ICC ODI rankings: ಸೋಲಿನ ಬಳಿಕ ಶ್ರೇಯಾಂಕದಲ್ಲಿ ಕುಸಿದ ಕಿವೀಸ್; ಸರಣಿ ಕ್ಲೀನ್ ಸ್ವೀಪ್ ಮಾಡಿದ್ರೆ ಭಾರತಕ್ಕೆ ಅಗ್ರಸ್ಥಾನ
ಕೊನೆಯ ಪಂದ್ಯದಲ್ಲಿ ಮೊದಲೆರಡು ಪಂದ್ಯಗಳಲ್ಲಿ ತೋರಿದ ಪ್ರದರ್ಶನವನ್ನು ಭಾರತ ಪುನರಾವರ್ತಿಸಿದರೆ, ಸರಣಿಯನ್ನು 3-0 ರಿಂದ ಕ್ಲೀನ್ ಸ್ವೀಪ್ ಮಾಡಿದಂತಾಗುತ್ತದೆ. ಅಲ್ಲದೆ ಏಕದಿನದ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೆ ಭಾರತ ಲಗ್ಗೆ ಇಡಲಿದೆ.
ರಾಯ್‌ಪುರದಲ್ಲಿ ಶನಿವಾರ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯದಲ್ಲಿ, ರೋಹಿತ್ ಶರ್ಮಾ ಬಳಗ ಭರ್ಜರಿ ಜಯ ಗಳಿಸಿದೆ. ಎಂಟು ವಿಕೆಟ್‌ಗಳ ಅಂತರದ ಸೋಲಿನ ಬಳಿಕ, ಕಿವೀಸ್ ಸರಣಿ ಸೋಲು ಅನುಭವಿಸಿದೆ. ಅದರೊಂದಿಗೆ ಐಸಿಸಿ ಪುರುಷರ ಏಕದಿನ ಶ್ರೇಯಾಂಕದಲ್ಲೂ ಕುಸಿತ ಕಂಡಿದೆ.
ಶನಿವಾರದ ಪಂದ್ಯದ ಬಳಿಕ ಕಿವೀಸ್ ಏಕದಿನ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಎರಡನೇ ಸ್ಥಾನದಲ್ಲಿದ್ದ ಇಂಗ್ಲೆಂಡ್, ಮೊದಲ ಸ್ಥಾನಕ್ಕೇರಿದೆ. ಇದರೊಂದಿಗೆ ಭಾರತ ಕೂಡಾ ಒಂದು ಸ್ಥಾನ ಬಡ್ತಿ ಕಂಡಿದೆ.
ಹೈದರಾಬಾದ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲೂ, ಕಿವೀಸ್ ರೋಚಕವಾಗಿ ಸೋಲನುಭವಿಸಿತ್ತು. ಆ ಬಳಿಕ ಶನಿವರ (ಜನವರಿ 21) ನಡೆದ ಪಂದ್ಯದಲ್ಲೂ ಸೋಲನುಭವಿಸಿದೆ. ಹೀಗಾಗಿ ಲಥಮ್ ಬಳಗ ಸರಣಿ ಸೋತಿದೆ. ಅದರೊಂದಿಗೆ ಅಗ್ರ ಏಕದಿನ ತಂಡ ಎಂಬ ಶ್ರೇಯಾಂಕವನ್ನು ಕಳೆದುಕೊಂಡಿದ್ದಾರೆ. ಇಂಗ್ಲೆಂಡ್ ಈಗ ಏಕದಿನ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಈ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ 115 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 113 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಆಸ್ಟ್ರೇಲಿಯಾ 112 ರೇಟಿಂಗ್‌ಗಳೊಂದಿಗೆ ಮೂರನೇ ಮತ್ತು 111 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಭಾರತ ನಾಲ್ಕನೇ ಸ್ಥಾನದಲ್ಲಿತ್ತು.
ಭಾರತ ವಿರುದ್ಧ ಎಂಟು ವಿಕೆಟ್‌ಗಳಿಂದ ಸೋತ ನಂತರ, ನ್ಯೂಜಿಲೆಂಡ್ ಈಗ 113 ರೇಟಿಂಗ್ ಪಾಯಿಂಟ್‌ಗಳು ಮತ್ತು ಒಟ್ಟಾರೆ 3166 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕಿಳಿದಿದೆ. ಇಂಗ್ಲೆಂಡ್ ಮೊದಲ ಸ್ಥಾನಕ್ಕೇರಿದೆ. ಎರಡು ಅಂಕಗಳನ್ನು ಪಡೆದು, ಒಟ್ಟು 113 ರೇಟಿಂಗ್ ಅಂಕಗಳೊಂದಿಗೆ ಭಾರತ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಹೀಗಾಗಿ ಆಸ್ಟ್ರೇಲಿಯಾ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
ಅತ್ತ ಟಿ20ಯಲ್ಲಿ ಭಾರತದ ಸ್ಥಾನ ಅಬಾಧಿತವಾಗಿದೆ. ಭಾರತ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ.
ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ರೋಚಕ ಗೆಲುವಿನ ನಂತರ, ರಾಯ್‌ಪುರದಲ್ಲೂ ಭಾರತದ ಗೆಲುವಿನ ಆರ್ಭಟ ಮುಂದುವರೆಯಿತು. ಆರಂಭಿಕ ಓವರ್‌ಗಳಲ್ಲಿ ವೇಗದ ಬೌಲರ್‌ಗಳು ಕಿವೀಸ್ ಬ್ಯಾಟಿಂಗ್ ಲೈನ್‌ಅಪ್‌ಅನ್ನು ನೆಲಸಮ ಮಾಡಿದರು. ನ್ಯೂಜಿಲೆಂಡ್ 11 ಓವರ್‌ಗಳಲ್ಲಿ 15 ರನ್ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಬಳಿಕ ಗ್ಲೆನ್ ಫಿಲಿಪ್ಸ್ (36), ಮೈಕೆಲ್ ಬ್ರೇಸ್‌ವೆಲ್ (22) ಮತ್ತು ಮಿಚೆಲ್ ಸ್ಯಾಂಟ್ನರ್ (27) ಜವಾಬ್ದಾರಿಯುತ ಆಟವಾಡಿ, ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು.
ಇತ್ತ ಚೇಸಿಂಗ್ ವೇಳೆ ಭಾರತದ ಪರ ರೋಹಿತ್ ಶರ್ಮಾ ಅರ್ಧಶತಕ ಗಳಿಸಿದರೆ, ಕಳೆದ ಪಂದ್ಯದ ದ್ವಿಶತಕ ವೀರ ಶುಬ್ಮನ್ ಗಿಲ್ ಅಜೇಯ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ ಜನವರಿ 24 ರಂದು ಇಂದೋರ್ ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲೂ ಮೊದಲೆರಡು ಪಂದ್ಯಗಳಲ್ಲಿ ತೋರಿದ ಪ್ರದರ್ಶನವನ್ನು ಭಾರತ ಪುನರಾವರ್ತಿಸಿದರೆ, ಸರಣಿಯನ್ನು 3-0 ರಿಂದ ಕ್ಲೀನ್ ಸ್ವೀಪ್ ಮಾಡಿದಂತಾಗುತ್ತದೆ. ಅಲ್ಲದೆ ಏಕದಿನದ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೆ ಭಾರತ ಲಗ್ಗೆ ಇಡಲಿದೆ.