ಪ್ಯಾರಿಸ್ ಒಲಿಂಪಿಕ್ಸ್ 2024: ಭಾರತಕ್ಕೆ ಪದಕ ಗೆದ್ದುಕೊಡಬಲ್ಲ ಟಾಪ್​-10 ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್ 2024: ಭಾರತಕ್ಕೆ ಪದಕ ಗೆದ್ದುಕೊಡಬಲ್ಲ ಟಾಪ್​-10 ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ

ಪ್ಯಾರಿಸ್ ಒಲಿಂಪಿಕ್ಸ್ 2024: ಭಾರತಕ್ಕೆ ಪದಕ ಗೆದ್ದುಕೊಡಬಲ್ಲ ಟಾಪ್​-10 ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ

Paris Olympics 2024: ನೀರಜ್ ಚೋಪ್ರಾ ಅವರಿಂದ ಪಿವಿ ಸಿಂಧುವರೆಗೆ ಪ್ಯಾರಿಸ್ ಒಲಿಂಪಿಕ್ಸ್​​​-2024ರಲ್ಲಿ ಪದಕ ಗೆಲ್ಲುವ ಭರವಸೆ ಹುಟ್ಟು ಹಾಕಿರುವ ಭಾರತದ ಟಾಪ್​-10 ಪಟ್ಟಿ ಇಲ್ಲಿದೆ.

ಪ್ಯಾರಿಸ್ ಒಲಿಂಪಿಕ್ಸ್ 2024: ಭಾರತಕ್ಕೆ ಪದಕ ಗೆಲ್ಲುವ ನಿರೀಕ್ಷೆ ಹುಟ್ಟು ಹಾಕಿರುವ ಟಾಪ್​-10 ಕ್ರೀಡಾಪಟುಗಳು
ಪ್ಯಾರಿಸ್ ಒಲಿಂಪಿಕ್ಸ್ 2024: ಭಾರತಕ್ಕೆ ಪದಕ ಗೆಲ್ಲುವ ನಿರೀಕ್ಷೆ ಹುಟ್ಟು ಹಾಕಿರುವ ಟಾಪ್​-10 ಕ್ರೀಡಾಪಟುಗಳು

ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್​-2024 ಆರಂಭಕ್ಕೆ ಕೆಲವೇ ದಿನಗಳು ಬಾಕಿಉಳಿದಿವೆ. ಜುಲೈ 26ರಂದು ಫ್ರಾನ್ಸ್​​ನಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಕ್ರೀಡಾಕೂಟಕ್ಕೆ ವರ್ಣರಂಜಿತ ಚಾಲನೆ ಸಿಗಲಿದೆ. ಈ ಬಾರಿ 117 ಭಾರತೀಯ ಕ್ರೀಡಾಪಟುಗಳು ಈ ಮೆಗಾ ಈವೆಂಟ್​​ನಲ್ಲಿ ಭಾಗವಹಿಸಲಿದ್ದಾರೆ. ಕಳೆದ ಬಾರಿ 1 ಚಿನ್ನ ಸಹಿತ 7 ಪದಕ ಜಯಿಸಿದ್ದ ಭಾರತ, ಈ ಸಲ ಅದನ್ನು ಎರಡಂಕಿ ದಾಟಿಸಲು ಸಜ್ಜಾಗಿದೆ. ಈ ಪೈಕಿ ಭಾರತದ 10 ಕ್ರೀಡಾಪಟುಗಳು ಪದಕದ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.

ನೀರಜ್ ಚೋಪ್ರಾ

ಕಳೆದ ಬಾರಿ ಟೊಕಿಯೊ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದ ನೀರಜ್ ಚೋಪ್ರಾ, ಈ ಸಲವೂ ಪದಕದ ಭರವಸೆ ಹುಟ್ಟು ಹಾಕಿದ್ದಾರೆ. ಜಾವೆಲಿನ್ ಥ್ರೋನಲ್ಲಿ ಕಳೆದ 2 ವರ್ಷಗಳಲ್ಲಿ ಹಲವು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಒಲಿಂಪಿಕ್ಸ್​​ಗೂ ಮುನ್ನ ಉತ್ತಮ ಲಯದಲ್ಲಿರುವ ನೀರಜ್, ಇತ್ತೀಚೆಗಷ್ಟೆ ಪಾವೊ ನುರ್ಮಿ ​​ಗೇಮ್ಸ್​​ನಲ್ಲಿ ಸ್ವರ್ಣಕ್ಕೆ ಕೊರೊಳೊಡ್ಡಿದ್ದರು. ಕಳೆದ ಬಾರಿ 87.58 ಮೀಟರ್ ಜಾವೆಲಿನ್ ಎಸೆದು ಚಿನ್ನ ಗೆದ್ದಿದ್ದರು.

ಮೀರಾಬಾಯಿ ಚಾನು

ಟೊಕಿಯೊ ಒಲಿಂಪಿಕ್ಸ್​​ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದ ವೇಟ್​ಲಿಫ್ಟರ್​ ಮೀರಾಬಾಯಿ ಚಾನು, ಈ ಸಲ ಚಿನ್ನ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 2020ರಲ್ಲಿ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಒಲಿಂಪಿಕ್ ಬೆಳ್ಳಿ ಪದಕ ಗೆದ್ದಿದ್ದರು. ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ವೇಟ್‌ಲಿಫ್ಟರ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಹೀಗಾಗಿ, ಅವರು ಈ ಸಲವೂ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಪಿವಿ ಸಿಂಧು

ಭಾರತದ ಸ್ಟಾರ್ ಷಟ್ಲರ್​ ಪಿವಿ ಸಿಂಧು ಒಲಿಂಪಿಕ್ಸ್​​ನಲ್ಲಿ ಎರಡು ಪದಕ ಗೆದ್ದುಕೊಂಡಿದ್ದಾರೆ. 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್​​ನಲ್ಲಿ ಬೆಳ್ಳಿ ಹಾಗೂ ಟೊಕಿಯೊ ಒಲಿಂಪಿಕ್ಸ್​​-2020 ನಲ್ಲಿ ಕಂಚಿನ ಪದಕ ಗೆದ್ದಿರುವ ಸಿಂಧು, ಪ್ಯಾರಿಸ್‌ನಲ್ಲಿ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಅವರು ಇತ್ತೀಚೆಗೆ ನೀರಸ ಪ್ರದರ್ಶನ ನೀಡಿದ್ದಾರೆ. ಆದರೆ, ಸಿಂಧು, ಒಲಿಂಪಿಕ್ಸ್​ಗಾಗಿಯೇ ಕಠಿಣ ಅಭ್ಯಾಸ ನಡೆಸಿದ್ದು, ಪದಕದ ನಿರೀಕ್ಷೆಯಲ್ಲಿದ್ದಾರೆ.

ಪುರುಷರ ಹಾಕಿ ತಂಡ

ಟೊಕಿಯೊ ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದಿದ್ದ ಭಾರತದ ಹಾಕಿ ತಂಡ ಈ ಬಾರಿ 8ನೇ ಗೋಲ್ಡ್ ಗೆಲ್ಲಲು ಸಜ್ಜಾಗಿದೆ. 1928, 1932, 1936 ಹಾಗೂ 1948, 1952, 1956, 1980ರಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತದ ರಾಷ್ಟ್ರೀಯ ಕ್ರೀಡೆ, ಪ್ಯಾರಿಸ್​​ನಲ್ಲಿ ಪದಕದ ಬೇಟೆಯಾಡಲು ಭರ್ಜರಿ ಸಿದ್ಧತೆ ನಡೆಸಿದೆ. ಅಲ್ಲದೆ, ಇತ್ತೀಚಿನ ಟೂರ್ನಿಗಳಲ್ಲಿ ಉತ್ತಮ ಲಯ ಹೊಂದಿರುವ ಪುರುಷರ ಹಾಕಿ ತಂಡವು, ಪದಕ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ.

ಲವ್ಲಿನಾ ಬೊರ್ಗೊಹೈನ್

ಭಾರತೀಯ ವೃತ್ತಿಪರ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಟೊಕಿಯೊ ಒಲಿಂಪಿಕ್ಸ್​ನಲ್ಲಿ ಬಾಕ್ಸಿಂಗ್​ 75 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಹಾಗಾಗಿ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲೂ ಪದಕ ಗೆಲ್ಲುವ ಭರವಸೆ ಹುಟ್ಟು ಹಾಕಿದ್ದಾರೆ. ಅವರ ಅಟ್ಯಾಕಿಂಗ್, ಆಟದ ತಂತ್ರಗಳು, ಎದುರಾಳಿ ತಂತ್ರಗಳಿಗೆ ಆಟವಾಡುವ ಲವ್ಲಿನಾ ಚಿನ್ನ ಗೆಲ್ಲುವ ಗುರಿ ಹೊಂದಿದ್ದು, ಐತಿಹಾಸಿಕ ಪುಟಗಳಲ್ಲಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಸಾತ್ವಿಕ್​ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ

ವಿಶ್ವದ 1 ಬ್ಯಾಡ್ಮಿಂಟನ್ ಡಬಲ್ಸ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ, ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ. ಟೊಕಿಯೊದಲ್ಲಿ ನಿರಾಸೆ ಅನುಭವಿಸಿದ್ದ ಈ ಜೋಡಿ, ಈ ಸಲ ಪದಕ ಗೆದ್ದೇ ಗೆಲ್ಲುವ ಛಲ ಹೊಂದಿದ್ದಾರೆ. ಇತ್ತೀಚೆಗೆ ನಡೆದ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಇಬ್ಬರೂ ಹಲವು ಟ್ರೋಫಿ ಗೆದ್ದಿದ್ದಾರೆ.

ಅದಿತಿ ಅಶೋಕ್

ಭಾರತದ ಗಾಲ್ಫ್ ಆಟಗಾರ್ತಿ ಬೆಂಗಳೂರಿನ ಅಧಿತಿ ಅಶೋಕ್ ಅವರು ಕಳೆದ ಬಾರಿ ಏಷ್ಯನ್ ಗೇಮ್ಸ್​ನಲ್ಲಿ ಬೆಳ್ಳಿ ಗೆದ್ದಿದ್ದರು. ಟೊಕಿಯೊ ಒಲಿಂಪಿಕ್ಸ್​​ನಲ್ಲಿ ಪದಕದ ರೇಸ್​​ನಲ್ಲಿದ್ದ ಅದಿತಿ, ಕೊನೆಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಬಾರಿ ಅಗ್ರ-3ರಲ್ಲಿ ಸ್ಥಾನ ಪಡೆಯಲು ಭಾರಿ ಕಸರತ್ತು ನಡೆಸಿದ್ದಾರೆ.

ಸಿಫ್ಟ್ ಕೌರ್​ ಶರ್ಮಾ

ಮಹಿಳೆಯರ 50 ಮೀ ರೈಫಲ್‌ನಲ್ಲಿ ವಿಶ್ವ ದಾಖಲೆ ಹೊಂದಿರುವ ಅವರು ಇನ್ನೂ ಒಲಿಂಪಿಕ್ ಪದಕವನ್ನು ಪಡೆದಿಲ್ಲ. ಭಾರತದ ಶೂಟರ್ ಸಿಫ್ಟ್ ಕೌರ್ ಸಮ್ರಾ, ಪ್ಯಾರಿಸ್ 2024 ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಮೀಟರ್ ರೈಫಲ್ 3 ಸ್ಥಾನಗಳ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಏಷ್ಯನ್ ಗೇಮ್ಸ್​ನಲ್ಲಿ ಶರ್ಮಾ ಚಿನ್ನ ಗೆದ್ದುಕೊಂಡಿದ್ದರು.

ವಿನೇಶ್ ಫೋಗಟ್

3 ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ಇನ್ನೂ ಪದಕ ಗೆದ್ದಿಲ್ಲ. 50 ಕೆಜಿ ವಿಭಾಗದಲ್ಲಿ ಅಪಾರ ಅನುಭವ ಹೊಂದಿದ್ದರೂ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಹೆಚ್ಚಿಸಲು ಮುಂದಾಗಿದ್ದಾರೆ.

ನಿಕತ್ ಜರೀನ್

ಟರ್ಕಿಯಲ್ಲಿ ನಡೆದ 2022 ಐಬಿಎ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಅವರು ವಿಶ್ವದ ಅತ್ಯುತ್ತಮ ಆಟಗಾರ ಎಂದು ಸಾಬೀತುಪಡಿಸಿದ್ದರು. ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್​ನಲ್ಲೂ ಪದಕದ ನಿರೀಕ್ಷೆ ಹುಟ್ಟು ಹಾಕಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.