪಂದ್ಯಗಳಲ್ಲಿ 27.32 ಸರಾಸರಿಯಲ್ಲಿ ಬ್ಯಾಟ್‌ ಬೀಸಿ 2,651 ರನ್ ಗಳಿಸಿದ್ದಾರೆ. ಇದರಲ್ಲಿ 20 ಅರ್ಧಶತಕಗಳು ಸೇರಿವೆ. ಮಂಧನ ಸ್ಟ್ರೈಕ್ ರೇಟ್ 123ಕ್ಕಿಂತ ಹೆಚ್ಚಿದೆ.

ಆರ್‌ಸಿಬಿಗೂ 18ಕ್ಕೂ ಅವಿನಾಭಾವ ನಂಟು

ಐಪಿಎಲ್‌ನಲ್ಲೇ ಜನಪ್ರಿಯ ಹಾಗೂ ವಿಶೇಷ ಅಭಿಮಾನಿ ಬಳಗವನ್ನು ಹೊಂದಿರುವ ತಂಡ ಆರ್‌ಸಿಬಿ. ವಿರಾಟ್ ಇರುವ ಕಾರಣಕ್ಕೆ ಅದು ಮತ್ತಷ್ಟು ಜನಪ್ರಿಯ. ವಿರಾಟ್‌ ಜೆರ್ಸಿ ಸಂಖ್ಯೆ 18. ವನಿತೆಯರ ಕ್ರಿಕೆಟ್‌ನಲ್ಲಿ ಸ್ಮೃತಿ ಜೆರ್ಸಿ ಸಂಖ್ಯೆ ಕೂಡಾ 18. ಪುರುಷರ ಕ್ರಿಕೆಟ್‌ನಲ್ಲಿ ಕೊಹ್ಲಿ ಎಷ್ಟು ಜಜನಪ್ರಿಯರೋ, ವನಿತೆಯರ ಕ್ರಿಕೆಟ್‌ನಲ್ಲಿ ಮಂಧನ ಕೂಡಾ ಅಷ್ಟೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಾಗಿ ಕರ್ನಾಟಕದ ಅಭಿಮಾನಿಗಳು ಅವರನ್ನು ಆರ್‌ಸಿಬಿ ತಂಡದಲ್ಲಿ ಬಯಸಿದ್ದರು. ಆರ್‌ಸಿಬಿ ಫ್ರಾಂಚೈಸಿ ಕೂಡಾ ಇವರನ್ನು ಎಷ್ಟೋ ಮೊತ್ತ ಕೊಟ್ಟದಾರೂ ಖರೀದಿಸುವುದಾಗಿ ಮೊದಲೇ ನಿಶ್ಚಯಿಸಿತ್ತು. ಅದರಂತೆಯೇ ಅವರು ಬೆಂಗಳೂರು ಸೇರಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಆಟಗಾರ್ತಿಯರ ಸಂಭ್ರಮ

ಇತ್ತ ಡಬ್ಲ್ಯೂಪಿಎಲ್‌ ಹರಾಜು ಪ್ರಕ್ರಿಯೆ ನಡೆಯುತ್ತಿದ್ದರೆ, ಅತ್ತ ದಕ್ಷಿಣ ಆಫ್ರಿಕಾದಲ್ಲಿ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ತೆರಳಿರುವ ಟೀಮ್‌ ಇಂಡಿಯಾ ಬಳಗದಲ್ಲಿ ಸಂಭ್ರಮ ಮನೆ ಮಾಡಿದೆ. ಸ್ಮೃತಿ ಮಂಧನ ಇಂದು ಹರಾಜಿಗೆ ಒಳಪಟ್ಟ ಮೊದಲ ಆಟಗಾರ್ತಿ. ಅವರು ದೊಡ್ಡ ಮೊತ್ತವನ್ನು ಪಡೆಯುತ್ತಿದ್ದಂತೆಯೇ, ತಂಡದ ಸದಸ್ಯರು ಅಭಿನಂದಿಸಿದರು.

ನಮಸ್ಕಾರ ಬೆಂಗಳೂರು ಎಂದ ಮಂಧನ

ಆರ್‌ಸಿಬಿಗೆ ಆಯ್ಕೆಯಾಗಿದ್ದಕ್ಕೆ ಸ್ಮೃತಿ ಮಂಧನ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿಯೋ ಸಿನೆಮಾಗೆ ಪ್ರತಿಕ್ರಿಯೆ ನೀಡಿದ ಅವರು, ಡಬ್ಲ್ಯೂಪಿಎಲ್‌ ನಮಗೊಂದು ಉತ್ತಮ ವೇದಿಕೆ. ಅದರಲ್ಲೂ ಆರ್‌ಸಿಬಿಯಂತಹ ಫ್ರಾಂಚೈಸಿ ಪರ ಆಡಲು ತುಂಬಾ ಸಂತಸವಾಗುತ್ತಿದೆ. ನಮಸ್ಕಾರ ಬೆಂಗಳೂರು ಎಂದು ಹೇಳಲು ಖುಷಿಯಾಗುತ್ತಿದೆ. ನಿಮ್ಮ ಬೆಂಬಲ ನಮಗೆ ತುಂಬಾ ಮುಖ್ಯ ಎಂದು ಸ್ಮೃತಿ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

“ನಾವು ಪುರುಷರ ಹರಾಜನ್ನು ನೋಡುತ್ತಿದ್ದೆವು. ಮಹಿಳೆಯರು ಅದೇ ರೀತಿಯ ಹರಾಜನ್ನು ಪಡೆಯಲು ಇದು ಒಂದು ದೊಡ್ಡ ಕ್ಷಣವಾಗಿದೆ. RCBಯ ಪರಂಪರೆ ತುಂಬಾ ದೊಡ್ಡದಾಗಿದೆ. ಅದು ದೊಡ್ಡ ಅಭಿಮಾನಿಗಳ ಬಳಗವನ್ನು ನಿರ್ಮಿಸಿದೆ. ನಮಸ್ಕಾರ ಬೆಂಗಳೂರು, ಕೆಂಪು ಮತ್ತು ಗೋಲ್ಡನ್‌ ಜೆರ್ಸಿ ಧರಿಸಲು ಉತ್ಸುಕಳಾಗಿದ್ದೇನೆ. ಅಲ್ಲದೆ ಕಪ್ ಗೆಲ್ಲುವ ಗುರಿ ಇದೆ,” ಎಂದು ಮಂಧನ ಹೇಳಿದ್ದಾರೆ.

ಮತ್ತೊಂದೆಡೆ ಭಾರತದ ಪ್ರಮುಖ ವೇಗಿ ರೇಣುಕಾ ಸಿಂಗ್‌ ಕೂಡಾ ಆರ್‌ಸಿಬಿ ಪಾಲಾಗಿದ್ದಾರೆ.