ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತ ಹಾಕಿ ತಂಡ ಪ್ರಕಟ; 9ನೇ ಚಿನ್ನ ಗೆದ್ದುಕೊಡುವುದೇ ಹರ್ಮನ್‌ಪ್ರೀತ್ ಸಿಂಗ್ ಪಡೆ
Hockey Team Announce Squad: ಜುಲೈ 26ರಿಂದ ಪ್ರಾರಂಭವಾಗುವ ಪ್ಯಾರಿಸ್ ಒಲಿಂಪಿಕ್ಸ್‌ಗೆ 16 ಸದಸ್ಯರ ಭಾರತ ಹಾಕಿ ತಂಡವನ್ನು ಹಾಕಿ ಫೆಡರೇಷನ್ ಆಫ್ ಇಂಡಿಯಾ ಪ್ರಕಟಿಸಿದೆ.
2024ರ ಜುಲೈ 26 ರಿಂದ ಪ್ರಾರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಕ್ರೀಡಾಕೂಟಕ್ಕೆ 16 ಸದಸ್ಯರ ಭಾರತದ ಪುರುಷರ ಹಾಕಿ ತಂಡವನ್ನು ಹಾಕಿ ಫೆಡರೇಷನ್ ಆಫ್ ಇಂಡಿಯಾ ಪ್ರಕಟಿಸಿದೆ. ಟೊಕಿಯೋದಲ್ಲಿ ನಡೆದ ಮುನ್ನಡೆಸಿ ಕಂಚಿನ ಪದಕವನ್ನು ಗೆಲ್ಲಿಸಿದ್ದ ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಈ ಸಲವೂ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಐವರು ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ಮಿಡ್‌ಫೀಲ್ಡರ್ ಹಾರ್ದಿಕ್ ಸಿಂಗ್ ಉಪನಾಯಕರಾಗಿದ್ದಾರೆ.
ಹರ್ಮನ್‌ಪ್ರೀತ್ ಅವರು ತಮ್ಮ ಮೂರನೇ ಒಲಿಂಪಿಕ್ಸ್‌ನಲ್ಲಿ ಆಡಲು ಸಿದ್ಧರಾಗಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡದ ಕಿರಿಯ ಸದಸ್ಯರಾಗಿ ಪದಾರ್ಪಣೆ ಮಾಡಿದ್ದರು. ನಂತರ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲುವಿಗೆ ಕೊಡುಗೆ ನೀಡಿದ್ದಾರೆ. ಕೇರಳ ಮೂಲದ ಶ್ರೀಜೇಶ್ ಪ್ರಧಾನ ಗೋಲ್‌ಕೀಪರ್ ಆಗಿ ಆಯ್ಕೆಯಾಗಿದ್ದು, ಇದು ಅವರಿಗೆ 4ನೇ ಒಲಿಂಪಿಕ್ಸ್ ಕ್ರೀಡಾಕೂಟವಾಗಿದೆ. ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್ ಅವರಿಗೂ ಇದು 4ನೇ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜರ್ಮನ್‌ಪ್ರೀತ್ ಸಿಂಗ್, ಸಂಜಯ್, ರಾಜ್ ಕುಮಾರ್ ಪಾಲ್, ಅಭಿಷೇಕ್ ಮತ್ತು ಸುಖಜೀತ್ ಸಿಂಗ್ ಪ್ಯಾರಿಸ್‌ನಲ್ಲಿ ತಮ್ಮ ಚೊಚ್ಚಲ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಲಿರುವ ಐದು ಆಟಗಾರರಾಗಿದ್ದಾರೆ. ಭಾರತವು ಹಾಲಿ ಚಾಂಪಿಯನ್ ಬೆಲ್ಜಿಯಂ, ಆಸ್ಟ್ರೇಲಿಯಾ, ಅರ್ಜೆಂಟೀನಾ, ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ಜೊತೆಗೆ ಬಿ ಪೂಲ್‌ನಲ್ಲಿ ಸ್ಥಾನ ಪಡೆದಿದೆ. ಭಾರತವು ಜುಲೈ 27 ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಅರ್ಜೆಂಟೀನಾ (ಜುಲೈ 29), ಐರ್ಲೆಂಡ್ (ಜುಲೈ 30), ಬೆಲ್ಜಿಯಂ (ಆಗಸ್ಟ್ 1) ಮತ್ತು ಆಸ್ಟ್ರೇಲಿಯಾ (ಆಗಸ್ಟ್ 2) ವಿರುದ್ಧ ಆಡಲಿದೆ.
ಭಾರತೀಯ ಪುರುಷರ ಹಾಕಿ ತಂಡವು ಶ್ರೀಮಂತ ಒಲಿಂಪಿಕ್ ಇತಿಹಾಸವನ್ನು ಹೊಂದಿದೆ. 8 ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಸೇರಿದಂತೆ ಪ್ರಭಾವಶಾಲಿ 12 ಒಲಿಂಪಿಕ್ ಪದಕಗಳನ್ನು ಪಡೆದುಕೊಂಡಿದೆ. ಹರ್ಮನ್‌ಪ್ರೀತ್ ನೇತೃತ್ವದ ತಂಡವು ಮತ್ತೊಂದು ಪದಕವನ್ನು ಸೇರಿಸುವ ಗುರಿಯನ್ನು ಹೊಂದಿದೆ.
ಪ್ಯಾರಿಸ್ 2024ರ ಒಲಿಂಪಿಕ್ಸ್‌ಗೆ ಭಾರತೀಯ ತಂಡ
ಗೋಲ್‌ಕೀಪರ್‌ಗಳು
1. ಶ್ರೀಜೇಶ್ ಪರಟ್ಟು ರವೀಂದ್ರನ್
ಡಿಫೆಂಡರ್ಸ್
2. ಜರ್ಮನ್‌ಪ್ರೀತ್ ಸಿಂಗ್
3. ಅಮಿತ್ ರೋಹಿದಾಸ್
4. ಹರ್ಮನ್‌ಪ್ರೀತ್ ಸಿಂಗ್
5. ಸುಮಿತ್
6. ಸಂಜಯ್
ಮಿಡ್‌ಫೀಲ್ಡರ್‌ಗಳು
7. ರಾಜ್‌ಕುಮಾರ್ ಪಾಲ್
8. ಶಂಶೇರ್ ಸಿಂಗ್
9. ಮನ್‌ಪ್ರೀತ್ ಸಿಂಗ್
10. ಹಾರ್ದಿಕ್ ಸಿಂಗ್
11. ವಿವೇಕ್ ಸಾಗರ್ ಪ್ರಸಾದ್
ಫಾರ್ವರ್ಡ್‌ಗಳು
12. ಅಭಿಷೇಕ್
13. ಸುಖಜೀತ್ ಸಿಂಗ್
14. ಲಲಿತ್ ಕುಮಾರ್ ಉಪಾಧ್ಯಾಯ
15. ಮನ್ದೀಪ್ ಸಿಂಗ್
16. ಗುರ್ಜಂತ್ ಸಿಂಗ್
ಪರ್ಯಾಯ ಕ್ರೀಡಾಪಟುಗಳು
17. ನೀಲಕಂಠ ಶರ್ಮ
18. ಜುಗರಾಜ್ ಸಿಂಗ್
19. ಕ್ರಿಶನ್ ಬಹದ್ದೂರ್ ಪಾಠಕ್
ಅರ್ಹತೆ ಪಡೆಯಲಿಲ್ಲ ಮಹಿಳಾ ತಂಡ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದಿದ್ದ ಭಾರತೀಯ ಮಹಿಳಾ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿಲ್ಲ. 2012ರ ಬಳಿಕ ಮೊದಲ ಬಾರಿಗೆ ಅವಕಾಶ ಪಡೆಯಲು ವಿಫಲವಾಗಿದೆ. 1980ರ ಮಾಸ್ಕೋದಲ್ಲಿ ಮಹಿಳಾ ಹಾಕಿ ಸೇರ್ಪಡೆಯಾಗಿತ್ತು. ನಂತರ ಕೇವಲ ಮೂರು ಬಾರಿ ಭಾರತ ಮಹಿಳಾ ತಂಡ ಆಡಿದೆ.