ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭ; ಸಮಯ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತಿಳಿಯಬೇಕಾದ ಮಾಹಿತಿ
Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕೆ ಅಂತಿಮ ಸಿದ್ಧತೆ ನಡೆಯುತ್ತಿದೆ. ಔಪಚಾರಿಕ ಕಾರ್ಯಕ್ರಮದಲ್ಲಿ ಕ್ರೀಡಾ ಧ್ವಜವನ್ನು ಮುಂದಿನ ಒಲಿಂಪಿಕ್ಸ್ ಆಯೋಜಕರಿಗೆ ಹಸ್ತಾಂತರಿಸಲಾಗುತ್ತದೆ.
ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಕ್ರೀಡಾಕೂಟಕ್ಕೆ ಇಂದು ಅದ್ದೂರಿ ತೆರೆ ಬೀಳುತ್ತಿದೆ. ಬರೋಬ್ಬರಿ 16 ದಿನಗಳ ಕಾಲ ನಡೆದ ಜಾಗತಿಕ ಕ್ರೀಡಾ ಉತ್ಸವವು ಇಂದು ಅಂತ್ಯ ಕಾಣಲಿದೆ. ಜುಲೈ 26ರಂದು ಉದ್ಘಾಟನಾಗೊಂಡಿದ್ದ ಒಲಿಂಪಿಕ್ಸ್ ಕ್ರೀಡಾಕೂಟಾ ಸಮಾರೋಪ ಸಮಾರಂಭವು ಇಂದು ತಡರಾತ್ರಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ, ಇಂದು ತಡರಾತ್ರಿ, ಅಂದರೆ ಆಗಸ್ಟ್ 12ರ ಬೆಳಗ್ಗೆ 12.30ಕ್ಕೆ ಆರಂಭವಾಗಲಿದೆ. ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ನಡೆಯಲಿರುವ ಕ್ಲೋಸಿಂಗ್ ಸೆರೆಮನಿಯಲ್ಲಿ ಸುಮಾರು 80,000 ಪ್ರೇಕ್ಷಕರು ಭಾಗವಹಿಸಲಿದ್ದಾರೆ. ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಕ್ರೀಡಾಕೂಟಕ್ಕೆ ತೆರೆಬೀಳಲಿದೆ.
ಸಮಾರೋಪ ಸಮಾರಂಭದಲ್ಲಿ ಒಲಿಂಪಿಕ್ ದೀಪವನ್ನು ಔಪಚಾರಿಕವಾಗಿ ನಂದಿಸಲಾಗುತ್ತದೆ. ಇದೇ ವೇಳೆ ಒಲಿಂಪಿಕ್ ಧ್ವಜವನ್ನು 2028ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಸಂಘಟನಾ ಸಮಿತಿಗೆ ವರ್ಗಾಯಿಸಲಾಗುತ್ತದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಷ್ ಅವರೊಂದಿಗೆ ವೇದಿಕೆಗೆ ಪ್ರವೇಶಿಸಲಿದ್ದಾರೆ. ನಂತರ ಮ್ಯಾಕ್ರನ್ ಅವರು ಅಧಿಕೃತವಾಗಿ ಒಲಿಂಪಿಕ್ ಧ್ವಜವನ್ನು ಲಾಸ್ ಏಂಜಲೀಸ್ ಪ್ರತಿನಿಧಿಗೆ ಹಸ್ತಾಂತರಿಸಲಿದ್ದಾರೆ. 2028ರ ಒಲಿಂಪಿಕ್ಸ್ ಕ್ರೀಡಾಕೂಟವು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ
ಶ್ರೀಜೇಶ್ - ಮನು ಭಾಕರ್ ಧ್ವಜಧಾರಿಗಳು
ಸಮಾರೋಪ ಸಮಾರಂಭದಲ್ಲಿ ಭಾರತದ ಪರ ಪರೇಡ್ ಆಫ್ ನೇಷನ್‌ನಲ್ಲಿ ಹಾಕಿ ಆಟಗಾರ ಪಿಆರ್ ಶ್ರೀಜೇಶ್ ಮತ್ತು ಎರಡು ಕಂಚಿನ ಪದಕ ಗೆದ್ದ ಶೂಟರ್ ಮನು ಭಾಕರ್ ಧ್ವಜಧಾರಿಗಳಾಗಿ ಮುನ್ನಡೆಯಲಿದ್ದಾರೆ.
- ಭಾರತದ ಕಾಲಮಾನದ ಪ್ರಕಾರ ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಾರೋಪ ಸಮಾರಂಭವು ಯಾವಾಗ ಆರಂಭವಾಗುತ್ತದೆ?
ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಾರೋಪ ಸಮಾರಂಭವು ಸೋಮವಾರ ಮುಂಜಾನೆ 12:30ಕ್ಕೆ ಆರಂಭವಾಗಲಿದೆ (ಇಂದು ತಡರಾತ್ರಿ).
- ಪ್ಯಾರಿಸ್ ಒಲಿಂಪಿಕ್ಸ್ 2024 ಸಮಾರೋಪ ಸಮಾರಂಭ ಎಲ್ಲಿ ನಡೆಯಲಿದೆ?
ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಾರೋಪ ಸಮಾರಂಭವು ಪ್ಯಾರಿಸ್‌ನ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ನಡೆಯಲಿದೆ.
- ಭಾರತದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸುವುದು ಹೇಗೆ?
ಭಾರತದಲ್ಲಿ ಸ್ಪೋರ್ಟ್ಸ್ 18 ನೆಟ್ವರ್ಕ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಾರೋಪ ಸಮಾರಂಭದ ನೇರಪ್ರಸಾರ ಟಿವಿ ಮೂಲಕ ವೀಕ್ಷಿಸಬಹುದು. ಇದೇ ವೇಳೆ ಜಿಯೋ ಸಿನೆಮಾ ಮೊಬೈಲ್ ಅಪ್ಲಿಕೇಶನ್ ಮೂಲಕ ಲೈವ್ ಸ್ಟ್ರೀಮಿಂಗ್ ನೋಡಬಹುದು. ಇದರಲ್ಲಿ ಚಂದಾದಾರಿಕೆ ಪಡೆಯುವ ಅಗತ್ಯವಿಲ್ಲ.
ಸಮಾರೋಪ ಸಮಾರಂಭದಲ್ಲಿ ಯಾರು ಪ್ರದರ್ಶನ ನೀಡಲಿದ್ದಾರೆ?
ಸಮಾರೋಪ ಸಮಾರಂಭವು ಚಿಕ್ಕದಾಗಿ ನಡೆಯಲಿದೆ. ಫ್ರಾನ್ಸ್‌ನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ನಡೆಸಲಾಗುತ್ತದೆ. ಖ್ಯಾತ ಹಾಲಿವುಡ್ ನಟ ಟಾಮ್ ಕ್ರೂಸ್, ಸ್ಟೇಡ್ ಡಿ ಫ್ರಾನ್ಸ್‌ನ ಮೇಲ್ಚಾವಣಿಯಲ್ಲಿ ಸಾಹಸಮಯ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆಯಿದೆ ಎಂದು ಕೆಲವು ವರದಿಗಳು ಸೂಚಿಸಿವೆ. ಇದೇ ವೇಳೆ ಗಾಯಕಿ ಬಿಲ್ಲಿ ಐಲಿಷ್ ಕೂಡಾ ಪ್ರದರ್ಶನ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕ್ರೀಡಾಕೂಟದಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ. ಭಾರತವು ಒಟ್ಟು 6 ಪದಕಗಳೊಂದಿಗೆ ತವರಿಗೆ ಮರಳಲಿದೆ. ಇವರಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಸಾಧನೆ ಮಾಡಿದ್ದಾರೆ.
ಇನ್ನಷ್ಟು ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಗೆದ್ದಿದ್ದು 6, ಕಳೆದುಕೊಂಡಿದ್ದು 7 ಪದಕ; ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕೂದಲೆಳೆ ಅಂತರದಿಂದ 4ನೇ ಸ್ಥಾನ ಪಡೆದ ಭಾರತೀಯರು