ಕನ್ನಡ ಸುದ್ದಿ  /  Sports  /  Ms Dhoni Ipl Retirement Rohits Brilliant Response To Reporters Query About Dhoni Is A Delight For Csk Fans

IPLನಿಂದ MS ಧೋನಿ ನಿವೃತ್ತಿ ಆಗ್ತಾರಾ? CSK ಫ್ಯಾನ್ಸ್​​ಗೆ ಗುಡ್​ನ್ಯೂಸ್​ ಕೊಟ್ಟ ರೋಹಿತ್

ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)​​​ ನಾಯಕ ಧೋನಿ 16ನೇ ಆವೃತ್ತಿಯ ಐಪಿಎಲ್​​​​ ಬಳಿಕ ಸ್ಮರ್ಧಾತ್ಮಕ ಕ್ರಿಕೆಟ್​​ನಿಂದ ಹೊರಗುಳಿಯುತ್ತಾರಾ ಎಂಬ ಪ್ರಶ್ನೆಗೆ ರೋಹಿತ್​ ಶರ್ಮಾ ಉತ್ತರಿಸಿದ್ದಾರೆ. ರೋಹಿತ್ ನೀಡಿದ ಅದ್ಭುತ ಪ್ರತಿಕ್ರಿಯೆ, ಸಿಎಸ್‌ಕೆ ಅಭಿಮಾನಿಗಳಿಗೆ ಸಂತಸ ತಂದಿದೆ.

ಧೋನಿ ಮತ್ತು ರೋಹಿತ್​
ಧೋನಿ ಮತ್ತು ರೋಹಿತ್​

ಎಂ.ಎಸ್​ ಧೋನಿ (MS Dhoni) ಅವರಿಗೆ ಇದೇ ಕೊನೆಯ ಐಪಿಎಲ್ (IPL 2023)​. ಈ ಬಗೆಗಿನ ಚರ್ಚೆ ಇಂದು ನಿನ್ನೆಯದ್ದಲ್ಲ.. ಹಲವು ವರ್ಷಗಳದ್ದು! ಚೆನ್ನೈ ದತ್ತು ಪುತ್ರ ಅಂತಲೇ ಕರೆಸಿಕೊಳ್ಳುವ ಧೋನಿ ಅವರು ಚೆಪಾಕ್​​​​ನಲ್ಲೇ ನನ್ನ ಕೊನೆಯ ಪಂದ್ಯ. ಆದರೆ ಅದು ಮುಂದಿನ ವರ್ಷವೂ ಆಗಬಹುದು ಅಥವಾ ಐದು ವರ್ಷವೂ ಆಗಬಹುದು ಎಂದು ಘೋಷಿಸಿದ್ದರು. ಈ ಬೆನ್ನಲ್ಲೇ ಇದೇ ವರ್ಷವೇ ಧೋನಿ IPL​ಗೂ ವಿದಾಯ ಹೇಳಲಿದ್ದಾರೆ ಎಂಬ ಚರ್ಚೆ ಜೋರಾಗಲು ಕಾರಣವಾಗಿತ್ತು.

ಯಾಕಂದರೆ, ಕೊರೊನಾ ಕಾರಣದಿಂದ ಕಳೆದ 3 ಆವೃತ್ತಿಗಳ IPL​​​​​, ಹೋಮ್​ ಮತ್ತು ಅವೇ ಮಾದರಿಯಲ್ಲಿ ನಡೆದಿರಲಿಲ್ಲ. ಹೀಗಾಗಿ ಧೋನಿ ಅವರಿಗೆ ತಮ್ಮ 2ನೇ ತವರು ಚೆನ್ನೈನ ಚೆಪಾಕ್​​​ನಲ್ಲಿ ಆಡುವ ಭಾಗ್ಯ ಸಿಕ್ಕಿರಲಿಲ್ಲ. ಇದೀಗ ಶ್ರೀಮಂತ ಕ್ರಿಕೆಟ್​ ಲೀಗ್​​​ ಹಳೇ ಮಾದರಿಗೆ ಮರಳಿದ್ದು, ಧೋನಿ ಚೆಪಾಕ್​​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. IPL​​ನಿಂದ ನಿವೃತ್ತಿಯಾಗುವುದು ಚೆಪಾಕ್​ ಮೈದಾನದಲ್ಲೇ ಎಂದಿದ್ದ ಧೋನಿ, ಈ ಬಾರಿಯ ಮಿಲಿಯನ್​ ಡಾಲರ್​ ಟೂರ್ನಿಗೆ ಗುಡ್​ಬೈ ಹೇಳುವುದು ನಿಶ್ಚಿತ ಎನ್ನಲಾಗಿದೆ.

ಧೋನಿ ನಿವೃತ್ತಿ ಬಗ್ಗೆ ಅಧಿಕೃತ ಮಾಹಿತಿ ಎಲ್ಲಿಯೂ ಹೊರ ಬಿದ್ದಿಲ್ಲ. ಆದರೆ ಕೆಲವು ವರದಿಗಳು ಇದು ನಿಜ ಎನ್ನುತ್ತಿವೆ. ಇದೀಗ ಮುಂಬೈ ಇಂಡಿಯನ್ಸ್​ ನಾಯಕ ರೋಹಿತ್​​​ ಶರ್ಮಾ (Rohit Sharma) ಈ ಕುರಿತು ಉತ್ತರ ನೀಡಿದ್ದು, ಸಿಎಸ್​​ಕೆ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದ್ದಾರೆ. ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)​​​ ನಾಯಕ ಧೋನಿ ಅವರು ಈ ಐಪಿಎಲ್​ ಬಳಿಕ ಸ್ಮರ್ಧಾತ್ಮಕ ಕ್ರಿಕೆಟ್​​ನಿಂದ ಹೊರಗುಳಿಯುವ ಕುರಿತು ಅದ್ಭುತ ಉತ್ತರ ನೀಡಿದ್ದು, ಕೊನೆಯ ಐಪಿಎಲ್​​​ನಲ್ಲಿ ಧೋನಿ ಆಟ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ಅಭಿಮಾನಿಗಳಿಗೆ ಸಂತಸ ತಂದಿದೆ.

ಧೋನಿ ನಿವೃತ್ತಿಯ ವದಂತಿ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ರೋಹಿತ್​, ಇದು ಎಂಎಸ್ ಧೋನಿ ಅವರ ಕೊನೆಯ ಸೀಸನ್ ಎಂಬ ಮಾತನ್ನು ನಾನು ಕಳೆದ 2-3 ವರ್ಷಗಳಿಂದ ಕೇಳುತ್ತಿದ್ದೇನೆ. ಆದರೆ ಅವರ ಫಿಟ್​​ನೆಸ್​ ತಿಳಿದಿದ್ಯಾ? ಧೋನಿ ರಿಟೈರ್​ ಆಗುತ್ತಾರೆ ಎಂದು ನಿಮಗೆ ಅನಿಸುತ್ತಿದ್ಯಾ? ಅವರು ಇನ್ನೂ ಹಲವು ಸೀಸನ್​​ಗಳನ್ನು ಆಡುವಷ್ಟು ಫಿಟ್​​ ಆಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಇದು ಸಿಎಸ್​ಕೆ ಅಭಿಮಾನಿಗಳಿಗೆ ಸಂತಸ ಇಮ್ಮಡಿಗೊಳಿಸಿದೆ.

ಮುಂಬರುವ ನಗದು-ಸಮೃದ್ಧ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ ಯಾರ್ಕರ್​ ಸ್ಪೆಷಲಿಸ್ಟ್​ ಜಸ್​ಪ್ರಿತ್​ ಬೂಮ್ರಾ ಅವರ ಅಲಭ್ಯತೆ ತಂಡಕ್ಕೆ ಹೆಚ್ಚಾಗಿ ಕಾಡಲಿದೆ ಎಂದಿರುವ ರೋಹಿತ್​, ಅವರ ಬದಲೀ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ ಪಡೆದ ಬೂಮ್ರಾ, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಇಡೀ IPL ಸೀಸನ್‌ನಿಂದ ಹೊರಗುಳಿದಿದ್ದಾರೆ. ಕಳೆದ ವರ್ಷ ಬೂಮ್ರಾ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದರು.

ಮಾರ್ಚ್​​ 31ರಿಂದ 16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​​ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಗುಜರಾತ್​ ಟೈಟಾನ್ಸ್​ ಕಾದಾಟ ನಡೆಸಲಿವೆ. ಹಾಗೆಯೇ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​​ ತಂಡವು, ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಏಪ್ರಿಲ್​ 2ರಂದು ಸೆಣಸಾಟ ನಡೆಸಲಿದೆ.