ಮಳೆಯ ಸಿಂಚನದ ನಡುವೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅದ್ಧೂರಿ ಚಾಲನೆ; ಸೀನ್ ನದಿ ಮೇಲೆ ಕ್ರೀಡಾಪಟುಗಳ ಮೆರವಣಿಗೆ
ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್‌ಗೆ ಪ್ಯಾರಿಸ್‌ನಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ವರುಣನ ಆರ್ಭಟದ ನಡುವೆಯೂ ಫ್ರಾನ್ಸ್ ಯಶಸ್ವಿಯಾಗಿ ಉದ್ಘಾಟನಾ ಸಮಾರಂಭ ನಡೆಸಿದೆ. ಇದೇ ಮೊದಲ ಬಾರಿಗೆ ಮೈದಾನದ ಹೊರಗೆ, ಅಂದರೆ ಸೀನ್ ನದಿ ಮೇಲೆ ಉದ್ಘಾಟನಾ ಕಾರ್ಯಕ್ರಮ ನಡೆದಿದೆ.

ಜಗತ್ತಿನ ಅತಿ ದೊಡ್ಡ ಹಾಗೂ ಅದ್ಧೂರಿ ಕ್ರೀಡಾಜಾತ್ರೆ ಒಲಿಂಪಿಕ್ಸ್‌ಗೆ ವರ್ಣರಂಜಿತ ಚಾಲನೆ ಸಿಕ್ಕಿದೆ. ಫ್ರಾನ್ಸ್‌ನ ರಾಜಧಾನಿ, ಪ್ರೇಮನಗರಿ ಪ್ಯಾರಿಸ್ ನಗರದಲ್ಲಿ 33ನೇ ಆವೃತ್ತಿಯ ಒಲಿಂಪಿಕ್ಸ್ (Paris Olympics 2024) ಉದ್ಘಾಟನೆಗೊಂಡಿದೆ. ಜುಲೈ 26ರ ರಾತ್ರಿ 11 ಗಂಟೆಯಿಂದ ಚತುರ್ವಾರ್ಷಿಕ ಕ್ರೀಡಾಕೂಟ ಆರಂಭವಾಗಿದೆ. ದಾಖಲೆಯ ಮೂರನೇ ಬಾರಿಗೆ ನಗರದಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟ ನಡೆಯುತ್ತಿದ್ದು, ಕ್ರೀಡಾಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ ನೀರಿನ ಮೇಲೆ ಆರಂಭೋತ್ಸವ ನಡೆದಿದೆ. ಪ್ಯಾರಿಸ್ ನಗರದ ಜೀವನದಿ ಸೀನ್ ನದಿಯ (Seine River) ಮೇಲೆ ವಿವಿಧ ದೇಶ ಹಾಗೂ ಒಲಿಂಪಿಕ್ ಅಸೋಸಿಯೇಷನ್‌ಗಳನ್ನು ಪ್ರತಿನಿಧಿಸುವ 7000ಕ್ಕೂ ಹೆಚ್ಚು ಕ್ರೀಡಾಪಟುಗಳು ನದಿಯಲ್ಲಿ 85 ದೋಣಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿ ಟೂರ್ನಿಗೆ ಅಧಿಕೃತ ಪ್ರವೇಶ ಪಡೆದಿದ್ದಾರೆ.
ಫ್ರಾನ್ಸ್‌ನ ಫುಟ್‌ಬಾಲ್ ದಂತಕಥೆ ಜಿನೆಡಿನ್ ಜಿಡಾನೆ, ಒಲಿಂಪಿಕ್ ಉದ್ಘಾಟನಾ ಸಮಾರಂಭದ ಆರಂಭ ಸೂಚಿಸುವ ವಿಡಿಯೊದಲ್ಲಿ ಕಾಣಿಸಿಕೊಂಡರು. ಸೀನ್ ನದಿಯ ಎರಡೂ ದಂಡೆಗಳ ಮೇಲೆ ಸುಡುಮದ್ದು ಪ್ರದರ್ಶನ ಹಾಗೂ ಸಾಲುಗಟ್ಟಿ ನಿಂತಿರುವ ಪ್ರೇಕ್ಷಕರ ಚಪ್ಪಾಳೆಗಳ ನಡುವೆ, ಒಲಿಂಪಿಕ್ ಜ್ಯೋತಿಯನ್ನು ಸೀನ್ ನದಿಯ ಮೂಲಕ ತರಲಾಯ್ತು. ಸುಡುಮದ್ದುಗಳ ನಡುವೆ ಕ್ರೀಡಾಪಟುಗಳು ಸೀನ್ ನದಿಯಲ್ಲೊ ದೋಣಿಗಳ ಮೂಲಕ ಮೆರವಣಿಗೆಯಲ್ಲಿ ಆಗಮಿಸಲು ಆರಂಭಿಸಿದರು.
ಸಂಪ್ರದಾಯದ ಪ್ರಕಾರ, ಆಧುನಿಕ ಒಲಿಂಪಿಕ್ಸ್‌ನ ಆತಿಥೇಯ ದೇಶ ಗ್ರೀಸ್ ಮೊದಲನೆಯವರಾಗಿ ಮೆರವಣಿಗೆಯಲ್ಲಿ ಸಾಗಿ ಬಂದರು. ಆ ಬಳಿಕ ಒಂದೊಂದೇ ತಂಡಗಳು ಕ್ರೀಡಾಕೂಟಕ್ಕೆ ಅಧಿಕೃತವಾಗಿ ಕಾಲಿಟ್ಟವು. ಇದರ ನಡುವೆ ಸಿಂಗರ್ ಲೇಡಿ ಗಾಗಾ ಫ್ರೆಂಚ್ ಭಾಷೆಯಲ್ಲಿ ಹಾಡಿ ಗಮನ ಸೆಳೆದರು. ಬಾಂಗ್ಲಾದೇಶ, ಅಫ್ಘಾನಿಸ್ತಾನ, ಜರ್ಮನಿ, ದಕ್ಷಿಣ ಆಫ್ರಿಕಾ, ಅರ್ಜೆಂಟೀನಾ ಸೇರಿದಂತೆ :388 ಅಥ್ಲೀಟ್‌ಗಳ ಚೀನಾದ ದೊಡ್ಡ ತಂಡ ಕೂಡಾ ಮೆರವಣಿಗೆಯಲ್ಲಿ ಸಾಗಿತು. ನೃತ್ಯ ಪ್ರದರ್ಶನಗಳ ಮೂಲಕ 1789-1799ರವರೆಗೆ ನಡೆದ ಫ್ರೆಂಚ್ ಕ್ರಾಂತಿಯ ರೂಪಕ ಪ್ರದರ್ಶಿಸಲಾಯ್ತು. ಈ ನಡುವೆ ನಿಗೂಢ ವ್ಯಕ್ತಿಗಳು ಒಲಿಂಪಿಕ್ ಜ್ಯೋತಿಯನ್ನು ಹಿಡಿದುಕೊಂಡು ಸಾಗಿದರು.
ಪಿವಿ ಸಿಂಧು ಮತ್ತು ಶರತ್ ಕಮಲ್ ನೇತೃತ್ವದ ಭಾರತೀಯ ತಂಡ ಕೂಡಾ ದೋಣಿಯಲ್ಲಿ ಮೆರವಣಿಗೆಯಲ್ಲಿ ಸಾಗಿತು. ಬ್ಯಾಡ್ಮಿಂಟನ್ ತಾರೆ ಸಿಂಧು ಹಾಗೂ ದಿಗ್ಗಜ ಟೇಬಲ್ ಟೆನಿಸ್ ಆಟಗಾರ ಶರತ್ ಭಾರತದ ಧ್ವಜಧಾರಿಗಳಾಗಿದ್ದರು.
ಭಾರತದಿಂದ 117 ಆಟಗಾರರು ಒಲಿಂಪಿಕ್ಸ್ ಕೂಟದಲ್ಲಿ ಪಾಲ್ಗೊಂಡಿದ್ದಾರೆ. ಕಳೆದ ಬಾರಿಯ ಟೋಕಿಯೊ ಗೇಮ್ಸ್‌ನಲ್ಲಿ ಭಾರತದ 124 ಕ್ರೀಡಾಪಟುಗಳು ಭಾಗವಹಿಸಿದ್ದರು. ಅದಕ್ಕಿಂತ ಈ ಬಾರಿಯ ಸಂಖ್ಯೆ ಕಡಿಮೆ.
