ಫೆಡರೇಶನ್ ಕಪ್‌ನಲ್ಲಿ ಬಂಗಾರ ಗೆದ್ದ ನೀರಜ್ ಚೋಪ್ರಾ; ಕೂದಲೆಳೆ ಅಂತರದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟ ಡಿಪಿ ಮನು
ಮೂರು ವರ್ಷಗಳ ಬಳಿಕ ಭಾರತದ ನೆಲದಲ್ಲಿ ಚಿನ್ನದ ಹುಡುಗ ನೀರಜ್ ಚೋಪ್ರಾ ಮೊದಲ ಬಾರಿಗೆ ಚಿನ್ನ ಗೆದ್ದಿದ್ದಾರೆ. ಫೆಡರೇಶನ್ ಕಪ್ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಬಂಗಾರದ ಸಾಧನೆ ಮಾಡಿದ್ದಾರೆ. ಡಿಪಿ ಮನು ಬೆಳ್ಳಿಗೆ ತೃಪ್ತಿ ಪಟ್ಟಿದ್ದಾರೆ.

ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ (Neeraj Chopra), ಫೆಡರೇಶನ್ ಕಪ್ 2024ರಲ್ಲಿ (Federation Cup 2024) ಚಿನ್ನ ಗೆದ್ದಿದ್ದಾರೆ. ಪುರುಷರ ಜಾವೆಲಿನ್ ಥ್ರೋ ವಿಭಾಗದ ಫೈನಲ್‌ನಲ್ಲಿ ಚಿನ್ನದ ಹುಡುಗ ಮತ್ತೊಂದು ಬಂಗಾರದ ಸಾಧನೆ ಮಾಡಿದ್ದಾರೆ. ಭಾರತದ ಸ್ಟಾರ್ ಅಥ್ಲೀಟ್ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 82.27 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ತಾನೇ ನಂಬರ್ ವನ್ ಎಂಬುದನ್ನು ಸಾಬೀತುಪಡಿಸಿದರು. ಮೂರನೇ ಸುತ್ತಿನವರೆಗೂ 82.06 ಮೀಟರ್ ಎಸೆದು ಅಗ್ರಸ್ಥಾನದಲ್ಲಿದ್ದ ಡಿಪಿ ಮನು ಅವರನ್ನು ಅಂತಿಮ ಸುತ್ತಿನಲ್ಲಿ ನೀರಜ್ ಹಿಂದಿಕ್ಕಿದರು.
ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ಮೈದಾನಕ್ಕಿಳಿದ ನೀರಜ್, ಮೂರು ವರ್ಷಗಳ ನಂತರ ಫೆಡರೇಶನ್ ಕಪ್‌ನಲ್ಲಿ ಆಡಿದರು. ಕೊನೆಯ ಬಾರಿಗೆ 2021ರಲ್ಲಿ ಫೆಡರೇಶನ್ ಕಪ್‌ನಲ್ಲಿ ಆಡಿದ್ದ ಅವರು 87.80 ಮೀಟರ್ ದೂರ ಎಸೆದು ಚಿನ್ನದ ಪದಕವನ್ನು ಗೆದ್ದಿದ್ದರು. ಮೂರು ವರ್ಷಗಳ ಹಿಂದಿನ 87.80 ಮೀಟರ್ ದೂರಕ್ಕೆ ಹೋಲಿಸಿದರೆ, ಈ ಬಾರಿ ನೀರಜ್ ಪ್ರಯತ್ನ ಹೇಳಿಕೊಳ್ಳುವ ಮಟ್ಟಕ್ಕಿಲ್ಲ.
26 ವರ್ಷದ ಸೂಪರ್‌ಸ್ಟಾರ್, ಸ್ಪರ್ಧೆಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಸತತ ಮೂರು ಸುತ್ತುಗಳ ನಂತರವೂ ಎರಡನೇ ಸ್ಥಾನದಲ್ಲಿದ್ದ ನೀರಜ್, ಅಂತಿಮವಾಗಿ ನಾಲ್ಕನೇ ಸುತ್ತಿನಲ್ಲಿ 82.27 ಮೀಟರ್ ದೂರ ಎಸೆಯುವ ಮೂಲಕ ಮುನ್ನಡೆ ಸಾಧಿಸಿದರು. ಅಲ್ಪ ಮುನ್ನಡೆಯೊಂದಿಗೆ ಚಿನ್ನ ಗೆದ್ದರು. ಇದರೊಂದಿಗೆ ಪ್ರಬಲ ಪೈಪೋಟಿ ನೀಡಿದ ಡಿಪಿ ಮನು ಬೆಳ್ಳಿಗೆ ತೃಪ್ತಿಪಟ್ಟರು.
ಇದನ್ನೂ ಓದಿ | ಮಳೆಯಿಂದಾಗಿ ಕೆಕೆಆರ್ vs ಗುಜರಾತ್ ಪಂದ್ಯ ರದ್ದು; ಜಿಟಿ ಟೂರ್ನಿಯಿಂದ ಔಟ್, ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟ ಕೋಲ್ಕತ್ತಾ
ಟೋಕಿಯೊ ಒಲಿಂಪಿಕ್ಸ್‌ನಲಿ ಐತಿಹಾಸಿಕ ಚಿನ್ನ ಗೆದ್ದ ಸಾಧನೆ ಮಾಡಿರುವ ಚಿನ್ನದ ಹುಡುಗ, 2022ರಲ್ಲಿ ಡೈಮಂಡ್ ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. 2023ರಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಅವರು, ಆ ಬಳಿಕ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ತಮ್ಮ ಚಿನ್ನವನ್ನು ಉಳಿಸಿಕೊಂಡಿದ್ದಾರೆ.
ನೀರಜ್ ಅವರ ಈವರೆಗಿನ ಗರಿಷ್ಠ ಅತ್ಯುತ್ತಮ ಎಸೆತ 89.94 ಮೀಟರ್. ಇದು ಇನ್ನೂ ರಾಷ್ಟ್ರೀಯ ದಾಖಲೆಯಾಗಿ ಉಳಿದಿದೆ. ಇದುವರೆಗೂ ಅವರು 90 ಮೀಟರ್ ಗಡಿ ಮುಟ್ಟಿಲ್ಲ. ಮುಂದೆ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಬಂಗಾರದ ಸಾಧನೆ ಮಾಡುವ ಕಾತರದಲ್ಲಿದ್ದಾರೆ.
