ಕನ್ನಡ ಸುದ್ದಿ  /  Sports  /  Mumbai Indians Wins First Season Of Wpl

WPL Final: ಡೆಲ್ಲಿ ಮಣಿಸಿ ಚೊಚ್ಚಲ ಆವೃತ್ತಿಯ ವಿಮೆನ್ಸ್ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್

ಹರ್ಮನ್‌ ಪ್ರೀತ್‌ ಕೌರ್‌ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡವು ಚೊಚ್ಚಲ ಆವೃತ್ತಿಯ ಡಬ್ಲ್ಯೂಪಿಎಲ್‌ ಟ್ರೋಫಿ ಗೆದ್ದಿದೆ.

ಮುಂಬೈ ಇಂಡಿಯನ್ಸ್‌ ಚಾಂಪಿಯನ್
ಮುಂಬೈ ಇಂಡಿಯನ್ಸ್‌ ಚಾಂಪಿಯನ್

ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಚೊಚ್ಚಲ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ (Women's premier league) ಆವೃತ್ತಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ 7 ವಿಕೆಟ್‌ಗಳ ಅಂತರದಿಂದ ಭರ್ಜರಿಯಾಗಿ ಗೆದ್ದ ಹರ್ಮನ್‌ ಪ್ರೀತ್‌ ಕೌರ್‌ ಪಡೆಯು, ಡಬ್ಲ್ಯೂಪಿಎಲ್‌ ಟ್ರೋಫಿ ಎತ್ತಿ ಹಿಡಿದಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಆರಂಭಿಕ ಕುಸಿತದ ನಡುವೆಯೂ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 131 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಹರ್ಮನ್‌ಪ್ರೀತ್‌ ಕೌರ್‌ ಪಡೆ, 19.3 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ಮುಂಬೈ ಪರ ಮ್ಯಾಥ್ಯೂಸ್‌ 13 ರನ್‌ ಗಳಿಸಿ ಔಟಾದರೆ, ಯಾಸ್ತಿಕಾ ಭಾಟಿಯಾ 4 ರನ್‌ ಗಳಿಸಿದರು. ನಾಯಕಿ ಕೌರ್ 37 ರನ್‌ ಗಳಿಸಿ ರನೌಟ್‌ ಆದರು. (ಇದಕ್ಕೂ ಮೊದಲು ಡೆಲ್ಲಿ ನಾಯಕಿ ಲ್ಯಾನಿಂಗ್‌ ಕೂಡಾ ರನೌಟ್‌ ಆಗಿ ಔಟಾಗಿದ್ದರು). ಆದರೆ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ನಟಾಲಿ ಸಿವರ್‌ ಬ್ರಂಟ್‌, ಅಜೇಯ 60 ರನ್‌ ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅಲ್ಲದೆ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದರು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ, ಬೃಹತ್‌ ಮೊತ್ತ ಕಲೆ ಹಾಕುವ ಲೆಕ್ಕಾಚಾರ ಹಾಕಿಕೊಂಡಿತ್ತು. ಆದರೆ, ಈ ಯೋಜನೆಗೆ ಮುಂಬೈ ಬೌಲರ್‌ಗಳು ಅವಕಾಶ ನೀಡಲಿಲ್ಲ. ಡೆಲ್ಲಿ ಬ್ಯಾಟಿಂಗ್‌ ಲೈನಪ್‌ಗೆ ಕಂಟಕರಾದ ವಾಂಗ್‌ ಮತ್ತು ಮ್ಯಾಥ್ಯೂಸ್‌ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಇದೇ ವೇಳೆ ಮ್ಯಾಥ್ಯೂಸ್‌ ಟೂರ್ನಿಯ ಪರ್ಪಲ್‌ ಕ್ಯಾಪ್‌ ಗೆದ್ದು ಸಂಭ್ರಮಿಸಿದರು.

ಡೆಲ್ಲಿ ಪರ ಉತ್ತಮ ಆರಂಭ ಒದಗಿಸುವ ಭರವಸೆ ನೀಡಿದ ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮಾ, 4 ಎಸೆತಗಳಲ್ಲಿ 11 ರನ್‌ ಸಿಡಿಸಿ ಔಟಾದರು. ಅವರ ಬೆನ್ನಲ್ಲೇ ಅಲಿಸ್‌ ಕ್ಯಾಪ್ಸೆ ಕೂಡಾ ಬಂದ ವೇಗದಲ್ಲೇ ಮತ್ತೆ ಪೆವಿಲಿಯನ್‌ ಸೇರಿಕೊಂಡರು. ಕೆಲ ಸಮಯ ಅಬ್ಬರಿಸಿದ ಜೆಮಿಮಾ ರೋಡ್ರಿಗಸ್‌ ಆಟ 9 ರನ್‌ಗಳಿಗೆ ನಿಂತಿತು. ಈ ವೇಳೆ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ನಾಯಕಿ ಮೆಗ್‌ ಲ್ಯಾನಿಂಗ್, 35 ರನ್‌ ಕಲೆ ಹಾಕಿದರು. ಅನಗತ್ಯ ರನ್‌ ಕಲೆ ಹಾಕಲು ಹೋಗಿ ರನೌಟ್‌ ಆದರು. ಕಾಪ್‌ 18 ರನ್‌ ಗಳಿಸಿ ನಿರ್ಗಮಿಸಿದರು.

ಕೊನೆಯ ವಿಕೆಟ್‌ಗೆ ಅಜೇಯ 52 ರನ್‌ ಜೊತೆಯಾಟ

ಒಂದು ಹಂತದಲ್ಲಿ 15.6 ಓವರ್‌ಗಳಲ್ಲಿ 79 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡಿದ್ದ ಡೆಲ್ಲಿ, ನೂರರೊಳಗೆ ಆಲೌಟ್‌ ಆಗುವ ಹಂತದಲ್ಲಿತ್ತು. ಆದರೆ, ಈ ವೇಳೆ ಶಿಖಾ ಪಂಡೆ ಮತ್ತು ರಾಧಾ ಯಾದವ್‌ ಮ್ಯಾಜಿಕ್‌ ಮಾಡಿದರು. ಕೊನೆಯ ವಿಕೆಟ್‌ಗೆ 24 ಎಸೆತಗಳಿಂದ ಅಜೇಯ 52 ರನ್‌ ಪೇರಿಸಿದರು. ಇದು ಫೈನಲ್‌ ಪಂದ್ಯದ ರೋಚಕತೆ ಉಳಿಸಿತು. ಶಿಖಾ 27 ರನ್‌ ಗಳಿಸಿದರೆ, ರಾಧಾ ಯಾದವ್‌ 12 ಎಸೆತಗಳಿಂದ 2 ಸಿಕ್ಸರ್‌ ಸಹಿತ 27 ರನ್‌ ಕಲೆ ಹಾಕಿದರು.