ಬೆಂಗಳೂರು ಬುಲ್ಸ್ ಪ್ಲೇ ಆಫ್ ಪ್ರವೇಶಿಸಲು ಇನ್ನೂ ಇದೆ ಅವಕಾಶ; ಆದರೆ ಇಷ್ಟು ಪಂದ್ಯ ಗೆದ್ದರೆ ಮಾತ್ರ!
Pro Kabaddi league Qualification scenarios : ಪ್ರೊ ಕಬಡ್ಡಿ ಲೀಗ್ನಲ್ಲಿ ಯಾವ ತಂಡ ಪ್ಲೇಆಫ್ಗೇರಲು ಎಷ್ಟು ಅವಕಾಶ ಹೊಂದಿದೆ? ಬೆಂಗಳೂರು ಬುಲ್ಸ್ ಪರಿಸ್ಥಿತಿ ಹೇಗಿದೆ ಎಂಬುದರ ವಿವರ ತಿಳಿಯೋಣ.
ಪ್ರೊ ಕಬಡ್ಡಿ ಸೀಸನ್ 10 ಲೀಗ್ ಹಂತ ಮುಕ್ತಾಯದ ಹಂತಕ್ಕೆ ಬರುತ್ತಿದೆ. ಪ್ಲೇ ಆಫ್ ಪ್ರವೇಶಿಸಲು ತಂಡಗಳ ನಡುವೆ ಪೈಪೋಟಿ ಹೆಚ್ಚಾಗುತ್ತಿದೆ. ಪಂದ್ಯದಿಂದ ಪಂದ್ಯಕ್ಕೆ ಅಂಕ ಪಟ್ಟಿಯಲ್ಲಿ ತಂಡಗಳ ಸ್ಥಾನ ಬದಲಾವಣೆ ಆಗುತ್ತಿದೆ. ಯಾವ ತಂಡ ಅಗ್ರ 6ರಲ್ಲಿ ಸ್ಥಾನ ಪಡೆಯುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಈ ಪೈಕಿ ಯಾವ ತಂಡ ಪ್ಲೇಆಫ್ಗೇರುವ ಅವಕಾಶ ಹೊಂದಿದೆ? ಬೆಂಗಳೂರು ಬುಲ್ಸ್ ಪರಿಸ್ಥಿತಿ ಹೇಗಿದೆ ಎಂಬುದರ ವಿವರ ತಿಳಿಯೋಣ.
ಪಿಕೆಎಲ್ ಅಂಕಪಟ್ಟಿ ಹೇಗಿದೆ? (ಫೆಬ್ರವರಿ 6ರ ಅಂತ್ಯಕ್ಕೆ)
ಪಿಕೆಎಲ್ 10ರಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ (72) ಮತ್ತು ಪುಣೇರಿ ಪಲ್ಟನ್ (71) ತಂಡಗಳು ಈಗಾಗಲೇ ಪ್ಲೇ ಆಫ್ ಪ್ರವೇಶಿಸಿವೆ. ಉಭಯ ತಂಡಗಳು ಸಹ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿವೆ. ಆದರೆ ಉಳಿದ ನಾಲ್ಕು ಸ್ಥಾನಗಳಿಗೆ 8 ತಂಡಗಳ ನಡುವೆ ಪೈಪೋಟಿ ನಡೆಯುದೆ. ದಬಾಂಗ್ ಡೆಲ್ಲಿ (68), ಪಾಟ್ನಾ ಪೈರೇಟ್ಸ್ (58), ಗುಜರಾತ್ ಜೈಂಟ್ಸ್ (55), ಹರಿಯಾಣ ಸ್ಟೀಲರ್ಸ್ (55) ಸೇಫ್ ಝೋನ್ನಲ್ಲಿವೆ. ಅಂದರೆ ಅಗ್ರ 6ರಲ್ಲಿ ಸ್ಥಾನ ಪಡೆದಿವೆ. ಹಾಗಂತ ಪ್ಲೇ ಆಫ್ ಪ್ರವೇಶಿಸುತ್ತವೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಮತ್ತೊಂದೆಡೆ ಅಗ್ರ 6ರಲ್ಲಿ ಸ್ಥಾನ ಪಡೆಯಲು ಇನ್ನೂ ನಾಲ್ಕು ತಂಡಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಹಳಿ ತಪ್ಪಿದ್ದ ಬೆಂಗಳೂರು ಬುಲ್ಸ್ ಸದ್ಯ ಹಂತ ಹಂತವಾಗಿ ಮೇಲೇರುತ್ತಿದೆ. ಅದರಂತೆ ತಮಿಳ್ ತಲೈವಾಸ್, ಬೆಂಗಾಲ್ ವಾರಿಯರ್ಸ್, ಯು ಮುಂಬಾ ತಂಡಗಳು ಸಹ ರೇಸ್ನಲ್ಲಿವೆ. ಪ್ಲೇ ಆಫ್ ಪ್ರವೇಶಿಸಲು ಈ ತಂಡಗಳ ಹಾದಿ ಅಷ್ಟು ಸುಲಭವಾಗಿಲ್ಲ. ಉಳಿದೆಲ್ಲಾ ಪಂದ್ಯಗಳಲ್ಲಿ ಗೆಲ್ಲುವುದು ಅನಿವಾರ್ಯ. ಭಾರಿ ಅಂತರದ ಜಯ ಸಾಧಿಸಿ ಅಂಕಗಳನ್ನು ಹೆಚ್ಚಿಸಿಕೊಳ್ಳಬೇಕಿದೆ.
ಬೆಂಗಳೂರು ಬುಲ್ಸ್ ಗೆದ್ದಿರುವುದೆಷ್ಟು?
ಕರ್ನಾಟಕದ ಬೆಂಗಳೂರು ಬುಲ್ಸ್ ತಂಡವು ಸತತ ಆಘಾತಗಳಿಂದ ಚೇತರಿಸಿಕೊಳ್ಳುತ್ತಿದೆ. ಪ್ರೊ ಕಬಡ್ಡಿ ಲೀಗ್ನಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದ ಬೆಂಗಳೂರು ಬುಲ್ಸ್, ಆರಂಭದಲ್ಲಿ ಸತತ ನಿರಾಸೆ ಮೂಡಿಸಿತು. ಆಗಾಗ ಮೈಕೊಡವಿ ನಿಂತರೂ ಗೂಳಿಗಳು ಮಂಕಾದವು. ವಿಕಾಶ್ ಖಂಡೋಲಾ, ಭರತ್, ಸುರ್ಜೀತ್ ಸಿಂಗ್, ಸೌರಭ್ ನಂದಲ್ ಅವರಂತಹ ಘಟಾನುಘಟಿ ಹೆಸರುಗಳೇ ಇದ್ದರೂ ತಂಡವು 7ನೇ ಸ್ಥಾನದಲ್ಲಿದೆ. ಆಡಿದ 18 ಪಂದ್ಯಗಳಲ್ಲಿ 7 ಗೆಲುವು, 9 ಸೋಲು, 2 ಡ್ರಾ ಸಾಧಿಸಿದೆ. 48 ಅಂಕ ಸಂಪಾದಿಸಿ 7ನೇ ಸ್ಥಾನದಲ್ಲಿದೆ.
ಗೂಳಿಗಳು ಏನು ಮಾಡಬೇಕು?
ಬೆಂಗಳೂರು ಬುಲ್ಸ್ ಟಾಪ್-6ರೊಳಗೆ ತನ್ನ ಸ್ಥಾನ ಖಚಿತಪಡಿಸಲು ಇನ್ನೂ ಉತ್ತಮ ಅವಕಾಶ ಇದೆ. ಈಗಾಗಲೇ 18 ಪಂದ್ಯ ಆಡಿರುವ ಬುಲ್ಸ್ ಉಳಿದ 4 ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸಬೇಕು. ಭಾರಿ ಅಂತರದ ಗೆಲುವು ಸಾಧಿಸುವುದು ಅನಿವಾರ್ಯ. ಪಾಟ್ನಾ ಪೈರೇಟ್ಸ್ 58 ಅಂಕ, ಹರಿಯಾಣ ಸ್ಟೀಲರ್ಸ್, ಗುಜರಾತ್ ತಲಾ 55 ಅಂಕ ಗಳಿಸಿವೆ. ಇವುಗಳಿಗಿಂತ ಬುಲ್ಸ್ 10 ಮತ್ತು 7 ಅಂಕ ಮಾತ್ರ ಕಡಿಮೆ ಇದೆ. ಹಾಗಾಗಿ ಉಳಿದ ಪಂದ್ಯಗಳಲ್ಲಿ ಗೆೆದ್ದರೆ ಮೂರು ತಂಡಗಳನ್ನು ಹಿಂದಿಕ್ಕಬಹುದು. ಆದರೆ ಹರಿಯಾಣ ಮತ್ತು ಪಾಟ್ನಾ, ಗುಜರಾತ್ ತಮ್ಮ ಬಾಕಿ ಪಂದ್ಯಗಳಲ್ಲಿ ಸೋಲಬೇಕು.
ಅಲ್ಲದೆ, ಉಳಿದ ತಂಡಗಳ ಫಲಿತಾಂಶ ಕೂಡ ಬುಲ್ಸ್ ಭವಿಷ್ಯವನ್ನು ನಿರ್ಧರಿಸುತ್ತವೆ. ಒಂದು ವೇಳೆ ಹರಿಯಾಣ ಮತ್ತು ಪಾಟ್ನಾ ಗೆಲುವು ಸಾಧಿಸಿದರೆ, ಬೆಂಗಳೂರು ಹಾದಿ ಮತ್ತಷ್ಟು ಕಠಿಣವಾಗಿರಲಿದೆ. ಹಾಗೆ ತಮಿಳ್ ತಲೈವಾಸ್ (45), ಬೆಂಗಾಲ್ ವಾರಿಯರ್ಸ್ (44), ಯು ಮುಂಬಾ (41) ತಂಡಗಳು ಕ್ರಮವಾಗಿ 8, 9, 10ನೇ ಸ್ಥಾನದಲ್ಲಿವೆ. ಆದರೆ ಬುಲ್ಸ್ಗಿಂತ ಕಡಿಮೆ ಅಂಕ ಹೊಂದಿವೆ. ಈ ತಂಡಗಳು ಸಹ ಉಳಿದೆಲ್ಲಾ ಪಂದ್ಯಗಳನ್ನೂ ದ್ವಿಗ್ವಿಜಯ ಸಾಧಿಸಬೇಕಿದೆ. ಆದರೆ ಇವುಗಳಿಗಿಂತ ಹೆಚ್ಚು ಅಂಕಗಳೊಂದಿಗೆ ಮುಂದಿರುವ ಕಾರಣ ಬುಲ್ಸ್ಗೆ ಪ್ಲೇ ಆಫ್ ಪ್ರವೇಶಿಸುವ ಉತ್ತಮ ಅವಕಾಶ ಹೊಂದಿದೆ.
ಯುಪಿ ಯೋಧಾಸ್ (29), ತೆಲುಗು ಟೈಟಾನ್ಸ್ (16) ತಂಡಗಳು 11 ಮತ್ತು 12ನೇ ಸ್ಥಾನದಲ್ಲಿದ್ದು, ಪ್ಲೇಆಫ್ರೇಸ್ನಿಂದ ಹೊರಬಿದ್ದಿವೆ. ಉಳಿದ ನಾಲ್ಕು ಪಂದ್ಯಗಳಲ್ಲಿ ಗೆದ್ದರೂ ಈ ತಂಡಗಳು ಅಗ್ರ-6ರಲ್ಲಿ ಸ್ಥಾನ ಪಡೆಯಲು ಅಸಾಧ್ಯ. ಫೆಬ್ರವರಿ 21ಕ್ಕೆ ಲೀಗ್ ಪಂದ್ಯಗಳು ಮುಗಿಯಲಿವೆ. ಫೆಬ್ರವರಿ 26ರಿಂದ ಪ್ಲೇ ಆಫ್ ಪಂದ್ಯಗಳು ಆರಂಭಗೊಳ್ಳಲಿವೆ. ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತೊಮ್ಮೆ ಟ್ರೋಫಿಗೆ ಮುತ್ತಿಕ್ಕುವ ನಿರೀಕ್ಷೆಯಲ್ಲಿದೆ.
ಬೆಂಗಳೂರು ಬುಲ್ಸ್ ಉಳಿದ ಪಂದ್ಯಗಳು
ಫೆಬ್ರವರಿ 07, ರಾತ್ರಿ 8 ಗಂಟೆ- ಬೆಂಗಳೂರು ಬುಲ್ಸ್ vs ಪುಣೇರಿ ಪಲ್ಟನ್ (ಇಂದು)
ಫೆಬ್ರವರಿ 11, ರಾತ್ರಿ 9 ಗಂಟೆ- ಬೆಂಗಳೂರು ಬುಲ್ಸ್ vs ಗುಜರಾತ್ ಜೈಂಟ್ಸ್
ಫೆಬ್ರವರಿ 18, ರಾತ್ರಿ 9 ಗಂಟೆ- ಬೆಂಗಳೂರು ಬುಲ್ಸ್ vs ದಬಾಂಗ್ ಡೆಲ್ಲಿ
ಫೆಬ್ರವರಿ 21, ರಾತ್ರಿ 9 ಗಂಟೆ- ಬೆಂಗಳೂರು ಬುಲ್ಸ್ vs ಹರಿಯಾಣ ಸ್ಟೀಲರ್ಸ್
ತಂಡಗಳು (ಫೆ.6ರ ಅಂತ್ಯಕ್ಕೆ ಅಂಕಪಟ್ಟಿ) | ಪಂದ್ಯ | ಗೆಲುವು | ಸೋಲು | ಡ್ರಾ | ಅಂಕ |
---|---|---|---|---|---|
ಜೈಪುರ ಪಿಂಕ್ ಪ್ಯಾಂಥರ್ಸ್ | 18 | 12 | 3 | 3 | 72 |
ಪುಣೇರಿ ಪಲ್ಟನ್ | 17 | 12 | 2 | 3 | 71 |
ದಬಾಂಗ್ ದೆಹಲಿ | 19 | 11 | 5 | 3 | 68 |
ಪಾಟ್ನಾ ಪೈರೇಟ್ಸ್ | 19 | 9 | 7 | 3 | 58 |
ಗುಜರಾತ್ ಜೈಂಟ್ಸ್ | 18 | 10 | 8 | 0 | 55 |
ಹರಿಯಾಣ ಸ್ಟೀಲರ್ಸ್ | 17 | 10 | 6 | 1 | 55 |
ಬೆಂಗಳೂರು ಬುಲ್ಸ್ | 18 | 7 | 9 | 2 | 48 |
ತಮಿಳು ತಲೈವಾಸ್ | 19 | 8 | 11 | 0 | 45 |
ಬೆಂಗಾಲ್ ವಾರಿಯರ್ಸ್ | 17 | 7 | 8 | 2 | 44 |
ಯು ಮುಂಬಾ | 18 | 6 | 10 | 2 | 41 |
ಯುಪಿ ಯೋಧಾಸ್ | 18 | 4 | 13 | 1 | 29 |
ತೆಲುಗು ಟೈಟಾನ್ಸ್ | 18 | 2 | 16 | 0 | 16 |