ನೀರಜ್ ಚೋಪ್ರಾ ಕ್ಲಾಸಿಕ್ ಟೂರ್ನಿ ಜುಲೈ 5ಕ್ಕೆ ಮರುನಿಗದಿ; ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆ
ಮುಂದೂಡಲ್ಪಟ್ಟಿದ್ದ ನೀರಜ್ ಚೋಪ್ರಾ ಕ್ಲಾಸಿಕ್ ಟೂರ್ನಿ ಜುಲೈ 5ಕ್ಕೆ ಮರುನಿಗದಿಯಾಗಿದೆ. ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ವಿಶ್ವದ 12 ಸ್ಟಾರ್ ಆಟಗಾರರಿರುವ ಕ್ರೀಡಾಕೂಟ ನಡೆಯಲಿದೆ.

ಕಳೆದ ತಿಂಗಳು ನಡೆಯಬೇಕಿದ್ದ ನೀರಜ್ ಚೋಪ್ರಾ ಕ್ಲಾಸಿಕ್ ಅಂತಾರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆಯನ್ನು ಇದೀಗ ಜುಲೈ 5ರಂದು ಮರುನಿಗದಿಪಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಉದ್ವಿಗ್ನತೆಯಿಂದಾಗಿ ಕ್ರೀಡಾ ಈವೆಂಟ್ ಅನ್ನು ಮುಂದೂಡಲಾಗಿತ್ತು. ಈ ಕಾರ್ಯಕ್ರಮವನ್ನು ಮುಂದಿನ ತಿಂಗಳ ಆರಂಭದಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಸುವುದಾಗಿ ಸಂಘಟಕರು ತಿಳಿಸಿದ್ದಾರೆ.
ಮೇ 24ರಂದು ನಿಗದಿಯಾಗಿದ್ದ ಭಾರತದ ಮೊದಲ ಅಂತಾರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆಯನ್ನು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ಸಹಯೋಗದೊಂದಿಗೆ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಆಯೋಜಿಸುತ್ತಿದ್ದಾರೆ. ಇವರಿಗೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್ಐ) ಕಾರ್ಯಕ್ರಮ ನಡೆಸಲು ಅನುಮತಿ ನೀಡಿದೆ.
ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ 12 ಕ್ರೀಡಾಪಟುಗಳು ಭಾಗಿಯಾಗುವ ಈ ಪಂದ್ಯಾವಳಿಯಲ್ಲಿ, ವಿಶ್ವದ ಏಳು ಅತ್ಯುತ್ತಮ ಜಾವೆಲಿನ್ ಎಸೆತಗಾರರು ಭಾಗವಹಿಸುತ್ತಿರುವುದು ವಿಶೇಷ. ಅಲ್ಲದೆ ಭಾರತದ ಸ್ಟಾರ್ ಆಟಗಾರ ನೀರಜ್ ಚೋಪ್ರಾ ಸೇರಿದಂತೆ ಒಟ್ಟು ಐದು ಭಾರತೀಯರು ಭಾಗವಹಿಸಲಿದ್ದಾರೆ. ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಸಚಿನ್ ಯಾದವ್, ಕಿಶೋರ್ ಜೆನಾ, ರೋಹಿತ್ ಯಾದವ್ ಮತ್ತು ಸಾಹಿಲ್ ಸಿಲ್ವಾಲ್ ಇತರ ನಾಲ್ವರು ಭಾರತೀಯರು.
ಎರಡು ಬಾರಿಯ ವಿಶ್ವ ಚಾಂಪಿಯನ್ ಗ್ರೆನಡಾದ ಆಂಡರ್ಸನ್ ಪೀಟರ್ಸ್ (ವೈಯಕ್ತಿಕ ಅತ್ಯುತ್ತಮ ಎಸೆತ: 93.07 ಮೀ), 2016ರ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜರ್ಮನಿಯ ಥಾಮಸ್ ರೋಹ್ಲರ್ (ವೈಯಕ್ತಿಕ ಅತ್ಯುತ್ತಮ ಎಸೆತ: 93.90 ಮೀ), 2015ರ ವಿಶ್ವ ಚಾಂಪಿಯನ್ ಕೀನ್ಯಾದ ಜೂಲಿಯಸ್ ಯೆಗೊ (92.72 ಮೀ), ಅಮೆರಿಕದ ಕರ್ಟಿಸ್ ಥಾಂಪ್ಸನ್ (87.76 ಮೀ), ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಜಪಾನ್‌ನ ಜೆಂಕಿ ಡೀನ್ (84.28 ಮೀ), ಶ್ರೀಲಂಕಾದ ರುಮೇಶ್ ಪತಿರಗೆ (ಪಿಬಿ: 85.45ಮೀ), ಬ್ರೆಜಿಲ್‌ನ ಲೂಯಿಜ್ ಮಾರಿಸಿಯೊ ಡಾ ಸಿಲ್ವಾ (ಪಿಬಿ: 86.34 ಮೀ) ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
“ನೀರಜ್ ಚೋಪ್ರಾ ಕ್ಲಾಸಿಕ್ ಅನ್ನು ಇಷ್ಟು ಬೇಗ ಮತ್ತೆ ನಡೆಸಲು ಸಾಮೂಹಿಕ ಪ್ರಯತ್ನ ನಡೆದಿದೆ. ಜುಲೈ 5ರಂದು ಈವೆಂಟ್ ನಡೆಯುತ್ತಿದೆ ಎಂಬುದನ್ನು ಖಚಿತಪಡಿಸಲು ನಾವು ಸಂತೋಷಪಡುತ್ತೇವೆ” ಎಂದು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ಮುಖ್ಯ ವಾಣಿಜ್ಯ ಅಧಿಕಾರಿ ಕರಣ್ ಯಾದವ್ ಹೇಳಿದ್ದಾರೆ.
ಆಯೋಜಕರ ಪ್ರಕಾರ, ಈವೆಂಟ್ ಟಿಕೆಟ್ ಬೆಲೆ 199ರೂ.ಗಳಿಂದ ಆರಂಭವಾಗಿ 9,999 ರೂ.ಗಳವರೆಗೆ ಇರುತ್ತದೆ. ಪ್ರೀಮಿಯಂ ಅನುಭವಕ್ಕಾಗಿ, ತಲಾ 15 ಅತಿಥಿಗಳಿಗೆ ಸ್ಥಳಾವಕಾಶ ನೀಡುವ ಐದು ಕಾರ್ಪೊರೇಟ್ ಬಾಕ್ಸ್‌ಗಳು 44,999 ರೂ.ಗೆ ಲಭ್ಯವಿದೆ.