ಕನ್ನಡ ಸುದ್ದಿ  /  Cricket  /  Pakistan Pacer Haris Rauf Recalls His Days Of Struggle Selling Snacks Odi World Cup 2023 Cricket News In Kannada Jra

ಫೀಸ್‌ ಕಟ್ಟಲು ಸ್ನ್ಯಾಕ್ಸ್‌ ಮಾರುತ್ತಿದ್ದೆ; ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡ ಪಾಕ್‌ ವೇಗಿ

Haris Rauf: ಪಾಕಿಸ್ತಾನ ಕ್ರಿಕೆಟ್‌ ತಂಡದ ಪ್ರಮುಖ ವೇಗಿ ಹ್ಯಾರಿಸ್‌ ರೌಫ್‌, ತಮ್ಮ ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಪಾಕಿಸ್ತಾನ ವೇಗಿ ಹ್ಯಾರಿಸ್‌ ರೌಫ್
ಪಾಕಿಸ್ತಾನ ವೇಗಿ ಹ್ಯಾರಿಸ್‌ ರೌಫ್ (AFP)

ಏಕದಿನ ವಿಶ್ವಕಪ್‌ನಲ್ಲಿ (ODI World Cup 2023) ಆಡಲು ಪಾಕಿಸ್ತಾನ ಕ್ರಿಕೆಟ್‌ ತಂಡವು (Pakistan Cricket team) ಭಾರತಕ್ಕೆ ಬಂದಿಳಿದಿದೆ. ಈಗಾಗಲೇ ಹೈದರಾಬಾದ್‌ನಲ್ಲಿ ಅಭ್ಯಾಸ ಪಂದ್ಯವನ್ನೂ ಆಡಿರುವ ಪಾಕ್‌ ತಂಡವು, ಭಾರತದ ನೆಲದಲ್ಲಿ ವಿಶ್ವಕಪ್‌ ಗೆದ್ದು ತವರಿಗೆ ಮರಳುವ ಉತ್ಸಾಹದಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಬಾಬರ್‌ ಅಜಾಮ್‌ ಬಳಗದ ಪ್ರಮುಖ ವೇಗಿ ಹ್ಯಾರಿಸ್‌ ರೌಫ್‌ (Haris Rauf), ಈ ಬಾರಿ ಭಾರತದಲ್ಲೂ ರೋಹಿತ್‌ ಶರ್ಮಾ ಬಳಗವನ್ನು ಕಾಡುವ ವಿಶ್ವಾಸದಲ್ಲಿದ್ದಾರೆ. ವಿಶ್ವಕಪ್‌ ಪಂದ್ಯಗಳಿಗೂ ಮುನ್ನ ಅವರು, ತಮ್ಮ ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಫೀಸ್‌ ಕಟ್ಟಲು ಸ್ನ್ಯಾಕ್ಸ್‌ ಮಾರಾಟ ಮಾಡಿದ್ದೆ

ತಮ್ಮ ಕಲಿಕೆಯ ಅವಧಿಯಲ್ಲಿ ಶಿಕ್ಷಣ ಶುಲ್ಕವನ್ನು ಪಾವತಿಸಲು ಮಾರುಕಟ್ಟೆಯಲ್ಲಿ ಸ್ನ್ಯಾಕ್ಸ್‌ ಮಾರಾಟ ಮಾಡುತ್ತಿದ್ದುದಾಗಿ ರೌಫ್‌ ಬಹಿರಂಗಪಡಿಸಿದ್ದಾರೆ. ಟೇಪ್ ಬಾಲ್ ಕ್ರಿಕೆಟ್ ಆಡಲು ಪ್ರಾರಂಭಿಸುವವರೆಗೂ ಈ ಹೋರಾಟ ಮುಂದುವರೆಯಿತು ಎಂದು ಅವರು ಹೇಳಿದ್ದಾರೆ.

“ಮೆಟ್ರಿಕ್ಯುಲೇಷನ್ ನಂತರ, ನನ್ನ ಶುಲ್ಕವನ್ನು ಪಾವತಿಸಲು ನಾನು ಭಾನುವಾರದಂದು ಸ್ನ್ಯಾಕ್ಸ್ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಸ್ನ್ಯಾಕ್ಸ್ ಮಾರಾಟ ಮಾಡಬೇಕಿತ್ತು. ವಾರದ ಉಳಿದ ದಿನಗಳಲ್ಲಿ ನಾನು ತರಗತಿಗಳಿಗೆ ಹಾಜರಾಗುತ್ತಿದ್ದೆ. ನಾನು ವಿಶ್ವವಿದ್ಯಾನಿಲಯಕ್ಕೆ ಸೇರಿಕೊಂಡಾಗ, ನನ್ನ ತಂದೆಯಿಂದ ಫೀಸ್‌ ಪಾವತಿಸಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಅವರ ಸಂಪಾದನೆ ಅಷ್ಟೊಂದಿರಲಿಲ್ಲ. ಹೀಗಾಗಿ ಟೇಪ್-ಬಾಲ್ ಕ್ರಿಕೆಟ್ ಆಡುವ ಮೂಲಕ ನಾನು ನನ್ನ ಶುಲ್ಕವನ್ನು ಪಾವತಿಸುತ್ತಿದ್ದೆ,” ಎಂದು ರೌಫ್ ಇಎಸ್‌ಪಿಎನ್‌ ಕ್ರಿಕ್‌ಇನ್‌ಫೋಗೆ ತಿಳಿಸಿದ್ದಾರೆ.

ತಿಂಗಳಿಗೆ 2.5 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದೆ

“ಪಾಕಿಸ್ತಾನದಲ್ಲಿ ವೃತ್ತಿಪರವಾಗಿ ಟೇಪ್ ಬಾಲ್ ಕ್ರಿಕೆಟ್‌ ಆಡುವವರು, ಸುಲಭವಾಗಿ ತಿಂಗಳಿಗೆ ಸುಮಾರು 2ರಿಂದ 2.5 ಲಕ್ಷ ರೂಪಾಯಿ ಗಳಿಸುತ್ತಾರೆ. ಹೀಗಾಗಿ ನಾನು ಕೂಡಾ ಅಷ್ಟು ಸಂಪಾದಿಸುತ್ತಿದ್ದೆ. ಆದರೆ, ನಾನು ಆ ದುಡ್ಡನ್ನು ನನ್ನ ತಾಯಿ ಕೈಗೆ ಕೊಡುತ್ತಿದ್ದೆ. ಅಷ್ಟು ಮೊತ್ತ ಸಂಪಾದಿಸುವ ಬಗ್ಗೆ ತಂದೆಗೆ ಹೇಳಿರಲಿಲ್ಲ,” ಎಂದು ರೌಫ್‌ ಹೇಳಿಕೊಂಡಿದ್ದಾರೆ.

ಅಡುಗೆಮನೆಯಲ್ಲಿ ನಿದ್ದೆ

“ನನ್ನ ತಂದೆಗೆ ಮೂವರು ಸಹೋದರು. ಅವರೆಲ್ಲರೂ ಒಟ್ಟಿಗೆ ವಾಸಿಸುತ್ತಿದ್ದರು. ನನ್ನ ತಂದೆಗೆ ಒಂದು ದೊಡ್ಡ ಕೋಣೆ ಇತ್ತು. ಆ ಬಳಿಕ ನನ್ನ ಚಿಕ್ಕಪ್ಪಂದಿರಿಗೆ ಮದುವೆಯಾದಾಗ, ನನ್ನ ತಂದೆ ಅವರ ಕೋಣೆಯನ್ನು ಸಹೋದರರಿಗೆ ಬಿಟ್ಟುಕೊಟ್ಟರು. ಆ ಸಮಯದಲ್ಲಿ ನಾವು ಅಡುಗೆಮನೆಯಲ್ಲಿ ಮಲಗುವ ಹಂತಕ್ಕೆ ತಲುಪಿದ್ದೆವು” ಎಂದು ರೌಫ್ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

2020ರಲ್ಲಿ ಪಾಕಿಸ್ತಾನ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ರೌಫ್, ಪಾಕಿಸ್ತಾನದ ವೇಗದ ಬಳಗದ ಪ್ರಮುಖ ಅಸ್ತ್ರ. 145 kmph ವೇಗದಲ್ಲಿ ಸುಲಭವಾಗಿ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯ ಇವರಿಗಿದೆ. ತಮ್ಮ ವೃತ್ತಿಜೀವನದಲ್ಲಿ ಪಾಕಿಸ್ತಾನ ಪರ 53 ಏಕದಿನ ಮತ್ತು 83 ಟಿ20 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಪಾಕಿಸ್ತಾನ ತಂಡವು ಅಕ್ಟೋಬರ್ 06ರಂದು ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ. ಹೈದರಾಬಾದ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್‌ ತಂಡವನ್ನು ಎದುರಿಸಲಿದೆ.

ಸಂಬಂಧಿತ ಲೇಖನ

ಕ್ರಿಕೆಟ್ ಪ್ರೇಮಿಗಳೇ Cricket News, Live Score ಮತ್ತು Kannada News ಮತ್ತು ಸಂಬಂಧಿಸಿದ ಬರಹಗಳನ್ನು ಓದಿ.