ಮತ್ತೊಮ್ಮೆ ಫೈನಲ್​ಗೇರಿದ ನೀರಜ್ ಚೋಪ್ರಾಗೂ ಕರ್ನಾಟಕಕ್ಕೂ ಇದೆ ನಂಟು; ಕನ್ನಡಿಗನೇ ಈ ಚಾಂಪಿಯನ್ ಸೃಷ್ಟಿಕರ್ತ
ಕನ್ನಡ ಸುದ್ದಿ  /  ಕ್ರೀಡೆ  /  ಮತ್ತೊಮ್ಮೆ ಫೈನಲ್​ಗೇರಿದ ನೀರಜ್ ಚೋಪ್ರಾಗೂ ಕರ್ನಾಟಕಕ್ಕೂ ಇದೆ ನಂಟು; ಕನ್ನಡಿಗನೇ ಈ ಚಾಂಪಿಯನ್ ಸೃಷ್ಟಿಕರ್ತ

ಮತ್ತೊಮ್ಮೆ ಫೈನಲ್​ಗೇರಿದ ನೀರಜ್ ಚೋಪ್ರಾಗೂ ಕರ್ನಾಟಕಕ್ಕೂ ಇದೆ ನಂಟು; ಕನ್ನಡಿಗನೇ ಈ ಚಾಂಪಿಯನ್ ಸೃಷ್ಟಿಕರ್ತ

Neeraj Chopra: 2024ರ ಪ್ಯಾರಿಸ್ ಒಲಿಂಪಿಕ್ಸ್​​ ಕ್ರೀಡಾಕೂಟದ ಜಾವೆಲಿನ್ ಥ್ರೋನಲ್ಲಿ ಫೈನಲ್ ಪ್ರವೇಶಿಸಿರುವ ನೀರಜ್ ಚೋಪ್ರಾ ಅವರಿಗೂ ಕರ್ನಾಟಕಕ್ಕೂ ನಂಟಿದೆ. ಅದು ಹೇಗೆ ಅಂತೀರಾ ಇಲ್ಲಿದೆ ವಿವರ.

ಮತ್ತೊಮ್ಮೆ ಫೈನಲ್​ಗೇರಿದ ನೀರಜ್ ಚೋಪ್ರಾಗೂ ಕರ್ನಾಟಕಕ್ಕೂ ಇದೆ ನಂಟು; ಕನ್ನಡಿಗನೇ ಈ ಚಾಂಪಿಯನ್ ಸೃಷ್ಟಿಕರ್ತ
ಮತ್ತೊಮ್ಮೆ ಫೈನಲ್​ಗೇರಿದ ನೀರಜ್ ಚೋಪ್ರಾಗೂ ಕರ್ನಾಟಕಕ್ಕೂ ಇದೆ ನಂಟು; ಕನ್ನಡಿಗನೇ ಈ ಚಾಂಪಿಯನ್ ಸೃಷ್ಟಿಕರ್ತ

ಟೊಕಿಯೊ ಒಲಿಂಪಿಕ್ಸ್​ನಲ್ಲಿ (Tokyo Olympics) 87.58 ಮೀಟರ್​​ ಜಾವೆಲಿನ್ ಎಸೆಯುವ ಮೂಲಕ ಐತಿಹಾಸಿಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದ ನೀರಜ್ ಚೋಪ್ರಾ (Neeraj Chopra), 2024ರ ಪ್ಯಾರಿಸ್ ಒಲಿಂಪಿಕ್ಸ್​​​ನಲ್ಲೂ ಫೈನಲ್​ ಪ್ರವೇಶಿಸಿದ್ದಾರೆ. ಆ ಮೂಲಕ ಮತ್ತೊಂದು ಪದಕದ ಭರವಸೆಯನ್ನು ಮೂಡಿಸಿದ್ದಾರೆ. ಕರಿಯರ್​​ನ ಎರಡನೇ ಅತ್ಯುತ್ತಮ ಎಸೆತ ದಾಖಲಿಸಿ ಫೈನಲ್​ಗೇರಿದ ಚೋಪ್ರಾ ಅವರಿಗೆ ಕರ್ನಾಟಕದ ನಂಟು ಇದೆ.

ಟೊಕಿಯೊ ಒಲಿಂಪಿಕ್ಸ್​​ಗೂ ಮುನ್ನ ಚೋಪ್ರಾಗೆ ತರಬೇತಿ ಕೊಟ್ಟಿದ್ದೇ ಕರ್ನಾಟಕದವರು. ಹೌದು ಉತ್ತರ ಕನ್ನಡದ ಶಿರಸಿ ಮೂಲದ ಕಾಶಿನಾಥ್‌ ನಾಯ್ಕ್‌ ಅವರು ನೀರಜ್​ಗೆ ತರಬೇತಿ ನೀಡಿದ್ದರು. ಚೋಪ್ರಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು 2016ರಲ್ಲಿ ಜರುಗಿದ್ದ ಜೂನಿಯರ್‌ ವಿಶ್ವ ಚಾಂಪಿಯನ್‌ಶಿಪ್​​ ಟೂರ್ನಿಯಲ್ಲಿ. ಅಂದು 86 ಮೀಟರ್​ಗಳಿಗೂ ದೂರ ಭರ್ಜಿ ಎಸೆದು ಚಿನ್ನ ಗೆದ್ದಿದ್ದರು. ಇದರಲ್ಲಿ ಕನ್ನಡಿಗನ ಪಾತ್ರ ಬಹುದೊಡ್ಡದಿತ್ತು.

ಅಂದು ಕಿರಿಯರ ವಿಭಾಗದಲ್ಲಿ ನೀರಜ್ ಚೋಪ್ರಾ ಎಂಬ ಚಾಂಪಿಯನ್‌ ಅನ್ನು ಹುಟ್ಟು ಹಾಕಿದ್ದು ಕರ್ನಾಟದ ಮಾಜಿ ಅಥ್ಲೀಟ್‌ ಹಾಗೂ ಜಾವೆಲಿನ್ ಗುರು ಕಾಶಿನಾಥ್‌ ನಾಯ್ಕ್ ಎಂಬುದೇ ವಿಶೇಷ. ಕಾಶಿನಾಥ್‌ ನಾಯ್ಕ್‌ ಅವರು 2015-17ರವರೆಗೆ ಪಟಿಯಾಲದ ಸೇನಾ ಕ್ರೀಡಾ ಸಂಕೀರ್ಣದಲ್ಲಿ ಯುವ ನೀರಜ್‌ಗೆ ತಮ್ಮ ಅನುಭವ ಧಾರೆ ಎರೆದಿದ್ದರು. 2010ರ ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಸಾಧನೆ ಮಾಡಿರುವ ಕಾಶೀನಾಥ್, ಅತ್ಯಂತ ಕಿರಿಯ ವಯಸ್ಸಿನಲ್ಲೇ ಕೋಚಿಂಗ್‌ ಕೈಗೆತ್ತಿಕೊಂಡು ಚಾಂಪಿಯನ್‌ ಅಥ್ಲೀಟ್‌ ನಿರ್ಮಿಸಿದ್ದಾರೆ.

ಕಾಶೀನಾಥ್​ಗೆ ಸಿಕ್ಕಿತ್ತು 10 ಲಕ್ಷ ಬಹುಮಾನ

ಚೋಪ್ರಾ ಅವರು ಚಿನ್ನದ ಪದಕದ ಸಾಧನೆಗೆ ಕೊಡುಗೆ ನೀಡಿದ್ದ ಕಾಶೀನಾಥ್ ಅವರಿಗೆ ಕರ್ನಾಟಕ ಸರ್ಕಾರ 10 ಲಕ್ಷ ಬಹುಮಾನ ಘೋಷಿಸಿತ್ತು. ಕಾಶೀನಾಥ್​ರ ಈ ಗಣನೀಯ ಕೊಡುಗೆ ಪರಿಗಣಿಸಿದ ಕರ್ನಾಟಕ ಸರ್ಕಾರದ ಕ್ರೀಡಾ ಸಚಿವರಾದ ನಾರಾಯಣ ಗೌಡ ಅವರು 10 ಲಕ್ಷ ರೂಪಾಯಿಗಳ ಬಹುಮಾನ ನೀಡಿದ್ದರು. ಕಾಶೀನಾಥ್‌ ಅವರು ಸದ್ಯ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಶೀನಾಥ್ ಮನೆಗೆ ಭೇಟಿಕೊಟ್ಟಿದ್ದ ನೀರಜ್ ಚೋಪ್ರಾ

ಟೊಕಿಯೊ ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದು ಭಾರತಕ್ಕೆ ಬಂದ ಬೆನ್ನಲ್ಲೇ ನೀರಜ್ ಚೋಪ್ರಾ ಅವರು ಕಾಶೀನಾಥ್ ನಾಯ್ಕ್ ಅವರ ಮನೆಗೆ ಭೇಟಿಕೊಟ್ಟಿದ್ದರು. ಅಂದು ಚೋಪ್ರಾ ಜಪಾನ್​ನಲ್ಲಿ ಬಂಗಾರಕ್ಕೆ ಮುತ್ತಿಕ್ಕುತ್ತಿದ್ದಂತೆ, ಕಾಶೀನಾಥ್ ಹೆಸರು ಚಾಲ್ತಿಗೆ ಬಂದಿತ್ತು. ಭಾರತದ ಯುವ ಅಥ್ಲೀಟ್​ನನ್ನು ಸಜ್ಜುಗೊಳಿಸಲು ಕನ್ನಡಿಗನ ಪಾತ್ರವೂ ಇದೆ ಎಂದು ಸುದ್ದಿಯಾಗಿತ್ತು.

ಆದರೆ, ಅಥ್ಲೇಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಅವರು ಕಾಶೀನಾಥ್ ಅವರು ಯಾರೆಂದೇ ಗೊತ್ತಿಲ್ಲ. ಅಂತಹ ವ್ಯಕ್ತಿ ತರಬೇತಿ ನೀಡಿಲ್ಲ ಎಂದಿದ್ದರು. ಹೀಗಿರುವಾಗ ಕಾಶೀನಾಥ್​ಗೆ ಕರ್ನಾಟಕ ಸರ್ಕಾರ ಹೇಗೆ ಬಹುಮಾನ ಘೋಷಿಸಿದೆ ಎಂದು ಸುಮರಿವಾಲ್ಲಾ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಕಾಶೀನಾಯ್ಕ್, ನಾನು ಕೋಚ್ ಆಗಿದ್ದೆನೋ ಇಲ್ಲವೋ ಎಂದು ನೀರಜ್ ಚೋಪ್ರಾ ಅವರೇ ಮುಂದೆ ಉತ್ತರ ಕೊಡಲಿದ್ದಾರೆ ಎಂದು ತಿಳಿಸಿದ್ದರು. ಅದರಂತೆ ನೀರಜ್, ಕಾಶೀನಾಥ್ ಮನೆಗೆ ಭೇಟಿ ಕೊಟ್ಟು ಸೃಷ್ಟಿಯಾಗಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದರು.

87.58 ಮೀಟರ್ ಎಸೆದಿದ್ದ ಚೋಪ್ರಾ

2020ರ ಟೊಕಿಯೊ ಒಲಿಂಪಿಕ್ಸ್​ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು. 87.58 ಮೀಟರ್ ಎಸೆಯುವ ಮೂಲಕ ಬಂಗಾರಕ್ಕೆ ಕೊರೊಳೊಡ್ಡಿದ್ದರು. ಈ ಬಾರಿಯೂ ಅವರೇ ಚಿನ್ನ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ಜೆಕ್ ಗಣರಾಜ್ಯದ ಜಾಕೂಬ್ ವಡ್ಲೆಜ್ 86.63 ಮೀಟರ್ ಎಸೆದು ಬೆಳ್ಳಿ ಗೆದ್ದಿದ್ದರು. ಜೆಕ್ ಗಣರಾಜ್ಯದ ಮತ್ತೊಬ್ಬ ಆಟಗಾರ ವಿಟೆಜ್ಸ್ಲಾವ್ ವೆಸೆಲ್ ಕಂಚಿನ ಪದಕ ಗೆದ್ದಿದ್ದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.