ಕನ್ನಡ ಸುದ್ದಿ  /  Sports  /  Pkl 2024 Finals Puneri Paltan Vs Haryana Steelers Set To Fight For Maiden Pro Kabaddi League Title Kabaddi News Jra

ಚೊಚ್ಚಲ ಪಿಕೆಎಲ್‌ ಟ್ರೋಫಿ ಗೆಲ್ಲಲು ಪುಣೆರಿ ಪಲ್ಟನ್‌ vs ಹರಿಯಾಣ ಸ್ಟೀಲರ್ಸ್‌ ಸಜ್ಜು; ಹೀಗಿದೆ ತಂಡದ ಬಲಾಬಲ

ಪ್ರೊ ಕಬಡ್ಡಿ ಲೀಗ್‌ 2024ರ ಆವೃತ್ತಿಯ ಫೈನಲ್ ಪಂದ್ಯವು ಮಾರ್ಚ್ 1ರಂದು ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಪ್ರಶಸ್ತಿ ಸುತ್ತಿನಲ್ಲಿ ಪುಣೆರಿ ಪಲ್ಟನ್‌ ಮತ್ತು ಹರಿಯಾಣ ಸ್ಟೀಲರ್ಸ್‌ ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳಲ್ಲಿ ಯಾವ ತಂಡ ಗೆದ್ದರೂ, ಚೊಚ್ಚಲ ಟ್ರೋಫಿ ಗೆಲುವನ್ನು ಸಂಭ್ರಮಿಸಲಿದೆ.

ಚೊಚ್ಚಲ ಪಿಕೆಎಲ್‌ ಟ್ರೋಫಿ ಗೆಲ್ಲಲು ಪುಣೆರಿ ಪಲ್ಟನ್‌ vs ಹರಿಯಾಣ ಸ್ಟೀಲರ್ಸ್‌ ಸಜ್ಜು
ಚೊಚ್ಚಲ ಪಿಕೆಎಲ್‌ ಟ್ರೋಫಿ ಗೆಲ್ಲಲು ಪುಣೆರಿ ಪಲ್ಟನ್‌ vs ಹರಿಯಾಣ ಸ್ಟೀಲರ್ಸ್‌ ಸಜ್ಜು

ಪ್ರೊ ಕಬಡ್ಡಿ ಲೀಗ್ ಹತ್ತನೇ ಆವೃತ್ತಿಯು ಫೈನಲ್‌ ಹಂತಕ್ಕೆ ಬಂದಿದೆ. ಈ ಬಾರಿಯ ಪಿಕೆಎಲ್‌ ಆವೃತ್ತಿಯಲ್ಲಿ ಹೊಸ ತಂಡವೊಂದು ಚಾಂಪಿಯನ್‌ ಪಟ್ಟ ಅಲಂಕರಿಸಲಿದೆ. ಸೆಮಿಫೈನಲ್‌ ಪಂದ್ಯಗಳನ್ನಾಡಿದ ಬಳಿಕ ಎರಡು ತಂಡಗಳು ಟೂರ್ನಿಯಿಂದ ಹೊರಬಿದ್ದಿದ್ದು, ಅಂತಿಮ ಎರಡು ತಂಡಗಳ ನಡುವೆ ಟ್ರೋಫಿ ಸುತ್ತು ನಡೆಯುತ್ತಿದೆ. ಕಳೆದ ಋತುವಿನಲ್ಲಿ ಫೈನಲ್‌ ಪಂದ್ಯದಲ್ಲಿ ಸೋತು ಟ್ರೋಫಿಯಿಂದ ವಂಚಿತರಾಗಿದ್ದ ಪುಣೆರಿ ಪಲ್ಟನ್ ತಂಡವು ಫೆಬ್ರವರಿ 28ರ ಬುಧವಾರ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಟ್ನಾ ಪೈರೇಟ್ಸ್ ತಂಡವನ್ನು 37-21 ಅಂಕಗಳಿಂದ ಸೋಲಿಸಿ ಸತತ ಎರಡನೇ ವರ್ಷವೂ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಅತ್ತ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್‌ ತಂಡಕ್ಕೆ ಅಚ್ಚರಿಯ ಸೋಲುಣಿಸಿದ ಹರಿಯಾಣ ಸ್ಟೀಲರ್ಸ್‌, ಇದೇ ಮೊದಲ ಬಾರಿಗೆ ಪಿಕೆಎಲ್ ಫೈನಲ್‌ಗೆ ಮುನ್ನಡೆದಿದೆ. ಮೊದಲ ಬಾರಿಗೆ ಸೆಮಿಫೈನಲ್‌ ತಲುಪಿದ ತಂಡವು ಎರಡು ಬಾರಿಯ ಚಾಂಪಿಯನ್‌ಗಳನ್ನು 31-27 ಅಂಕಗಳ ಅಂತರದಿಂದ ಬಗ್ಗುಬಡಿದು ವಿಶ್ವಾದ ಹೆಚ್ಚಿಸಿಕೊಂಡಿದೆ.

ಇದೀಗ ಈ ಬಾರಿಯ ಪ್ರೊ ಕಬಡ್ಡಿಯ ಇಬ್ಬರು ಫೈನಲಿಸ್ಟ್‌ಗಳು ಅಂತಿಮವಾಗಿದ್ದು, ಪುಣೇರಿ ಪಲ್ಟನ್ ಮತ್ತು ಹರಿಯಾಣ ಸ್ಟೀಲರ್ಸ್ ಟ್ರೋಫಿ ಗೆಲ್ಲಲು ಅಂತಿಮ ಹಣಾಹಣಿ ನಡೆಸಲಿವೆ.

ಇದನ್ನೂ ಓದಿ | ಪ್ರೊ ಕಬಡ್ಡಿಯಲ್ಲಿ ಜೈಪುರ ವಿರುದ್ಧ ಗೆದ್ದು ಚೊಚ್ಚಲ ಫೈನಲ್‌ಗೇರಿದ ಹರಿಯಾಣ; ಪ್ರಶಸ್ತಿ ಸುತ್ತಿನಲ್ಲಿ ಪುಣೇರಿ ಎದುರು ಫೈಟ್ !

ಪ್ರೊ ಕಬಡ್ಡಿ ಲೀಗ್‌ 2024ರ ಆವೃತ್ತಿಯ ಫೈನಲ್ ಪಂದ್ಯವು ಮಾರ್ಚ್ 1ರ ಶುಕ್ರವಾರ ನಡೆಯಲಿದೆ. ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಶಸ್ತಿ ಸುತ್ತಿನ ಹಣಾಹಣಿ ನಡೆಯುತ್ತಿದ್ದು, ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಪುಣೆರಿ ಪಲ್ಟನ್ ಮತ್ತು ಹರಿಯಾಣ ಸ್ಟೀಲರ್ಸ್ ಮುಖಾಮುಖಿ ದಾಖಲೆ

ಪಿಕೆಎಲ್‌ ಇತಿಹಾಸದಲ್ಲಿ ಪುಣೆರಿ ಪಲ್ಟನ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳು ಈವರೆಗೆ ಒಟ್ಟು 14 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಪಲ್ಟಾನ್ ತಂಡವು 8 ಬಾರಿ ಗೆದ್ದರೆ, ಹರಿಯಾಣ ಸ್ಟೀಲರ್ಸ್ 5 ಬಾರಿ ಗೆಲುವಿನ ನಗೆ ಬೀರಿದೆ. ಒಂದು ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಉಭಯ ತಂಡಗಳ ನಡುವಿನ ಕೊನೆಯ ಮುಖಾಮುಖಿಯಲ್ಲಿ ಪುಣೆರಿ ಪಲ್ಟನ್ ತಂಡವು 51-36 ಅಂಕಗಳ ಭರ್ಜರಿ ಅಂತರದೊಂದಿಗೆ ಗೆದ್ದು ಬೀಗಿದೆ.

ಪ್ರೊ ಕಬಡ್ಡಿಯ ಇನ್ನಿತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಈ ಬಾರಿಯ ಲೀಗ್ ಹಂತದ 22 ಪಂದ್ಯಗಳ ನಂತರ, ಪುಣೆರಿ ಪಲ್ಟನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತು. 17 ಪಂದ್ಯಗಳಲ್ಲಿ ಗೆದ್ದ ತಂಡವು ಕೇವಲ 2 ಪಂದ್ಯಗಳಲ್ಲಿ ಮಾತ್ರ ಸೋತಿದೆ. ಮೂರು ಪಂದ್ಯಗಳಲಿ ಸಮಬಲ ಸಾಧಿಸಿದೆ. ಅತ್ತ ಹರಿಯಾಣ ಸ್ಟೀಲರ್ಸ್ ಲೀಗ್ ಹಂತದಲ್ಲಿ 13 ಗೆಲುವು ಮತ್ತು 8 ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಗಳಿಸಿತ್ತು.

ಉಭಯ ತಂಡಗಳ ಅಗ್ರ ಆಟಗಾರರು

ಪುಣೆರಿ ಪಲ್ಟನ್

ಸೀಸನ್ 10ರಲ್ಲಿ 21 ಪಂದ್ಯಗಳನ್ನು ಆಡಿರುವ ಪುಣೆರಿ ಪಲ್ಟನ್ ತಂಡದ ಮೋಹಿತ್ ಗೋಯತ್, 117 ರೇಡ್ ಪಾಯಿಂಟ್‌ಗಳೊಂದಿಗೆ ತಂಡದ ಪ್ರಮುಖ ಆಟಗಾರನಾಗಿದ್ದಾರೆ. 23 ಪಂದ್ಯಗಳಲ್ಲಿ 97 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ಮೊಹಮ್ಮದ್ರೇಜಾ ಚಿಯಾನೆಹ್ ಪುಣೇರಿ ಪಲ್ಟನ್ ತಂಡದ ಪ್ರಮುಖ ಡಿಫೆಂಡರ್‌ ಆಗಿದ್ದಾರೆ. ಒಟ್ಟು 164 ಪಾಯಿಂಟ್‌ಗಳನ್ನು ಕಲೆಹಾಕಿರುವ ಅಸ್ಲಾಮ್ ಇನಾಮ್ದಾರ್, ತಂಡದ ಟಾಪ್ ಆಲ್‌ರೌಂಡರ್ ಆಗಿದ್ದಾರೆ.

ಹರಿಯಾಣ ಸ್ಟೀಲರ್ಸ್‌

ವಿನಯ್ ಹರಿಯಾಣ ಸ್ಟೀಲರ್ಸ್ ತಂಡದ ಅಗ್ರ ರೈಡರ್ ಆಗಿದ್ದಾರೆ. 22 ಪಂದ್ಯಗಳಲ್ಲಿ 160 ರೈಡ್ ಪಾಯಿಂಟ್‌ ಕಲೆ ಹಾಕಿದ್ದಾರೆ. ರಾಹುಲ್ ಸೇಥ್‌ಪಾಲ್ ಹರಿಯಾಣ ಸ್ಟೀಲರ್ಸ್ ತಂಡದ ಪ್ರಮುಖ ಡಿಫೆಂಡರ್.‌ 22 ಪಂದ್ಯಗಳಲ್ಲಿ 71 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ.

ಲೈವ್‌ ಸ್ಟ್ರೀಮಿಂಗ್‌ ವಿವರ

ಪ್ರೊ ಕಬಡ್ಡಿ ಲೀಗ್‌ ಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಪಂದ್ಯವನ್ನು ಐದು ವಿಭಿನ್ನ ಭಾಷೆಗಳಲ್ಲಿ ನೋಡಬಹುದು. ಇಂಗ್ಲಿಷ್, ಹಿಂದಿ, ತಮಿಳು, ಕನ್ನಡ ಮತ್ತು ತೆಲುಗು ಭಾಷೆಯ ಕಾಮೆಂಟರಿಯೊಂದಿಗೆ ಪಂದ್ಯವನ್ನು ವೀಕ್ಷಿಸಬಹುದು. ಮೊಬೈಲ್‌ ಮೂಲಕ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಪಂದ್ಯವನ್ನು ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ. ಇಲ್ಲೂ ಐದು ಭಾಷೆಗಳಲ್ಲಿ ಪಂದ್ಯ ವೀಕ್ಷಿಸಬಹುದು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)