ಕನ್ನಡ ಸುದ್ದಿ  /  Sports  /  Ms Dhonis Csk Rohits Mi Eye Revival; Gt Take On Title Defense Challenge As Ipl Returns For 16th Season

IPL 2023: ಏರಿದೆ ಆಟದ ಜ್ವರ, ಇಂದಿನಿಂದ ನಿಲ್ಲದು ಐಪಿಎಲ್​ ಅಬ್ಬರ, ಮೊದಲ ಪಂದ್ಯದಲ್ಲಿ ಗುರು-ಶಿಷ್ಯರ ಸಮರ, ಇಲ್ಲಿದೆ ತಂಡಗಳ ಮಾಹಿತಿ!

IPL 2023: ಗುರು-ಶಿಷ್ಯರ ಬಾಂಧವ್ಯ ಹೊಂದಿರುವ ಎಂಎಸ್​ ಧೋನಿ ಮತ್ತು ಹಾರ್ದಿಕ್​ ಪಾಂಡ್ಯ ನೇತೃತ್ವದ ತಂಡಗಳಾದ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಗುಜರಾತ್​ ಟೈಟಾನ್ಸ್​​ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ವಿಶ್ವದ ಅತಿ ದೊಡ್ಡ ಮೈದಾನದಲ್ಲಿ ಅತಿ ದೊಡ್ಡ ಕ್ರಿಕೆಟ್​​ ಲೀಗ್​​ನ ಉದ್ಘಾಟನಾ ಪಂದ್ಯ ನಡೆಯಲಿದೆ.

 ಹಾರ್ದಿಕ್​ ಪಾಂಡ್ಯ ಮತ್ತು ಎಂಎಸ್​ ಧೋನಿ
ಹಾರ್ದಿಕ್​ ಪಾಂಡ್ಯ ಮತ್ತು ಎಂಎಸ್​ ಧೋನಿ

ವಿಶ್ವದ ಶ್ರೀಮಂತ ಕ್ರಿಕೆಟ್​​​ ಹಬ್ಬ ಮತ್ತೆ ಬಂದಿದೆ. ವರ್ಷಕ್ಕೊಮ್ಮೆ ಬರುವ ಐಪಿಎಲ್​ ಜಾತ್ರೆಗೆ ವೇದಿಕೆ ಸಜ್ಜಾಗಿದೆ. ಕ್ರಿಕೆಟ್​​ ಪ್ರೇಮಿಗಳ ಕುತೂಹಲ ಗರಿಗೆದರಿದೆ. ಕೊರೊನಾ ಭೀತಿಯಿಂದ ಹೊರ ಬಂದಿರುವ ಐಪಿಎಲ್​, ತನ್ನ ಹಳೆಯ ಮಾದರಿಯಲ್ಲೇ ಸಂಭ್ರಮ, ಅದೇ ಶ್ರೀಮಂತಿಕೆಯಲ್ಲೇ ಹೊತ್ತು ಬರಲಿದೆ. ಒಂದು ಪ್ರಶಸ್ತಿಗಾಗಿ 10 ತಂಡಗಳ ನಡುವಿನ ಸಮರ, ಕಾದಾಟ ಭಾರಿ ರೋಚಕತೆ ಸೃಷ್ಟಿಸಲಿದೆ.

ಇಂಡಿಯನ್ ಪ್ರೀಮಿಯರ್​ ಲೀಗ್​​.. ಇದು ಬಿಸಿಸಿಐ ಕನಸಿನ ಕೂಸು. ಸದ್ಯ 15 ಆವೃತ್ತಿಗಳನ್ನು ಪೂರ್ಣಗೊಳಿಸಿರುವ ಐಪಿಎಲ್​, ಈಗ ನೂತನ ಆವೃತ್ತಿಗೆ ಹೆಜ್ಜೆ ಇಟ್ಟಿದೆ. 16ನೇ ಆವೃತ್ತಿಯನ್ನು ಲೀಗ್​​ ಅನ್ನು ಅದ್ಧೂರಿಯಾಗಿ ಆರಂಭಿಸಲು ಬಿಸಿಸಿಐ ಸಜ್ಜಾಗಿದೆ. ತಂಡಗಳಲ್ಲೂ ಹೊಸ ಬದಲಾವಣೆ, ನೂತನ ಆಟಗಾರರು, ಸ್ಟಾರ್ ಆಟಗಾರರು, ಅತ್ಯಂತ ದುಬಾರಿ ಆಟಗಾರರ ಪ್ರದರ್ಶನ ಹೇಗಿರಲಿದೆ ಎಂಬುದು ಕ್ರಿಕೆಟ್​ ಪ್ರಿಯರ ಕುತೂಹಲ.

ಟೂರ್ನಿಯಲ್ಲಿ ಆಡುವ ಎಲ್ಲಾ 10 ತಂಡಗಳು ತವರು ಮೈದಾನಗಳಲ್ಲೇ ಲೀಗ್​ ಪಂದ್ಯಗಳನ್ನು ಆಡುವ ಅವಕಾಶ ಪಡೆದುಕೊಂಡಿವೆ. ಪ್ರೇಕ್ಷಕರು ಶೇಕಡಾ 100ರ ಪ್ರಮಾಣದಲ್ಲಿ ಮೈದಾನಗಳು ಕಿಕ್ಕಿರಿದು ತುಂಬಿರಲಿವೆ. ಟಿವಿ ಜೊತೆಗೆ ಒಟಿಟಿ ವೇದಿಕೆಯನ್ನೂ ಕ್ರಿಕೆಟ್​ ಪ್ರೇಮಿಗಳಿಗೆ ಐಪಿಎಲ್​​ ಮನರಂಜನೆ ಸಿಗಲಿದೆ. ಈ ಬಾರಿ ಹೊಸ ನಿಯಮಗಳು ಪರಿಚಯ ಟೂರ್ನಿಗೆ ಮತ್ತಷ್ಟು ರಂಗು ಹೆಚ್ಚಿಸಿದ್ದು, ಕುತೂಹಲ ಕೆರಳಿಸಿದೆ.

ಉದ್ಘಾಟನಾ ಪಂದ್ಯದಲ್ಲಿ ಗುರು-ಶಿಷ್ಯರ ಕಾದಾಟ

ಗುರು-ಶಿಷ್ಯರ ಬಾಂಧವ್ಯ ಹೊಂದಿರುವ ಎಂಎಸ್​ ಧೋನಿ ಮತ್ತು ಹಾರ್ದಿಕ್​ ಪಾಂಡ್ಯ ನೇತೃತ್ವದ ತಂಡಗಳಾದ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಗುಜರಾತ್​ ಟೈಟಾನ್ಸ್​​ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ವಿಶ್ವದ ಅತಿ ದೊಡ್ಡ ಮೈದಾನದಲ್ಲಿ ಅತಿ ದೊಡ್ಡ ಕ್ರಿಕೆಟ್​​ ಲೀಗ್​​ನ ಉದ್ಘಾಟನಾ ಪಂದ್ಯ ನಡೆಯಲಿದೆ. ಪಂದ್ಯ ಸಂಜೆ 6 ಗಂಟೆಗೆ ಶುರುವಾಗಲಿದ್ದು, ಟಾಸ್​​ 7.30 ಕ್ಕೆ ನಡೆಯಲಿದೆ.

ಹಾಲಿ ಚಾಂಪಿಯನ್​ ಗುಜರಾತ್​!

ಗುಜರಾತ್​ ಟೈಟಾನ್ಸ್​ ತಂಡವು ಮೊದಲ ಬಾರಿಗೆ ಕಳೆದ ಆವೃತ್ತಿಯಲ್ಲಿ ಐಪಿಎಲ್​ಗೆ ಹೊಸ ಹೆಜ್ಜೆ ಇಟ್ಟಿತು. ಹಲವು ನಿರೀಕ್ಷೆಗಳೊಂದಿಗೆ ಕಣಕ್ಕಿಳಿದ ಈ ತಂಡವು ಮೊದಲ ಆವೃತ್ತಿಯಲ್ಲೇ ಚಾಂಪಿಯನ್​ ಪಟ್ಟ ಅಲಂಕರಿಸಿ, ಗಮನ ಸೆಳೆಯಿತು. ಸದ್ಯ ಪ್ರಶಸ್ತಿ ಉಳಿದಿಕೊಳ್ಳುವ ತವಕದಲ್ಲಿ ಗುಜರಾತ್​ ತಂಡವಿದ್ದು, ತಮ್ಮ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸುವ ಹುರುಪಿನಲ್ಲಿದೆ.

ಚೆನ್ನೈ-ಗುಜರಾತ್​ ಮುಖಾಮುಖಿ

15ನೇ ಆವೃತ್ತಿಯಲ್ಲಿ ಮಿಲಿಯನ್​ ಡಾಲರ್ ಟೂರ್ನಿಯಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿವೆ. ಆದರೆ ಈ ಎರಡು ಪಂದ್ಯಗಳಲ್ಲೂ ಗುರು ಧೋನಿಗೆ, ಶಿಷ್ಯ ಹಾರ್ದಿಕ್​ ಚಮಕ್​ ಕೊಟ್ಟಿದ್ದಾರೆ. ಎರಡರಲ್ಲೂ ಗೆದ್ದಿರುವ ಹಾರ್ದಿಕ್​, ಈ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಕಳೆದ ವರ್ಷ ಚೆನ್ನೈ ಸೂಪರ್​ ಕಿಂಗ್ಸ್​​​ ಕಳಪೆ ಪ್ರದರ್ಶನ ನೀಡಿತ್ತು. ಪರಿಣಾಮ ಲೀಗ್​​ ಹಂತದಲ್ಲೇ ಹೊರಬಿದ್ದಿತ್ತು. ಇದೀಗ ಪುಟಿದೇಳುವ ನಿರೀಕ್ಷೆಯಲ್ಲಿರುವ ಚೆನ್ನೈ ಶುಭಾರಂಭದ ನಿರೀಕ್ಷೆಯಲ್ಲಿದೆ.

ಧೋನಿಗೆ ಕೊನೆಯ ಐಪಿಎಲ್​

ಎಂಎಸ್​ ಧೋನಿಗೆ ಇದು ಬಹುತೇಕ ಕೊನೆಯ ಐಪಿಎಲ್​. ಹಾಗಾಗಿ ಚೆನ್ನೈೆ ಈ ಟೂರ್ನಿಗೆ ಭಾವನಾತ್ಮಕವಾಗಿಯೂ ಸಜ್ಜಾಗಿದೆ. ಮಹತ್ವದ್ದಾಗಿದೆ. ಧೋನಿ ನಾಯಕತ್ವದಲ್ಲಿ ಚೆನ್ನೈ 9 ಬಾರಿ ಫೈನಲ್​ ಪ್ರವೇಶ ಮಾಡಿದ್ದು, 4 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಹಾಗಾಗಿ ಧೋನಿಗೆ ಗೆಲುವಿನ ವಿದಾಯದ ನಿರೀಕ್ಷೆಯಲ್ಲಿದೆ ಚೆನ್ನೈ. ಸದ್ಯಕ್ಕಂತೂ ಧೋನಿ ತಮ್ಮ ತಂಡಕ್ಕೆ ಐದನೇ ಟ್ರೋಫಿ ಜಯಿಸಿಕೊಡುವತ್ತ ಚಿತ್ತ ನೆಟ್ಟಿದ್ದಾರೆ.

ತಂಡಗಳ ಬಲಾಬಲ ಹೇಗಿದೆ?

ಧೋನಿ ಚಾಣಾಕ್ಷ ನಾಯಕ. ಅತ್ಯುತ್ತಮ ಫಿನಿಷರ್​. ಋತುರಾಜ್​ ಗಾಯಕ್ವಾಡ್​, ಡೆವೋನ್​ ಕಾನ್ವೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆ. ಬೆನ್​ಸ್ಟೋಕ್ಸ್​, ಮೊಯಿನ್​ ಅಲಿ, ರವೀಂದ್ರ ಜಡೇಜಾರಂತಹ ವಿಶ್ವ ಶ್ರೇಷ್ಠ ಆಲ್​ರೌಂಡರ್​ಗಳು ತಂಡದಲ್ಲಿರುವುದು ಧೋನಿ ಬಲ ಹೆಚ್ಚಿಸಿದೆ. ಆದರೆ ಕಳೆದ ವರ್ಷ ವಿಕೆಟ್​ ಬೇಟೆಯಾಡಿದ್ದ ಮುಕೇಶ್​ ಚೌದರಿ ಟೂರ್ನಿಯಿಂದ ಹೊರ ಬಿದ್ದಿರುವುದು ಧೋನಿ ಚಿಂತೆಗೆ ಕಾರಣವಾಗಿದೆ. ಇನ್ನು ದೀಪಕ್​ ಚಹರ್​ ಫಿಟ್​ ಆಗಿರುವುದು ಕೊಂಚ ನಿರಾಳ ತಂದಿದೆ. ಅಜಿಂಕ್ಯ ರಹಾನೆ, ಅಂಬಟಿ ರಾಯುಡು ಅವರಂತಹ ಅನುಭವಿಗಳು ತಂಡದಲ್ಲಿದ್ದು, ಅಬ್ಬರಿಸುವ ನಿರೀಕ್ಷೆಯಲ್ಲಿದ್ದಾರೆ.

ಗುಜರಾತ್​ ತಂಡಕ್ಕೆ ನಾಯಕ ಹಾರ್ದಿಕ್​​ ಪಾಂಡ್ಯ ಬಲ ಹೆಚ್ಚಾಗಿದೆ. ಬ್ಯಾಟಿಂಗ್​​​-ಬೌಲಿಂಗ್​​ನಲ್ಲಿ ಅದ್ಭುತ ಫಾರ್ಮ್​​ ಹೊಂದಿದ್ದಾರೆ. ಗುಜರಾತ್​ ಪದಾರ್ಪಣೆ ಮಾಡಿದ್ದ ಐಪಿಎಲ್​​​​​​​​​ನಲ್ಲಿ ಮ್ಯಾಜಿಕ್​ ನಡೆಸಿದ್ದ ಹಾರ್ದಿಕ್​, ಈ ಬಾರಿಯೂ ಅದೇ ವಿಶ್ವಾಸದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಶುಭ್​​ಮನ್​ ಗಿಲ್​ ಭರ್ಜರಿ ಫಾರ್ಮ್​​ನಲ್ಲಿದ್ದರೆ, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ತಂಡದಲ್ಲಿ ಆಡುತ್ತಿರುವುದು ಹಾರ್ದಿಕ್ ಆತ್ಮವಿಶ್ವಾಸ ಹೆಚ್ಚಿಸಿದೆ. ಚೆನ್ನೈನಲ್ಲಿ ಹಿರಿಯ ಆಟಗಾರರೇ ತುಂಬಿದ್ದರೆ, ಗುಜರಾತ್​ ತಂಡದಲ್ಲಿ ಹೆಚ್ಚಾಗಿ ಯುವಕರೇ ಕಾಣಿಸಿಕೊಳ್ಳಲಿದ್ದಾರೆ. ಸ್ಪಿನ್​ನಲ್ಲಿ ರಶೀದ್​ ಖಾನ್​, ಫಾಸ್ಟ್​ ಬೌಲಿಂಗ್​ನಲ್ಲಿ ಮೊಹಮ್ಮದ್​ ಶಮಿ ಮೇಲೆ ಭಾರಿ ನಿರೀಕ್ಷೆ ಇದೆ. ಒಟ್ನಲ್ಲಿ ಉಭಯ ತಂಡಗಳು ಅತ್ಯಂತ ಬಲಿಷ್ಠವಾಗಿದ್ದು, ಜಿದ್ಧಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ.

ತಂಡಗಳು

ಚೆನ್ನೈ ಸೂಪರ್ ಕಿಂಗ್ಸ್: MS ಧೋನಿ (ನಾಯಕ/ವಿಕೆಟ್‌ಕೀಪರ್), ಋತುರಾಜ್ ಗಾಯಕ್ವಾಡ್​, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಮೋಯಿನ್ ಅಲಿ, ಬೆನ್ ಸ್ಟೋಕ್ಸ್, ಶಿವಂ ದುಬೆ, ರವೀಂದ್ರ ಜಡೇಜಾ, ಡ್ವೇನ್ ಪ್ರಿಟೊರಿಯಸ್, ಮಿಚೆಲ್ ಸ್ಯಾಂಟ್ನರ್​, ಡೆವೊನ್ ಕಾನ್ವೆ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ರಾಜವರ್ಧನ್ ಹಂಗರೇಕರ್, ಸಿಸಾಂದಾ ಮಗಾಲ, ಅಜಯ್ ಮಂಡ್, ಆಕಾಶ್​ ಸಿಂಗ್​, ಮಹೀಷ ತೀಕ್ಷಣ, ಪ್ರಶಾಂತ್ ಸೋಳಂಕಿ, ಸಿಮರಜೀತ್ ಸಿಂಗ್.

ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಕೇನ್ ವಿಲಿಯಮ್ಸನ್, ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಶಿವಂ ಮಾವಿ, ಶ್ರೀಕರ್ ಭರತ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ (ಮೂವರು ವಿಕೆಟ್‌ಕೀಪರ್), ಅಲ್ಜರಿ ಜೋಸೆಫ್, ಜೋಶುವಾ ಲಿಟಲ್, ಮೊಹಮ್ಮದ್ ಶಮಿ, ನೂರ್ ಅಹಮದ್, ರವಿಶ್ರೀನಿವಸಾನ್ ಸಾಯಿಕಿಶೋರ್, ಪ್ರದೀಪ್ ಸಂಗ್ವಾನ್, ಮೋಹಿತ್ ಶರ್ಮಾ, ಒಡಿಯನ್ ಸ್ಮಿತ್, ಜಯಂತ್ ಯಾದವ್, ಯಶ್ ದಯಾಳ್.