ಪಿಆರ್ ಶ್ರೀಜೇಶ್‌ಗೆ ಪದ್ಮಭೂಷಣ; ಆರ್ ಅಶ್ವಿನ್ ಸೇರಿದಂತೆ ನಾಲ್ವರು ಕ್ರೀಡಾ ಸಾಧಕರಿಗೆ ಪದ್ಮಶ್ರೀ ಗೌರವ
ಹಾಕಿ ದಿಗ್ಗಜ ಪಿ.ಆರ್.ಶ್ರೀಜೇಶ್ ಅವರಿಗೆ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಘೋಷಣೆಯಾಗಿದೆ. ಇದೇ ವೇಳೆ ಕ್ರಿಕೆಟ್ ದಿಗ್ಗಜ ಆರ್ ಅಶ್ವಿನ್ ಸೇರಿದಂತೆ ನಾಲ್ವರು ಕ್ರೀಡಾ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿದೆ.

ಗಣರಾಜ್ಯೋತ್ಸವ ನಿಮಿತ್ತ 2025ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಕ್ರೀಡಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ ಐವರಿಗೆ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ. ಭಾರತ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದೇ ವೇಳೆ, ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ರವಿಚಂದ್ರನ್ ಅಶ್ವಿನ್ ಸೇರಿದಂತೆ ನಾಲ್ವರಿಗೆ ಪದ್ಮಶ್ರೀ ಪ್ರಶಸ್ತಿ ಗೌರವ ಸಂದಿದೆ. ಭಾರತದ 76ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಟ್ಟು 139 ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಇದರಲ್ಲಿ ನಾಲ್ವರು ಕ್ರೀಡಾಪಟುಗಳು ಹಾಗೂ ಒಬ್ಬರು ಪ್ಯಾರಾ-ಕೋಚ್ ಸ್ಥಾನ ಪಡೆದಿದ್ದಾರೆ.
36ರ ಹರೆಯದ ಶ್ರೀಜೇಶ್, ಭಾರತೀಯ ಹಾಕಿ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವು ಸತತ ಎರಡನೇ ಒಲಿಂಪಿಕ್ ಕಂಚಿನ ಪದಕ ಗೆಲ್ಲುವಲ್ಲಿ ಅವರ ಪಾತ್ರ ಮಹತ್ವದ್ದು. ಒಲಿಂಪಿಕ್ಸ್ ನಂತರ ಅವರು ನಿವೃತ್ತರಾದರು. 2020ರ ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದ ತಂಡದಲ್ಲಿಯೂ ಅವರು ಆಡಿದ್ದರು. ಶ್ರೀಜೇಶ್ ಪ್ರಸ್ತುತ ಜೂನಿಯರ್ ಪುರುಷರ ಹಾಕಿ ತಂಡದ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕ್ರಿಕೆಟ್ ದಂತಕತೆ ರವಿಚಂದ್ರನ್ ಅಶ್ವಿನ್ (38) ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ನೀಡಿ ಗೌರವಿಸಲಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ನಡೆದ 2024ರ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮಧ್ಯದಲ್ಲಿ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. 106 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಅವರು, 537 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್ ಸ್ವರೂಪದಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ತಮ್ಮ ವೃತ್ತಿಜೀವನವನ್ನು ಅಶ್ವಿನ್ ಕೊನೆಗೊಳಿಸಿದರು.
ಕೋಚ್ ಸತ್ಯಪಾಲ್ ಸಿಂಗ್‌ಗೆ ಗೌರವ
ಪದ್ಮಶ್ರೀ ಪ್ರಶಸ್ತಿ ಪಡೆದ ಇತರ ಕ್ರೀಡಾಪಟುಗಳಲ್ಲಿ ಭಾರತದ ಖ್ಯಾತ ಫುಟ್ಬಾಲ್ ಆಟಗಾರ ಐ.ಎಂ.ವಿಜಯನ್ ಒಬ್ಬರು. ಇದೇ ವೇಳೆ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಬಿಲ್ಲುಗಾರ ಹರ್ವಿಂದರ್ ಸಿಂಗ್ ಹಾಗೂ ಪ್ಯಾರಾ-ಅಥ್ಲೆಟಿಕ್ಸ್ ತರಬೇತುದಾರ ಸತ್ಯಪಾಲ್ ಸಿಂಗ್ ಅವರಿಗೆ ಉನ್ನತ ಗೌರವ ಸಿಕ್ಕಿದೆ.
ಖೇಲ್ ರತ್ನ ಪ್ರಶಸ್ತಿ ವಿಜೇತ ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹೈಜಂಪರ್ ಪ್ರವೀಣ್ ಕುಮಾರ್ ಅವರಿಗೆ ಮಾರ್ಗದರ್ಶನ ನೀಡುವಲ್ಲಿ ಸತ್ಯಪಾಲ್ ಪ್ರಮುಖ ಪಾತ್ರ ವಹಿಸಿದ್ದಾರೆ.
139 ಪುರಸ್ಕೃತರು
ವಿವಿಧ ಕ್ಷೇತ್ರಗಳಲ್ಲಿ ನೀಡಿದ ವಿಶಿಷ್ಟ ಕೊಡುಗೆಗಳನ್ನು ಗುರುತಿಸಿ, ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ವರ್ಷ ಒಟ್ಟು 139 ಪುರಸ್ಕೃತರನ್ನು ಹೆಸರಿಸಲಾಗಿದೆ. ವಾರ್ಷಿಕ ಪಟ್ಟಿಯಲ್ಲಿ ಏಳು ಪದ್ಮ ವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಇದ್ದಾರೆ.
ಪದ್ಮಭೂಷಣ ಪ್ರಶಸ್ತಿಯು ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾಗಿದೆ. ಭಾರತ ರತ್ನ ಅತ್ಯುನ್ನತ ಗೌರವವಾದರೆ, ಪದ್ಮ ವಿಭೂಷಣದ ಎರಡನೇ ಉನ್ನತ ಗೌರವವಾಗಿದೆ.
