ಕೇವಲ 1 ಸೆಂಟಿಮೀಟರ್ ಅಂತರದಿಂದ ಡೈಮಂಡ್ ಟ್ರೋಫಿ ವಂಚಿತರಾದ ನೀರಜ್ ಚೋಪ್ರಾ; ಫೈನಲ್‌ನಲ್ಲಿ 2ನೇ ಸ್ಥಾನ
Neeraj Chopra Diamond League: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಬಂಗಾರ ಗೆದ್ದಿದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ, ಡೈಮಂಡ್ ಲೀಗ್ ಫೈನಲ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಕೂದಲೆಳೆ ಅಂತರದಿಂದ ಟ್ರೋಫಿ ವಂಚಿತರಾದರೂ 10 ಲಕ್ಷ ರೂಪಾಯಿ ಬಹುಮಾನ ಗೆದ್ದಿದ್ದಾರೆ.
ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲಿ, ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ (Neeraj Chopra) ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಗೆದ್ದ ಟ್ರೋಫಿಯನ್ನು ಮತ್ತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸೆಪ್ಟೆಂಬರ್ 14ರ ಶನಿವಾರ ನಡೆದ ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಕೇವಲ ಒಂದು ಸೆಂಟಿಮೀಟರ್ ಅಂತರದಿಂದ ನೀರಜ್ ಮೊದಲ ಸ್ಥಾನ ವಂಚಿತರಾಗಿದ್ದು, ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಗ್ರೆನೆಡಾದ ಆಂಡರ್ಸನ್ ಪೀಟರ್ಸ್ ತಮ್ಮ ಮೊದಲ ಪ್ರಯತ್ನದಲ್ಲಿಯೇ 87.87 ಮೀಟರ್ ದೂರ ಎಸೆದು ಡೈಮಂಡ್ ಲೀಗ್ ಗೆದ್ದರು. ಅತ್ತ ತಮ್ಮ ಮೂರನೇ ಪ್ರಯತ್ನದಲ್ಲಿ 87.86 ಮೀಟರ್ ದೂರ ಎಸೆದ ನೀರಜ್ ಕೂದಲೆಳೆ ಅಂತರದಿಂದ ಪ್ರತಿಷ್ಠಿತ ಪ್ರಶಸ್ತಿ ವಂಚಿತರಾದರು.
ಜರ್ಮನಿಯ ಜೂಲಿಯನ್ ವೆಬರ್ 85.97 ಮೀಟರ್ ದೂರ ಎಸೆದು ಮೂರನೇ ಸ್ಥಾನ ಪಡೆದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದು, ಈ ಬಾರಿ ಪ್ಯಾರಿಸ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದ ನೀರಜ್, ಇದೀಗ ಡೈಮಂಡ್ ಲೀಗ್‌ನಲ್ಲಿಯೂ ಮತ್ತೊಮ್ಮೆ ಎರಡನೇ ಸ್ಥಾನ ಪಡೆದಿದ್ದಾರೆ. ಹೀಗಾಗಿ ಅವರು ಬರೋಬ್ಬರು 12,000 ಡಾಲರ್ (10 ಲಕ್ಷ ರೂಪಾಯಿ) ಬಹುಮಾನ ಪಡೆದಿದ್ದಾರೆ. ಇದೇ ವೇಳೆ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಡೈಮಂಡ್ ಟ್ರೋಫಿಯನ್ನು ಗೆದ್ದ ಪೀಟರ್ಸ್, 30,000 ಡಾಲರ್ ನಗದು ಬಹುಮಾನ ಮಾತ್ರವಲ್ಲದೆ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ವೈಲ್ಡ್ ಕಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ.
26 ವರ್ಷದ ನೀರಜ್ ಚೋಪ್ರಾ, ಕಳೆದ ವರ್ಷದ ಡೈಮಂಡ್ ಲೀಗ್‌ನಲ್ಲಿಯೂ ಎರಡನೇ ಸ್ಥಾನ ಪಡೆದಿದ್ದರು. ಅದಕ್ಕೂ ಮೊದಲು 2022ರಲ್ಲಿ ಡೈಮಂಡ್ ಲೀಗ್ ಟ್ರೋಫಿ ಗೆದ್ದಿದ್ದರು. ಈ ಬಾರಿಯ ಆವೃತ್ತಿಯ ವಿವಿಧ ಸುತ್ತುಗಳಲ್ಲಿ ಒಟ್ಟಾರೆ ಅಂಕಗಳಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ ಬ್ರಸೆಲ್ಸ್‌ನಲ್ಲಿ ನಡೆಯುವ ಫೈನಲ್‌ಗೆ ಸ್ಥಾನ ಪಡೆದಿದ್ದರು. ದೋಹಾ ಮತ್ತು ಲೌಸಾನ್‌ನಲ್ಲಿ ಸತತ ಎರಡನೇ ಸ್ಥಾನ ಪಡೆದ ಅವರು 14 ಅಂಕಗಳನ್ನು ಗಳಿಸಿದ್ದರು.
ಮೂರನೇ ಪ್ರಯತ್ನದಲ್ಲಿ 87.86 ಮೀಟರ್
ಶನಿವಾರ ನಡೆದ ಫೈನಲ್ ಸುತ್ತಿನಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ಆಂಡರ್ಸನ್, ಚೊಚ್ಚಲ ಯತ್ನದಲ್ಲೇ 87.87 ಮೀಟರ್ ದೂರ ಎಸೆದು ಪ್ರಶಸ್ತಿ ಖಚಿತಪಡಿಸಿಕೊಂಡರು. ನೀರಜ್ ತಮ್ಮ ಮೊದಲ ಪ್ರಯತ್ನದಲ್ಲಿ 86.82 ಮೀಟರ್ ದೂರ ಎಸೆದರು. ಮೂರನೇ ಪ್ರಯತ್ನದಲ್ಲಿ ಎಸೆದ ಜಾವೆಲಿನ್ 87.86 ಮೀ ದೂರ ತಲುಪಿತು. ನೀರಜ್ ತನ್ನ ಆರನೇ ಮತ್ತು ಕೊನೆಯ ಪ್ರಯತ್ನದಲ್ಲಿ ಟ್ರೋಫಿ ಗೆಲ್ಲುವ ಅವಕಾಶ ಪಡೆದರು. ಆದರೆ ಕೇವಲ ಒಂದೂವರೆ ಮೀಟರ್‌ಗಿಂತಲೂ ಕಡಿಮೆ ಅಂತರದಿಂದ ಸೋತರು.
ನೀರಜ್ ಚೋಪ್ರಾ ಈ ಋತುವಿನಲ್ಲಿ ಗಾಯದಿಂದ ಬಳಲುತ್ತಿದ್ದಾರೆ. ಫಿಟ್‌ನೆಸ್ ಸಮಸ್ಯೆಯಿಂದಾಗಿ ಹೆಣಗಾಡುತ್ತಿದ್ದಾರೆ. ಇದರಿಂದ ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಸೊಂಟದ ಗಾಯವನ್ನು ಸರಿಪಡಿಸಲು ಅವರು ವೈದ್ಯರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.