ಆಪ್ತ ಸ್ನೇಹಿತರಲ್ಲ ಎಂದಿದ್ದ ನೀರಜ್ ಚೋಪ್ರಾ ಕಾಮೆಂಟ್ಗೆ ಪ್ರತಿಕ್ರಿಯಿಸಿದ ಅರ್ಷದ್ ನದೀಮ್, ಹೇಳಿದ್ದೇನು?
ಆಪ್ತ ಸ್ನೇಹಿತರಲ್ಲ ಎಂದು ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಇತ್ತೀಚೆಗೆ ಮಾಡಿದ್ದ ಕಾಮೆಂಟ್ಗೆ ಪಾಕಿಸ್ತಾನದ ಜಾವೆಲಿನ್ ಪಟು ಅರ್ಷದ್ ನದೀಮ್ ಪ್ರತಿಕ್ರಿಯಿಸಿದ್ದಾರೆ.

ಭಾರತ-ಪಾಕಿಸ್ತಾನ ಉದ್ವಿಗ್ನತೆ ಬಳಿಕ ಅರ್ಷದ್ ನದೀಮ್ ಕುರಿತು ಪ್ರತಿಕ್ರಿಯಿಸಿದ್ದ ಭಾರತದ ಜಾವೆಲಿನ್ ಸ್ಟಾರ್ ನೀರಜ್ ಜೋಪ್ರಾ ತನ್ನ ಮತ್ತು ಆತನ ನಡುವೆ ಆತ್ಮೀಯ ಸಂಬಂಧ ಇಲ್ಲ ಎಂದು ಹೇಳಿದ್ದರು. ಅವರೊಂದಿಗೆ ಸಂಬಂಧ ಅಷ್ಟಕಷ್ಟೆ ಎಂದಿದ್ದರು. ಇದೀಗ ಈ ಹೇಳಿಕೆಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಅರ್ಷದ್ ಪ್ರತಿಕ್ರಿಯಿಸಿದ್ದು, ತಾನು ನೀರಜ್ ಚೋಪ್ರಾ ಕುರಿತು ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಸ್ತುತ ಗಡಿಯಾಚೆಗಿನ ಉದ್ವಿಗ್ನತೆಯನ್ನು ಉಲ್ಲೇಖಿಸಿ, ಭಾರತೀಯ ತಾರೆ ನೀರಜ್ ಚೋಪ್ರಾ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ಪಾಕಿಸ್ತಾನದ ಒಲಿಂಪಿಕ್ ಜಾವೆಲಿನ್ ಚಾಂಪಿಯನ್ ಅರ್ಷದ್ ನದೀಮ್ ನಿರಾಕರಿಸಿದ್ದಾರೆ. ಮುಂಬರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೂ ಮುನ್ನ ಲಾಹೋರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನೀರಜ್ ಬಗ್ಗೆ ಅರ್ಷದ್ ಅವರಿಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ.
ನೀರಜ್ ಬಗ್ಗೆ ಮಾತನಾಡಲ್ಲ ಎಂದ ಅರ್ಷದ್
ಭಾರತದೊಂದಿಗಿನ ಸಂಘರ್ಷ ನಡೆಯುತ್ತಿರುವುದರಿಂದ ನೀರಜ್ ಬಗ್ಗೆ ನಾನು ಯಾವುದೇ ಕಾಮೆಂಟ್‌ಗಳನ್ನು ಮಾಡಲು ಬಯಸುವುದಿಲ್ಲ ಎಂದು ಹೇಳಿರುವ ಅವರು, ‘ನಾನು ಹಳ್ಳಿಯಿಂದ ಬಂದಿದ್ದೇನೆ. ನನ್ನ ಕುಟುಂಬ ಮತ್ತು ನಾನು ಯಾವಾಗಲೂ ನಮ್ಮ ಸೈನ್ಯದೊಂದಿಗೆ ನಿಲ್ಲುತ್ತೇವೆ ಎಂದು ಮಾತ್ರ ಹೇಳಲು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ನೀರಜ್ ಚೋಪ್ರಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾನು ಮತ್ತು ಅರ್ಷದ್ ‘ಎಂದಿಗೂ ನಿಜವಾಗಿಯೂ ಆಪ್ತ ಸ್ನೇಹಿತರಲ್ಲ’ ಎಂದು ಸ್ಪಷ್ಟಪಡಿಸಿದ್ದರು . ಬೆಂಗಳೂರಿನಲ್ಲಿ ನಡೆಯಬೇಕಿದ್ದ ವಿಶ್ವ ಅಥ್ಲೆಟಿಕ್ಸ್-ಅನುಮೋದಿತ ಕ್ರೀಡಾಕೂಟವಾದ ಈಗ ಮುಂದೂಡಲ್ಪಟ್ಟ ಉದ್ಘಾಟನಾ ನೀರಜ್ ಚೋಪ್ರಾ ಕ್ಲಾಸಿಕ್‌ಗೆ ಅರ್ಷದ್ ಅವರನ್ನು ಆಹ್ವಾನಿಸಿದ್ದಕ್ಕಾಗಿ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವರ್ಗದಿಂದ ತೀವ್ರ ಟೀಕೆಗಳು ಬಂದಿದ್ದವು. ಇದರ ಬಳಿಕ ನೀರಜ್ ಹೇಳಿಕೆ ಹೊರ ಬಂದಿತ್ತು.
ಅರ್ಷದ್ಗೆ ಆಹ್ವಾನ ನೀಡಿದ್ದ ನೀರಜ್
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪುವ ಮೊದಲು, ಅರ್ಷದ್ ಸೇರಿ ಪ್ರಮುಖ ಅಂತಾರಾಷ್ಟ್ರೀಯ ಜಾವೆಲಿನ್ ಎಸೆತಗಾರರಿಗೆ ನೀರಜ್ ಆಹ್ವಾನ ನೀಡಿದ್ದರು. ಈ ಘಟನೆಯ ನಂತರ ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನಿಸಿದರೆ, ಅರ್ಷದ್ ಅವರೊಂದಿಗಿನ ತಮ್ಮ ಸಂಬಂಧವು ಹಾಗೆಯೇ ಉಳಿಯುವುದಿಲ್ಲ ಎಂದು ನೀರಜ್ ದೃಢಪಡಿಸಿದ್ದರು.
ವೈಯಕ್ತಿಕವಾಗಿ ದೂರವಿದ್ದರೂ, ಅಥ್ಲೆಟಿಕ್ಸ್ ಸಮುದಾಯದ ಗೌರವಾನ್ವಿತ ಮತ್ತು ಸೌಹಾರ್ದಯುತ ವ್ಯಕ್ತಿಗಳಿಗೆ ಸಹಾಯ ಮಾಡಲು ತಾನು ಮುಕ್ತನಾಗಿರುತ್ತೇನೆ ಎಂದು ನೀರಜ್ ಒತ್ತಿ ಹೇಳಿದ್ದರು. 2018 ರ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ನಂತರ ನೀರಜ್ ಮತ್ತು ಅರ್ಷದ್ ನಡುವಿನ ಪೈಪೋಟಿ ಅಭಿಮಾನಿಗಳನ್ನು ಆಕರ್ಷಿಸಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅರ್ಷದ್ 92.97 ಮೀಟರ್ ದೂರ ಎಸೆಯುವ ಮೂಲಕ ಒಲಿಂಪಿಕ್ ದಾಖಲೆಯ ಚಿನ್ನ ಗೆದ್ದರು. ಆದರೆ ನೀರಜ್ ಬೆಳ್ಳಿ ಗೆದ್ದಿದ್ದರು.
ಮೇ 16 ರಂದು ದೋಹಾ ಡೈಮಂಡ್ ಲೀಗ್‌ನಲ್ಲಿ 90.23 ಮೀಟರ್‌ಗಳ ವೈಯಕ್ತಿಕ ಅತ್ಯುತ್ತಮ ಸಾಧನೆಯೊಂದಿಗೆ 90 ಮೀಟರ್ ಕ್ಲಬ್‌ಗೆ ಸೇರುವ ಮೂಲಕ ನೀರಜ್ ಸುದ್ದಿಯಾದರು. ಪುರುಷರ ಜಾವೆಲಿನ್ ಇತಿಹಾಸದಲ್ಲಿ 90 ಮೀಟರ್ ಗಡಿ ದಾಟಿದ ಕೇವಲ 25 ನೇ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ, ನೀರಜ್ಗೆ ಚಿನ್ನದ ಪದಕ ಒಲಿಯಲಿಲ್ಲ. ಆದರೆ, 91.06 ಮೀಟರ್ ಎಸೆದ ಜರ್ಮನಿಯ ಜೂಲಿಯನ್ ವೆಬರ್ ನಂತರ 2ನೇ ಸ್ಥಾನ ಪಡೆದರು.