Pro Kabaddi League: 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆಗೆ ದಿನಾಂಕ ಪ್ರಕಟ
Pro Kabaddi League 2024: ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಆಗಸ್ಟ್ 15 ಮತ್ತು 16ರಂದು ಮುಂಬೈನಲ್ಲಿ ನಡೆಯಲಿದೆ.

ಯಶಸ್ವಿ 10 ಆವೃತ್ತಿಗಳನ್ನು ಪೂರೈಸಿರುವ ಪ್ರೊ ಕಬಡ್ಡಿ ಲೀಗ್ 11ನೇ ಸೀಸನ್‌ಗೆ ಸಜ್ಜಾಗುತ್ತಿದೆ. ವರ್ಷದ ಅಂತ್ಯಕ್ಕೆ ಲೀಗ್ ಪ್ರಾರಂಭವಾಗಲಿದ್ದು ಅದಕ್ಕೂ ಮುನ್ನ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಇದೀಗ ಹರಾಜು ನಡೆಯುವ ದಿನಾಂಕ ಘೋಷಣೆಯಾಗಿದ್ದು, ಆಗಸ್ಟ್ 15 ಮತ್ತು 16 ರಂದು ಮುಂಬೈನಲ್ಲಿ ನಿಗದಿಯಾಗಿದೆ. ಪಿಕೆಎಲ್ ನೂತನ ಸೀಸನ್ಗೂ ಮೊದಲು ಹೊಸ ಲೋಗೋವನ್ನು ಆಯೋಜಕ ಮಶಾಲ್ ಸ್ಪೋರ್ಟ್ಸ್ ಸಂಸ್ಥೆ ಬಹಿರಂಗಪಡಿಸಿದೆ.
2023ರಲ್ಲಿ ನಡೆದಿದ್ದ 10ನೇ ಆವೃತ್ತಿ ಹರಾಜು ಪ್ರಕ್ರಿಯೆಯಲ್ಲಿ ಪವನ್ ಸೆಹ್ರಾವತ್ ಅವರು 2.60 ಕೋಟಿ ಪಡೆಯುವ ಮೂಲಕ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಮೊಹಮ್ಮದ್ರೇಜಾ ಚಿಯಾನೆಹ್ 2.35 ಕೋಟಿ, ಮಣಿಂದರ್ ಸಿಂಗ್ 2.12 ಕೋಟಿ, ಫಜಲ್ ಅತ್ರಾಚಲಿ 1.60 ಕೋಟಿ, ಸಿದ್ಧಾರ್ಥ್ ದೇಸಾಯಿ 1 ಕೋಟಿ ಪಡೆದಿದ್ದರು. ಇವರು ಕಳೆದ ಬಾರಿಯ ಹರಾಜಿನಲ್ಲಿ ಟಾಪ್-5 ದುಬಾರಿ ಆಟಗಾರರಾಗಿದ್ದರು. ಆದರೆ ಈ ಬಾರಿ ಯಾರು ಹೆಚ್ಚು ಬಿಡ್ ಆಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಸೋಲಿಸಿ ಪುಣೇರಿ ಪಲ್ಟನ್ ಚೊಚ್ಚಲ ಪ್ರೊ ಕಬಡ್ಡಿ ಲೀಗ್ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ 28-25 ಅಂಕಗಳ ಅಂತರದಿಂದ ಪಲ್ಟನ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹೈದರಾಬಾದ್‌ನ ಗಚ್ಚಿಬೌಲಿಯ ಜಿಎಂಸಿ ಬಾಲಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಫೈನಲ್ ಪಂದ್ಯ ನಡೆದಿತ್ತು. 10 ಋತುಗಳಲ್ಲಿ ಮೊದಲ ಬಾರಿಗೆ ಪುಣೇರಿ ಪಲ್ಟಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಲೋಗೋ ಬದಲಾವಣೆ
ನೂತನ ಆವೃತ್ತಿಗೂ ಮುನ್ನ ಲೋಗೋವನ್ನು ಬದಲಾವಣೆ ಮಾಡಲಾಗಿದೆ. ಲೋಗೋವು ತ್ರಿವರ್ಣ ಧ್ವಜಕ್ಕೆ ಹೋಲುವ ಕೇಸರಿ ಮತ್ತು ಹಸಿರು ಬಣ್ಣಗಳನ್ನು ಹೊಂದಿದೆ. ಕಬಡ್ಡಿ ಆಟವು ದೇಶದ ಹೆಮ್ಮೆಯ ಕ್ರೀಡೆ ಎಂಬುದನ್ನು ಇದು ಸೂಚಿಸುತ್ತದೆ. ಪ್ರೊ ಕಬಡ್ಡಿ ಲೀಗ್‌ನ ಲೀಗ್ ಕಮಿಷನರ್ ಶ್ರೀ ಅನುಪಮ್ ಗೋಸ್ವಾಮಿ ಮಾತನಾಡಿ, ಪ್ರೊ ಕಬಡ್ಡಿ ಸೀಸನ್ 11ರ ಆಟಗಾರರ ಹರಾಜು ಸ್ವಾತಂತ್ರ್ಯ ದಿನದಂದು ನಡೆಯಲಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ ಎಂದು ಹೇಳಿದ್ದಾರೆ.
ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಪಿಕೆಎಲ್ ಸೀಸನ್ | ವಿಜೇತ ತಂಡ | ರನ್ನರ್ ಅಪ್ |
---|---|---|
1 | ಜೈಪುರ ಪಿಂಕ್ ಪ್ಯಾಂಥರ್ಸ್ | ಯು ಮುಂಬಾ |
2 | ಯು ಮುಂಬಾ | ಬೆಂಗಳೂರು ಬುಲ್ಸ್ |
3 | ಪಾಟ್ನಾ ಪೈರೇಟ್ಸ್ | ಯು ಮುಂಬಾ |
4 | ಪಾಟ್ನಾ ಪೈರೇಟ್ಸ್ | ಜೈಪುರ ಪಿಂಕ್ ಪ್ಯಾಂಥರ್ಸ್ |
5 | ಪಾಟ್ನಾ ಪೈರೇಟ್ಸ್ | ಗುಜರಾತ್ ಜೈಂಟ್ಸ್ |
6 | ಬೆಂಗಳೂರು ಬುಲ್ಸ್ | ಗುಜರಾತ್ ಜೈಂಟ್ಸ್ |
7 | ಬೆಂಗಾಲ್ ವಾರಿಯರ್ಸ್ | ದಬಾಂಗ್ ದೆಹಲಿ |
8 | ದಬಾಂಗ್ ದೆಹಲಿ | ಪಾಟ್ನಾ ಪೈರೇಟ್ಸ್ |
9 | ಜೈಪುರ ಪಿಂಕ್ ಪ್ಯಾಂಥರ್ಸ್ | ಪುಣೇರಿ ಪಲ್ಟನ್ |
10 | ಪುಣೇರಿ ಪಲ್ಟನ್ | ಹರಿಯಾಣ ಸ್ಟೀಲರ್ಸ್ |
ತಂಡಗಳು (ಪಿಕೆಎಲ್ ಸೀಸನ್-10 ಅಂಕಪಟ್ಟಿ) | ಪಂದ್ಯ | ಗೆಲುವು | ಸೋಲು | ಡ್ರಾ | ಅಂಕ |
---|---|---|---|---|---|
ಪುಣೇರಿ ಪಲ್ಟನ್ | 22 | 17 | 2 | 3 | 96 |
ಜೈಪುರ ಪಿಂಕ್ ಪ್ಯಾಂಥರ್ಸ್ | 22 | 16 | 3 | 3 | 92 |
ದಬಾಂಗ್ ಡೆಲ್ಲಿ | 22 | 13 | 6 | 3 | 79 |
ಗುಜರಾತ್ ಜೈಂಟ್ಸ್ | 22 | 13 | 9 | 0 | 70 |
ಹರಿಯಾಣ ಸ್ಟೀಲರ್ಸ್ | 22 | 13 | 8 | 1 | 70 |
ಪಾಟ್ನಾ ಪೈರೇಟ್ಸ್ | 22 | 11 | 8 | 3 | 69 |
ಬೆಂಗಾಲ್ ವಾರಿಯರ್ಸ್ | 22 | 9 | 11 | 2 | 55 |
ಬೆಂಗಳೂರು ಬುಲ್ಸ್ | 22 | 8 | 12 | 2 | 53 |
ತಮಿಳು ತಲೈವಾಸ್ | 22 | 9 | 13 | 0 | 51 |
ಯು ಮುಂಬಾ | 22 | 6 | 13 | 3 | 45 |
ಯುಪಿ ಯೋಧಾಸ್ | 22 | 4 | 17 | 1 | 31 |
ತೆಲುಗು ಟೈಟಾನ್ಸ್ | 22 | 2 | 19 | 1 | 21 |
ಒಲಿಂಪಿಕ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ