ISL Final: ಮರುಕಳಿಸಿತು 2023ರ ಫಲಿತಾಂಶ; ಬೆಂಗಳೂರು ಎಫ್‌ಸಿ ಕನಸು ಭಗ್ನ, ಮೋಹನ್ ಬಗಾನ್ ಚಾಂಪಿಯನ್
ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೋಹನ್ ಬಗಾನ್ ಸೂಪರ್ ಜೈಂಟ್ಸ್ ತಂಡವು ಬೆಂಗಳೂರು ಎಫ್‌ಸಿ ವಿರುದ್ಧ 2-1 ಅಂತರದಲ್ಲಿ ಗೆದ್ದು ಬೀಗಿದೆ. ಕಿಕ್ಕಿರಿದು ತುಂಬಿದ್ದ ತವರಿನ ಅಭಿಮಾನಿಗಳ ನಿರಂತರ ಬೆಂಬಲದ ನಡುವೆ ತವರಿನ ತಂಡ ಗೆದ್ದು ಬೀಗಿದೆ.

ಬೆಂಗಳೂರು ಎಫ್‌ಸಿ ಕನಸು ಮತ್ತೊಮ್ಮೆ ಭಗ್ನವಾಗಿದೆ. 2023ರ ಫಲಿತಾಂಶವೇ ಮತ್ತೊಮ್ಮೆ ಪುನರಾವರ್ತನೆಯಾಗಿದೆ. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫೈನಲ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು ಮಣಿಸಿದ ಮೋಹನ್ ಬಗಾನ್ ಸೂಪರ್ ಜೈಂಟ್ ತಂಡವು ಮತ್ತೊಮ್ಮೆ ಐಎಸ್‌ಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅತ್ತ ಎರಡನೇ ಬಾರಿಗೆ ಐಎಸ್‌ಎಲ್ ಚಾಂಪಿಯನ್ ಆಗಿ ಮಿಂಚುವ ಬೆಂಗಳೂರು ಎಫ್‌ಸಿ ಕನಸು ನುಚ್ಚುನೂರಾಗಿದೆ.
ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೋಹನ್ ಬಗಾನ್ ತಂಡವು 2-1 ಅಂತರದಲ್ಲಿ ಗೆದ್ದು ಬೀಗಿದೆ. ಕಿಕ್ಕಿರಿದು ತುಂಬಿದ್ದ ತವರಿನ ಅಭಿಮಾನಿಗಳ ನಿರಂತರ ಬೆಂಬಲದ ನಡುವೆ ತವರಿನ ತಂಡ ಗೆದ್ದು ಬೀಗಿದೆ. ಪಂದ್ಯದ ನಿಗದಿತ ಅವಧಿಯಲ್ಲಿ 1-1 ಅಂತರದಿಂದ ಅಂಕ ಸಮಬಲವಾಗಿತ್ತು. ಹೀಗಾಗಿ ಹೆಚ್ಚುವರಿ ಅವಧಿ ನೀಡಲಾಯ್ತು. ಆ ಸಮಯದಲ್ಲಿ ಮತ್ತೊಂದು ಗೋಲು ಕಲೆಹಾಕಿದ ತಂಡ ಜಯಭೇರಿ ಬಾರಿಸಿತು.
ಪಂದ್ಯದಲ್ಲಿ ಬೆಂಗಳೂರು ಪರ ಆಲ್ಬರ್ಟೊ ರೊಡ್ರಿಗಸ್ 49ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಸುದೀರ್ಘ ಅವಧಿಗೆ ಬೆಂಗಳೂರು ಮುನ್ನಡೆಯಲಿತ್ತು. ಈ ವೇಳೆ ಜೇಸನ್ ಕಮ್ಮಿಂಗ್ಸ್ ಅವರ ಪೆನಾಲ್ಟಿ ಸ್ಪಾಟ್ ಮೂಲಕ ಕೋಲ್ಕತ್ತಾ ತಂಡ ಸಮಬಲ ಸಾಧಿಸಲು ನೆರವಾದರು. ಈ ವೇಳೆ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಸೇರಿದ್ದ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು.
ಹೆಚ್ಚುವರಿ ಅವಧಿಗೆ ಸಾಗಿದ ಪಂದ್ಯ
ನಿಗದಿತ ಅವಧಿಯಲ್ಲಿ ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಿದ್ದರಿಂದ ಹೆಚ್ಚುವರಿ ಸಮಯ ನೀಡಲಾಯ್ತು. ಈ ಅವಧಿಯಲ್ಲಿ ಉಭಯ ತಂಡಗಳು ಕನಿಷ್ಠ ಒಂದು ಗೋಲು ಗಳಿಸುವ ಅನಿವಾರ್ಯತೆಗೆ ಬಂದವು. ಪಂದ್ಯದ 96ನೇ ನಿಮಿಷದಲ್ಲಿ ಆಗ ಆಸ್ಟ್ರೇಲಿಯಾದ ಫಾರ್ವರ್ಡ್ ಜೇಮೀ ಮ್ಯಾಕ್‌ಲಾರೆನ್ ಅತ್ಯಮೂಲ್ಯ ಗೋಲು ಗಳಿಸಿದರು. ಇದು ಮೋಹನ್ ಬಗಾನ್ ತಂಡಕ್ಕೆ ಚಾಂಪಿಯನ್ ಪಟ್ಟದ ಭರವಸೆ ನೀಡಿತು.
ಇದರೊಂದಿಗೆ ಮೋಹನ್ ಬಗಾನ್ ತಂಡವು ಪ್ರಬಲ ಋತುವೊಂದನ್ನು ಅಂತ್ಯಗೊಳಿಸಿತು. ತಂಡವು ಈ ಬಾರಿ ಐಎಸ್‌ಎಲ್ ಶೀಲ್ಡ್ ಬೆನ್ನಲ್ಲೇ ಐಎಸ್‌ಎಲ್ ಕಿರೀಟವನ್ನು ಕೂಡಾ ಗೆದ್ದಿದೆ. ಅತ್ತ ಬೆಂಗಳೂರು ಎಫ್‌ಸಿ ತಂಡವು ಮೂರನೇ ಬಾರಿ ಫೈನಲ್‌ನಲ್ಲಿ ಮುಗ್ಗರಿಸಿ ನಿರಾಶೆ ಮೂಡಿಸಿತು.
