ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ, ಆದರೆ ಒಲಿಂಪಿಕ್ ಮೆಡಲ್ ತನ್ನಿ: ಸಿಎಂ ಸಿದ್ದರಾಮಯ್ಯ ಕರೆ
ಕನ್ನಡ ಸುದ್ದಿ  /  ಕ್ರೀಡೆ  /  ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ, ಆದರೆ ಒಲಿಂಪಿಕ್ ಮೆಡಲ್ ತನ್ನಿ: ಸಿಎಂ ಸಿದ್ದರಾಮಯ್ಯ ಕರೆ

ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ, ಆದರೆ ಒಲಿಂಪಿಕ್ ಮೆಡಲ್ ತನ್ನಿ: ಸಿಎಂ ಸಿದ್ದರಾಮಯ್ಯ ಕರೆ

CM Siddaramaiah: ಮುಂದಿನ ಬಜೆಟ್​​ನಲ್ಲಿ ಮಂಗಳೂರು, ಉಡುಪಿ ಕ್ರೀಡಾಂಗಣಗಳ ಉನ್ನತೀಕರಣಕ್ಕೆ ತಲಾ 3 ಕೋಟಿ ರೂಪಾಯಿ ನಿಗದಿ ಮಾಡ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ: ಆದರೆ ಒಲಿಂಪಿಕ್ ಮೆಡಲ್ ತನ್ನಿ: ಸಿಎಂ ಸಿದ್ದರಾಮಯ್ಯ ಕರೆ
ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ: ಆದರೆ ಒಲಿಂಪಿಕ್ ಮೆಡಲ್ ತನ್ನಿ: ಸಿಎಂ ಸಿದ್ದರಾಮಯ್ಯ ಕರೆ

ಮಂಗಳೂರು: ಕ್ರೀಡಾಪಟುಗಳು, ಕೋಚ್​​ಗಳು ಮತ್ತು ಕ್ರೀಡಾ ಇಲಾಖೆ ಎಷ್ಟಾದರೂ ಹಣ-ಸವಲತ್ತು ಕೇಳಿ. ನಾನು ಕೊಡ್ತೀನಿ. ಆದರೆ ಒಲಿಂಪಿಕ್ಸ್​​ನಲ್ಲಿ ರಾಜ್ಯದ ಕ್ರೀಡಾ ಪಟುಗಳು ದೇಶಕ್ಕಾಗಿ ಮೆಡಲ್ ತನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಯುವಜನ ಮತ್ತು ಕ್ರೀಡಾ ಇಲಾಖೆ ಮತ್ತು ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕರ್ನಾಟಕ ಕ್ರೀಡಾಕೂಟ 2025 ನ್ನು ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಅಗತ್ಯ ವೇದಿಕೆ ಮತ್ತು ಉತ್ತಮ ಪ್ರೋತ್ಸಾಹ ಇಲ್ಲದಿದ್ದರೆ, ಕ್ರೀಡಾ ಕ್ಷೇತ್ರ ಮತ್ತು ಕ್ರೀಡಾಪಟುಗಳು ಬೆಳವಣಿಗೆ ಆಗಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಸರ್ಕಾರ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಹಾಜರಾತಿ ಸೇರಿ ಇನ್ನಿತರೆ ರಿಯಾಯಿತಿಗಳನ್ನು ಕೊಡುವ ಬಗ್ಗೆ ಕ್ಯಾಬಿನೆಟ್​ನಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪುನರುಚ್ಚರಿಸಿದ್ದಾರೆ.

ಮುಂದಿನ ಬಜೆಟ್​​ನಲ್ಲಿ ಮಂಗಳೂರು, ಉಡುಪಿ ಕ್ರೀಡಾಂಗಣಗಳ ಉನ್ನತೀಕರಣಕ್ಕೆ ತಲಾ 3 ಕೋಟಿ ರೂಪಾಯಿ ನಿಗದಿ ಮಾಡ್ತೀನಿ. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಾಗ ಶೇ 2 ರಷ್ಟು ಉದ್ಯೋಗಗಳು ಕ್ರೀಡಾಟುಗಳಿಗೆ ಮೀಸಲು ಇಡಲಾಗುವುದು. ಜೊತೆಗೆ ಪೊಲೀಸ್, ಅರಣ್ಯ ಇಲಾಖೆ ಸೇರಿ ಸಮವಸ್ತ್ರ ಧರಿಸುವ ಹುದ್ದೆಗಳಿಗೆ ಶೇ 3 ರಷ್ಟು ಉದ್ಯೋಗ ಕ್ರೀಡಾಪಟುಗಳಿಗೆ ಉದ್ಯೋಗ ಮೀಸಲು ಇಡಲಾಗುವುದು ಎಂದು ಘೋಷಿಸಿದ್ದಾರೆ.

ಒಲಿಂಪಿಕ್ಸ್​​ನಲ್ಲಿ ಮೆಡಲ್ ತಂದವರಿಗೆ 6 ಕೋಟಿ ರೂಪಾಯಿ ಕೊಡ್ತೀವಿ. ಹಾಗೆಯೇ ಏಷ್ಯಾ ಕ್ರೀಡಾಕೂಟ ಮತ್ತು ರಾಷ್ಟ್ರಮಟ್ಟದಲ್ಲಿ ಪದಕ ತಂದವರಿಗೂ ನಗದು ಬಹುಮಾನ ಕೊಡುತ್ತಿದ್ದೇವೆ. ಈ ಪ್ರೋತ್ಸಾಹ ಸದುಪಯೋಗಪಡಿಸಿಕೊಂಡು ಮೆಡಲ್​​ಗಳನ್ನು ತಂದು ಕ್ರೀಡಾಕ್ಷೇತ್ರವನ್ನು ಬೆಳಗಿಸಿ, ಬೆಳೆಸಿ ಎಂದು ಕರೆ ನೀಡಿದ್ದಾರೆ. ವಿಧಾನಸಭಾ ಅಧ್ಯಕ್ಷ ಯುಟಿ ಖಾದರ್, ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ ಗೋವಿಂದರಾಜು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಇದ್ದರು.

ಯಾವೆಲ್ಲಾ ಕ್ರೀಡೆಗಳಿವೆ?

ಜನವರಿ 17ರಿಂದ ಜನವರಿ 23ರ ತನಕ ಕ್ರೀಡಾಕೂಟ ಆಯೋಜನೆಯಾಗಲಿದೆ. ಉಡುಪಿ ಮತ್ತು ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಒಟ್ಟು 23 ಕ್ರೀಡೆಗಳನ್ನು ಆಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾಡ್ಮಿಂಟನ್, ಬ್ಯಾಸ್ಕೆಟ್ ಬಾಲ್, ಫೆನ್ಸಿಂಗ್, ಫುಟ್ಬಾಲ್, ಹ್ಯಾಂಡ್​ಬಾಲ್, ಖೋಖೋ, ನೆಟ್​ಬಾಲ್, ಈಜು, ವುಶು, ವೇಟ್​ ಲಿಫ್ಟಿಂಗ್, ಟೇಕ್ವಾಂಡೋ ಕ್ರೀಡೆಗಳು ನಡೆಯಲಿವೆ. ಉಡುಪಿ ಜಿಲ್ಲೆಯಲ್ಲಿ ಆರ್ಚರಿ, ಅಥ್ಲೆಟಿಕ್ಸ್, ಸೈಕ್ಲಿಂಗ್, ಜುಡೋ, ಬಾಕ್ಸಿಂಗ್, ಕಬಡ್ಡಿ, ಕುಸ್ತಿ, ಹಾಕಿ, ಲಾನ್ ಟೆನಿಸ್, ಟೇಬಲ್ ಟೆನಿಸ್ ಕ್ರೀಡೆಗಳು ನಡೆಯಲಿವೆ. ಬೆಂಗಳೂರಿನಲ್ಲಿ ಜಿಮ್ನಾಸ್ಟಿಕ್ ಮತ್ತು ರೈಫಲ್ಸ್ ಶೂಟಿಂಗ್ ಆಯೋಜಿಸಲಾಗಿದೆ.

ಏನಿದು ಕರ್ನಾಟಕ ಕ್ರೀಡಾಕೂಟ?

ಕರ್ನಾಟಕ ಸರ್ಕಾರದಿಂದ ಇದೇ ಮೊದಲ ಬಾರಿಗೆ ಕರ್ನಾಟಕ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಈ ಹಿಂದೆ ಒಲಿಂಪಿಕ್ಸ್ ಮಾದರಿಯಲ್ಲಿ ರಾಜ್ಯಮಟ್ಟದಲ್ಲಿ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತಿತ್ತು. 2008ರಲ್ಲಿ ಮಂಡ್ಯ, ಮೈಸೂರಿನಲ್ಲಿ ಮೊದಲ ಬಾರಿಗೆ ರಾಜ್ಯ ಒಲಿಂಪಿಕ್ಸ್​ ನಡೆದಿತ್ತು. ನಂತರ ರಾಜ್ಯದಲ್ಲಿ ಭೀಕರ ಬರ, ಚುನಾವಣೆ ಕಾರಣಕ್ಕೆ ರದ್ದಾಗಿತ್ತು. 2017ರಲ್ಲಿ ಹುಬ್ಬಳ್ಳಿ, ಧಾರವಾಡ ಮತ್ತು ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ ಮತ್ತೆ ರದ್ದಾಗಿತ್ತು. ಇದೀಗ ಕರ್ನಾಟಕ ಕ್ರೀಡಾಕೂಟ ಎಂಬ ಹೆಸರಿನಲ್ಲಿ ಆಯೋಜನೆ ಮಾಡಲಾಗುತ್ತಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.