ಮೊದಲ ಪ್ರಯತ್ನದಲ್ಲೇ 89.34 ಮೀಟರ್ ಜಾವೆಲಿನ್ ಎಸೆದು ಫೈನಲ್ ಪ್ರವೇಶಿಸಿದ ನೀರಜ್ ಚೋಪ್ರಾ, ವಿಡಿಯೋ
Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ ಜಾವೆಲಿನ್ ಥ್ರೋನಲ್ಲಿ ಮೊದಲ ಪ್ರಯತ್ನದಲ್ಲೇ 89.34 ಮೀಟರ್ ಎಸೆಯುವ ಮೂಲಕ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ ಜಾವೆಲಿನ್ ಥ್ರೋನಲ್ಲಿ ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ತನ್ನ ಮೊದಲ ಪ್ರಯತ್ನದಲ್ಲೇ 89.34 ಮೀಟರ್ ಎಸೆಯುವ ಮೂಲಕ ಸತತ 2ನೇ ಬಾರಿಗೆ ಫೈನಲ್ಗೆ ಅರ್ಹತೆ ಪಡೆದಿದ್ದಾರೆ. ಆಗಸ್ಟ್ 8 ರಂದು ರಾತ್ರಿ 11.55ಕ್ಕೆ ನಡೆಯುವ ಫೈನಲ್ನಲ್ಲಿ ಚಿನ್ನದ ಪದಕಕ್ಕೆ ಹೋರಾಟ ನಡೆಸಲಿದ್ದಾರೆ. ಮತ್ತೊಬ್ಬ ಭಾರತೀಯ ಕಿಶೋರ್ ಜೆನಾ ನಿರಾಸೆ ಮೂಡಿಸಿದ್ದು, ಫೈನಲ್ಗೇರಲು ವಿಫಲರಾಗಿದ್ದಾರೆ.
ಕಿಶೋರ್ ತಾನು ಎಸೆದ ಮೂರು ಪ್ರಯತ್ನಗಳಲ್ಲಿ 80.73 ಮೀಟರ್ ಎಸೆದಿದ್ದೇ ಗರಿಷ್ಠ ದೂರವಾಗಿದೆ. ಆದರೆ ನೀರಜ್ ಚೋಪ್ರಾ ಎಸೆದ ಮೊದಲ ಪ್ರಯತ್ನದಲ್ಲೇ ಅರ್ಹತೆ ಪಡೆದರು. ಅರ್ಹತಾ ಸುತ್ತಿನ ಇತಿಹಾಸದಲ್ಲೇ ಅತಿ ದೂರ ಜಾವೆಲಿನ್ ಎಸೆಯುವ ಮೂಲಕ ದಾಖಲೆ ಕೂಡ ಬರೆದಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀಮ್ 86.59 ಮೀಟರ್ ಎಸೆದು ಫೈನಲ್ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಟೊಕಿಯೊ ಒಲಿಂಪಿಕ್ಸ್ನಲ್ಲಿ ನೀರಜ್ಗೆ ಚಿನ್ನ
2020ರ ಟೊಕಿಯೊ ಒಲಿಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು. 87.58 ಮೀಟರ್ ಎಸೆಯುವ ಮೂಲಕ ಬಂಗಾರಕ್ಕೆ ಕೊರೊಳೊಡ್ಡಿದ್ದರು. ಈ ಬಾರಿಯೂ ಅವರೇ ಚಿನ್ನ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ಜೆಕ್ ಗಣರಾಜ್ಯದ ಜಾಕೂಬ್ ವಡ್ಲೆಜ್ 86.63 ಮೀಟರ್ ಎಸೆದು ಬೆಳ್ಳಿ ಗೆದ್ದಿದ್ದರು. ಜೆಕ್ ಗಣರಾಜ್ಯದ ಮತ್ತೊಬ್ಬ ಆಟಗಾರ ವಿಟೆಜ್ಸ್ಲಾವ್ ವೆಸೆಲ್ ಕಂಚಿನ ಪದಕ ಗೆದ್ದಿದ್ದರು.
ಗುಂಪು ಎನಲ್ಲಿ ಫೈನಲ್ಗೆ ಅರ್ಹತೆ ಪಡೆದವರು
- ಜೂಲಿಯನ್ ವೆಬರ್ (ಜರ್ಮನಿ) - 87.76 ಮೀಟರ್
- ಜೂಲಿಯಸ್ ಯೆಗೊ (ಕೀನ್ಯಾ) - 85.97 ಮೀಟರ್
- ಜಾಕೂಬ್ ವಡ್ಲೆಜ್ (ಜೆಕ್ ಗಣರಾಜ್ಯ) - 85.63 ಮೀಟರ್
- ಟೋನಿ ಕೆರಾನೆನ್ (ಫಿನ್ಲ್ಯಾಂಡ್) - 85.27 ಮೀಟರ್
ಗುಂಪು ಬಿನಲ್ಲಿ ಫೈನಲ್ಗೆ ಅರ್ಹತೆ ಪಡೆದವರು
- ನೀರಜ್ ಚೋಪ್ರಾ (ಭಾರತ) - 89.34 ಮೀಟರ್
- ಆಂಡರ್ಸನ್ ಪೀಟರ್ (ಗ್ರೆನಡಾ) - 88.63 ಮೀಟರ್
- ಅರ್ಷದೀಪ್ ನದೀಮ್ (ಪಾಕಿಸ್ತಾನ) - 86.59 ಮೀಟರ್
- ಲೂಯಿಜ್ ಮಾರಿಸಿಯೊ ಡಾ ಸಿಲ್ವಾ (ಬ್ರೆಜಿಲ್) - 85.91 ಮೀಟರ್
- ಆಂಡ್ರಿಯನ್ ಮರ್ಡೇರೆ (ಮೊಲ್ಡೊವಾ) - 84.13 ಮೀಟರ್
- ಲಸ್ಸಿ ಎಟೆಲತಾಲೊ (ಪಿನ್ಲ್ಯಾಂಡ್) - 82.91 ಮೀಟರ್
ಸೆಮಿಫೈನಲ್ಗೇರಿದ ವಿನೇಶ್ ಫೋಗಟ್
ಕುಸ್ತಿಪಟು ವಿನೇಶ್ ಫೋಗಟ್ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 50 ಕೆಜಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್‌ನಲ್ಲಿ ಉಕ್ರೇನ್‌ನ ಒಕ್ಸಾನಾ ಲಿವಾಚ್‌ರನ್ನು 7-5 ಅಂತರದಿಂದ ಮಣಿಸಿ ವಿನೇಶ್ ಫೋಗಟ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಪದಕ ಭರವಸೆ ಮೂಡಿಸಿದ್ದಾರೆ.
ಕಳೆದ ವರ್ಷದ ವಿನೇಶ್ ಅವರು ಭಾರತ ಕುಸ್ತಿ ಫೆಡರೇಷನ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ದೊಡ್ಡಮಟ್ಟದ ಹೋರಾಟ ನಡೆಸಿದ್ದರು. ಬರೋಬ್ಬರಿ ಒಂದು ತಿಂಗಳ ಕಾಲ ಪ್ರತಿಭಟನೆ ನಡೆಸಿದ್ದರು.
ಆದರೆ ನ್ಯಾಯ ಸಿಗಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದ ವಿನೇಶ್ ಅವರು ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ದೆಹಲಿಯ ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿಟ್ಟು ಹೋಗಿದ್ದರು. ಸೆಮಿಫೈನಲ್ ಪಂದ್ಯ ಇಂದು ರಾತ್ರಿ 10.13ಕ್ಕೆ ನಡೆಯಲಿದೆ. ಗೆದ್ದರೆ ಪದಕ ಖಚಿತವಾಗಲಿದೆ.