ಕನ್ನಡ ಸುದ್ದಿ  /  Sports  /  Matthew Hayden Prediction On Ms Dhoni Ipl Farewell At Chepauk

MS Dhoni: 'ಈ ಬಾರಿ ಚೆಪಾಕ್‌ನಲ್ಲಿ 'ತಲಾ' ಐಪಿಎಲ್ ವಿದಾಯ! ಸಿಎಸ್‌ಕೆ ಮಾಜಿ ಆಟಗಾರನ ಭವಿಷ್ಯ

ಐಪಿಎಲ್ ಚೊಚ್ಚಲ ಸೀಸನ್‌ನಿಂದಲೂ ಧೋನಿ ಸಿಎಸ್‌ಕೆ ತಂಡದ ನಾಯಕರಾಗಿದ್ದಾರೆ. ಹೀಗಾಗಿ ತಂಡದೊಂದಿಗೆ ಭಾವನಾತ್ಮಕ ನಂಟು ಅವರಿಗಿದೆ. ತಂಡದ ಅಭಿಮಾನಿಗಳ ಬಾಯಿಂದ 'ತಲಾ' ಎಂದೇ ಕರೆಸಿಕೊಳ್ಳುವ ಧೋನಿ, ಅವರು ಲೀಗ್‌ನ ಇತಿಹಾಸದಲ್ಲಿ ಅತ್ಯಂತ ಪ್ರಬಲ ತಂಡಗಳಲ್ಲಿ ಒಂದಾದ ಸಿಎಸ್‌ಕೆಯ ಅವಿಭಾಜ್ಯ ಅಂಗವಾಗಿದ್ದಾರೆ.

ಧೋನಿ
ಧೋನಿ

ಸಿಎಸ್‌ಕೆ ತಂಡದ ನಾಯಕ ಎಂ ಎಸ್‌ ಧೋನಿ, 2023ರಲ್ಲಿ ತಮ್ಮ ಕೊನೆಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ತವರು ಮೈದಾನ ಚೆಪಾಕ್ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ವಿದಾಯ ಹೇಳಿದ ನಂತರವೇ ಕ್ರೀಡೆಯಿಂದ ದೂರವಿರಲು ಧೋನಿ ನಿರ್ಧರಿಸಿದಂತಿದೆ. ಹೀಗಾಗಿ ಈ ಬಾರಿಯ ಸೀಸನ್‌ ಅವರ ಕೊನೆಯ ಐಪಿಎಲ್‌ ಆಗುವ ಸಾಧ್ಯತೆ ಇದೆ.

2019ರ ಬಳಿಕ ಸಿಎಸ್‌ಕೆ ತಂಡವು ತವರು ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿದೆ. ಹೀಗಾಗಿ ಎಲ್ಲಾ ಐಪಿಎಲ್‌ ತಂಡಗಳಂತೆ ಸಿಎಸ್‌ಕೆಗೂ ಇದು ವಿಶೇಷ ಅನುಭವ. ಪಂದ್ಯಾವಳಿಯಲ್ಲಿ ಪ್ಲೇಆಫ್‌ ಹಂತಕ್ಕೆ ಪ್ರವೇಶ ಮಾಡಿದರೂ ಅಥವಾ ಮಾಡಿಲ್ಲವಾದರೂ, ಈ ಋತುವು ಸಿಎಸ್‌ಕೆಗೆ ವಿಶೇಷವಾಗಲಿದೆ.

ಐಪಿಎಲ್ ಚೊಚ್ಚಲ ಸೀಸನ್‌ನಿಂದಲೂ ಧೋನಿ ಸಿಎಸ್‌ಕೆ ತಂಡದ ನಾಯಕರಾಗಿದ್ದಾರೆ. ಹೀಗಾಗಿ ತಂಡದೊಂದಿಗೆ ಭಾವನಾತ್ಮಕ ನಂಟು ಅವರಿಗಿದೆ. ತಂಡದ ಅಭಿಮಾನಿಗಳ ಬಾಯಿಂದ 'ತಲಾ' ಎಂದೇ ಕರೆಸಿಕೊಳ್ಳುವ ಧೋನಿ, ಅವರು ಲೀಗ್‌ನ ಇತಿಹಾಸದಲ್ಲಿ ಅತ್ಯಂತ ಪ್ರಬಲ ತಂಡಗಳಲ್ಲಿ ಒಂದಾದ ಸಿಎಸ್‌ಕೆಯ ಅವಿಭಾಜ್ಯ ಅಂಗವಾಗಿದ್ದಾರೆ.

ಐಪಿಎಲ್‌ನ ಮೊದಲ ಮೂರು ಸೀಸನ್‌ಗಳಲ್ಲಿ ಸಿಎಸ್‌ಕೆ ಪರ ಆಡಿದ್ದ ಮ್ಯಾಥ್ಯೂ ಹೇಡನ್, ಇದು ಸಿಎಸ್‌ಕೆಗೆ ವಿಶೇಷ ಸೀಸನ್ ಆಗಲಿದೆ ಎಂದು ನಿರೀಕ್ಷಿಸುವುದಾಗಿ ಹೇಳಿದ್ದಾರೆ. “CSK ತಂಡವು ಆಟವನ್ನು ಅನನ್ಯ ಮತ್ತು ವಿಭಿನ್ನವಾಗಿಸಲು ವಿಶೇಷ ಮಾರ್ಗವನ್ನು ಕಂಡುಕೊಳ್ಳುತ್ತದೆ. ಎರಡು ವರ್ಷಗಳ ಕಾಲ ಅವರು ಆಡದಿರುವುದು ದುರದೃಷ್ಟಕರವಾಗಿತ್ತು. ಆದರೆ ಮತ್ತೆ ಪುನರಾಗಮನ ಮಾಡಿದ ತಂಡವು ಐಪಿಎಲ್ ಕಪ್‌ ಗೆಲ್ಲುವ ಮೂಲಕ ಮಿಂಚಿತು. ಅದು ಅತ್ಯಂತ ಅನಿರೀಕ್ಷಿತವಾಗಿತ್ತು” ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಡನ್ ಹೇಳಿದ್ದಾರೆ.

“ಎಂಎಸ್‌ ಧೋನಿಯು ತಂಡವನ್ನು ಪುನರುಜ್ಜೀವನಗೊಳಿಸುವ ವಿಶೇಷ ಮಾರ್ಗವನ್ನು ಹೊಂದಿದ್ದು, ಅದು ಅವರ ತಂಡಕ್ಕೆ ಸಂಪೂರ್ಣವಾಗಿ ವಿಭಿನ್ನ ನೋಟ ಮತ್ತು ಭಾವನೆಯನ್ನು ನೀಡುತ್ತದೆ. ತಂಡವು ಕೆಲ ಆಟಗಾರರ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದು, ಹೆಚ್ಚಿನ ಆಟಗಾರರನ್ನು ಉಳಿಸಿಕೊಂಡಿದೆ. ಇದು ತಂಡದ ಗೌರವವನ್ನು ಹೆಚ್ಚಿಸಿದೆ” ಎಂದು ಅವರು ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸಿಎಸ್‌ಕೆ ತಂಡವು 2020, 2021 ಮತ್ತು 2022 ಸೀಸನ್‌ಗಳಲ್ಲಿ ಚೆಪಾಕ್ ಕ್ರೀಡಾಂಗಣದಲ್ಲಿ ಆಡಿರಲಿಲ್ಲ. 2020ರ ಋತುವನ್ನು ಸಂಪೂರ್ಣವಾಗಿ ಯುಎಇಯಲ್ಲಿ ಮತ್ತು 2021ರ ಋತುವಿನ ಕೆಲ ಪಂದ್ಯಗಳನ್ನು ಮಾತ್ರ ದೇಶದಲ್ಲಿ ಆಡಲಾಗಿತ್ತು. 2022 ರ ಆವೃತ್ತಿಯನ್ನು ಹೆಚ್ಚಾಗಿ ಮುಂಬೈ ಮತ್ತು ಪುಣೆಯಲ್ಲಿ ಆಡಿಸಲಾಯಿತು.

2019ರ ಆಗಸ್ಟ್‌ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದ ಧೋನಿ, ಈ ವರ್ಷದ ಜುಲೈನಲ್ಲಿ 42ನೇ ವರ್ಷಕ್ಕೆ ಕಾಲಿಡಲಿದ್ದಾರೆ.

“ಆದ್ದರಿಂದ ಎಂಎಸ್ ಧೋನಿ ಪಾಲಿಗೆ ಈ ವರ್ಷ ನಿರ್ದಿಷ್ಟವಾಗಿ ವಿಶೇಷ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ ಎಂಎಸ್ ಧೋನಿಯ ಪರಂಪರೆ ಈ ವರ್ಷ ಮುಕ್ತಾಯವಾಗಲಿದೆ. ಅವರು ತಮ್ಮ ಅಭಿಮಾನಿಗಳೊಂದಿಗೆ ಅವರದ್ದೇ ಶೈಲಿಯಲ್ಲಿ ವಿದಾಯ ಹೇಳಲು ಬಯಸುತ್ತಾರೆ. ಅವರದ್ದೇ ಶೈಲಿಯಲ್ಲಿ ಪಂದ್ಯ ಹಾಗೂ ಲೀಗ್‌ ಅನ್ನು ಫಿನಿಶ್ ಮಾಡಿ ಮೈದಾನದಿಂದ ಹೊರನಡೆಯಲಿದ್ದಾರೆ,” ಎಂದು ಹೇಡನ್ ಹೇಳಿದ್ದಾರೆ.