ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚೊಚ್ಚಲ ಪದಕ; ಶೂಟಿಂಗ್‌ನಲ್ಲಿ ಕಂಚು ಗೆದ್ದ ಮನು ಭಾಕರ್
Paris Olympics 2024: ಮಹಿಳೆಯರ 10 ಮೀಟರ್ ಏರ್ ಫಿಸ್ತೂಲ್ ಫೈನಲ್ನಲ್ಲಿ ಮನು ಭಾಕರ್ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಶೂಟಿಂಗ್ನ ಮೂರು ವಿಭಾಗಗಳಲ್ಲೂ ಪದಕ ಸುತ್ತಿಗೇರಲು ವಿಫಲವಾಗಿದ್ದ 22 ವರ್ಷದ ಮನು ಭಾಕರ್, ಇದೀಗ ಹಾಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿ ಇತಿಹಾಸ ನಿರ್ಮಿಸಿದ್ದಾರೆ. ಜುಲೈ 28ರಂದು ಭಾನುವಾರ ಮಹಿಳೆಯರ 10 ಮೀ ಏರ್ ಪಿಸ್ತೂಲ್ ಫೈನಲ್ನಲ್ಲಿ 221.7 ಅಂಕಗಳೊಂದಿಗೆ 3ನೇ ಸ್ಥಾನ ಪಡೆದ ಮಹಿಳಾ ಶೂಟರ್, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚೊಚ್ಚಲ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ಯಾರಿಸ್‌ನಲ್ಲಿ ಒಲಿಂಪಿಕ್ ಕಂಚಿನ ಪದಕವನ್ನು ಶೂಟ್ ಮಾಡುವ ಮೂಲಕ ಮನು ಭಾಕರ್ ಇತಿಹಾಸವನ್ನು ಬರೆದಿದ್ದಾರೆ. ಫ್ರೆಂಚ್ ರಾಜಧಾನಿಯ ಚಟೌರೊಕ್ಸ್ ಶೂಟಿಂಗ್ ಸೆಂಟರ್‌ನಲ್ಲಿ ಹರಿಯಾಣದ 22 ವರ್ಷದ ಆಟಗಾರ್ತಿ, ಶೂಟಿಂಗ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಆಗಿದ್ದಾರೆ. 2004ರಲ್ಲಿ ಜರುಗಿದ್ದ ಅಥೇನ್ಸ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್ ಫೈನಲ್ನಲ್ಲಿ ಸುಮಾ ಶಿರೂರ್ (ಮನು ಭಾಕರ್ ಕೋಚ್) 8ನೇ ಸ್ಥಾನಕ್ಕೆ ತೃಪ್ತಿಯಾಗಿ ಪದಕ ಗೆಲ್ಲಲು ವಿಫಲರಾಗಿದ್ದರು.
ಸುಮಾ ಶಿರೂರ್ ಶಿಷ್ಯೆಯಾಗಿ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಶೂಟಿಂಗ್ನ ಮೂರು ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಆದರೆ ಒಂದರಲ್ಲೂ ಪದಕ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾಗಿದ್ದರು. ಇದರೊಂದಿಗೆ ಪದಕದ ಕನಸು ಈ ಹಾರ್ಟ್ ಬ್ರೇಕ್ ಆದ ಮೂರು ವರ್ಷಗಳ ನಂತರ ಮನು, ತಮ್ಮ ಕನಸುಗಳನ್ನು ನನಸಾಗಿಸಿ, ರಾಷ್ಟ್ರಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ. ಅಂದು ನಿರಾಸೆಯಾಗಿದ್ದ ಮನು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಆಸರೆ ಈಡೇರಿಸಿಕೊಂಡು ಐತಿಹಾಸಿಕ ದಾಖಲೆಗೂ ಪಾತ್ರರಾಗಿದ್ದಾರೆ.
ಅರ್ಹಾತಾ ಸುತ್ತಿನಲ್ಲೂ ಮೂರನೇ ಸ್ಥಾನ
ಫೈನಲ್ಗೆ ಅರ್ಹತೆ ಪಡೆಯುವ ಸುತ್ತಿನಲ್ಲೂ ಭರ್ಜರಿ ಪ್ರದರ್ಶನ ನೀಡಿದ್ದ ಮನು, 60 ಶೂಟ್ಗಳಲ್ಲಿ 580 ಅಂಕ ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದು ಫೈನಲ್ಗೆ ಅರ್ಹತೆ ಪಡೆದಿದ್ದರು. ಹೀಗಾಗಿ, ಅವರ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಅವರು ಪದಕ ಗೆಲ್ಲುತ್ತಾರೆ ಎಂದು ಕ್ರೀಡಾಪ್ರೇಮಿಗಳು ಭರವಸೆ ಇಟ್ಟಿದ್ದರು. ಅದರಂತೆ ಭಾರತದ ಯುವ ಶೂಟರ್ ನಿರೀಕ್ಷೆಯಲಂತೆ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಅವರ ಕನಸು ಹಾಗೆಯೇ ಉಳಿಯಿತು.
ಸೌತ್ ಕೊರಿಯಾಗೆ ಚಿನ್ನ, ಬೆಳ್ಳಿ ಪದಕ
ಮಹಿಳೆಯರ 10 ಮೀ ಏರ್ ಪಿಸ್ತೂಲ್ ಫೈನಲ್ನಲ್ಲಿ ಮನು ಭಾಕರ್ ಕಂಚು ಗೆದ್ದರೆ, ಸೌತ್ ಕೊರಿಯಾದ ಇಬ್ಬರು ಶೂಟರ್ಗಳು ಚಿನ್ನ ಮತ್ತು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. . 243.2 ಅಂಕಗಳೊಂದಿಗೆ ಅಗ್ರಸ್ತಾನ ಪಡೆದ ಓ ಯೆ ಜಿನ್ ಅವರು ಸ್ವರ್ಣಕ್ಕೆ ಕೊರೊಳೊಡ್ಡಿದರೆ, 241.3 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದ ಕಿಮ್ ಯೆ-ಜಿ ಬೆಳ್ಳಿ ಪದಕ ಗೆದ್ದರು.
ಭಾರತಕ್ಕೆ ಪದಕ ಗೆದ್ದ ಐದನೇ ಶೂಟರ್
ಮನು ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಖಾತೆ ತೆರೆದಿದ್ದು, ಶೂಟಿಂಗ್‌ನಲ್ಲಿ ಪದಕ ಗೆಲ್ಲುವ ಭಾರತದ 12 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದರು. ಅಭಿನವ್ ಬಿಂದ್ರಾ, ರಾಜ್ಯವರ್ಧನ್ ಸಿಂಗ್ ರಾಥೋಡ್, ವಿಜಯ್ ಕುಮಾರ್ ಮತ್ತು ಗಗನ್ ನಾರಂಗ್ ನಂತರ ಶೂಟಿಂಗ್‌ನಲ್ಲಿ ಒಲಿಂಪಿಕ್ ಪದಕ ಗೆದ್ದ ಐದನೇ ಶೂಟರ್ ಮನು. ಆದರೆ ಶೂಟಿಂಗ್‌ನಲ್ಲಿ ಚೊಚ್ಚಲ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಮನು ಪಾತ್ರರಾಗಿದ್ದಾರೆ.
ಪದಕ ಪಟ್ಟಿಯಲ್ಲಿ ಭಾರತಕ್ಕೆ 17ನೇ ಸ್ಥಾನ
ಪದಕದ ಖಾತೆ ತೆರೆದಿರುವ ಭಾರತ, ಮೆಟಲ್ ಪಟ್ಟಿಯಲ್ಲಿ 17ನೇ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ 3 ಚಿನ್ನ, 2 ಬೆಳ್ಳಿಯೊಂದಿಗೆ ಅಗ್ರಸ್ಥಾನ ಪಡೆದಿದೆ. ಮತ್ತೊಂದೆಡೆ ಚೀನಾ 3 ಚಿನ್ನ, 1 ಒಂದು ಕಂಚು ಪಡೆದು ಎರಡನೇ ಸ್ಥಾನದಲ್ಲಿದೆ.