ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್; ಜಾವೆಲಿನ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ
ಕನ್ನಡ ಸುದ್ದಿ  /  ಕ್ರೀಡೆ  /  ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್; ಜಾವೆಲಿನ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್; ಜಾವೆಲಿನ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ

ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನೀರಜ್ ಚೋಪ್ರಾ ಜಾವೆಲಿನ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಜಾವೆಲಿನ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ (AP)
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಜಾವೆಲಿನ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ (AP)

ಬುಡಾಪೆಸ್ಟ್ (ಹಂಗೇರಿ): ಚಿನ್ನದ ಹುಡುಗ ನೀರಜ್ ಚೋಪ್ರಾ (Neeraj Chopra) ಭಾನುವಾರ (ಆಗಸ್ಟ್ 27) ರಾತ್ರಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ಪುರುಷರ ಜಾವೆಲಿನ್ ಎಸೆತ ಫೈನಲ್‌ನಲ್ಲಿ ಚಿನ್ನದ ಪದಕ ಗೆದಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (World Athletics Championships) ಈ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಚಾವೆಲಿನ್ ಫೈನಲ್‌ನಲ್ಲಿ ಚೋಪ್ರಾ ಅವರು ಮೊದಲ ಸುತ್ತಿನಲ್ಲೇ ಫೌಲ್ ಮಾಡಿದ್ದರು. ಆದರೆ ಎರಡನೇ ಪ್ರಯತ್ನದಲ್ಲೇ 88.17 ಮೀಟರ್ ದೂರಕ್ಕೆ ಭರ್ಜಿ ಎಸೆದಿದ್ದಾರೆ. ಇದು ಇಡೀ ಟೂರ್ನಿಯಲ್ಲಿ ಅತ್ಯಧಿಕ ದೂರದ ಭರ್ಜಿ ಎಸೆತವಾಗಿದೆ.

ಎರಡನೇ ಎಸೆತದಲ್ಲೇ ಚಿನ್ನದ ಪದಕಕ್ಕೆ ಭರ್ಜಿ ಎಸೆತ

ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ನಿರೀಕ್ಷಿತ ಆರಂಭ ಕಾಣಲಿಲ್ಲ. ಇವರ ಮೊದಲ ಎಸೆತ ಕೇವಲ 79 ಮೀಟರ್ ದೂರಕ್ಕೆ ಮಾತ್ರ ತಲುಪಿತು. ಇದರಿಂದಾಗಿ ಸ್ಕೋರ್ ಅನ್ನು ನೋಂದಾಯಿಸದಿರಲು ನಿರ್ಧರಿಸಿದರು. ಆದರೆ ಎರಡನೇ ಎಸೆತದ ಪ್ರಯತ್ನದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದರು. ಈತನ ಕೈಯಿಂದ ಹೊರಟ ಭರ್ಜಿ ನೆಲಕ್ಕೆ ತಾಗುವ ಮೊದಲೇ ನೆರದಿದ್ದ ಕ್ರೀಡಾಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಈ ಟೂರ್ನಿಯ ಜಾವೆಲಿನ್ ವಿಭಾಗದಲ್ಲಿ ನೀರಜ್ ಚೋಪ್ರಾ ಮೊದಲ ಸ್ಥಾನ ಪಡೆದರೆ, ಪಾಕಿಸ್ತಾನದ ಅರ್ಷದ್ ನದೀಮ್ ಅವರು 87.82 ಮೀಟರ್‌ನೊಂದಿಗೆ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಸ್ವೀಕರಿಸಿದರು. ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಅವರು 86.67 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕಂಚಿನ ಪದಕ ಪಡೆದರು.

ಇಬ್ಬರು ಭಾರತೀಯ ಜಾವೆಲಿನ್ ಎಸೆತಗಾರರಿಂದ ಉತ್ತಮ ಪ್ರದರ್ಶನ

ಸ್ಪರ್ಧೆಯಲ್ಲಿ ಇತರೆ ಇಬ್ಬರರು ಭಾರತೀಯ ಜಾವೆಲಿನ್ ಎಸೆತಗಾರರಾದ ಕಿಶೋರ್ ಜೆನಾ ಮತ್ತು ಡಿಪಿ ಮನು ಅವರು ಪದಕಗಳನ್ನು ಗೆಲ್ಲಲು ಸಾಧ್ಯವಾಗದಿದ್ದರೂ ಪ್ರಭಾವಶಾಲಿ ಪ್ರದರ್ಶನ ನೀಡಿದ್ದಾರೆ. ಈ ಇಬ್ಬರೂ ಭರ್ಜಿ ಎಸೆತಗಾರರು ಅಗ್ರ 8 ಸ್ಥಾನಗಳಿಗೆ ಅರ್ಹತೆ ಪಡೆದರು. ಕ್ರಮವಾಗಿ 5 ಮತ್ತು 6ನೇ ಸ್ಥಾನದೊಂದಿಗೆ ತಮ್ಮ ಪೈಪೋಟಿಯನ್ನು ಮುಗಿಸಿದ್ದಾರೆ.

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.