PKL 10: ಪುಣೇರಿ ಪಲ್ಟನ್ ಎದುರು ಮುಗ್ಗರಿಸಿದ ಗೂಳಿಗಳು; ಬೆಂಗಳೂರು ಬುಲ್ಸ್ ಪ್ಲೇ ಆಫ್ ಪ್ರವೇಶ ಕಷ್ಟ ಕಷ್ಟ
Pro Kabaddi League: ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ ಲೀಗ್ ಪ್ಲೇ ಆಫ್ ಪ್ರವೇಶಿಸುವುದು ಬಹುತೇಕ ಅಸಾಧ್ಯವಾಗಿದೆ. ಈಗಾಗಲೇ 19 ಪಂದ್ಯ ಆಡಿರುವ ಬುಲ್ಸ್ ಉಳಿದ 3 ಪಂದ್ಯಗಳಲ್ಲಿ ಭರ್ಜರಿ ಅಂತರದಲ್ಲಿ ಗೆಲುವು ಸಾಧಿಸಿದರೂ, ಮುಂದಿನ ಹಂತ ಪ್ರವೇಶ ಕಷ್ಟ. ಪುಣೇರಿ ಪಲ್ಟನ್ ವಿರುದ್ಧದ ಸೋಲು ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ಪ್ಲೇಆಫ್‌ಗೆ ಅರ್ಹತೆ ಪಡೆಯುವ ಲೆಕ್ಕಾಚಾರ ಹಾಕಿಕೊಂಡಿದ್ದ ಬೆಂಗಳೂರು ಬುಲ್ಸ್ (Bengaluru Bulls) ತಂಡಕ್ಕೆ ಪುಣೇರಿ ಪಲ್ಟನ್ (Puneri Paltan) ಅಡ್ಡಿಯಾಗಿದೆ. ಈಗಾಗಲೇ ಪ್ಲೇಆಫ್ ಹಂತಕ್ಕೆ ಅರ್ಹತೆ ಪಡೆದಿರುವ ಪಲ್ಟನ್, ಜನವರಿ 7ರ ಬುಧವಾರ ದೆಹಲಿಯ ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ (Pro Kabaddi League 2023) ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ 31-40 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ತನ್ನ ಅಮೋಘ ಫಾರ್ಮ್ ಮುಂದುವರೆಸಿದೆ.
ಆರಂಭದಿಂದಲೂ ನಿಧಾನಗತಿಯಲ್ಲಿ ಅಂಕ ಕಲೆಹಾಕುತ್ತಾ ಸಾಗಿದ ಬೆಂಗಳೂರು ಬುಲ್ಸ್, ಕೊನೆಯ ಹಂತದಲ್ಲಿ ಪಂದ್ಯದಲ್ಲಿ ಲಯ ಕಂಡುಕೊಂಡಿತು. ಬ್ಯಾಕ್ ಟು ಬ್ಯಾಕ್ ಅಂಕ ಕಲೆ ಹಾಕಿದ ಹೊರತಾಗಿಯೂ, ತಂಡ ಸೋಲೊಪ್ಪಿತು. ಪುಣೆ ನಾಯಕ ಅಸ್ಲಾಮ್ ಇನಾಮ್ದಾರ್ ಅವರ ಅತ್ಯುತ್ತಮ ರೈಡಿಂಗ್ ಪ್ರದರ್ಶನವು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಜೈಪುರಕ್ಕೆ 13ನೇ ಗೆಲುವು
ದಿನದ ಎರಡನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ 22-27 ಅಂಕಗಳಿಂದ ರೋಚಕ ಜಯ ಸಾಧಿಸಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಪಲ್ಟನ್ ತಂಡವು ಎರಡನೇ ಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ಸೋತ ಬುಲ್ಸ್ ಏಳನೇ ಸ್ಥಾನದಲ್ಲಿದೆ. ಸದ್ಯ ತಂಡದ ಪ್ಲೇ ಆಫ್ ಹಾದಿ ಬಹುತೇಕ ದುರ್ಗಮವಾಗಿದೆ.
ಪಂದ್ಯದ ಆರಂಭದಲ್ಲಿಯೇ ಭಾರಿ ಮುನ್ನಡೆ ಸಾಧಿಸಿದ ಪುಣೇರಿ ಪಲ್ಟನ್, ಮೊದಲಾರ್ಧದಲ್ಲಿ ಆಕ್ರಮಣಕಾರಿ ಆಟವಾಡಿತು. ಪ್ಲೇಆಫ್ ಸ್ಥಾನಕ್ಕಾಗಿ ಪೈಪೋಟಿ ನೀಡಿದ ಬುಲ್ಸ್‌ಗೆ ಅಂಕ ಕಲೆ ಹಾಕಲು ಪಲ್ಟನ್ ಅವಕಾಶ ನೀಡಲಿಲ್ಲ.
ಅಸ್ಲಾಮ್ ಇನಾಮ್ದಾರ್ 11 ರೈಡ್ ಪಾಯಿಂಟ್‌ಗಳೊಂದಿಗೆ ಸೂಪರ್ 10 ಪೂರ್ಣಗೊಳಿಸಿದರು. ಆಕಾಶ್ ಶಿಂಧೆ 8 ಅಂಕ ಕಲೆ ಹಾಕಿದರು. ಬುಲ್ಸ್ ಪರ ಸುಶೀಲ್ 9 ರೈಡ್ ಪಾಯಿಂಟ್ ಕಲೆ ಹಾಕಿದರೆ, ಪ್ರತೀಕ್ 6 ಅಂಕ ಪಡೆದರು.
ಇದನ್ನೂ ಓದಿ | ಕ್ರಿಸ್ಟಿಯಾನೊ ರೊನಾಲ್ಡೊ 39ನೇ ಹುಟ್ಟುಹಬ್ಬ; ಪೋರ್ಚುಗಲ್ ಫುಟ್ಬಾಲ್ ದೈತ್ಯನ 5 ವಿಶ್ವದಾಖಲೆಗಳು ಹೀಗಿವೆ
14ನೇ ನಿಮಿಷದಲ್ಲಿ ಬೆಂಗಳೂರು ಬುಲ್ಸ್ ಆಲ್ ಔಟ್ ಆಯ್ತು. ದ್ವಿತಿಯಾರ್ಧದಲ್ಲಿ ಭರತ್ ಕೆಲವು ನಿರ್ಣಾಯಕ ಅಂಕಗಳನ್ನು ಪಡೆದರು. ಆದರೆ ಪುಣೇರಿ ಪಲ್ಟನ್ ಮುನ್ನಡೆಯನ್ನು ಹಿಂದಿಕ್ಕಲು ಅದು ಸಾಕಾಗಲಿಲ್ಲ.ಈ ಸೋಲಿನಿಂದಾಗಿ ಬೆಂಗಳೂರು ಬುಲ್ಸ್ ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.
ಬೆಂಗಳೂರು ಬುಲ್ಸ್ ಮುಂದಿನ ಪಂದ್ಯಗಳು
- ಫೆಬ್ರವರಿ 11, ರಾತ್ರಿ 9 ಗಂಟೆ- ಬೆಂಗಳೂರು ಬುಲ್ಸ್ vs ಗುಜರಾತ್ ಜೈಂಟ್ಸ್
- ಫೆಬ್ರವರಿ 18, ರಾತ್ರಿ 9 ಗಂಟೆ- ಬೆಂಗಳೂರು ಬುಲ್ಸ್ vs ದಬಾಂಗ್ ಡೆಲ್ಲಿ
- ಫೆಬ್ರವರಿ 21, ರಾತ್ರಿ 9 ಗಂಟೆ- ಬೆಂಗಳೂರು ಬುಲ್ಸ್ vs ಹರಿಯಾಣ ಸ್ಟೀಲರ್ಸ್
ಇದನ್ನೂ ಓದಿ | ಬೆಂಗಳೂರು ಬುಲ್ಸ್ ಪ್ಲೇ ಆಫ್ ಪ್ರವೇಶಿಸಲು ಇನ್ನೂ ಇದೆ ಅವಕಾಶ; ಆದರೆ ಇಷ್ಟು ಪಂದ್ಯ ಗೆದ್ದರೆ ಮಾತ್ರ!
ಬೆಂಗಳೂರು ಬುಲ್ಸ್ ಟಾಪ್ 6ರೊಳಗೆ ತನ್ನ ಸ್ಥಾನ ಖಚಿತಪಡಿಸಿಕೊಳ್ಳುವುದು ಬಹುತೇಕ ಅಸಾಧ್ಯವಾಗಿದೆ. ಈಗಾಗಲೇ 19 ಪಂದ್ಯ ಆಡಿರುವ ಬುಲ್ಸ್ ಉಳಿದ 3 ಪಂದ್ಯಗಳಲ್ಲಿ ಭರ್ಜರಿ ಅಂತರದಲ್ಲಿ ಗೆಲುವು ಸಾಧಿಸಿದರೂ, ಮುಂದಿನ ಹಂತ ಪ್ರವೇಶ ಕಷ್ಟ. ಅತ್ತ ಪಾಟ್ನಾ ಪೈರೇಟ್ಸ್ 58 ಅಂಕ, ಹರಿಯಾಣ ಸ್ಟೀಲರ್ಸ್, ಗುಜರಾತ್ ತಲಾ 55 ಅಂಕ ಗಳಿಸಿ ಬೆಂಗಳೂರಿಗಿಂತ ಮುಂದಿವೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆೆದ್ದರೂ ಈ ತಂಡಗಳನ್ನು ಹಿಂದಿಕ್ಕುವುದು ಕಷ್ಟ. ಇದಕ್ಕಾಗಿ ಮುಂದಿನ ಪಂದ್ಯಗಳಲ್ಲಿ ಹರಿಯಾಣ, ಪಾಟ್ನಾ ಮತ್ತು ಗುಜರಾತ್ ತಮ್ಮ ಬಾಕಿ ಪಂದ್ಯಗಳಲ್ಲಿ ಸೋಲಬೇಕೆಂದು ಬುಲ್ಸ್ ಕಾಯಬೇಕಷ್ಟೆ.
(This copy first appeared in Hindustan Times Kannada website. To read more like this please logon to kannada.hindustantimes.com)