ಪ್ರೊ ಕಬಡ್ಡಿ 1000ನೇ ಪಂದ್ಯ; ವಾರಿಯರ್ಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಸೋಲು, ಪ್ಯಾಂಥರ್ಸ್‌ಗೆ ಜಯ
Pro Kabaddi League 1000th Match: ಬೆಂಗಳೂರು ಬುಲ್ಸ್ ಮತ್ತೆ ಸೋಲಿನ ಹಳಿಗೆ ಮರಳಿದೆ. ಮತ್ತೊಂದೆಡೆ ಯು ಮಂಬಾ ವಿರುದ್ಧ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಗೆದ್ದು ಬೀಗಿದೆ.
ಪ್ರೊ ಕಬಡ್ಡಿ ಲೀಗ್ (Pro Kabaddi League)ನ ಐತಿಹಾಸಿಕ 1000ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ (Bengaluru Bulls) ಮತ್ತೆ ಸೋಲು ಕಂಡಿದೆ. ಮಣಿಂದರ್ ಸಿಂಗ್ ಮಾಸ್ಟರ್‌ಕ್ಲಾಸ್ ಪ್ರದರ್ಶನಕ್ಕೆ ಗುಮ್ಮೋದು ಮರೆತ ಗೂಳಿಗಳು, ಬೆಂಗಾಲ್ ವಾರಿಯರ್ಸ್ ವಿರುದ್ಧ ಮಂಡಿಯೂರಿದ್ದಾರೆ. ಅಂತಿಮವಾಗಿ ಪಂದ್ಯದಲ್ಲಿ ಬುಲ್ಸ್ ವಿರುದ್ಧ ವಾರಿಯರ್ಸ್ 35-29 ಅಂಕಗಳಿಂದ ಜಯಗಳಿಸಿದೆ.
ವಾರಿಯರ್ಸ್ ಪರ ನಾಯಕ ಮಣಿಂದರ್ ಸಿಂಗ್ 9 ಅಂಕಗಳನ್ನು ಗಳಿಸಿದರು. ಇದೇ ವೇಳೆ ಡಿಫೆಂಡರ್ ಶುಭಂ ಶಿಂಧೆ 7 ಟ್ಯಾಕಲ್ ಪಾಯಿಂಟ್ ಗಳಿಸಿದರೆ, ಬೆಂಗಳೂರು ಬುಲ್ಸ್ ಪರ ಅಬ್ಬರಿಸಿದ ಬೆಂಕಿ ಭರತ್ 10 ಅಂಕಗಳೊಂದಿಗೆ ಸೂಪರ್ 10 ಪೂರ್ಣಗೊಳಿಸಿದರು. ಇದು ಈ ಪಂದ್ಯದಲ್ಲೇ ಉತ್ತಮ ಪ್ರದರ್ಶನ.
ಪಂದ್ಯದ ಆರಂಭದಲ್ಲಿಯೇ ಅಂಕಗಳನ್ನು ಕಲೆಹಾಕಿದ ಭರತ್, ತಂಡಕ್ಕೆ ಅಂಕಗಳನ್ನು ತಂದುಕೊಟ್ಟರು. 5 ನಿಮಿಷಗಳ ಆಟ ಆಗುವಷ್ಟರಲ್ಲೇ ಬುಲ್ಸ್ 5-2ರಿಂದ ಮುನ್ನಡೆ ಸಾಧಿಸಿತು. ಆ ಬಳಿಕ ಬೆಂಗಾಲ್ ಪರ ಮಣಿಂದರ್ ಸಿಂಗ್ ಎರಡು ಅಂಕ ಕಲೆ ಹಾಕಿ ಭರತ್ ಮತ್ತು ಸುರ್ಜೀತ್ ಸಿಂಗ್ ಅವರನ್ನು ಔಟ್ ಮಾಡಿದರು. ಆದರೂ 12ನೇ ನಿಮಿಷದ ವೇಳೆ ಬುಲ್ಸ್ 9-7 ಅಂತರರಲ್ಲಿ ಮುನ್ನಡೆ ಕಾಯ್ದುಕೊಂಡಿತು. ಈ ವೇಳೆ ಡಿಫೆಂಡರ್‌ಗಳಾದ ಶುಭಂ ಶಿಂಧೆ ಮತ್ತು ಜಸ್ಕಿರತ್ ಸಿಂಗ್ ಪ್ರಬಲ ಟ್ಯಾಕಲ್ ನಡೆಸಿ 16ನೇ ನಿಮಿಷದಲ್ಲಿ 11-11ರಿಂದ ಸಮಬಲ ಸಾಧಿಸಿತು. ಮರುಕ್ಷಣವೇ ಸೌರಭ್ ನಂದಲ್ ಮತ್ತು ನೀರಜ್ ನರ್ವಾಲ್ ಅವರನ್ನು ಬಲಿ ಪಡೆದ ನಿತಿನ್ ಕುಮಾರ್, ವಾರಿಯರ್ಸ್ ಮುನ್ನಡೆಯನ್ನು 15-1ಕ್ಕೆ ಹಿಗ್ಗಿಸಿದರು. ಮೊದಲಾರ್ಧದ ಅಂತ್ಯಕ್ಕೆ ತಂಡವು 19-12 ಅಂತರದಿಂದ ಮುನ್ನಡೆ ಸಾಧಿಸಿತು.
ಇದನ್ನೂ ಓದಿ | ರೈಡಿಂಗ್‌ನಲ್ಲಿ ಭರ್ಜರಿ 16 ಅಂಕ ಗಳಿಸಿದ ಅರ್ಜುನ್ ದೇಶ್ವಾಲ್; ಪಲ್ಟನ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಪ್ಯಾಂಥರ್ಸ್
ದ್ವಿತಿಯಾರ್ಧದಲ್ಲೂ ಸ್ಟಾರ್ ರೈಡರ್ ಭರತ್ ಯಶಸ್ವಿ ದಾಳಿ ನಡೆಸಿದರು. ಆದರೂ ವಾರಿಯರ್ಸ್ 19-16 ಅಂತರದ ಮುನ್ನಡೆ ಉಳಿಸಿಕೊಂಡಿತು. ಈ ವೇಳೆ ಪಂದ್ಯದ 28ನೇ ನಿಮಿಷದಲ್ಲಿ ಬೆಂಗಾಲ್ ತಂಡವನ್ನು ಆಲ್ ಔಟ್ ಮಾಡಿದ ಬುಲ್ಸ್ 21-20ರಲ್ಲಿ ಮುನ್ನಡೆಯಿತು.
37ನೇ ನಿಮಿಷದಲ್ಲಿ ವಾರಿಯರ್ಸ್ ಮತ್ತೆ ವೇಗದ ಆಟವಾಡಿತು. ಬೆಂಗಳೂರು ತಂಡವನ್ನು ಮತ್ತೊಮ್ಮೆ ಆಲ್ ಔಟ್ ಮಾಡಿದ ವಾರಿಯರ್ಸ್ ಮತ್ತೊಂದು ಗೆಲುವನ್ನು ತನ್ನದಾಗಿಸಿಕೊಂಡಿತು.
ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಗೆಲುವು
ದಿನದ ಎರಡನೇ ಪಂದ್ಯದಲ್ಲಿ ಯು ಮಂಬಾ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತೆ ಗೆದ್ದು ಬೀಗಿತು. ಮತ್ತೊಂದು ಸೂಪರ್ 10 ಪೂರ್ಣಗೊಳಿಸಿದ ಅರ್ಜುನ್ ದೇಶ್ವಾಲ್ ತಂಡವನ್ನು 31-29 ಅಂತರದಿಂದ ರೋಚಕವಾಗಿ ಗೆಲುವಿನತ್ತ ಮುನ್ನಡೆಸಿದರು. ಮುಂಬಾ ಪರ ಗುಮನ್ ಸಿಂಗ್ ಸೂಪರ್ 10 ಸಾಧನೆ ಮಾಡಿದರು. ಅಲ್ಲದೆ ಹಾಲಿ ಚಾಂಪಿಯನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಪ್ರವೇಶಿಸಿತು.
ಸದ್ಯ ಅಂಕಪಟ್ಟಿಯಲ್ಲಿ ಜೈಪುರ ಮೊದಲ ಸ್ಥಾನದಲ್ಲಿದ್ದರೆ, ಪುಣೇರಿ ಪಲ್ಟನ್ ಎರಡನೇ ಸ್ಥಾನಕ್ಕೆ ಕುಸಿದಿದೆ. ಬೆಂಗಾಲ್ ವಾರಿಯರ್ಸ್ 6ನೇ ಸ್ಥಾನದಲ್ಲಿದ್ದರೆ, ಬುಲ್ಸ್ 9ನೇ ಸ್ಥಾನಕ್ಕೆ ಜಾರಿದೆ.