ಕನ್ನಡ ಸುದ್ದಿ  /  Sports  /  Mumbai Indians Hire Charlotte As Head Coach And Jhulan Goswami As Mentor

WPL: ಮುಂಬೈ ತಂಡಕ್ಕೆ ಗೋಸ್ವಾಮಿ ಮೆಂಟರ್‌, ಚಾರ್ಲೆಟ್ ಮುಖ್ಯ ಕೋಚ್; ಐಪಿಎಲ್‌ ಬಳಿಕ ಡಬ್ಲ್ಯೂಪಿಎಲ್‌ ಯಶಸ್ಸಿಗೆ‌ ಎಂಐ ಪ್ಲಾನ್‌

ಐಪಿಎಲ್‌ನ ಬಲಿಷ್ಠ ಹಾಗೂ ಅತ್ಯಂತ ಯಶಸ್ವಿ ತಂಡವಾಗಿರುವ ಮುಂಬೈ ಇಂಡಿಯನ್ಸ್‌, ಡಬ್ಲ್ಯೂಪಿಎಲ್‌ನಲ್ಲೂ ತಂಡವನ್ನು ಕಣಕ್ಕಿಳಿಸುತ್ತಿದೆ. ಈಗಾಗಲೇ ಅಂತಿಮ ತಂಡವನ್ನು ಹೊರತುಪಡಿಸಿ ಸಿಬ್ಬಂದಿ ವರ್ಗವನ್ನು ಬಹುತೇಕ ಅಂತಿಮಗೊಳಿಸಿದೆ.

ಮುಂಬೈ ಇಂಡಿಯನ್ಸ್ ಕೋಚ್‌ ಬಳಗ
ಮುಂಬೈ ಇಂಡಿಯನ್ಸ್ ಕೋಚ್‌ ಬಳಗ

ಮುಂಬೈ: ವಿಮಿನ್ಸ್‌ ಪ್ರೀಮಿಯರ್‌ ಲೀಗ್‌ಗೆ ದಿನಗಣನೆ ಆರಂಭವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಬಲಿಷ್ಠ ತಂಡಗಳನ್ನು ಕಟ್ಟಲು ವಿವಿಧ ಫ್ರಾಂಚೈಸಿಗಳು ಕಾರ್ಯತಂತ್ರ ರೂಪಿಸುತ್ತಿವೆ. ಈಗಾಗಲೇ ಭಾರತದಲ್ಲಿ ಪುರುಷರ ಐಪಿಎಲ್‌ ಅಭೂತಪೂರ್ವ ಯಶಸ್ಸನ್ನು ಸಾಧಿಸಿದ್ದು, ಇದೇ ಸಾಲಿಗೆ ವಿಮಿನ್ಸ್‌ ಪ್ರೀಮಿಯರ್‌ ಲೀಗ್‌(WPL), ಅರ್ಥಾತ್‌ ವನಿತೆಯರ ಐಪಿಎಲ್‌ ಕೂಡಾ ಸೇರಲು ಸಿದ್ಧವಾಗಿದೆ.

ಐಪಿಎಲ್‌ನ ಬಲಿಷ್ಠ ಹಾಗೂ ಅತ್ಯಂತ ಯಶಸ್ವಿ ತಂಡವಾಗಿರುವ ಮುಂಬೈ ಇಂಡಿಯನ್ಸ್‌, ಡಬ್ಲ್ಯೂಪಿಎಲ್‌ನಲ್ಲೂ ತಂಡವನ್ನು ಕಣಕ್ಕಿಳಿಸುತ್ತಿದೆ. ವ್ಯವಹಾರ ಕ್ಷೇಥ್ರದ ದಿಗ್ಗಜ ಮುಖೇಶ್‌ ಅಂಬಾನಿ ಮಾಲಕತ್ವದ ತಂಡ ಈಗಾಗಲೇ ಅಂತಿಮ ತಂಡವನ್ನು ಹೊರತುಪಡಿಸಿ ಸಿಬ್ಬಂದಿ ವರ್ಗವನ್ನು ಬಹುತೇಕ ಅಂತಿಮಗೊಳಿಸಿದೆ.

ಮಾರ್ಚ್ ತಿಂಗಳಲ್ಲಿ ವಿಮೆನ್ಸ್ ಪ್ರೀಮಿಯರ್ ಲೀಗ್‌ ಆರಂಭವಾಗಲಿದ್ದು, ಅದಾಗಲೇ ಹೊಸ ಫ್ರಾಂಚೈಸಿಯ ತರಬೇತಿ ಬಳಗವನ್ನು ಮುಂಬೈ ಇಂಡಿಯನ್ಸ್ ಘೋಷಿಸಿದೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಚಾರ್ಲೋಟ್ ಎಡ್ವರ್ಡ್ಸ್(Charlotte Edwards)​ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಪದ್ಮಶ್ರೀ ಹಾಗೂ ಅರ್ಜುನ ಪ್ರಶಸ್ತಿ ವಿಜೇತೆ ಹಾಗೂ ಭಾರತ ತಂಡದ ಮಾಜಿ ವೇಗಿ ಜೂಲನ್ ಗೋಸ್ವಾಮಿ(Jhulan Goswami) ತಂಡದ ಮೆಂಟರ್ ಮತ್ತು ಬೌಲಿಂಗ್ ಕೋಚ್ ಆಗಿ ಅವಳಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಭಾರತದ ಮಾಜಿ ಆಲ್‌ರೌಂಡರ್ ದೇವಿಕಾ ಪಾಲ್ಶಿಕಾರ್(Devieka Palshikaar ) ಬ್ಯಾಟಿಂಗ್ ಕೋಚ್ ಹಾಗೂ ತೃಪ್ತಿ ಚಂದಗಡ್ಕರ್ ಭಟ್ಟಾಚಾರ್ಯ ತಂಡದ ಮ್ಯಾನೇಜರ್ ಆಗಿ ನೇಮಕಗೊಂಡಿದ್ದಾರೆ.

“ಚಾರ್ಲೋಟ್ ಎಡ್ವರ್ಡ್ಸ್, ಜೂಲನ್ ಗೋಸ್ವಾಮಿ ಮತ್ತು ದೇವಿಕಾ ಪಾಲ್ಶಿಕಾರ್ ಅವರನ್ನು ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಸ್ವಾಗತಿಸಲು ನಾನು ಸಂತಸಪಡುತ್ತೇನೆ. ಕೇವಲ ಆಟಗಾರ್ತಿಯರಾಗಿ ಮಾತ್ರವಲ್ಲದೆ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ಕೋಚ್‌, ಆಡಳಿತಾಧಿಕಾರಿ ಮತ್ತು ತರಬೇತಿ ಸಿಬ್ಬಂದಿಯಾಗಿ ತೊಡಗಿಸಿಕೊಳ್ಳುತ್ತಿರುವುದು ನಿಜಕ್ಕೂ ಅಮೋಘವೆನಿಸುತ್ತಿದೆ. ಭಾರತದಲ್ಲಿ ಮಹಿಳಾ ಕ್ರೀಡೆಗೆ ಇದೊಂದು ಸಂಬ್ರಮ್‌ ಸಮಯವಾಗಿದೆ. ನಮ್ಮ ಮಹಿಳಾ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ದೇಶಕ್ಕೆ ಗೌರವ ತಂದುಕೊಡುತ್ತಿದ್ದಾರೆ. ಕ್ರೀಡಾ ಶಕ್ತಿಯ ಮೂಲಕ ಹೆಚ್ಚಿನ ಸಂತಸ ಮತ್ತು ಸಂಭ್ರಮವನ್ನು ತಂದುಕೊಡಲು ಮಹಿಳೆಯರಿಗೆ ಇನ್ನಷ್ಟು ಶಕ್ತಿ ಲಭಿಸಲಿ. ಈ ಮೂಲಕ ಮಹಿಳೆಯರ ಹೊಸ ತಲೆಮಾರಿಗೆ ಹೆಚ್ಚಿನ ಸ್ಫೂರ್ತಿ ಸಿಗುವಂತಾಗಲಿ. ಉನ್ನತ ಮಟ್ಟವನ್ನು ತಲುಪಲು ಅವರಿಗೆ ಸಾಧ್ಯವಿರುವ ಎಲ್ಲ ರೀತಿಯ ಬೆಂಬಲವನ್ನು ಒದಗಿಸಲು ನಾವು ಸದಾ ಬದ್ಧರಾಗಿರುತ್ತೇವೆ” ಎಂದು ತಂಡದ ಮಾಲಕಿ ನೀತಾ ಅಂಬಾನಿ ಹೇಳಿದ್ದಾರೆ.

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ನಗರದ ತಂಡವನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ಗರಿಷ್ಠ ಬಿಡ್ ಸಲ್ಲಿಸಿ ಖರೀದಿಸಿದೆ. ಇದು ಮುಂಬೈ ಇಂಡಿಯನ್ಸ್‌ನ 4ನೇ ಫ್ರಾಂಚೈಸಿಯಾಗಿದೆ. ಐಪಿಎಲ್‌ನ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್, ದಕ್ಷಿಣ ಆಫ್ರಿಕಾದ ಎಸ್ಎ20 ಟೂರ್ನಿಯಲ್ಲಿ ಆಡುವ ಎಂಐ ಕೇಪ್ಟೌನ್ ಮತ್ತು ಯುಎಇಯ ಐಎಲ್ಟಿ20 ಟೂರ್ನಿಯಲ್ಲಿ ಆಡುವ ಎಂಐ ಎಮಿರೇಟ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಇತರ 3 ಫ್ರಾಂಚೈಸಿಗಳಾಗಿವೆ.

ಚಾರ್ಲೋಟ್ ಎಡ್ವರ್ಡ್ಸ್ ಯಾರು?

ಸುಮಾರು 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಚಾರ್ಲೋಟ್ ಎಡ್ವರ್ಡ್ಸ್ ಅವರು, ಇಂಗ್ಲೆಂಡ್ ತಂಡದ ನಾಯಕಿಯಾಗಿ ಏಕದಿನ ಮತ್ತು ಟಿ20 ವಿಶ್ವಕಪ್‌ಗಳನ್ನು ದೇಶಕ್ಕೆ ಗೆದ್ದುಕೊಟ್ಟಿದ್ದಾರೆ. ಕಳೆದ 5 ವರ್ಷಗಳಿಂದ ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ವಿವಿಧ ತಂಡಗಳ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುವ ಮಹಿಳೆಯರ ದೇಶೀಯ ಟಿ20 ಕ್ರಿಕೆಟ್ ಟೂರ್ನಿಗೂ ಚಾರ್ಲೋಟ್ ಎಡ್ವರ್ಡ್ಸ್ ಕಪ್ ಎಂಬ ಹೆಸರಿಡಲಾಗಿದೆ. 2022ರಲ್ಲಿ ಚಾರ್ಲೋಟ್ ಐಸಿಸಿ ಹಾಲ್ ಆಫ್ ಫೇಮ್‌ಗೂ ಸೇರ್ಪಡೆಗೊಂಡಿದ್ದರು.

ಜೂಲನ್ ಗೋಸ್ವಾಮಿ

ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತೆ ಜೂಲನ್ ಗೋಸ್ವಾಮಿ, ಭಾರತ ಕ್ರಿಕೆಟ್‌ ತಂಡದಲ್ಲಿ ತಮ್ಮ ಬೌಲಿಂಗ್ ಕೌಶಲಕ್ಕೆ ಹೆಸರುವಾಸಿಯಾಗಿದ್ದರು. ಜಾಗತಿಕ ಮಹಿಳಾ ಕ್ರಿಕೆಟ್ ಕಂಡ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರೆನಿಸಿದ್ದಾರೆ. 20 ವರ್ಷಗಳ ವೃತ್ತಿಜೀವನದಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 350ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ಮತ್ತು ಮಹಿಳೆಯರ ವಿಶ್ವಕಪ್‌ನಲ್ಲಿ ಸರ್ವಾಧಿಕ ವಿಕೆಟ್ ಕಬಳಿಸಿದ ದಾಖಲೆಯನ್ನೂ ಹೊಂದಿದ್ದಾರೆ. 2016ರ ಜನವರಿಯಲ್ಲಿ ಐಸಿಸಿ ಮಹಿಳಾ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಅವರು ನಂ. 1 ಪಟ್ಟ ಅಲಂಕರಿಸಿದ್ದರು. ನಿವೃತ್ತಿಯ ನಂತರದಲ್ಲಿ ಅವರು, ಬಂಗಾಳದ ಮಹಿಳಾ ಕ್ರಿಕೆಟ್ ತಂಡದ ಮೆಂಟರ್ ಆಗಿ ಮಾರ್ಗದರ್ಶನ ನೀಡುತ್ತಿದ್ದಾರೆ.

ದೇವಿಕಾ ಪಾಲ್ಶಿಕಾರ್

ಭಾರತ ತಂಡದ ಪರ ಬಲಗೈ ಬ್ಯಾಟರ್ ಮತ್ತು ಬಲಗೈ ಲೆಗ್ ಸ್ಪಿನ್ನರ್ ಆಗಿ ದೇವಿಕಾ ಪಾಲ್ಶಿಕಾರ್ ಆಲ್‌ರೌಂಡರ್ ಪಾತ್ರ ನಿಭಾಯಿಸಿದ್ದಾರೆ. ನಿವೃತ್ತಿಯ ನಂತರ ಅವರು, 2014 ಮತ್ತು 2016ರ ನಡುವೆ ಭಾರತ ತಂಡದ ಸಹಾಯಕ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. 2018ರ ಏಷ್ಯನ್ ಕಪ್ ಜಯಿಸಿದ ಬಾಂಗ್ಲಾದೇಶ ತಂಡಕ್ಕೂ ಸಹಾಯಕ ಕೋಚ್ ಆಗಿ ನೆರವಾಗಿದ್ದರು. ಭಾರತದಲ್ಲಿ ವಿವಿಧ ದೇಶೀಯ ಕ್ರಿಕೆಟ್ ತಂಡಗಳಿಗೆ ತರಬೇತಿ ನೀಡಿದ್ದಾರೆ.

ವಿಭಾಗ