ಗುಡಿಯ ಹಂಗಿರದ, ಕೀರ್ತನೆ ಬೇಕಿರದ, ನಡೆವ ದೈವವೇ ಅಮ್ಮ..; ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ 7 ತಿಂಗಳ ಗರ್ಭಿಣಿ
Paris Paralympics 2024: ಪ್ಯಾರಿಸ್ನಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್ನಲ್ಲಿ 7 ತಿಂಗಳ ಗರ್ಣಿಣಿಯೊಬ್ಬರು ಕಂಚಿನ ಪದಕ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಗುಡಿಯ ಹಂಗಿರದ, ಕೀರ್ತನೆ ಬೇಕಿರದ, ನಡೆವ ದೈವವೇ ಅಮ್ಮ... ಎಂಬ ಹಾಡು ಸುಮ್ಮನೆಯೇನಲ್ಲ. ತಾಯಿಗಿಂತ ಮಹಾನ್ ಸೈನಿಕ ನಮಗೆ ಭೂಮಿ ಮೇಲಿನ ಬೇರಾವ ಗಡಿಗಳಲ್ಲೂ ಸಿಗುವುದಿಲ್ಲ. ಪ್ಯಾರೀಸ್ನಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್ನಲ್ಲಿ ಈ ತಾಯಿ ಉತ್ಸಾಹವನ್ನು ನೋಡಿದ ನಂತರ ಮನಸ್ಸು ಇವಳಿಗೆ ನಮಸ್ಕರಿಸದೆ ಇರಲಾರದು. 7 ತಿಂಗಳ ಗರ್ಭಿಣಿ ಬ್ರಿಟನ್ನ ಬಿಲ್ಲುಗಾರ್ತಿ ಜೋಡೆ ಗ್ರಿನ್‌ಹ್ಯಾಮ್ ಕಂಚಿನ ಪದಕ ಗೆದ್ದು ಜಗದ ಕಣ್ಣರಳಿಸಿದ್ದಾರೆ.
ಸಾಮಾನ್ಯವಾಗಿ 7 ತಿಂಗಳ ಗರ್ಭಿಣಿಗೆ ಮಗು ಹೊಟ್ಟೆಯಲ್ಲಿ ಅತ್ತಿತ್ತ ಅಲುಗಾಡಿದಂತೆ, ಮೆಲ್ಲನೆ ಒದ್ದಂತೆ ಸಿಹಿ ಸಂಕಟಗಳ ಫೀಲ್ ಆಗುತ್ತದೆ. ಫೈನಲ್ ಪಂದ್ಯದಲ್ಲಿ ಬಿಲ್ಲು ಹಿಡಿದು ನಿಂತಾಗ ಮಗು ತನ್ನೊಳಗೆ ಹೀಗೆ ಗಲಾಟೆ ಮಾಡಿದರೆ ಕತೆಯೇನು ಎಂಬ ಪುಟ್ಟ ಆತಂಕದೊಂದಿಗೆ ಗ್ರಿನ್‌ಹ್ಯಾಮ್ ಗುರಿಯೆಡೆಗೆ ಬಾಣ ನೆಟ್ಟಿದ್ದರು. ಬಹುಶಃ ಆ ಕಂದಮ್ಮ ಅಮ್ಮನ ಏಕಾಗ್ರತೆಗೆ ಯಾವ ಭಂಗ ತಾರದೆ ತಣ್ಣಗೆ ನಿದ್ರಿಸಿತ್ತೇನೋ?
ಪದಕ ಗೆದ್ದಾದ ಮೇಲೆ ತಾನು ಖುಷಿಯಿಂದ ಜಿಗಿದಾಡುವುದು ಇದ್ದೇ ಇದೆಯಲ್ಲಾ ಎಂದು ಆ ಪುಟಾಣಿ ಭಾವಿಸಿತೇನೋ.. ಕಡೇಗೂ ಅಮ್ಮ ಪದಕ ಗೆದ್ದಳು. ಅಮ್ಮನೊಟ್ಟಿಗೆ ತಾನೂ ಪೋಡಿಯಂ ಏರಿ, ಮುಗುಳು ಬಿರಿಯಿತು ಮಗು.. ಇದೊಂದು ಅಪರೂಪದ ವಿಕ್ಟರಿ. ಬ್ರಿಟಿಷ್ ಬಿಲ್ಲುಗಾರ್ತಿ ಗ್ರಿನ್‌ಹ್ಯಾಮ್ ಗರ್ಭಿಣಿಯಾಗಿ ಪ್ಯಾರಾಲಿಂಪಿಕ್ಸ್ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆ ಮೂಲಕ ಪ್ಯಾರಾ ಒಲಿಂಪಿಕ್ಸ್ ಇತಿಹಾಸದಲ್ಲಿ ನೂತನ ಚರಿತ್ರೆ ಸೃಷ್ಟಿಸಿದ್ದಾರೆ.
ತಮ್ಮ ದೇಶದವರನ್ನೇ ಸೋಲಿಸಿದ್ರು
ಆಗಸ್ಟ್ 31ರ ಶನಿವಾರ ನಡೆದ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್ ಈವೆಂಟ್‌ನಲ್ಲಿ ಗ್ರಿನ್‌ಹ್ಯಾಮ್ ಕಂಚಿನ ಪದಕಕ್ಕೆ ಮುತ್ತಿಕ್ಕಿದರು. ಜೋಡೆ ಗ್ರಿನ್‌ಹ್ಯಾಮ್ ತಮ್ಮದೇ ದೇಶದ ಅಥ್ಲೀಟ್ ಫೋಬೆ ಪ್ಯಾಟರ್ಸನ್ ಪೈನ್ ಅವರನ್ನು ಸೋಲಿಸುವ ಮೂಲಕ ಈ ಪದಕ ಗೆದ್ದರು. ಇಬ್ಬರೂ ಕ್ರೀಡಾಪಟುಗಳು ಸ್ನೇಹಿತರು. ಪದಕ ಗೆದ್ದ ನಂತರ 31 ವರ್ಷದ ಗ್ರಿನ್‌ಹ್ಯಾಮ್ ಇತಿಹಾಸ ಸೃಷ್ಟಿಸಿ ಗರ್ಭಿಣಿಯರಿಗೆ ಸಂದೇಶ ನೀಡಿದ್ದಾರೆ.
ಗರ್ಭಿಣಿಯರಿಗೆ ಗ್ರಿನ್ ಹ್ಯಾಮ್ ಸಂದೇಶ
ಗೆಲುವಿನ ನಂತರ ಮಾತನಾಡಿದ ಗ್ರಿನ್‌ಹ್ಯಾಮ್, ನೀವು ಏನು ಮಾಡಲು ಬಯಸುತ್ತೀರೋ ಅದನ್ನು ಮಾಡಿ. ನೀವು ಸಂತೋಷದಿಂದ ಮತ್ತು ಆರೋಗ್ಯವಂತರಾಗಿದ್ದರೆ ಮಗು ಕೂಡ ಆರೋಗ್ಯವಾಗಿರುತ್ತದೆ. ಮಗು ಸುರಕ್ಷಿತವಾಗಿದ್ದರೆ ನೀವು ನಿಮ್ಮ ಕೆಲಸವನ್ನು ಮಾಡುತ್ತಲೇ ಇರಿ. ಇದರಲ್ಲಿ ಯಾವುದೇ ತೊಂದರೆ ಇಲ್ಲ. ನೀವು ಜಾಗಿಂಗ್ ಅಥವಾ ಜಿಮ್‌ಗೆ ಹೋಗಲು ಬಯಸುತ್ತೀರಾ ಎಂಬುದು ಮುಖ್ಯವಲ್ಲ. ಇದು ನಿಮ್ಮ ಮೇಲೆ ಅಥವಾ ಮಗುವಿನ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತೀರಿ ಎಂಬುದು ಮುಖ್ಯ ಎಂದು ಸಂದೇಶ ಕೊಟ್ಟಿದ್ದಾರೆ.
28 ವಾರಗಳ ಗರ್ಭಿಣಿ ಗ್ರಿನ್‌ಹ್ಯಾಮ್ ಸ್ಪರ್ಧೆಯ ಫೈನಲ್‌ನಲ್ಲಿ 142-141 ಅಂಕಗಳೊಂದಿಗೆ ಗೆದ್ದರು. ಎಡಗೈ ದೌರ್ಬಲ್ಯ ಹೊಂದಿರುವ 31 ವರ್ಷದ ಗ್ರಿನ್‌ಹ್ಯಾಮ್, ಅರ್ಧ ಬೆರಳುಗಳನ್ನು ಮಾತ್ರ ಹೊಂದಿದ್ದಾರೆ. ಹೀಗಾಗಿ ಅವರು ತಮ್ಮ ಬಲಗೈ ಬಳಸಿಯೇ ಬಾಣವನ್ನು ಕಂಚಿನ ಪದಕಕ್ಕೆ ಗುರಿಯಿಟ್ಟರು. ಸೊಂಟಕ್ಕೆ ತಾನು ಧರಿಸಿದ್ದ ಬಿಲ್ಲು ಇಡುವ ಬತ್ತಳಿಕೆ (ಬಾಣಗಳನ್ನು ಇಡುವ ಚೀಲ)ಯನ್ನು ಆಗಾಗ್ಗೆ ಬದಲಾಯಿಸುತ್ತಿದ್ದರು. ಅಲ್ಲದೆ, ಸೊಂಟದ ಕೆಳಗೆ ಈ ಚೀಲವನ್ನು ಕಟ್ಟಿಕೊಂಡಿದ್ದರು ಎಂಬುದು ವಿಶೇಷ.
ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮೊದಲು, ಜೋಡಿ ಅವರು ತನ್ನ ಮಗು ಒದ್ದಂತೆ ಭಾಸವಾದ ಕಾರಣ ಕಳೆದ ವಾರಾಂತ್ಯದಲ್ಲಿ ಪ್ಯಾರಿಸ್‌ನ ಆಸ್ಪತ್ರೆಯಲ್ಲೇ ಕಳೆದರು. ಮಗುವಿನ ಹೃದಯ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಇದೀಗ ಪದಕ ಗೆದ್ದ ಅಮ್ಮನಷ್ಟೇ ಮಗುವೂ ಸಂತೋಷವಾಗಿರುತ್ತದೆ.