4ನೇ ಸ್ಥಾನ ನಿಜವಾಗಿಯೂ ಉತ್ತಮ ಸ್ಥಾನವಲ್ಲ; 3ನೇ ಪದಕ ತಪ್ಪಿದ ಬಳಿಕ ಭಾರತದ ಶೂಟಿಂಗ್ ರಾಣಿ ಮನು ಭಾಕರ್ ಭಾವುಕ-manu bhaker fights back tears as medal hat trick denied at paris olympics 2024 fourth is not a very good place prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  4ನೇ ಸ್ಥಾನ ನಿಜವಾಗಿಯೂ ಉತ್ತಮ ಸ್ಥಾನವಲ್ಲ; 3ನೇ ಪದಕ ತಪ್ಪಿದ ಬಳಿಕ ಭಾರತದ ಶೂಟಿಂಗ್ ರಾಣಿ ಮನು ಭಾಕರ್ ಭಾವುಕ

4ನೇ ಸ್ಥಾನ ನಿಜವಾಗಿಯೂ ಉತ್ತಮ ಸ್ಥಾನವಲ್ಲ; 3ನೇ ಪದಕ ತಪ್ಪಿದ ಬಳಿಕ ಭಾರತದ ಶೂಟಿಂಗ್ ರಾಣಿ ಮನು ಭಾಕರ್ ಭಾವುಕ

Manu Bhaker: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಮೂರನೇ ಪದಕವನ್ನು ಕಳೆದುಕೊಂಡ ನಂತರ ಭಾರತದ ಶೂಟರ್​ಮನು ಭಾಕರ್ ಭಾವುಕರಾಗಿದ್ದಾರೆ.

3ನೇ ಪದಕ ತಪ್ಪಿದ ಬಳಿಕ ಭಾರತದ ಶೂಟಿಂಗ್ ರಾಣಿ ಮನು ಭಾಕರ್ ಭಾವುಕ
3ನೇ ಪದಕ ತಪ್ಪಿದ ಬಳಿಕ ಭಾರತದ ಶೂಟಿಂಗ್ ರಾಣಿ ಮನು ಭಾಕರ್ ಭಾವುಕ

ಪ್ಯಾರಿಸ್ ಒಲಿಂಪಿಕ್ಸ್​​ 2024 ಕ್ರೀಡಾಕೂಟದಲ್ಲಿ ಭಾರತದ ಶೂಟಿಂಗ್ ರಾಣಿ ಮನು ಭಾಕರ್ ಅವರ ಹ್ಯಾಟ್ರಿಕ್​ ಪದಕದ ಕನಸು ಭಗ್ನಗೊಂಡಿದೆ. ಮಹಿಳೆಯರ 25 ಮೀಟರ್‌ ಪಿಸ್ತೂಲ್ ಫೈನಲ್‌ ಸುತ್ತಿನಲ್ಲಿ ಮನು ಭಾಕರ್‌ ಅವರು 28 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕೂದಲೆಳೆಯ ಅಂತರದಲ್ಲಿ ಪದಕ ಸುತ್ತಿಗೇರಲು ವಿಫಲರಾದರು. ಹಂಗೇರಿಯಾ ವೆರೋನಿಕಾ ಮೇಜರ್​ ಅವರ ವಿರುದ್ದ ಸೋತು ಹೊರಬಿದ್ದರು. ಆದರೆ ಸ್ವತಂತ್ರ ಭಾರತದಲ್ಲಿ ಒಂದೇ ಒಲಿಂಪಿಕ್ಸ್​​ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಅಥ್ಲಿಟ್‌ ಎಂಬ ಹೆಗ್ಗಳಿಕೆಗೆ ಮನು ಭಾಕರ್‌ ಪಾತ್ರರಾಗಿದ್ದಾರೆ.

ಪದಕ ಸುತ್ತಿಗೆ ಅರ್ಹತೆ ಪಡೆಯಲು ನಡೆದ ಗೇಮ್​ನಲ್ಲಿ ಮನು ನಿರಾಸೆ ಅನುಭವಿಸಿದ ನಂತರ ಭಾವೋದ್ವೇಗಕ್ಕೆ ಒಳಗಾದರು. ಸೋತರೂ ಮನುಗೆ ಅಭಿಮಾನಿಗಳಿಂದ ಬೆಂಬಲ ದೊರೆಯಿತು. ನೀವು ಈಗಾಗಲೇ ಭಾರತದ ಕೀರ್ತಿ ಹೆಚ್ಚಿಸಿದ್ದೀರಿ, ನಿರಾಶೆಗೊಳ್ಳಬೇಡಿ ಎಂದು ಫ್ಯಾನ್ಸ್, ಮನುಗೆ ಧೈರ್ಯ ತುಂಬುತ್ತಿದ್ದಾರೆ. ಮಹಿಳೆಯರ 10 ಮೀಟರ್​ ಏರ್​ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಮತ್ತು 10 ಮೀಟರ್​ ಏರ್​ ಫಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಜೊತೆ ಸೇರಿ ಕಂಚಿನ ಪದಕ ಗೆದ್ದಿದ್ದರು. ಅದೇ 25 ಮೀಟರ್ ಸ್ಪರ್ಧೆಯಲ್ಲೂ ಪದಕದ ಭರವಸೆ ಮೂಡಿಸಿದ್ದರು. ಸ್ವಲ್ಪದರಲ್ಲಿ ಐತಿಹಾಸಿಕ ಪದಕವನ್ನು ಕಳೆದುಕೊಂಡರು.

ಅತ್ಯುತ್ತಮವಾದದ್ದನ್ನು ನೀಡಲು ಯತ್ನಿಸಿದೆ, ಆದರೆ…

ಸೋಲಿನ ನಂತರ ಮಾತನಾಡಿದ ಮನು, 3ನೇ ಸ್ಥಾನಕ್ಕೆ ಏರಲು ಸಾಧ್ಯವಾಗದ ಕಾರಣ ನಿರಾಶೆಯಾಗಬೇಡಿ ಎಂದು ಭಾರತದ ಕ್ರೀಡಾಪ್ರೇಮಿಗಳಿಗೆ ಮನವಿ ಮಾಡಿದ್ದಾರೆ. ಈ ನಿರಾಸೆಯ ನಂತರ ಭಾವೋದ್ವೇಗಕ್ಕೆ ಒಳಗಾದ ಮನು, ಸೋಲಿನ ಕುರಿತು ಹೇಳಿದ್ದಾರೆ. ಕೊನೆಯ ಶಾಟ್​ನಲ್ಲಿ ನಾನು ನಿಜವಾಗಿಯೂ ಹೆದರುತ್ತಿದ್ದೆ. ನಾನು ಶಾಂತವಾಗಿರಲು ಪ್ರಯತ್ನಿಸುತ್ತಿದ್ದೆ, ಆದರೆ ಅದು ಸಾಕಾಗಲಿಲ್ಲ. ನಾನು ನನ್ನ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸುತ್ತಿದ್ದೆ. ಆದರೆ ಸಾಧ್ಯವಾಗಲಿಲ್ಲ. ಖಂಡಿತವಾಗಿ 4ನೇ ಸ್ಥಾನವು ತುಂಬಾ ಉತ್ತಮ ಸ್ಥಾನವಲ್ಲ ಎಂದು ಮನು ಸ್ಪರ್ಧೆಯ ನಂತರ ಹೇಳಿದರು.

ತವರಿಗೆ ಮರಳಲು ಸಿದ್ಧವಾಗಿರುವ ಮನು, ತನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ತನ್ನ ಪ್ರಯಾಣದಲ್ಲಿ ಪ್ರಮುಖ ಪಾತ್ರವಹಿಸಿದ ಎಲ್ಲರನ್ನೂ ನೆನಪಿಸಿಕೊಂಡಿದ್ದಾರೆ. ತೆರೆಮರೆಯಲ್ಲಿ ಸಾಕಷ್ಟು ಕಠಿಣ ಪರಿಶ್ರಮ ಹಾಕಿದ್ದೇವೆ. ಭಾರತ ಪದಕ ಗೆಲ್ಲಲು ಅನೇಕ ಜನರು ಶ್ರಮಿಸಿದ್ದಾರೆ. ಕ್ರೀಡಾ ಸಚಿವಾಲಯ, ಸಾಯ್ (SAI), ಪಿಎಂ ಮೋದಿ, ನನ್ನ ತರಬೇತುದಾರ, ಜಸ್ಪಾಲ್ ಸರ್, ನನ್ನ ಕುಟುಂಬ, ನನ್ನ ಸ್ನೇಹಿತರು, ಸಹಾಯಕ ಸಿಬ್ಬಂದಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮೆಲ್ಲರಿಗೂ ಧನ್ಯವಾದ. ಮುಂದಿನ ಬಾರಿ ಉತ್ತಮ ಫಲಿತಾಂಶದೊಂದಿಗೆ ಬರುತ್ತೇನೆ ಎಂದು ಮನು ಹೇಳಿದ್ದಾರೆ.

ಭಾರತದ ಶೂಟಿಂಗ್ ರಾಣಿ ಮನು ಭಾಕರ್

ಎರಡು ಕಂಚಿನ ಪದಕಗಳನ್ನು ಜಯಿಸಿರುವ ಮನು ಹಲವು ದಾಖಲೆ ನಿರ್ಮಿಸಿದ್ದಾರೆ. ಜುಲೈ 28ರ ಭಾನುವಾರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಮನು 12 ವರ್ಷಗಳ ನಂತರ ಶೂಟಿಂಗ್​​ನಲ್ಲಿ ದೇಶಕ್ಕೆ ಮೊದಲ ಪದಕ ತಂದುಕೊಟ್ಟರು. ಮತ್ತು ಒಲಿಂಪಿಕ್ಸ್​​ನ ಈ ವಿಭಾಗದಲ್ಲಿ ಪದಕ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇದಾಗಿ ಎರಡು ದಿನಗಳ ನಂತರ ಅಂದರೆ ಜುಲೈ 30ರಂದು ಮನು ತನ್ನ ಮತ್ತು ಭಾರತದ ಖಾತೆಗೆ 2ನೇ ಕಂಚಿನ ಪದಕವನ್ನು ಸೇರಿಸಿದರು. ಅದು ಅದೇ ವಿಭಾಗದ ಮಿಶ್ರ ತಂಡದಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಗೆದ್ದ ಪದಕ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.