ನಾರ್ವೆ ಚೆಸ್: ಕರುವಾನಾ ವಿರುದ್ಧ ಡಿ ಗುಕೇಶ್‌ಗೆ ರೋಚಕ ಗೆಲುವು; ಕಾರ್ಲ್‌ಸನ್ ಆಟಕ್ಕೆ ಮಣಿದ ಎರಿಗೈಸಿ
ಡಿ ಗುಕೇಶ್ ಅವರ ಅದ್ಭುತ ರಕ್ಷಣಾತ್ಮಕ ಕೌಶಲ್ಯದ ಮುಂದೆ, ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಫ್ಯಾಬಿಯಾನೊ ಕರುವಾನಾ ಮಂಡಿಯೂರಿದರು. ಅತ್ತ ಅರ್ಜುನ್ ಎರಿಗೈಸಿ ಅವರು ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಸೋಲು ಕಂಡಿದ್ದಾರೆ.

ನಾರ್ವೆ ಚೆಸ್ (Norway Chess) ರೋಚಕ ಹಂತದತ್ತ ಸಾಗುತ್ತಿದೆ. ಹಾಲಿ ವಿಶ್ವ ಚಾಂಪಿಯನ್ ಡಿ ಗುಕೇಶ್ ಅವರು ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಫ್ಯಾಬಿಯಾನೊ ಕರುವಾನಾ ವಿರುದ್ಧ ರೋಚಕ ಟೈ ಬ್ರೇಕರ್‌ನಲ್ಲಿ ಗೆದ್ದು ಬೀಗಿದ್ದಾರೆ. ಅತ್ತ ಭಾರತದ ಮತ್ತೊಬ್ಬ ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗೈಸಿ, ನಾರ್ವೆ ಚೆಸ್‌ನ 'ಓಪನ್' ವಿಭಾಗದಲ್ಲಿ ಚೆಸ್ ಚತುರ ಮ್ಯಾಗ್ನಸ್ ಕಾರ್ಲ್‌ಸನ್ ಅವರ ಕೌಶಲ್ಯದ ಆಟದ ಮುಂದೆ ಮಣಿದರು. ಹೀಗಾಗಿ ಈ ದಿನ ನಾರ್ವೆ ಚೆಸ್‌ನಲ್ಲಿ ಭಾರತೀಯರಿಗೆ ಮಿಶ್ರ ದಿನವಾಗಿದೆ.
ವಿಶ್ವದ 3ನೇ ಶ್ರೇಯಾಂಕಿತ ಆಟಗಾರ ಕರುವಾನಾ, ಭಾರತೀಯ ಚಾಂಪಿಯನ್ ಆಟಗಾರ ಗುಕೇಶ್ ವಿರುದ್ಧ ರೌಂಡ್ 4 ಪಂದ್ಯದಲ್ಲಿ ಬಹುಪಾಲು ಭಾಗವನ್ನು ಉತ್ತಮ ಆಟವಾಡಿದರು. ದಾಳದ ಅನುಕೂಲವನ್ನು ಪಡೆದರು. ಆದರೆ, ಗುರುವಾರವಷ್ಟೇ 19ನೇ ವರ್ಷಕ್ಕೆ ಕಾಲಿಟ್ಟ ಗುಕೇಶ್ ಅವರ ಅದ್ಭುತ ರಕ್ಷಣಾತ್ಮಕ ಕೌಶಲ್ಯದ ಮುಂದೆ, ಅಮೆರಿಕನ್ ಆಟಗಾರನ ಆಟ ನಡೆಯಲಿಲ್ಲ. ನಾಲ್ಕು ಗಂಟೆಗಳ ಮನಮೋಹಕ ಚೆಸ್‌ನಲ್ಲಿ ಪ್ರಬುದ್ಧ ಆಟವಾಡಿದ ಗುಕೇಶ್ ಮುಂದೆ ಎದುರಾಳಿ ಮಂಡಿಯೂಡಿದರು.
ಆಟ ಫಲಿತಾಂಶ ಕಾಣದಾಗ, ಬಿಕ್ಕಟ್ಟನ್ನು ಮುರಿಯಲು ಅಮರ್‌ಗೆಡ್ಡನ್ ಟೈ-ಬ್ರೇಕರ್ ನಡೆಸಲಾಯ್ತು. ಈ ಪಂದ್ಯದ ನಂತರ ಇಬ್ಬರು ಭಾರತೀಯರಾದ ಗುಕೇಶ್ ಮತ್ತು ಎರಿಗೈಸಿ ತಲಾ 4.5 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ. ಅತ್ತ ಕಾರ್ಲ್‌ಸನ್ 8 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಭದ್ರವಾಗಿದ್ದಾರೆ. ಕರುವಾನಾ 7 ಮತ್ತು ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಹಿಕಾರು ನಕಮುರಾ 5.5 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
ಅಮರ್‌ಗೆಡ್ಡನ್ ಟೈ ಬ್ರೇಕರ್‌ನಲ್ಲಿ ಭಾರತೀಯ ಆಟಗಾರ ಕರುವಾನಾ ಅವರನ್ನು ಸೋಲಿಸಿ ಆಟದಿಂದ 1.5 ಅಂಕಗಳನ್ನು ಪಡೆದರು. ಕ್ಲಾಸಿಕಲ್ ಸ್ವರೂಪದಲ್ಲಿ ಗೆಲುವು ಸಾಧಿಸಿದರೆ ಈ ಡಬಲ್ ರೌಂಡ್ ರಾಬಿನ್ ಮಾದರಿಯ ಪಂದ್ಯಾವಳಿಯಲ್ಲಿ ಆಟಗಾರರು ಮೂರು ಅಂಕಗಳನ್ನು ಗಳಿಸಿದರೆ, ಡ್ರಾ ಸಾಧಿಸಿದಾಗ ತಲಾ ಒಂದು ಅಂಕ ಸಿಗುತ್ತದೆ. ಆದರೆ, ಫಲಿತಾಂಶ ಕಾಣಲು ಆಟಗಾರರು ತಕ್ಷಣವೇ ಅಮರ್‌ಗೆಡ್ಡನ್ ಟೈ-ಬ್ರೇಕ್ ಆಡಬೇಕಾಗುತ್ತದೆ.
ವಿಶ್ವದ ನಂ.2 ಆಟಗಾರ ನಕಮುರಾ ವಿರುದ್ಧದ ಮೂರನೇ ಸುತ್ತಿನಲ್ಲಿ ಅದ್ಭುತ ಕ್ಲಾಸಿಕಲ್ ಗೆಲುವು ಮತ್ತು ಕರುವಾನಾ ವಿರುದ್ಧದ ರೋಮಾಂಚಕ ಗೆಲುವಿನ ನಂತರ ಗುಕೇಶ್ ಅವರು ಐದು ಬಾರಿಯ ವಿಶ್ವ ಚಾಂಪಿಯನ್ ಕಾರ್ಲ್‌ಸನ್ ನೇತೃತ್ವದ ಆರು ಆಟಗಾರರ ವಿಭಾಗದಲ್ಲಿ 4.5 ಅಂಕಗಳನ್ನು ಗಳಿಸಿದ್ದಾರೆ.
ಆರ್ ವೈಶಾಲಿಗೆ ಗೆಲುವು
ಮಹಿಳೆಯರ ವಿಭಾಗದಲ್ಲಿ ಭಾರತದ ಆರ್ ವೈಶಾಲಿ ಅವರು ಅಮರ್‌ಗೆಡ್ಡನ್ ಟೈ ಬ್ರೇಕ್‌ನಲ್ಲಿ ಉಕ್ರೇನ್‌ನ ಅನ್ನಾ ಮುಜಿಚುಕ್ ಅವರನ್ನು ಸೋಲಿಸುವ ಮೂಲಕ ನಿರ್ಣಾಯಕ ಅರ್ಧ ಅಂಕವನ್ನು ಗಳಿಸಿದರೆ, ವಿಶ್ವ ಚಾಂಪಿಯನ್ ವೆಂಜುನ್ ಜು, ಕ್ಲಾಸಿಕಲ್ ಆಟದಲ್ಲಿ ಬಿಕ್ಕಟ್ಟಿನ ನಂತರ ಸಮಯ ನಿಯಂತ್ರಿತ ಸ್ವರೂಪದಲ್ಲಿ ಕೊನೇರು ಹಂಪಿ ಅವರನ್ನು ಸೋಲಿಸಿದರು. ಹಂಪಿ ತಲಾ ಏಳು ಅಂಕಗಳೊಂದಿಗೆ ಮುಜಿಚುಕ್ ಅವರೊಂದಿಗೆ ಮುನ್ನಡೆ ಹಂಚಿಕೊಂಡರೆ, ವೈಶಾಲಿ 3.5 ಅಂಕಗಳೊಂದಿಗೆ 6ನೇ ಸ್ಥಾನ ಪಡೆದರು.
ಫಲಿತಾಂಶ
- ಮ್ಯಾಗ್ನಸ್ ಕಾರ್ಲ್ಸನ್ (ನಾರ್ವೆ) -8 ಅಂಕಗಳು
- ಅರ್ಜುನ್ ಎರಿಗೈಸಿ (ಭಾರತ) -4.5 ಅಂಕಗಳು
- ಡಿ ಗುಕೇಶ್ (ಭಾರತ) -4.5 ಅಂಕಗಳು
- ಫ್ಯಾಬಿಯಾನೊ ಕರುವಾನಾ (ಯುಎಸ್ಎ) -7 ಅಂಕಗಳು
- ಹಿಕಾರು ನಕಮುರಾ (ಅಮೆರಿಕ) -5.5 ಅಂಕಗಳು
- ವೀ ಯಿ (ಚೀನಾ) 4 ಅಂಕಗಳು
ಇದನ್ನೂ ಓದಿ | ನಾರ್ವೆ ಚೆಸ್: ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಗೆಲ್ಲುವ ಪಂದ್ಯದಲ್ಲಿ ಎಡವಿದ ಡಿ ಗುಕೇಶ್; ತನ್ನದೇ ತಪ್ಪಿನಿಂದ ಸೋಲು