Manu Bhaker: ಮನು ಭಾಕರ್ಗೆ ಹ್ಯಾಟ್ರಿಕ್ ಪದಕ ಜಸ್ಟ್ ಮಿಸ್; ಸ್ವಲ್ಪದರಲ್ಲಿ ಕೈ ತಪ್ಪಿತು ಮೆಡಲ್
Manu Bhaker: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಮಹಿಳೆಯರ 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಅವರು 28 ಅಂಕಗಳೊಂದಿಗೆ 4ನೇ ಸ್ಥಾನ ಪಡೆದರು.
ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ತಾನು ಸ್ಪರ್ಧಿಸಿದ್ದ ಎರಡೂ ಈವೆಂಟ್ಗಳಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ಶಾರ್ಪ್ ಶೂಟರ್ ಮನು ಭಾಕರ್ ಅವರು, ಮಹಿಳೆಯರ 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ 28 ಅಂಕಗಳೊಂದಿಗೆ 4ನೇ ಸ್ಥಾನ ಪಡೆದ ಕಾರಣ ಹ್ಯಾಟ್ರಿಕ್ ಒಲಿಂಪಿಕ್ ಪದಕದ ಕನಸು ನುಚ್ಚು ನೂರಾಯಿತು.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು 10 ಮೀಟರ್ ಏರ್ ಮಿಸ್ತೂಲ್ ಮಿಶ್ರ ತಂಡದ ಸ್ಪರ್ಧೆಯಲ್ಲಿ (ಸರಬ್ಜೋತ್ ಸಿಂಗ್ ಜೊತೆಗೂಡಿ) ಕಂಚಿನ ಪದಕ ಗೆದ್ದಿದ್ದರು. ಈ ಸ್ಪರ್ಧೆಯಲ್ಲೂ ಪದಕ ಗೆದ್ದಿದ್ದರೆ ಇತಿಹಾಸ ನಿರ್ಮಿಸಲು ಸಾಧ್ಯವಾಗುತ್ತಿತ್ತು. ಅಂತಿಮ ಹಂತದಲ್ಲಿ 28 ಅಂಕ ಪಡೆದು 4ನೇ ಸ್ಥಾನಕ್ಕೆ ತೃಪ್ತಿಪಟ್ಟು ಪದಕ ತಪ್ಪಿಸಿಕೊಂಡರು.
ಮನು ಭಾಕರ್ ಭರ್ಜರಿ ಪ್ರದರ್ಶನ
ಮೊದಲ ಸಿರೀಸ್ನಲ್ಲಿ 5 ಶೂಟ್ಗಳಲ್ಲಿ ಮನು ಭಾಕರ್, 2 ಅಂಕ ಪಡೆದು 6ನೇ ಸ್ಥಾನ ಪಡೆದಿದ್ದರು. ಆದರೆ, 2ನೇ ಸಿರೀಸ್ನಲ್ಲಿ ಪುನರಾಗಮನ ಮಾಡಿದ ಮನು, 5ಕ್ಕೆ 4 ಅಂಕ ಪಡೆದು 4ನೇ ಸ್ಥಾನಕ್ಕೆ ಜಿಗಿದರು. ಬಳಿಕ ಮೂರನೇ ಸಿರೀಸ್ನಲ್ಲಿ 4 ಅಂಕ ಪಡೆದು ಒಟ್ಟು 10 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಏರಿದರು.
ಬಳಿಕ 4ನೇ ಸಿರೀಸ್ನಿಂದ ಎಲಿಮಿನೇಷನ್ ಸುತ್ತು ಆರಂಭಗೊಂಡಿತು. ಈ ಸುತ್ತಿನಲ್ಲಿ 3 ಅಂಕ ಪಡೆದ ಮನು, ಮತ್ತೆ 6ನೇ ಸ್ಥಾನಕ್ಕೆ ಕುಸಿದರು. ಆದರೆ 5ನೇ ಸುತ್ತಿನಲ್ಲಿ 5ಕ್ಕೆ 5 ಅಂಕ ಪಡೆದು ಮತ್ತೆ 3ನೇ ಸ್ಥಾನಕ್ಕೇರಿದರು. 6ನೇ ಸುತ್ತಿನಲ್ಲಿ 2ನೇ ಸ್ಥಾನ ಪಡೆದ ನಂತರ 2ನೇ ಸ್ಥಾನ ಭದ್ರಪಡಿಸಿಕೊಂಡರು.
ಭಾಕರ್ ತನ್ನ 7ನೇ ಸಿರೀಸ್ನಲ್ಲಿ 4ಕ್ಕೆ 5 ಸ್ಕೋರ್ ಮಾಡಿ ಅಗ್ರ-3ರೊಳಗೆ ಪ್ರವೇಶಿಸಲು ಫೈಟ್ ನೀಡಿದರು. ಆದರೆ 8ನೇ ಸುತ್ತಿನಲ್ಲಿ ಅವರು ಹಂಗೇರಿಯ ವೆರೋನಿಕಾ ಮೇಜರ್ ವಿರುದ್ಧ ಶಾಟ್‌ಆಫ್‌ನಲ್ಲಿ ಒಂದು ಅಂಕದಿಂದ ಸೋತು ಒಟ್ಟು 28 ಅಂಕಗಳೊಂದಿಗೆ ಪಡೆದು ತಮ್ಮ ಅಭಿಯಾನ ಮುಗಿಸಿದರು.
ಆಗಸ್ಟ್ 2ರಂದು ಶುಕ್ರವಾರ ನಡೆದಿದ್ದ 25 ಮೀಟರ್ ಏರ್ ಪಿಸ್ತೂಲ್ ಅರ್ಹತಾ ಸುತ್ತಿನ ಪಂದ್ಯದಲ್ಲಿ 22 ವರ್ಷದ ಮನು ಭಾಕರ್, 590 ಅಂಕ ಗಳಿಸುವ ಮೂಲಕ 2ನೇ ಸ್ಥಾನ ಪಡೆದು ಫೈನಲ್ಗೇರಿದ್ದರು. ಹೀಗಾಗಿ, ಹ್ಯಾಟ್ರಿಕ್ ಪದಕದ ನಿರೀಕ್ಷೆ ಹುಟ್ಟು ಹಾಕಿದ್ದರು. ಇದೀಗ ಫೈನಲ್ನಲ್ಲಿ 4ನೇ ಸ್ಥಾನಿಯಾಗಿ ಸ್ವಲ್ಪದರಲ್ಲಿ ಹೊರಬಿದ್ದಿದ್ದಾರೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದೇ ಒಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ದಾಖಲೆಗೆ 22 ವರ್ಷದ ಮನು ಪಾತ್ರರಾಗಿದ್ದಾರೆ. ಅಲ್ಲದೆ, ಎರಡು ಒಲಿಂಪಿಕ್ಸ್ ಗೆದ್ದಿರುವ ಮೂರನೇ ಭಾರತದ ಕ್ರೀಡಾಪಟು ಎನ್ನುವ ದಾಖಲೆಗೂ ಪಾತ್ರರಾಗಿದ್ದಾರೆ. ಕುಸ್ತಿಪಟು ಸುಶೀಲ್ ಕುಮಾರ್ (2008 ಕಂಚು, 2012 ಬೆಳ್ಳಿ), ಪಿವಿ ಸಿಂಧು (2016 ಬೆಳ್ಳಿ, 2021 ಕಂಚು) ಮನುಗೂ ಮೊದಲು ಎರಡು ಪದಕ ಗೆದ್ದವರು.
ಕಳೆದ ಒಲಿಂಪಿಕ್ಸ್‌ನಲ್ಲಿ ಭಾರಿ ನಿರಾಸೆ
ಟೊಕಿಯೊ ಒಲಿಂಪಿಕ್ಸ್ನಲ್ಲೂ ಮೂರು ವಿಭಾಗಗಳಲ್ಲಿ ಸ್ಪರ್ಧಿಸಿದ್ದ ಮನು ಭಾಕರ್ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ಆದರೆ ಅಂದು ನಿರಾಸೆಯಾಗಿದ್ದ ಭರವಸೆಯ ಕ್ರೀಡಾಪಟು ಈ ಸಲ ಎರಡು ಪದಕಗಳೊಂದಿಗೆ ಭಾರತಕ್ಕೆ ಕೀರ್ತಿ ತಂದಿದ್ದಾರೆ. 2028ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.