ಖೇಲ್ ರತ್ನ ಪ್ರಶಸ್ತಿ; ದೇಶವ್ಯಾಪಿ ಚರ್ಚೆ ಬಳಿಕ ಅಂತಿಮ ಪಟ್ಟಿಗೆ ಮನು ಭಾಕರ್ ಹೆಸರು ಸೇರ್ಪಡೆ ಸಾಧ್ಯತೆ
ಕನ್ನಡ ಸುದ್ದಿ  /  ಕ್ರೀಡೆ  /  ಖೇಲ್ ರತ್ನ ಪ್ರಶಸ್ತಿ; ದೇಶವ್ಯಾಪಿ ಚರ್ಚೆ ಬಳಿಕ ಅಂತಿಮ ಪಟ್ಟಿಗೆ ಮನು ಭಾಕರ್ ಹೆಸರು ಸೇರ್ಪಡೆ ಸಾಧ್ಯತೆ

ಖೇಲ್ ರತ್ನ ಪ್ರಶಸ್ತಿ; ದೇಶವ್ಯಾಪಿ ಚರ್ಚೆ ಬಳಿಕ ಅಂತಿಮ ಪಟ್ಟಿಗೆ ಮನು ಭಾಕರ್ ಹೆಸರು ಸೇರ್ಪಡೆ ಸಾಧ್ಯತೆ

Manu Bhaker: ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಯ ಅಂತಿಮ ಪಟ್ಟಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಪದಕ ವಿಜೇತೆ ಮನು ಭಾಕರ್ ಅವರ ಹೆಸರನ್ನು ಸೇರಿಸುವ ಸಾಧ್ಯತೆಯಿದೆ. ಈ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಖೇಲ್ ರತ್ನ ಪ್ರಶಸ್ತಿ; ದೇಶವ್ಯಾಪಿ ಚರ್ಚೆ ಬಳಿಕ ಅಂತಿಮ ಪಟ್ಟಿಗೆ ಮನು ಭಾಕರ್ ಹೆಸರು ಸೇರ್ಪಡೆ
ಖೇಲ್ ರತ್ನ ಪ್ರಶಸ್ತಿ; ದೇಶವ್ಯಾಪಿ ಚರ್ಚೆ ಬಳಿಕ ಅಂತಿಮ ಪಟ್ಟಿಗೆ ಮನು ಭಾಕರ್ ಹೆಸರು ಸೇರ್ಪಡೆ (Manu Bhaker-X)

ಕ್ರೀಡಾ ಕ್ಷೇತ್ರದ ಸಾಧಕರಿಗೆ ಕೊಡಮಾಡುವ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಆದವರ ಪೈಕಿ, ಮನು ಭಾಕರ್ ಹೆಸರು ಇರಲಿಲ್ಲ. ಇದು ದೇಶವ್ಯಾಪಿ ಚರ್ಚೆಯ ವಿಷಯವಾದ ಬೆನ್ನಲ್ಲೇ, ಶೂಟರ್‌ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಸೇರಿಸುವ ಸಾಧ್ಯತೆ ಇದೆ. ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, ಕೆಲವೇ ದಿನಗಳಲ್ಲಿ ಈ ವಿಷಯದ ಕುರಿತಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ದೇಶದ ಉನ್ನತ ಕ್ರೀಡಾ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡವರ ಆರಂಭಿಕ ಪಟ್ಟಿಯಲ್ಲಿ ಭಾರತದ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಯನ್‌ ಪ್ರವೀಣ್ ಕುಮಾರ್ ಅವರನ್ನು ಮಾತ್ರ ಶಿಫಾರಸು ಮಾಡಲಾಗಿದೆ. ಆದರೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಎರಡು ಪದಕಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದ ನಂತರ ಭಾಕರ್ ಅವರ ಹೆಸರು ಇರಲಿಲ್ಲ.

ಮನು ಭಾಕರ್‌ ಹೆಸರು ಬಿಟ್ಟಿರುವುದಕ್ಕೆ, ಕ್ರೀಡಾ ಸಚಿವಾಲಯ ಮತ್ತು 12 ಸದಸ್ಯರ ಪ್ರಶಸ್ತಿ ಸಮಿತಿಯನ್ನು ವ್ಯಾಪಕವಾಗಿ ಟೀಕಿಸಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವಾಲಯದ ಅಧಿಕಾರಿಯೊಬ್ಬರು, “ಇದು ಅಂತಿಮ ಪಟ್ಟಿಯಲ್ಲ, ಇದರಲ್ಲಿ ಒಂದು ಪ್ರಕ್ರಿಯೆ ಇದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್, ಬಾಕ್ಸರ್ ವಿಜೇಂದರ್ ಸಿಂಗ್ ಮತ್ತು ಕ್ರಿಕೆಟ್ ದಂತಕತೆ ಅನಿಲ್ ಕುಂಬ್ಳೆ ಕೂಡಾ ಇದ್ದಾರೆ. ಈ ಸಮಿತಿಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಗಣಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಅಗತ್ಯವಿದ್ದರೆ, ಆ ಪಟ್ಟಿಯಲ್ಲಿ ಇಲ್ಲದ ಹೆಸರುಗಳನ್ನು ಚರ್ಚಿಸುವ ಅಧಿಕಾರವೂ ಇದೆ.

ಡಿಸೆಂಬರ್‌ 23ರ ಸೋಮವಾರ, ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಸುಜಾತಾ ಚತುರ್ವೇದಿ ಅವರಿಗೆ ಶೂಟಿಂಗ್ ಫೆಡರೇಶನ್ (NRAI) ಪತ್ರ ಬರೆದಿತ್ತು. ಮನು ಭಾಕರ್ ಅವರನ್ನು “ಅಸಾಧಾರಣ ಸಾಧನೆಯ ಆಧಾರದ ಮೇಲೆ” ಖೇಲ್ ರತ್ನಕ್ಕೆ ಪರಿಗಣಿಸಬೇಕೆಂದು ಒತ್ತಾಯಿಸಲಾಗಿತ್ತು.

ಅರ್ಜಿ ಸಲ್ಲಿಸದಿದ್ದರೆ ಸಮಿತಿ ಏನೂ ಮಾಡಲು ಆಗಲ್ಲ

ಹಿಂದೂಸ್ತಾನ್‌ ಟೈಮ್ಸ್‌ ಜೊತೆ ಮಾತನಾಡಿದ ಎನ್ಆರ್‌ಎಐ (National Rifle Association of India) ಅಧ್ಯಕ್ಷ ಕಾಳಿಕೇಶ್ ಸಿಂಗ್ ದೇವ್, "ಅವರು ಅರ್ಜಿ ಸಲ್ಲಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ನಮಗೆ ತಿಳಿದಿಲ್ಲ. ಆದರೆ, ಅವರು ಅರ್ಜಿ ಸಲ್ಲಿಸಿಯೂ ಸಮಿತಿ ಅದನ್ನು ಪರಿಗಣಿಸದಿರಲು ಯಾವುದೇ ಕಾರಣವಿದೆ ಎಂದು ನಾನು ಭಾವಿಸುವುದಿಲ್ಲ. ಅವರು ಅರ್ಜಿ ಸಲ್ಲಿಸದಿದ್ದರೆ ಸಮಿತಿಯಿಂದ ಏನೂ ಮಾಡಲು ಸಾಧ್ಯವಿಲ್ಲ. ಸಚಿವಾಲಯವು ನಮ್ಮ ದೃಷ್ಟಿಕೋನವನ್ನು ಅರ್ಥಮಾಡಿಕೊಂಡು, ಮನು ಭಾಕರ್‌ಗೆ ಅರ್ಹ ಪ್ರಶಸ್ತಿಯನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ.

ಮನು ಭಾಕರ್ ಪ್ರತಿಕ್ರಿಯೆ

ಈ ವಿಷಯದ ಬಗ್ಗೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ ಭಾಕರ್‌, “ಕ್ರೀಡಾಪಟುವಾಗಿ, ನನ್ನ ದೇಶಕ್ಕಾಗಿ ಆಡುವುದು ಮತ್ತು ಪ್ರದರ್ಶನ ನೀಡುವುದು ಮಾತ್ರ ನನ್ನ ಪಾತ್ರ ಎಂದು ನಾನು ಹೇಳಲು ಬಯಸುತ್ತೇನೆ. ಪ್ರಶಸ್ತಿಗಳು ನನ್ನನ್ನು ಪ್ರೇರೇಪಿಸುತ್ತದೆ ಹೌದು. ಆದರೆ ಅದೇ ನನ್ನ ಗುರಿಯಲ್ಲ. ನಾಮಪತ್ರ ಸಲ್ಲಿಸುವಾಗ ನನ್ನ ಕಡೆಯಿಂದ ಲೋಪವಾಗಿದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಅದನ್ನು ಸರಿಪಡಿಸಲಾಗುತ್ತಿದೆ. ಪ್ರಶಸ್ತಿ ಏನೇ ಇರಲಿ, ನನ್ನ ದೇಶಕ್ಕಾಗಿ ಹೆಚ್ಚಿನ ಪದಕಗಳನ್ನು ಗೆಲ್ಲಲು ಪ್ರೇರೇಪಣೆಯಾಗುತ್ತದೆ. ದಯವಿಟ್ಟು ಈ ವಿಷಯದ ಬಗ್ಗೆ ಯಾರೂ ಯಾವುದೇ ಊಹಾಪೋಹಗಳಿಗೆ ಅವಕಾಶ ನೀಡಬೇಡಿ. ಇದು ಎಲ್ಲರಿಗೂ ನನ್ನ ವಿನಂತಿ,” ಎಂದು ಭಾಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಗಳಲ್ಲಿ ಮನು ಕಂಚಿನ ಪದಕಕ್ಕೆ ಕೊರಳೊಡ್ಡಿದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.