ಕ್ರಿಕೆಟ್, ಸ್ಕ್ವಾಷ್, ಬೇಸ್‌ಬಾಲ್...; 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಹೊಸ ಕ್ರೀಡೆಗಳ ಸೇರ್ಪಡೆ
2028 Olympics: ಅಮೆರಿಕದಲ್ಲಿ ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿದ್ದು, ಜಾಗತಿಕವಾಗಿ ಜನಪ್ರಿಯ ಹಾಗೂ ಪ್ರಸಿದ್ಧ ಕ್ರೀಡೆಗಳು ಈ ಬಾರಿ ಸೇರ್ಪಡೆಯಾಗಲಿವೆ. ಬೇಸ್‌ಬಾಲ್ ಒಂದೆಡೆಯಾದರೆ, ಭಾರತದಲ್ಲಿ ಜನಪ್ರಿಯವಾಗಿರುವ ಕ್ರಿಕೆಟ್ ಹಾಗೂ ಸ್ಕ್ವಾಷ್ ಕೂಡಾ ಇರಲಿದೆ.
ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್ ಕ್ರೀಡಾಕೂಟವು, ಮೂರು ವರ್ಷ ಮುಂಚಿತವಾಗಿಯೇ ಸುದ್ದಿಯಲ್ಲಿದೆ. ಅದ್ದೂರಿ ಕ್ರೀಡಾಜಾತ್ರೆಗೆ ಭಾರತ ಸೇರಿದಂತೆ ವಿವಿಧ ದೇಶಗಳು ಸಿದ್ಧತೆ ನಡೆಸುತ್ತಿವೆ. ಈ ಬಾರಿ ಕ್ರಿಕೆಟ್ ಸೇರ್ಪಡೆ ಭಾರತೀಯರಿಗೆ ಭಾರಿ ಖುಷಿ ತಂದಿದೆ. ಇಷ್ಟೇ ಅಲ್ಲ. ಕ್ರಿಕೆಟ್ ಜೊತೆಗೆ ಇನ್ನೂ ಕೆಲವು ಕ್ರೀಡೆಗಳು ಒಲಿಂಪಿಕ್ಸ್‌ಗೆ ಸೇರ್ಪಡೆಯಾಗಿದೆ. 1900ರ ನಂತರ ಮೊದಲ ಬಾರಿಗೆ ಕ್ರಿಕೆಟ್ ನಡೆಯುವುದು ಒಂದೆಡೆಯಾದರೆ, ಇನ್ನೂ ಕೆಲವು ಕ್ರೀಡೆಗಳು ಭಾರತೀಯರಿಗೆ ಅನುಕೂಲವಾಗಲಿದೆ.
ಈ ಬಾರಿಯ ಒಲಿಂಪಿಕ್ಸ್ ಅಮೆರಿಕದಲ್ಲಿ ನಡೆಯುತ್ತಿರುವುದರಿಂದ ಅಮೆರಿಕನ್ನರಲ್ಲಿ ಜನಪ್ರಿಯವಾಗಿರುವ ಹಾಗೂ ಪ್ರಸಿದ್ಧ ಕ್ರೀಡೆಗಳು ಈ ಬಾರಿ ಸೇರ್ಪಡೆಯಾಗಲಿವೆ. ಬೇಸ್‌ಬಾಲ್ ಪುನರಾಗಮನ ಮಾಡುತ್ತಿರುವುದು ಒಂದೆಡೆಯಾದರೆ, ಇದೇ ಮೊದಲ ಬಾರಿಗೆ, ಫ್ಲ್ಯಾಗ್ ಫುಟ್‌ಬಾಲ್ ಕೂಡಾ ಒಲಿಂಪಿಕ್ಸ್‌ನಲ್ಲಿ ನಡೆಯಲಿದೆ. ಭಾರತದಲ್ಲಿ ಜನಪ್ರಿಯವಾಗಿರುವ ಸ್ಕ್ವಾಷ್ ಕೂಡಾ ಇರಲಿದೆ.
128 ವರ್ಷಗಳ ನಂತರ ಕ್ರಿಕೆಟ್ ಕಂಬ್ಯಾಕ್
ಒಲಿಂಪಿಕ್ಸ್‌ನಲ್ಲಿ ಈ ಬಾರಿ ಟಿ20 ಸ್ವರೂಪದ ಕ್ರಿಕೆಟ್ ಇರಲಿದೆ. ಹಾಗಂತಾ ಇದೇ ಮೊದಲ ಬಾರಿ ಕ್ರಿಕೆಟ್ ಒಲಿಂಪಿಕ್ಸ್‌ನಲ್ಲಿ ನಡೆಯುವುದಲ್ಲ. 1900ರಲ್ಲಿ ಈ ಕ್ರೀಡೆ ನಡೆದಿತ್ತು. ಕೇವಲ ಒಂದು ಪಂದ್ಯ ಮಾತ್ರ ಆಡಿಸಲಾಯ್ತು. ಇದೀಗ ಒಂದು ಶತಮಾನದ ನಂತರ, 2028 ಕ್ರೀಡಾಕೂಟದಲ್ಲಿ ಭಾರತದ ಜನಪ್ರಿಯ ಕ್ರೀಡೆ ಮರಳುತ್ತಿದೆ. ಟಿ20 ಸ್ವರೂಪದ ಕ್ರಿಕೆಟ್‌ನಲ್ಲಿ ಕೇವಲ 6 ತಂಡಗಳು ಮಾತ್ರ ಭಾಗವಹಿಸಲಿದೆ. ಬಹುತೇಕ ಐಸಿಸಿ ಶ್ರೇಯಾಂಕದ ಪ್ರಕಾರ ಅಗ್ರ 5 ತಂಡಗಳು ಹಾಗೂ ಆತಿಥೇಯ ಯುಎಸ್‌ಎ ತಂಡ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.
ಬೇಸ್‌ಬಾಲ್ ಮತ್ತು ಸಾಫ್ಟ್‌ಬಾಲ್
ಅಮೆರಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಜನಪ್ರಿಯವಾಗಿರುವ ಬೇಸ್‌ಬಾಲ್ ಮತ್ತು ಸಾಫ್ಟ್‌ಬಾಲ್, ಮತ್ತೆ ಒಲಿಂಪಿಕ್ಸ್‌ಗೆ ಮರಳುತ್ತಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಈ ಕ್ರೀಡೆಗಳು ನಡೆದಿದ್ದವು. ಪ್ಯಾರಿಸ್‌ನಲ್ಲಿ ಇವನ್ನು ಸೇರಿಸಿರಲಿಲ್ಲ. ಜಪಾನ್, ದಕ್ಷಿಣ ಕೊರಿಯಾದಂತಹ ಕೆಲವು ದೇಶಗಳು ಈ ಕ್ರೀಡೆಯಲ್ಲಿ ಬಲಿಷ್ಠವಾಗಿವೆ. ಹೀಗಾಗಿ ಪ್ರಬಲ ಸ್ಪರ್ಧೆಯ ನಿರೀಕ್ಷೆ ಇದೆ.
ಫ್ಲಾಗ್ ಫುಟ್‌ಬಾಲ್
ವರದಿಗಳ ಪ್ರಕಾರ, 2028ರ ಒಲಿಂಪಿಕ್ಸ್‌ಗೆ ಅನಿರೀಕ್ಷಿತ ಸೇರ್ಪಡೆಗಳಲ್ಲಿ ಫ್ಲ್ಯಾಗ್ ಫುಟ್‌ಬಾಲ್ ಕೂಡಾ ಒಂದು. ಒಲಿಂಪಿಕ್‌ನಲ್ಲಿ ಇದೇ ಮೊದಲ ಬಾರಿ ಕಾಣಿಸಿಕೊಳ್ಳಲಿದೆ. ವೇಗದ ಹಾಗೂ ಹೆಚ್ಚು ಮನರಂಜನೆ ನೀಡುವ ಕ್ರೀಡೆ ಜನರನ್ನು ಆಕರ್ಷಿಸಲಿದೆ.
ಲ್ಯಾಕ್ರೋಸ್ (ಸಿಕ್ಸಸ್)
1908ರ ನಂತರ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಲ್ಯಾಕ್ರೋಸ್ ಆಟ ನಡೆಯಲಿದೆ. ಈ ಬಾರಿ ಈ ಆಟಕ್ಕೆ ಹೊಸ ರೂಪದಲ್ಲಿ, ವೇಗದ ಸ್ವರೂಪದಲ್ಲಿ ಕ್ರೀಡೆ ಜನರನ್ನು ಆಕರ್ಷಿಸಲಿದೆ. 'ಸಿಕ್ಸಸ್' ಎಂದು ಕರೆಯಲ್ಪಡುವ ಲ್ಯಾಕ್ರೋಸ್‌ನ ಒಂದು ಸ್ವರೂಪವು ವೇಗದ ಆಟವಾಗಿದ್ದು, ಒಲಿಂಪಿಕ್ ವೇಳಾಪಟ್ಟಿಗೆ ಹೊಂದಿಕೊಳ್ಳುವಂತಿದೆ. ಉತ್ತರ ಅಮೆರಿಕದಲ್ಲಿ ಹೆಚ್ಚು ಜನಪ್ರಿಯವಾಗಿರುವ ಕ್ರೀಡೆಯು, ಈ ಬಾರಿಯ ಒಲಿಂಪಿಕ್ಸ್ ಮೂಲಕ ವಿಶ್ವದೆಲ್ಲಡೆ ಪಸರಿಸುವ ನಿರೀಕ್ಷೆ ಇದೆ.
ಸ್ಕ್ವ್ಯಾಷ್
ಭಾರತೀಯರಿಗೆ ಪರಿಚಿತವಾಗಿರುವ ಸ್ಕ್ವಾಷ್ ಕ್ರೀಡೆಯು ಒಲಿಂಪಿಕ್ ಕ್ರೀಡೆಗೆ ಇದೇ ಮೊದಲ ಬಾರಿಗೆ ಸೇರ್ಪಡೆಯಾಗಿದೆ. ವೇಗ ಮತ್ತು ಕೌಶಲ್ಯಕ್ಕೆ ಹೆಸರಾಗಿರುವ ಕ್ರೀಡೆಯಲ್ಲಿ ಭಾರತೀಯರು ಕೂಡಾ ಮುಂದಿದ್ದಾರೆ. ಯುರೋಪ್, ಏಷ್ಯಾ ಮತ್ತು ಆಫ್ರಿಕಾದಲ್ಲಿ ಇದು ಹೆಚ್ಚು ಜನಪ್ರಿಯ. ಈ ಆಟದ ಸೇರ್ಪಡೆಯು ಭಾರತಕ್ಕೆ ಲಾಭವಾಗಲಿದೆ.