ಪ್ಯಾರಿಸ್ ಒಲಿಂಪಿಕ್ಸ್: ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಲಕ್ಷ್ಯ ಸೇನ್, ಡಬಲ್ಸ್ನಲ್ಲಿ ಚಿರಾಗ್-ಸಾತ್ವಿಕ್ ಶುಭಾರಂಭ
Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ನ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ನಲ್ಲಿ ಹಾಗೂ ಟೇಬಲ್ ಟೆನಿಸ್ನ ಪುರುಷರ ಸಿಂಗಲ್ಸ್‌ನ ಪ್ರಾಥಮಿಕ ಸುತ್ತಿನಲ್ಲಿ ಭಾರತ ಶುಭಾರಂಭ ಕಂಡಿದೆ.

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics 2024) ಶೂಟಿಂಗ್ ವಿಭಾಗದಲ್ಲಿ ಮಿಶ್ರ ಫಲಿತಾಂಶ ಪಡೆದ ಭಾರತ, ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ನಲ್ಲಿ ಶುಭಾರಂಭ ಕಂಡಿದೆ. ಪುರುಷರ ಸಿಂಗಲ್ಸ್ನಲ್ಲಿ ಲಕ್ಷ್ಯ ಸೇನ್ ಮತ್ತು ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಗೆಲುವಿನ ಆರಂಭ ಪಡೆದಿದ್ದಾರೆ. ಹಾಗೆಯೇ ಟೇಬಲ್ ಟೆನಿಸ್ನ ಪುರುಷರ ಸಿಂಗಲ್ಸ್‌ನ ಪ್ರಾಥಮಿಕ ಸುತ್ತಿನಲ್ಲಿ ಹರ್ಮೀತ್ ದೇಸಾಯಿ ಜಯದ ನಗೆ ಬೀರಿದ್ದಾರೆ.
ಜುಲೈ 27ರಂದು ಶೂಟಿಂಗ್ನಲ್ಲಿ 10 ಮೀ. ಏರ್ ರೈಫಲ್ ಮಿಶ್ರ ತಂಡ ಹಾಗೂ ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಶೂಟರ್ಗಳು ನಿರಾಸೆ ಮೂಡಿಸಿದ್ದಾರೆ. ಆದರೆ, ಮಹಿಳೆಯರ 10 ಮೀ. ಏರ್ ಪಿಸ್ತೂಲ್ನಲ್ಲಿ ಮನುಭಾಕರ್ ಚಿನ್ನದ ಪದಕದ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ರೋಯಿಂಗ್ನಲ್ಲಿ ಪುರುಷರ ಸಿಂಗಲ್ ಸ್ಕಲ್ಸ್ ರೋಯಿಂಗ್ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಭಾರತದ ಬಲರಾಜ್ ಪನ್ವಾರ್ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದಾರೆ.
ಲಕ್ಷ್ಯ ಸೇನ್ಗೆ ಭರ್ಜರಿ ಗೆಲುವು
ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯ ಗುಂಪಿನ ಪಂದ್ಯದಲ್ಲಿ ಭಾರತದ ಶಟ್ಲರ್ ಲಕ್ಷ್ಯ ಸೇನ್, ಗ್ವಾಟೆಮಾಲಾದ ಕೆವಿನ್ ಕಾರ್ಡನ್ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿದರು. 22ರ ಹರೆಯದ ಸೇನ್ 42 ನಿಮಿಷಗಳ ಕಾಲ ನಡೆದ ತನ್ನ ಒಲಿಂಪಿಕ್ಸ್ ಚೊಚ್ಚಲ ಪಂದ್ಯದಲ್ಲಿ ಹಾಲಿ ಪ್ಯಾನ್ ಅಮೆರಿಕನ್ ಚಾಂಪಿಯನ್ ಕಾರ್ಡನ್ ವಿರುದ್ಧ 21-8, 22-20 ಅಂತರದಲ್ಲಿ ಗೆದ್ದರು. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಮತ್ತು 2021ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ವಿಜೇತ ಸೇನ್, ಜುಲೈ 29ರಂದು ತಮ್ಮ ಎರಡನೇ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂನ ಜೂಲಿಯನ್ ಕರಾಗ್ಗಿ ಅವರನ್ನು ಎದುರಿಸಲಿದ್ದಾರೆ.
ಸಾತ್ವಿಕ್-ಚಿರಾಗ್ ಸಂಘಟಿತ ಪ್ರದರ್ಶನ
ಪ್ಯಾರಿಸ್ ಒಲಿಂಪಿಕ್ಸ್‌ನ ಡಬಲ್ಸ್ನಲ್ಲಿ ತಮ್ಮ ಮೊದಲ ಗುಂಪು ಹಂತದ ಪಂದ್ಯದಲ್ಲಿ ಭಾರತದ ಡೈನಾಮಿಕ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಶುಭಾರಂಭ ಕಂಡಿದ್ದಾರೆ. 46 ನಿಮಿಷಗಳ ಕಾಲ ನಡೆದ ಮುಖಾಮುಖಿಯಲ್ಲಿ ಭಾರತದ ಜೋಡಿ 21-17, 21-14ರ ಎರಡು ನೇರ ಸೆಟ್‌ಗಳಿಂದ ಫ್ರಾನ್ಸ್ ಜೋಡಿ ಲುಕಾಸ್ ಕಾರ್ವಿ ಮತ್ತು ರೊನಾನ್ ಲ್ಯಾಬರ್ ಅವರನ್ನು ಸೋಲಿಸಿದರು. ಸಾತ್ವಿಕ್-ಚಿರಾಗ್ ಅವರು ತಮ್ಮ ಮುಂದಿನ ಪಂದ್ಯದಲ್ಲಿ ಜುಲೈ 29ರಂದು ಜರ್ಮನಿಯ ಮಾರ್ಕ್ ಲ್ಯಾಮ್ಸ್ಫಸ್ - ಮಾರ್ವಿನ್ ಸೀಡೆಲ್ ಅವರನ್ನು ಎದುರಿಸಲಿದ್ದಾರೆ.
ಟೇಬಲ್ ಟೆನಿಸ್ನಲ್ಲೂ ಭಾರತ ಶುಭಾರಂಭ
ಭಾರತದ ಅನುಭವಿ ಟೇಬಲ್ ಟೆನಿಸ್ ಆಟಗಾರ ಹರ್ಮೀತ್ ದೇಸಾಯಿ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜುಲೈ 27ರ ಶನಿವಾರ ತಮ್ಮ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಯಶಸ್ವಿಯಾಗಿ ಪದಾರ್ಪಣೆ ಮಾಡಿದರು. ಪುರುಷರ ಸಿಂಗಲ್ಸ್‌ನ ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿ, ಸೂರತ್‌ನ 31 ವರ್ಷದ ಆಟಗಾರ ಜೋರ್ಡಾನ್‌ನ ಝೈದ್ ಅಬೋ ಯಮನ್ ಅವರನ್ನು 4-0 ಅಂತರದಿಂದ (11-7, 11-9, 11-5, 11-5) ಸೋಲಿಸಿದರು. ಮಳೆಯ ಕಾರಣದಿಂದ ಟೆನಿಸ್ನ ಡಬಲ್ಸ್ ಪಂದ್ಯವು ನಡೆಯಲಿಲ್ಲ.