ಈಜಿನಲ್ಲಿ ಕನ್ನಡಿಗರ ಅಭಿಯಾನ ಅಂತ್ಯ, ಆಘಾತಕಾರಿ ಸೋಲುಂಡ ಶರತ್ ಕಮಲ್; ಶೂಟಿಂಗ್​ನಲ್ಲಿ ಅರ್ಜುನ್ ಫೈನಲ್​ಗೆ
ಕನ್ನಡ ಸುದ್ದಿ  /  ಕ್ರೀಡೆ  /  ಈಜಿನಲ್ಲಿ ಕನ್ನಡಿಗರ ಅಭಿಯಾನ ಅಂತ್ಯ, ಆಘಾತಕಾರಿ ಸೋಲುಂಡ ಶರತ್ ಕಮಲ್; ಶೂಟಿಂಗ್​ನಲ್ಲಿ ಅರ್ಜುನ್ ಫೈನಲ್​ಗೆ

ಈಜಿನಲ್ಲಿ ಕನ್ನಡಿಗರ ಅಭಿಯಾನ ಅಂತ್ಯ, ಆಘಾತಕಾರಿ ಸೋಲುಂಡ ಶರತ್ ಕಮಲ್; ಶೂಟಿಂಗ್​ನಲ್ಲಿ ಅರ್ಜುನ್ ಫೈನಲ್​ಗೆ

Paris Olymics 2024: ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತ ಮಿಶ್ರ ಫಲಿತಾಂಶ ಕಂಡಿದೆ. ಈಜಿನಲ್ಲಿ ಇಬ್ಬರು ನಿರಾಸೆ ಮೂಡಿಸಿದ್ದರೆ, ಶೂಟಿಂಗ್​​ನಲ್ಲಿ ಅರ್ಜುಲ್ ಬಬುಟಾ ಪದಕದ ಆಸೆ ಹೆಚ್ಚಿಸಿದ್ದಾರೆ.

ಈಜಿನಲ್ಲಿ ಕನ್ನಡಿಗರ ಅಭಿಯಾನ ಅಂತ್ಯ, ಆಘಾತಕಾರಿ ಸೋಲುಂಡ ಶರತ್ ಕಮಲ್; ಶೂಟಿಂಗ್​ನಲ್ಲಿ ಅರ್ಜುನ್ ಫೈನಲ್​ಗೆ
ಈಜಿನಲ್ಲಿ ಕನ್ನಡಿಗರ ಅಭಿಯಾನ ಅಂತ್ಯ, ಆಘಾತಕಾರಿ ಸೋಲುಂಡ ಶರತ್ ಕಮಲ್; ಶೂಟಿಂಗ್​ನಲ್ಲಿ ಅರ್ಜುನ್ ಫೈನಲ್​ಗೆ

2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತ ಚೊಚ್ಚಲ ಪದಕ ಗೆದ್ದಿದೆ. ಶೂಟಿಂಗ್​ನಲ್ಲಿ ಮನು ಭಾಕರ್​ ಅವರು ಕಂಚಿನ ಪದಕಕ್ಕೆ ಮುತ್ತಿಕ್ಕುವ ಮೂಲಕ ಭಾರತದ ಪದಕ ಬೇಟೆಗೆ ಮುನ್ನುಡಿ ಹಾಡಿದ್ದಾರೆ. ಆದರೆ ಈಜು ಸ್ಪರ್ಧೆಯಲ್ಲಿ ನಿರೀಕ್ಷೆ ಮೂಡಿಸಿದ್ದ ಕನ್ನಡಿಗರಿಗಿಬ್ಬರು ಮುಂದಿನ ಹಂತಕ್ಕೆ ಅರ್ಹತೆಯುವಲ್ಲಿ ವಿಫಲರಾಗಿದ್ದಾರೆ. ಪುರುಷರ ಶೂಟಿಂಗ್​​ನಲ್ಲಿ ಅರ್ಜುನ್ ಬಬುಟಾ ಫೈನಲ್​ಗೇರಿದ್ದರೆ, ಬಾಕ್ಸಿಂಗ್​ನಲ್ಲಿ ನಿಖತ್ ಜರೀನ್ ಪ್ರೀ ಕ್ವಾರ್ಟರ್​ಫೈನಲ್​ ಸುತ್ತಿಗೆ ಪ್ರವೇಶಿಸಿದ್ದಾರೆ. ಆದರೆ, ಅನುಭವಿ ಶರತ್ ಕಮಲ್​ಗೆ ಆಘಾತಕಾರಿ ಸೋಲು ಅನುಭವಿಸಿದ್ದಾರೆ.

ಈಜಿನಲ್ಲಿ ಕನ್ನಡಿಗರಿಗೆ ನಿರಾಸೆ

ಮಹಿಳೆಯರ 200 ಮೀಟರ್​ ಪ್ರೀಸ್ಟೈಲ್​ ಈಜು ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ಭಾರತದ ಅತ್ಯಂತ ಕಿರಿಯ ಆಟಗಾರ್ತಿ ಹಾಗೂ ಕರ್ನಾಟಕದ ಧಿನಿಧಿ ದೇಸಿಂಗು (Dhinidhi Desinghu) ತನ್ನ ಅಭಿಯಾನ ಮುಗಿಸಿದ್ದಾರೆ. 2 ನಿಮಿಷ, 6 ಸೆಕೆಂಡ್, 96 ಮಿಲಿ ಸೆಕೆಂಡ್​​ಗಳಲ್ಲಿ 200 ಮೀಟರ್​ ಗುರಿ ತಲುಪಿದರೂ ಒಟ್ಟಾರೆ ಪಟ್ಟಿಯಲ್ಲಿ 23ನೇ ಸ್ಥಾನ ಪಡೆದರು. 16ನೇ ಸ್ಥಾನದೊಳಗೆ ಸ್ಥಾನ ಪಡೆದಿದ್ದರೆ, ಧಿನಿಧಿ ಸೆಮಿಫೈನಲ್​ಗೆ ಲಗ್ಗೆ ಇಡುತ್ತಿದ್ದರು.

ಧಿನಿಧಿ ಮಾತ್ರವಲ್ಲ, ಕರ್ನಾಟಕದ ಮತ್ತೊಬ್ಬ ಈಜು ಪಟು ಶ್ರೀಹರಿ ನಟರಾಜ್ ಅವರ ಅಭಿಯಾನವೂ ಅಂತ್ಯಗೊಂಡಿದೆ. ಪುರುಷರ 100 ಮೀಟರ್​ ಬ್ಯಾಕ್​ ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ 55.01 ಸೆಕೆಂಡ್​​ಗಳಲ್ಲಿ ಗುರಿ ತಲುಪಿದರೂ ಒಟ್ಟಾರೆ ಪಟ್ಟಿಯಲ್ಲಿ 33ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಸೆಮಿಫೈನಲ್​ಗೆ ಅರ್ಹತೆ ಪಡೆಯಲು ಅವರು ಸಹ 16ರೊಳಗೆ ಸ್ಥಾನ ಪಡೆಯಬೇಕಿತ್ತು. ಇಬ್ಬರು ಅರ್ಹತೆ ಪಡೆಯಲು ವಿಫಲರಾದರೂ, ಅವರ ಪ್ರದರ್ಶನ ಎಲ್ಲರನ್ನೂ ಆಕರ್ಷಿಸಿತು.

ಅರ್ಜುನ್ ಬಬುಟಾ ಫೈನಲ್​ಗೆ ಲಗ್ಗೆ

ಪುರುಷರ 10 ಮೀಟರ್ ಏರ್ ರೈಫಲ್ಸ್​​ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದ್ಶನ ನೀಡಿದ ಅರ್ಜುನ್ ಬಬುಟಾ ಅವರು ಫೈನಲ್​ಗೆ ಅರ್ಹತೆ ಪಡೆದಿದ್ದು, ಪದಕದ ಭರವಸೆ ಮೂಡಿಸಿದ್ದಾರೆ. 630.1 ಅಂಕಗಳೊಂದಿಗೆ 6ನೇ ಸ್ಥಾನ ಪಡೆದರು. ಮತ್ತೊಬ್ಬ ಶೂಟರ್​ ಸಂದೀಪ್ ಸಿಂಗ್ ಅವರು 629.3 ಅಂಕಗಳೊಂದಿಗೆ 12 ಸ್ಥಾನ ಪಡೆದು ಅಗ್ರ 8ರೊಳಗೆ ಸ್ಥಾನ ಪಡೆಯಲು ಕೊಂಚದರಲ್ಲಿ ತಪ್ಪಿಸಿಕೊಂಡರು. ಅರ್ಜುನ್ ಜುಲೈ 29ರಂದು ಮಧ್ಯಾಹ್ನ 3.30ಕ್ಕೆ ನಡೆಯುವ ಪದಕದ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ.

ಶರತ್ ಕಮಲ್​ಗೆ ಅಚ್ಚರಿಯ ಆಘಾತ

ಪುರುಷರ ಸಿಂಗಲ್ಸ್ ರೌಂಡ್ಸ್​-64ನಲ್ಲಿ ಭಾರತದ ಅನುಭವಿ ಟೇಬಲ್ ಟೆನಿಸ್ ಪಟು ಶರತ್ ಕಮಲ್ 2-4 (12-10, 9-11, 6-11, 7-11, 11-8, 10-12) ಸ್ಲೊವೇನಿಯಾದ ಡೆನಿ ಕೊಜುಲ್ ವಿರುದ್ಧ ಸೋತರು. 42ರ ಹರೆಯದ ಶರತ್ ಕಮಲ್, 5ನೇ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡಿದ್ದು, 53 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ತನಗಿಂತ 86 ಸ್ಥಾನಗಳಿಗಿಂತ ಕೆಳಗಿರುವ ಎದುರಾಳಿಯ ಎದುರು ಸೋತರು. ಶರತ್ 40ನೇ ಶ್ರೇಯಾಂಕ ಹೊಂದಿದ್ದರೆ, ಡೆನಿ ಕೊಜುಲ್ 126ನೇ ಶ್ರೇಯಾಂಕ ಹೊಂದಿದ್ದಾರೆ.

ಶ್ರೀಜಾ ಅಕುಲಾ ಶುಭಾರಂಭ

ಭಾರತದ ಟೇಬಲ್ ಟೆನಿಸ್ ತಾರೆ ಶ್ರೀಜಾ ಅಕುಲಾ ಅವರು ಜುಲೈ 28ರ ಭಾನುವಾರದಂದು ತಮ್ಮ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಪ್ರಾಬಲ್ಯ ಸಾಧಿಸಿದರು. ಸೌತ್ ಪ್ಯಾರಿಸ್ ಅರೆನಾದಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ವೀಡನ್‌ನ ಕ್ರಿಸ್ಟಿನಾ ಕಾಲ್‌ಬರ್ಗ್ ಅವರನ್ನು 64ರ ಸುತ್ತಿನಲ್ಲಿ 11-4, 11-9, 11-7, 11-8 ನೇರ ಗೇಮ್‌ಗಳಿಂದ ಸೋಲಿಸಿದ ಅಕುಲಾ ರೌಂಡ್-32ಕ್ಕೆ ಅರ್ಹತೆ ಪಡೆದುಕೊಂಡರು.

ನಿಖತ್ ಜರೀನ್ ಕ್ವಾರ್ಟರ್​​ ಫೈನಲ್​ಗೆ ಲಗ್ಗೆ

ಎರಡು ಬಾರಿಯ ವಿಶ್ವ ಚಾಂಪಿಯನ್‌ ನಿಖತ್‌ ಜರೀನ್‌, ಭಾನುವಾರ ನಡೆದ ಮಹಿಳೆಯರ 50 ಕೆಜಿ ಒಲಿಂಪಿಕ್ಸ್‌ ವಿಭಾಗದ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಜರ್ಮನಿಯ ಮ್ಯಾಕ್ಸಿ ಕ್ಯಾರಿನಾ ಕ್ಲೋಟ್ಜರ್‌ ವಿರುದ್ಧ 5-0 ಅಂತರದ ಪ್ರಯಾಸದ ಜಯ ಗಳಿಸಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಇಟ್ಟರು. 28ರ ಹರೆಯದ ಭಾರತೀಯ ಬಾಕ್ಸರ್ ಶ್ರೇಯಾಂಕ ರಹಿತ ಹಾಗೂ ಗೇಮ್ಸ್‌ಗೆ ಪದಾರ್ಪಣೆ ಮಾಡಿದ್ದು, ಉತ್ತರ ಪ್ಯಾರಿಸ್ ಅರೆನಾದಲ್ಲಿ ನಡೆದ 32ರ ಸುತ್ತಿನ ಸ್ಪರ್ಧೆಯಲ್ಲಿ ಸವಾಲಿನ ಆರಂಭವನ್ನು ಜಯಿಸಿದರು. ಮೊದಲ ಸುತ್ತಿನಲ್ಲಿ ಹಿಂದುಳಿದ ಜರೀನ್ ಪುಟಿದೆದ್ದು ಗೆದ್ದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.