ಆಸ್ಟ್ರೇಲಿಯಾದಲ್ಲಿ ವಿಷಪ್ರಾಶನ ಆಗಿತ್ತು ಎಂದ ಜೊಕೊವಿಕ್; ವಿವರ ಕೇಳಿದಾಗ ಸುದ್ದಿಗೋಷ್ಠಿಯಿಂದ ಎದ್ದು ಹೋದ ಟೆನಿಸ್ ದಿಗ್ಗಜ
2022ರಲ್ಲಿ ಆಸ್ಟ್ರೇಲಿಯಾದಲ್ಲಿ 'ವಿಷಪ್ರಾಶನ' ಮಾಡಲಾಗಿದೆ ಎಂಬ ಹೇಳಿಕೆಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ನೊವಾಕ್ ಜೊಕೊವಿಕ್ ಉತ್ತರಿಸಲು ನಿರಾಕರಿಸಿದರು. ಅಲ್ಲದೆ ಪತ್ರಿಕಾಗೋಷ್ಠಿಯಿಂದ ಹೊರನಡೆದರು.
ಈ ಬಾರಿಯ ಆಸ್ಟ್ರೇಲಿಯನ್ ಓಪನ್ (Australian Open) ಟೆನಿಸ್ ಟೂರ್ನಿ ಆಡಲು ಸಜ್ಜಾಗಿರುವ ಸೆರ್ಬಿಯಾದ ಖ್ಯಾತ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ (Novak Djokovic), ಟೂರ್ನಿಯ ಆರಂಭಕ್ಕೂ ಮುನ್ನ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 2022ರ ಆಸ್ಟ್ರೇಲಿಯನ್ ಓಪನ್ ಸಮಯದಲ್ಲಿ ಮೆಲ್ಬೋರ್ನ್‌ನಲ್ಲಿ ಹೋಟೆಲ್‌ನಲ್ಲಿ ಬಂಧನಕ್ಕೊಳಪಡಿಸಿದ್ದಾಗ, ವಿಷಪ್ರಾಶನ ಮಾಡಲಾಗಿತ್ತು ಎಂದು ಹೇಳಿದ್ದಾರೆ. ತನಗೆ ಕೊಟ್ಟ ಆಹಾರದಲ್ಲಿ ಸೀಸ ಮತ್ತು ಪಾದರಸದಿಂದ ವಿಷ ಪದಾರ್ಥಗಳಿದ್ದವು ಎಂದು ಈ ಬಾರಿ ಬಹಿರಂಗಪಡಿಸಿದ್ದಾರೆ. ಆದರೆ, ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರದ ಕುರಿತು ಕೇಳಿದಾಗ ಆ ಬಗ್ಗೆ ವಿವರಿಸಲು ನಿರಾಕರಿಸಿದ್ದಾರೆ.
2022ರ ಆಸ್ಟ್ರೇಲಿಯನ್ ಓಪನ್ ಸಮಯದಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ಕೋವಿಡ್ 19 ಲಸಿಕೆ ಪಡೆಯಲು ನಿರಾಕರಿಸಿದ್ದರಿಂದ, ಅವರ ವೀಸಾ ರದ್ದುಪಡಿಸಿ ಅಂತಿಮವಾಗಿ ಆಸ್ಟ್ರೇಲಿಯಾ ದೇಶದಿಂದ ಹೊರಹಾಕಲಾಯಿತು. ಆಸ್ಟ್ರೇಲಿಯಾದಲ್ಲಿ ಉಳಿದುಕೊಳ್ಳಲು ನಡೆಸಿದ ಕಾನೂನು ಹೋರಾಟದಲ್ಲಿ ವಿಫಲವಾದ ಕಾರಣದಿಂದ ಅವರನ್ನು ಬಂಧಿಸಿ ಮೆಲ್ಬೋರ್ನ್‌ನಲ್ಲಿ ಹೋಟೆಲ್‌ನಲ್ಲಿ ಇರಿಸಲಾಯ್ತು.
“ನನ್ನ ನಿಲುವು ಕೆಲವು ವರ್ಷಗಳ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ” ಎಂದು 37 ವರ್ಷದ ಆಟಗಾರ, ಜಿಕ್ಯೂ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಇದು ಜನವರಿ 9ರ ಗುರುವಾರ ಪ್ರಕಟವಾಗಿದೆ. “ನಾನು ಲಸಿಕೆ ಹಾಕಿಸಿಕೊಳ್ಳುವುದರ ಪರವೂ ಅಲ್ಲ, ವಿರೋಧಿಯೂ ಅಲ್ಲ. ನನ್ನ ದೇಹಕ್ಕೆ ಯಾವುದು ಸೂಕ್ತ ಎಂಬುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನನಗೆ ಬೇಕು ಎಂಬುದು ನನ್ನ ನಿಲುವು. ಹೀಗಾಗಿ ನನ್ನ ದೇಹಕ್ಕೆ ನಾನು ಏನನ್ನು ತೆಗೆದುಕೊಳ್ಳಬೇಕು ಎಂಬುದನ್ನು ಆಯ್ಕೆ ಮಾಡುವ ನನ್ನ ಹಕ್ಕನ್ನು ಕಸಿದುಕೊಳ್ಳುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕವಾಗಿ ಎಲ್ಲೂ ಹೇಳಿಲ್ಲ
“ಆಸ್ಟ್ರೇಲಿಯಾದಿಂದ ಮನೆಗೆ ಮರಳಿದಾಗ ನನಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡವು. ಮೆಲ್ಬೋರ್ನ್‌ನಲ್ಲಿ ತಂಗಿದ್ದ ಆ ಹೋಟೆಲ್‌ನಲ್ಲಿ ನನಗೆ ಸ್ವಲ್ಪ ಆಹಾರ ನೀಡಲಾಗಿತ್ತು. ಆ ಆಹಾರದಲ್ಲಿ ವಿಷದ ಅಂಶವಿತ್ತು ಎಂಬುದನ್ನು ನಾನು ಅರಿತುಕೊಂಡೆ. ನಾನು ಇದನ್ನು ಸಾರ್ವಜನಿಕವಾಗಿ ಎಲ್ಲೂ ಹೇಳಲಿಲ್ಲ. ಆದರೆ ನನ್ನ ದೇಹದಲ್ಲಿ ಸೀಸ ಮತ್ತು ಪಾದರಸದ ಮಟ್ಟ ಅತ್ಯಧಿಕವಾಗಿತ್ತು,” ಎಂದು ಅವರು ಹೇಳಿದರು.
ಆದರೆ, ತಮ್ಮ ಹೇಳಿಕೆಯ ಬಗ್ಗೆ ವಿವರಿಸಲು ನೊವಾಕ್ ಜೊಕೊವಿಕ್ ನಿರಾಕರಿಸಿದ್ದಾರೆ. ಈ ವರ್ಷದ ಆಸ್ಟ್ರೇಲಿಯನ್ ಓಪನ್‌ಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರಲ್ಲಿ ಈ ಬಗ್ಗೆ ಕೇಳಲಾಯ್ತು. ವಿಷಪ್ರಾಶನ ಕುರಿತು ವಿಷಯವನ್ನು ವಿವರವಾಗಿ ಚರ್ಚಿಸಲು ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಿಂದ ಹೊರನಡೆದ ಜೊಕೊವಿಕ್
“ಜಿಕ್ಯೂ ಲೇಖನ ಆನ್‌ಲೈನ್‌ನಲ್ಲಿ ಹೊರಬಂದಿದೆ. ಇದು ಫೆಬ್ರುವರಿಯ ಸಂಚಿಕೆ ಎಂದು ನಾನು ಭಾವಿಸುತ್ತೇನೆ. ಮುದ್ರಣ ಆವೃತ್ತಿಯಲ್ಲಿ ಆ ಮಾಹಿತಿ ಹೊರಬರುತ್ತಿದೆ” ಎಂದು ಜೊಕೊವಿಕ್ ಹೇಳಿದರು. “ನಾನು ಆ ಸಂದರ್ಶನವನ್ನು ಹಲವು ತಿಂಗಳ ಹಿಂದೆಯೇ ಕೊಟ್ಟಿದ್ದೇನೆ. ಅದರ ಬಗ್ಗೆ ಹೆಚ್ಚು ವಿವರವಾಗಿ ಮಾತನಾಡದಿರುವುದು ಒಳ್ಳೆಯದು. ಏಕೆಂದರೆ ನಾನು ಈಗ ಟೆನಿಸ್ ಮೇಲೆ ಕೇಂದ್ರೀಕರಿಸಲು ಬಯಸುತ್ತೇನೆ. ಅದಕ್ಕಾಗಿಯೇ ನಾನು ಆಸ್ಟ್ರೇಲಿಯಾಗೆ ಬಂದಿರುವುದು” ಎಂದು ಹೇಳಿದ್ದಾರೆ. ಈ ಕುರಿತ ಪ್ರಶ್ನೆಗಳಿಗೆ ಉತ್ತರಿಸದೆ ಜೊಕೊವಿಕ್ ಪತ್ರಿಕಾಗೋಷ್ಠಿಯಿಂದ ಹೊರನಡೆದಿದ್ದಾರೆ.