ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮಿಂಚಬೇಕಿದ್ದ ಅರ್ಷದ್ ನದೀಮ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದು ಹೇಗೆ ನೋಡಿ-paris olympics gold medalist arshad nadeem was to play in pakistan cricket team but now created history in olympics vbt ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮಿಂಚಬೇಕಿದ್ದ ಅರ್ಷದ್ ನದೀಮ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದು ಹೇಗೆ ನೋಡಿ

ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮಿಂಚಬೇಕಿದ್ದ ಅರ್ಷದ್ ನದೀಮ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದು ಹೇಗೆ ನೋಡಿ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್‌ಗಳ ದಾಖಲೆಯ ಥ್ರೋ ಎಸೆದು ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಅವರ ಈ ಗೆಲುವು ರಾತ್ರೋರಾತ್ರಿ ಸ್ಟಾರ್ ಆಗುವಂತೆ ಮಾಡಿದೆ. ಆದರೆ, ಈ ಹಿಂದೆ ನದೀಮ್ ಕ್ರಿಕೆಟ್ ಆಗಬೇಕೆಂಬ ಕನಸು ಕಂಡಿದ್ದರಂತೆ.

ಕ್ರಿಕೆಟ್ ತಂಡದಲ್ಲಿ ಮಿಂಚಬೇಕಿದ್ದ ಅರ್ಷದ್ ನದೀಮ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದು ಹೇಗೆ?
ಕ್ರಿಕೆಟ್ ತಂಡದಲ್ಲಿ ಮಿಂಚಬೇಕಿದ್ದ ಅರ್ಷದ್ ನದೀಮ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದು ಹೇಗೆ? (AP)

ಪಾಕಿಸ್ತಾನದ ಜಾವೆಲಿನ್‌ ಎಸೆತಗಾರ ಅರ್ಷದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಪ್ಯಾರಿಸ್‌ನ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಗುರುವಾರ ನಡೆದ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಅವರು 92.97 ಮೀಟರ್‌ಗಳ ದಾಖಲೆಯ ಥ್ರೋ ಮಾಡಿದರು. ಈ ಕಾರಣದಿಂದಾಗಿ ಭಾರತದ ನೀರಜ್ ಚೋಪ್ರಾ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಇದೇ ವೇಳೆ ನದೀಮ್‌ ಅವರ ಈ ಗೆಲುವು ಪಾಕಿಸ್ತಾನಕ್ಕೆ ಐತಿಹಾಸಿಕ ಕ್ಷಣವಾಗಿದೆ. ಏಕೆಂದರೆ ಇದು ಒಲಿಂಪಿಕ್ಸ್‌ನಲ್ಲಿ ಪಾಕ್‌ ದೇಶದ ಮೊದಲ ವೈಯಕ್ತಿಕ ಚಿನ್ನವಾಗಿದೆ. ಈ ಹಿಂದೆ ಪಾಕಿಸ್ತಾನ ಹಾಕಿಯಲ್ಲಿ ಮಾತ್ರ ಚಿನ್ನ ಗೆದ್ದಿತ್ತು.

ಕೆಟ್ಟ ಆರಂಭದ ಬಳಿಕ ಒಲಿಂಪಿಕ್ ದಾಖಲೆ

27ರ ಹರೆಯದ ಅರ್ಷದ್ ನದೀಮ್ ಫೈನಲ್‌ನ ಮೊದಲ ಎಸೆತದಲ್ಲಿ ರನ್‌ಅಪ್ ಸರಿಯಾಗಿ ನಡೆಯಲಿಲ್ಲ. ಇದರಿಂದಾಗಿ ಅವರ ಎಸೆತ ಫೌಲ್ ಆಯ್ತು. ಆದರೆ ಎರಡನೇ ಪ್ರಯತ್ನದಲ್ಲಿ ನದೀಮ್ ಒಲಿಂಪಿಕ್ ದಾಖಲೆ ಮುರಿದರು. ನದೀಮ್ ಎಸೆತ 92.97 ಮೀಟರ್ ದೂರ ಹೋಗಿ ಬಿತ್ತು. ಇಲ್ಲಿಂದ ಅವರ ಚಿನ್ನ ಬಹುತೇಕ ಖಚಿತವಾಯಿತು. ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ 90 ಮೀಟರ್‌ಗೂ ಹೆಚ್ಚು ದೂರದ ಎರಡು ಎಸೆತಗಳನ್ನು ಎಸೆದರು. ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಕೂಡ 89.45 ಮೀಟರ್ ಎಸೆದು ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.

ಅರ್ಷದ್ ನದೀಮ್ ಅವರ ಈ ಗೆಲುವು ರಾತ್ರೋರಾತ್ರಿ ಸ್ಟಾರ್ ಆಗುವಂತೆ ಮಾಡಿದೆ. ನದೀಮ್, 1997ರ ಜನವರಿ 2ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್ ಚನ್ನು ನಗರದ ಸಮೀಪವಿರುವ ಸಣ್ಣ ಪಟ್ಟಣದಲ್ಲಿ ಜನಿಸಿದವರು. ಇದು ಪಾಕಿಸ್ತಾನದ ಪ್ರಮುಖ ನಗರ ಲಾಹೋರ್‌ನಿಂದ ಸುಮಾರು 300 ಕಿಲೋಮೀಟರ್ ದೂರದಲ್ಲಿದೆ. ಒಟ್ಟು ಏಳು ಮಕ್ಕಳಲ್ಲಿ ಇವರು ಮೂರನೆಯವರು. ಅವರ ತಂದೆ ಮಹಮ್ಮದ್ ಅಶ್ರಫ್ ನಿವೃತ್ತ ಕಟ್ಟಡ ಕಾರ್ಮಿಕ.

ಅರ್ಷದ್ ನದೀಮ್ ಅವರ ಮೊದಲ ಪ್ರೀತಿ ಕ್ರಿಕೆಟ್ ಕಡೆಗೆ ಇತ್ತು. ತಾನು ದೊಡ್ಡ ಕ್ರಿಕೆಟರ್ ಆಗಬೇಕೆಂದು ಕನಸು ಕಂಡಿದ್ದರು. ಆದರೆ, ಅವರ ಕುಟುಂಬವು ಇದಕ್ಕೆ ವಿರೋಧ ವ್ಯಕ್ತಪಡಿಸಿತಂತೆ. ನಂತರ ಅವರು ಅಥ್ಲೆಟಿಕ್ಸ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದು ಸಾಕಷ್ಟು ಪ್ರಯತ್ನ ನಡೆಸಿದರು. ಇದೀಗ ಜಾವೆಲಿನ್ ಎಸೆತವನ್ನು ತಮ್ಮ ವೃತ್ತಿಯನ್ನಾಗಿ ಮಾಡಿದ್ದಾರೆ.

ಅರ್ಷದ್ ನದೀಮ್ ಅವರ ಸಾಧನೆಗಳು

  • ಚಿನ್ನದ ಪದಕ - 2024ರ ಒಲಿಂಪಿಕ್ ಗೇಮ್ಸ್
  • ಬೆಳ್ಳಿ ಪದಕ - 2023ರ ವಿಶ್ವ ಚಾಂಪಿಯನ್‌ಶಿಪ್
  • ಚಿನ್ನದ ಪದಕ - 2022ರ ಕಾಮನ್‌ವೆಲ್ತ್ ಗೇಮ್ಸ್

ಅರ್ಷದ್ ನದೀಮ್ ಅವರ ಪ್ರತಿಭೆಯನ್ನು ಹೊರತರುವಲ್ಲಿ ಅವರ ಕೋಚ್ ಫೈಸಲ್ ಅಹ್ಮದ್ ಪ್ರಮುಖ ಪಾತ್ರ ವಹಿಸಿದ್ದಾರೆ. ಫೈಸಲ್ ಅಹಮದ್ ಅವರು ಅರ್ಷದ್ ನದೀಮ್ ಅವರನ್ನು ಮೊದಲಿನಿಂದಲೂ ತರಬೇತಿ ನೀಡಿ ವಿಶ್ವದರ್ಜೆಯ ಕ್ರೀಡಾಪಟುವಾಗಿಸಿದ್ದಾರೆ. ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ನದೀಮ್ ಮೊದಲ ಬಾರಿಗೆ 90 ಮೀಟರ್‌ ದಾಟಿದ್ದರು. 90 ಮೀಟರ್ ಎಸೆದ ದಕ್ಷಿಣ ಏಷ್ಯಾದ ಏಕೈಕ ಎಸೆತಗಾರ ಕೂಡ ಅರ್ಷದ್ ಆಗಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.