WPL Final: ಇಂದು ಮಹಿಳಾ ಪ್ರೀಮಿಯರ್​​ ಲೀಗ್​​ ಫೈನಲ್​; ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟ ಮುಂಬೈ-ಡೆಲ್ಲಿ!
ಕನ್ನಡ ಸುದ್ದಿ  /  ಕ್ರೀಡೆ  /  Wpl Final: ಇಂದು ಮಹಿಳಾ ಪ್ರೀಮಿಯರ್​​ ಲೀಗ್​​ ಫೈನಲ್​; ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟ ಮುಂಬೈ-ಡೆಲ್ಲಿ!

WPL Final: ಇಂದು ಮಹಿಳಾ ಪ್ರೀಮಿಯರ್​​ ಲೀಗ್​​ ಫೈನಲ್​; ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟ ಮುಂಬೈ-ಡೆಲ್ಲಿ!

WPL Final: ಮಹಿಳಾ ಪ್ರೀಮಿಯರ್​​ ಲೀಗ್​​​ನ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಕಾದಾಟ ನಡೆಸಲಿವೆ. ಮುಂಬೈನ ಬ್ರಬೋರ್ನ್​​​ ಮೈದಾನದಲ್ಲಿ ಉಭಯ ತಂಡಗಳು ಚೊಚ್ಚಲ ಪ್ರಶಸ್ತಿ ಸೆಣಸಾಟ ನಡೆಸಲಿವೆ.

ಪ್ರಶಸ್ತಿ ಜೊತೆಗೆ ಮೆಗ್​ಲ್ಯಾನಿಂಗ್​ ಮತ್ತು ಹರ್ಮನ್​ ಪ್ರೀತ್​
ಪ್ರಶಸ್ತಿ ಜೊತೆಗೆ ಮೆಗ್​ಲ್ಯಾನಿಂಗ್​ ಮತ್ತು ಹರ್ಮನ್​ ಪ್ರೀತ್​ (WPL/Twitter)

ಉದ್ಘಾಟನಾ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್ (Women's Premier League)​​ ಕೊನೆಯ ಹಂತ ತಲುಪಿದ್ದು, ಇಂದು ನಡೆಯಲಿರುವ ಟೂರ್ನಿಯ ಫೈನಲ್ ಪಂದ್ಯಕ್ಕೆ (WPL Final) ವೇದಿಕೆ ಸಜ್ಜಾಗಿದೆ. ಫೈನಲ್​​​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ (Delhi Capitals) ಮತ್ತು ಮುಂಬೈ ಇಂಡಿಯನ್ಸ್​ (Mumbai Indians) ತಂಡಗಳು ಮುಖಾಮುಖಿ ಆಗುತ್ತಿದ್ದು, ಮುಂಬೈನ ಬ್ರಬೋರ್ನ್​ ಕ್ರೀಡಾಂಗಣದಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಲು ಕಾದಾಟ ನಡೆಸಲಿವೆ. ಡೆಲ್ಲಿ-ಮುಂಬೈ ತಂಡ ಲೀಗ್​ ಹಂತದಲ್ಲಿ 2 ಬಾರಿ ಮುಖಾಮುಖಿಯಾಗಿದ್ದು, ತಲಾ 1ರಲ್ಲಿ ಜಯಿಸಿವೆ.

ಲೀಗ್​​​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪ್ರದರ್ಶನ

ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್​ ಲ್ಯಾನಿಂಗ್​ (Meg Lanning) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್​, ಲೀಗ್​​ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿತ್ತು. ಲೀಗ್​​​ನಲ್ಲಿ ಆಡಿದ 8 ಪಂದ್ಯಗಳಲ್ಲಿ 6ರಲ್ಲಿ ಜಯಿಸಿದ್ದ ಡೆಲ್ಲಿ, 2 ರಲ್ಲಿ ಸೋಲಿನ ರುಚಿ ಕಂಡಿತ್ತು. ಒಟ್ಟು 12 ಅಂಕ ಪಡೆದ +1.856 ರನ್​ ರೇಟ್​ ಹೊಂದಿದ್ದ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಇದರಿಂದ ಡೆಲ್ಲಿ ನೇರವಾಗಿ ಫೈನಲ್​​ಗೂ ಅರ್ಹತೆ ಪಡೆದಿತ್ತು.

ಲೀಗ್​​​​ನಲ್ಲಿ ಮುಂಬೈ ಇಂಡಿಯನ್ಸ್​​ ಪ್ರದರ್ಶನ

ಮುಂಬೈ ಇಂಡಿಯನ್ಸ್​ ಕೂಡ ಅತ್ಯಂತ ಬಲಿಷ್ಠ ತಂಡ. ಲೀಗ್​​​​ನಲ್ಲಿ ಸತತ ಐದು ಪಂದ್ಯಗಳನ್ನು ಗೆದ್ದು, ಪ್ಲೇ ಆಫ್​ ಬರ್ತ್​ ಖಚಿತಪಡಿಸಿದ್ದ ಮುಂಬೈ, ಕೊನೆಯ ಪಂದ್ಯಗಳಲ್ಲಿ ಸತತ ಸೋಲು ಕಂಡಿತು. ಬಳಿಕ ಕೊನೆಯ ಪಂದ್ಯದಲ್ಲಿ ಗೆದ್ದು ಹಳಿಗೆ ಮರಳಿತು. ಹರ್ಮನ್​ ಪ್ರೀತ್​ ಕೌರ್ (Harmanpreet Kaur) ಸಾರಥ್ಯದ ಮುಂಬೈ ತಂಡ, ಆಡಿದ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 2ರಲ್ಲಿ ಸೋಲನುಭವಿಸಿತ್ತು. ಈ ತಂಡವೂ 12 ಅಂಕ ಪಡೆಯಿತಾದರೂ, ರನ್​ರೇಟ್ (+1.711 ಮುಂಬೈ ರನ್​ರೇಟ್​) ಆಧಾರದಲ್ಲಿ ಡೆಲ್ಲಿ ನೇರವಾಗಿ ಫೈನಲ್​​ ಅರ್ಹತೆ ಗಿಟ್ಟಿಸಿಕೊಂಡಿತ್ತು.

ಎಲಿಮಿನೇಟರ್​​ನಲ್ಲಿ ಗೆದ್ದು ಫೈನಲ್​ಗೆ ಎಂಟ್ರಿ!

ಟೇಬಲ್​ ಟಾಪರ್ ತಂಡವು ನೇರವಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರೆ, 2 ಮತ್ತು 3 ನೇ ಸ್ಥಾನ ಪಡೆದ ತಂಡಗಳು, ಎಲಿಮಿನೇಟರ್​​ನಲ್ಲಿ ಕಾದಾಟ ನಡೆಸಿ ಫೈನಲ್​ಗೆ ಪ್ರವೇಶಿಸಬೇಕಾಗುತ್ತದೆ. ಹಾಗಾಗಿ ಎಲಿಮಿನೇಟರ್​​​ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ವಿರುದ್ಧ 72 ರನ್​ಗಳ ಭರ್ಜರಿ ಜಯ ಸಾಧಿಸಿದ ಮುಂಬೈ, ಚೊಚ್ಚಲ ಆವೃತ್ತಿಯ WPL ಫೈನಲ್​ಗೆ ಅಧಿಕೃತ ಪ್ರವೇಶ ನೀಡಿತು. ಇಂದು ಡೆಲ್ಲಿ ಕ್ಯಾಪಿಟಲ್ಸ್​​​​ ಎದುರು ಚೊಚ್ಚಲ ಪ್ರಶಸ್ತಿಗೆ ಸೆಣಸಾಟ ನಡೆಸಲಿದೆ.

ಹರ್ಮನ್​-ಲ್ಯಾನಿಂಗ್​ 3ನೇ ಬಾರಿಗೆ ಫೈನಲ್​ ಮುಖಾಮುಖಿ.!

ಭಾರತ ಮಹಿಳಾ ತಂಡದ ಕ್ಯಾಪ್ಟನ್​ ಹರ್ಮನ್ ಪ್ರೀತ್​​ ಕೌರ್ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡ ನಾಯಕಿ ಮೆಗ್​ ಲ್ಯಾನಿಂಗ್​, ಫೈನಲ್​​​​​ನಲ್ಲಿ ಮೂರನೇ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ. 2020ರ ಟಿ20 ವಿಶ್ವಕಪ್​​​​ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಈ ನಾಯಕಿಯರು, ಕಾಮನ್​​ವೆಲ್ತ್​ ಗೋಲ್ಡ್​ ಮೆಡಲ್​ ಪಂದ್ಯದಲ್ಲೂ ಎದುರಾಗಿದ್ದರು.

ಈಗ WPLನಲ್ಲೂ ಮತ್ತೊಮ್ಮೆ ಮುಖಾಮುಖಿ ಆಗುತ್ತಿರುವುದು ವಿಶೇಷ. ಆದರೆ ಫೈನಲ್​​ ಮುಖಾಮುಖಿಯಲ್ಲಿ ಮೆಗ್​ ಲ್ಯಾನಿಂಗ್​ ಅವರೇ ಮೇಲುಗೈ ಸಾಧಿಸಿದ್ದಾರೆ. ಎದುರಾದ ಎರಡೂ ಫೈನಲ್​​ಗಳಲ್ಲೂ ಲ್ಯಾನಿಂಗ್​ ಗೆದ್ದು ಬೀಗಿದ್ದಾರೆ. ಹೀಗಾಗಿ 3ನೇ ಫೈನಲ್​​​​ನಲ್ಲಾದರೂ ಹರ್ಮನ್​​ ಪ್ರೀತ್​ ಕೌರ್​​​​​​​ ಅವರಿಗೆ ಜಯದ ಭಾಗ್ಯ ಒಲಿಯುತ್ತದೆಯೇ? ಎಂಬುದು ಕುತೂಹಲ ಮೂಡಿಸಿದೆ.

ಇಂಡೋ - ಆಸಿಸ್​ ನಾಯಕರ ಕದನ

ಮೊದಲ ಐಪಿಎಲ್​​ನಲ್ಲೂ ಆಸ್ಟ್ರೇಲಿಯಾ ಮತ್ತು ಟೀಮ್​ ಇಂಡಿಯಾ ನಾಯಕರ ಕದನವೇ ಏರ್ಪಟ್ಟಿತ್ತು. ಇದೀಗ ಚೊಚ್ಚಲ ವುಮೆನ್ಸ್​ ಪ್ರೀಮಿಯರ್​​​​ ಲೀಗ್​​​​ನಲ್ಲೂ ಇಂಡೋ-ಆಸಿಸ್​ ನಾಯಕಿಯರ ಕಾದಾಟ ವಿಶೇಷ ಎನಿಸಿದೆ. 2008ರ ಐಪಿಎಲ್​​​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಸಿಸ್​ ನಾಯಕ ಶೇನ್​ವಾರ್ನ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ಪರವಾಗಿ ಭಾರತದ ನಾಯಕ ಎಂ.ಎಸ್​. ಧೋನಿ ಮುಖಾಮುಖಿ ಆಗಿದ್ದರು. ಅಂದು ಶೇನ್​​​ ವಾರ್ನ್​​​​​​​​​ ಚೊಚ್ಚಲ ಪ್ರಶಸ್ತಿ ಗೆದ್ದಿದ್ದರು. ಇದೀಗ ಚೊಚ್ಚಲ ಪ್ರಶಸ್ತಿಯನ್ನು ಯಾರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಸಂಜೆ 7 ಗಂಟೆಗೆ ಪಂದ್ಯದ ಆರಂಭ.

ಮುಂಬೈ ಇಂಡಿಯನ್ಸ್​ ಸಂಭಾವ್ಯ ಪ್ಲೇಯಿಂಗ್​ XI

ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್​ ಕೀಪರ್​​​), ನಟಾಲಿ ಸಿವರ್, ಹರ್ಮನ್‌ ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ , ಜಿಂಟಿಮಣಿ ಕಲಿತಾ, ಸೈಕಾ ಇಶಾಕ್

ಡೆಲ್ಲಿ ಕ್ಯಾಪಿಟಲ್ಸ್​​​ ಸಂಭಾವ್ಯ ಪ್ಲೇಯಿಂಗ್​ XI

ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರೋಡ್ರಿಗಸ್, ಮರಿಜಾನ್ನೆ ಕಪ್, ತಾನಿಯಾ ಭಾಟಿಯಾ (ವಿಕೆಟ್​ ಕೀಪರ್​), ಜೆಸ್ ಜೊನಾಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ಪೂನಮ್ ಯಾದವ್.

Whats_app_banner