ಮಿಯಾಮಿ ಓಪನ್: ಇಟಲಿಯ ಲೊರೆಂಜೊ ಮುಸೆಟ್ಟಿ ಮಣಿಸಿ 2016ರ ನಂತರ ಕ್ವಾರ್ಟರ್ ಫೈನಲ್ ತಲುಪಿದ ನೊವಾಕ್ ಜೊಕೊವಿಕ್
ಮೈಯಾಮಿ ಓಪನ್‌ನಲ್ಲಿ 6 ಬಾರಿ ಚಾಂಪಿಯನ್ ಆಗಿರುವ ಸರ್ಬಿಯಾದ ನೊವಾಕ್ ಜೊಕೊವಿಕ್ 16ನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಲೊರೆಂಜೊ ಮುಸೆಟ್ಟಿ ಅವರನ್ನು 6-2, 6-2 ಅಂತರದಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಮಿಯಾಮಿ ಓಪನ್ ಟೆನ್ನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ 16ನೇ ಸುತ್ತಿನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ ಅವರು 6-2, 6-2 ಅಂತರದಲ್ಲಿ ಇಟಲಿಯ ಲೊರೆಂಜೊ ಮುಸೆಟ್ಟಿ ಅವರನ್ನು ಒಂದು ಗಂಟೆ 22 ನಿಮಿಷಗಳ ಪಂದ್ಯದಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ವಿಶ್ವದ 15ನೇ ಶ್ರೇಯಾಂಕದ ಮುಸೆಟ್ಟಿ ಮೊದಲ ಸೆಟ್‌ನಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ಇದರ ನಂತರ 9 ಗೇಮ್ ಸೋತು ಸೆಟ್ ಅನ್ನೇ ಕಳೆದುಕೊಂಡರು. ಆತ್ಮವಿಶ್ವಾಸ ಮತ್ತು ಚುರುಕಾಗಿ ಆಡಿದ ಜೋಕೋವಿಕ್ 2016ರ ನಂತರ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
ಮೈಯಾಮಿ ಓಪನ್‌ನಲ್ಲಿ 6 ಬಾರಿ ಚಾಂಪಿಯನ್ ಆಗಿರುವ ಜೊಕೊವಿಕ್, ಮತ್ತೊಂದು ಪ್ರಶಸ್ತಿ ಮುಖ ಮಾಡಿದ್ದಾರೆ. ಇಲ್ಲಿ 2016ರಲ್ಲಿ ಕೊನೆಯದಾಗಿ ಮಿಯಾಮಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು. 37 ವರ್ಷದ ದಿಗ್ಗಜ ತಮ್ಮ 100ನೇ ಕೆರಿಯರ್ ಟೂರ್ ಟೈಟಲ್ ಗೆಲ್ಲಲು ಇನ್ನೂ 3 ಗೆಲುವು ಬೇಕಾಗಿದೆ. ಪಂದ್ಯದ ಆರಂಭ ಮುಸೆಟ್ಟಿಗೆ ತುಂಬಾ ಉತ್ತಮವಾಗಿತ್ತು. ಮೊದಲ 2 ಗೇಮ್‌ಗಳಲ್ಲಿ ನಾನು ಸ್ವಲ್ಪ ನಿಧಾನವಾಗಿ ಆಡಿದೆ. ನಂತರ ಅವರಿಗೆ ಅವಕಾಶ ಕೊಟ್ಟರೆ ನನಗೆ ಕಷ್ಟವಾಗಲಿದೆ ಎಂದು ಆಟದಲ್ಲಿ ಬದಲಾವಣೆ ಮಾಡಿಕೊಂಡೆ ಎಂದು ಜೊಕೊವಿಕ್ ಗೆಲುವಿನ ನಂತರ ಹೇಳಿದ್ದಾರೆ.
ಮುಸೆಟ್ಟಿ ಅವರು ತುಂಬಾ ಪ್ರತಿಭಾವಂತರು, ಅವರು ಯಾವುದೇ ಕೋರ್ಟ್‌ನಲ್ಲಿ ಯಾವುದೇ ಶಾಟ್ ಅನ್ನು ಆಡುವ ಸಾಮರ್ಥ್ಯ ಅವರಲ್ಲಿದೆ. ವಿಶೇಷವಾಗಿ ಮೊದಲ 7, 8 ಗೇಮ್‌ಗಳಲ್ಲಿ ಪಂದ್ಯ ಕಠಿಣವಾಗಿತ್ತು. ಆದರೆ ಅವರ ಸರ್ವ್ ಅನ್ನು ಮುರಿದು 2-0 ನಿಂದ 3-2 ಗೆ ತ್ವರಿತವಾಗಿ ಬ್ರೇಕ್ ಮಾಡಬೇಕೆಂದು ನಾನು ಭಾವಿಸಿದೆ. ಇದು ವೇಗದ ಬದಲಾವಣೆಯಾಗಿದೆ ಎಂದು ಅವರು ಮತ್ತಷ್ಟು ಹೇಳಿದ್ದಾರೆ.
ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕ ಆಟಗಾರ ಎದುರಾಳಿ
24ನೇ ಶ್ರೇಯಾಂಕದ ಅಮೆರಿಕಾದ ಸೆಬಾಸ್ಟಿಯನ್ ಕೊರ್ಡಾ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಜೊಕೊವಿಕ್ ಎದುರಿಸಲಿದ್ದಾರೆ. ಫ್ರಾನ್ಸ್‌ನ ಗೈಲ್ ಮೊಂಫಿಲ್ಸ್ ಅವರನ್ನು 6-4, 2-6, 6-4 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ ಸೆಬಾಸ್ಟಿಯನ್.
ಗೆಲುವಿನ ಬಳಿಕ ಮಾತನಾಡಿದ ಸೆಬಾಸ್ಟಿಯನ್, ‘ನಾಳೆ ಹೇಗಿರುತ್ತದೆ ಎಂದು ನೋಡೋಣ. ಈಗ ನಾನು ನನ್ನ ಫಿಸಿಯೋ ಜೊತೆ ಬಹಳಷ್ಟು ಕೆಲಸ ಮಾಡುತ್ತೇನೆ, ಈ ವರ್ಷ ನಾನು ಹೆಚ್ಚು ಪಂದ್ಯಗಳನ್ನು ಆಡಿಲ್ಲ. ನಾನು ಉತ್ತಮ ಟೆನ್ನಿಸ್ ಆಡಬಲ್ಲೆ ಎಂದು ನಾನು ನಂಬುತ್ತೇನೆ, ಅದು ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ನೋಡೋಣ’ ಎಂದು ಹೇಳಿದ್ದಾರೆ.
ಮಿಯಾಮಿ ಓಪನ್ ಟೆನ್ನಿಸ್
ಯಾಮಿ ಓಪನ್ ವಿಶ್ವದ ಪ್ರಮುಖ ಟೆನ್ನಿಸ್ ಪಂದ್ಯಾವಳಿಗಳಲ್ಲಿ ಒಂದಾಗಿದೆ, ಇದನ್ನು ಪ್ರತಿ ವರ್ಷ ಫ್ಲೋರಿಡಾದ ಮಿಯಾಮಿಯಲ್ಲಿ ನಡೆಸಲಾಗುತ್ತದೆ. ಎಟಿಪಿ ಮತ್ತು ಡಬ್ಲ್ಯುಟಿಎ ಪ್ರವಾಸಗಳ ಭಾಗವಾಗಿರುವ ಇದು ಪ್ರಪಂಚದಾದ್ಯಂತದ ಅತ್ಯುತ್ತಮ ಟೆನ್ನಿಸ್ ಆಟಗಾರರನ್ನು ಆಕರ್ಷಿಸುತ್ತದೆ. ಸಾಂಪ್ರದಾಯಿಕವಾಗಿ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭದಲ್ಲಿ ನಡೆಯುವ ಈ ಪಂದ್ಯಾವಳಿ, ಮಿಯಾಮಿ ಗಾರ್ಡನ್ಸ್ನಲ್ಲಿರುವ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆಯುತ್ತದೆ. 2019ರಿಂದ ಇಲ್ಲಿ ಟೂರ್ನಿ ಆಯೋಜನೆ ಮಾಡಲಾಗುತ್ತಿದೆ.
