ಟಾಟಾ ಸ್ಟೀಲ್ ಚೆಸ್ ಮಾಸ್ಟರ್ಸ್: ವಿಶ್ವ ಚಾಂಪಿಯನ್​ ಡಿ ಗುಕೇಶ್​ಗೆ ಸೋಲುಣಿಸಿ ಪ್ರಶಸ್ತಿ ಗೆದ್ದ ಪ್ರಜ್ಞಾನಂದ
ಕನ್ನಡ ಸುದ್ದಿ  /  ಕ್ರೀಡೆ  /  ಟಾಟಾ ಸ್ಟೀಲ್ ಚೆಸ್ ಮಾಸ್ಟರ್ಸ್: ವಿಶ್ವ ಚಾಂಪಿಯನ್​ ಡಿ ಗುಕೇಶ್​ಗೆ ಸೋಲುಣಿಸಿ ಪ್ರಶಸ್ತಿ ಗೆದ್ದ ಪ್ರಜ್ಞಾನಂದ

ಟಾಟಾ ಸ್ಟೀಲ್ ಚೆಸ್ ಮಾಸ್ಟರ್ಸ್: ವಿಶ್ವ ಚಾಂಪಿಯನ್​ ಡಿ ಗುಕೇಶ್​ಗೆ ಸೋಲುಣಿಸಿ ಪ್ರಶಸ್ತಿ ಗೆದ್ದ ಪ್ರಜ್ಞಾನಂದ

R Pragnanandhaa: ವಿಜ್ಕ್ ಆನ್ ಜೀನಲ್ಲಿ ನಡೆದ ಟಾಟಾ ಸ್ಟೀಲ್ ಚೆಸ್ ಮಾಸ್ಟರ್ಸ್​​ನಲ್ಲಿ ವಿಶ್ವ ಚಾಂಪಿಯನ್​ ಡಿ ಗುಕೇಶ್ ವಿರುದ್ಧ ಗೆದ್ದ ಆರ್ ಪ್ರಜ್ಞಾನಂದ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ವಿಶ್ವ ಚಾಂಪಿಯನ್​ ಡಿ ಗುಕೇಶ್​ಗೆ ಸೋಲುಣಿಸಿ ಟಾಟಾ ಚೆಸ್ ಮಾಸ್ಟರ್ಸ್ ಪ್ರಶಸ್ತಿ ಗೆದ್ದ ಪ್ರಜ್ಞಾನಂದ
ವಿಶ್ವ ಚಾಂಪಿಯನ್​ ಡಿ ಗುಕೇಶ್​ಗೆ ಸೋಲುಣಿಸಿ ಟಾಟಾ ಚೆಸ್ ಮಾಸ್ಟರ್ಸ್ ಪ್ರಶಸ್ತಿ ಗೆದ್ದ ಪ್ರಜ್ಞಾನಂದ (@PragueChess X)

ನೆದರ್ಲೆಂಡ್ಸ್​ನ ವಿಜ್ಕ್​ ಆನ್​ಜೀನಲ್ಲಿ ಜರುಗಿದ ಫೈನಲ್ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್​ ಪ್ರಜ್ಞಾನಂದ (R Pragnanandhaa) ಅವರು 87 ನೇ ಆವೃತ್ತಿಯ ಟಾಟಾ ಸ್ಟೀಲ್ ಮಾಸ್ಟರ್ಸ್ 2025 (Tata Steel Masters 2025) ಪ್ರಶಸ್ತಿ ಗೆದ್ದು ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತದ ವಿಶ್ವ ಚಾಂಪಿಯನ್​ ಡಿ ಗುಕೇಶ್ (D Gukesh) ಅವರನ್ನು ಮಣಿಸಿದ ಪ್ರಜ್ಞಾನಂದ ಪ್ರತಿಷ್ಠಿತ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಉತ್ತಮ ಪ್ರದರ್ಶನದ ನಡುವೆಯೂ ಗುಕೇಶ್ ರನ್ನರ್​ಅಪ್ ಆದರು.

13ನೇ ಸುತ್ತಿನಲ್ಲಿ ಹಾಲೆಂಡ್​ನ ಜೋರ್ಡನ್​​ ವ್ಯಾನ್ ಫಾರೆಸ್ಟ್ ವಿರುದ್ಧ ಗುಕೇಶ್ ಡ್ರಾ ಸಾಧಿಸಿದ್ದರೆ, ಸರ್ಬಿಯಾದ ಅಲೆಕ್ಸಿ ಸರನಾ ವಿರುದ್ಧ ಪ್ರಜ್ಞಾನಂದ ಗೆಲುವು ಸಾಧಿಸಿದ್ದರು. 13ನೇ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಪ್ರಜ್ಞಾನಂದ ಸೋತರೆ, ತಮ್ಮ ದೇಶವಾಸಿ ಅರ್ಜುನ್ ಎರಿಗೈಸಿ ವಿರುದ್ಧ ಗುಕೇಶ್ ಪರಾಭವಗೊಂಡರು. ಇಬ್ಬರೂ ಆಟಗಾರರು ತಮ್ಮ 13ನೇ ಸುತ್ತಿನ ಪಂದ್ಯಗಳನ್ನು ಕಳೆದುಕೊಂಡ ನಂತರ 8.5 ಅಂಕಗಳೊಂದಿಗೆ ಜಂಟಿ ಅಗ್ರಸ್ಥಾನ ಪಡೆದಿದ್ದರು.

ಪ್ರಶಸ್ತಿ ಸುತ್ತಿಗೂ ಮುನ್ನ ಪ್ರಜ್ಞಾನಂದ ಟ್ರೋಫಿ ಗೆಲ್ಲಲು ಡ್ರಾ ಅಗತ್ಯ ಇತ್ತು. ಆದರೆ 19 ವರ್ಷದ ಯುವಕ, ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಸೋತರು. ಮತ್ತೊಂದೆಡೆ ಗುಕೇಶ್ ಸಹ ದೇಶವಾಸಿ ಅರ್ಜುನ್ ಎರಿಗೈಸಿ ವಿರುದ್ಧ ಪರಾಭವಗೊಂಡರು. ತದನಂತರ 8.5 ಅಂಕ ಪಡೆದು ಜಂಟಿ ಅಗ್ರಸ್ಥಾನ ಪಡೆಸಿದ್ದ ಕಾರಣ ವಿಜೇತರನ್ನು ಘೋಷಿಸಲು ಟೈ ಬ್ರೇಕರ್​ ಮೊರೆ ಹೋಗಬೇಕಾಯಿತು. ಆರಂಭಿಕ ಗೇಮ್​ನಲ್ಲಿ ಗುಕೇಶ್, ಗೆಲುವಿನ ನಗೆ ಬೀರಿದರೆ, ನಂತರ ಪುಟಿದೆದ್ದ ಪ್ರಜ್ಞಾನಂದ ಸತತ 2 ಪಂದ್ಯ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದರು.

ಗೆಲುವನ್ನು ನಿರೀಕ್ಷಿಸಿರಲಿಲ್ಲ ಎಂದ ಪ್ರಜ್ಞಾನಂದ

ತಮ್ಮ ಗೆಲುವಿನ ನಂತರ ಮಾತನಾಡಿದ ಪ್ರಜ್ಞಾನಂದ ಅವರು, 'ನಾನು ಇಲ್ಲಿಗೆ ಬಂದಾಗ, ನಾನು ಟೂರ್ನಿ ಗೆಲ್ಲಲು ಬಯಸಿದ್ದೆ. ಆದರೆ ಸಾಧ್ಯ ಆಗಿರಲಿಲ್ಲ. ನಿನ್ನೆಯವರೆಗೆ ನಾನು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ನಾನು ಗೆಲ್ಲುವ ನಿರೀಕ್ಷೆ ಇರಲಿಲ್ಲ. ನಿಜವಾಗಿಯೂ ಗೆಲುವಿನ ಸಂತಸವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ. ಗುಕೇಶ್ ಸೋಲನ್ನು ನಾನು ನಿರೀಕ್ಷಿಸಿರಲಿಲ್ಲ. ಆತ ನನ್ನನ್ನು ಸೋಲಿಸುತ್ತಾನೆ ಎಂದೇ ಭಾವಿಸಿದ್ದೆ ಎಂದು ಹೇಳಿದ್ದಾರೆ.

2024ರಲ್ಲಿ ಗುಕೇಶ್ ಚಾಂಪಿಯನ್

ಭಾರತ ಚೆಸ್ ಚತುರರಾದ ಪ್ರಜ್ಞಾನಂದ ಮತ್ತು ಗುಕೇಶ್ ಭಾರತದ ಭವಿಷ್ಯದ ತಾರೆಗಳಾಗಿದ್ದಾರೆ. ಕಿರಿಯ ವಯಸ್ಸಿನಲ್ಲೇ ಅವರ ಅಮೋಘ ಸಾಧನೆಗಳು ಎಂತಹವರನ್ನೂ ಅಚ್ಚರಿಗೊಳಿಸುತ್ತವೆ. ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿದ್ದ 18 ವರ್ಷದ ಗ್ರಾಂಡ್​ ಮಾಸ್ಟರ್​ ಗುಕೇಶ್​ ಕಳೆದ ವರ್ಷ ಡಿಸೆಂಬರ್​​ನಲ್ಲಿ ವಿಶ್ವ ಚೆಸ್​ ಚಾಂಪಿಯನ್ ಆಗಿದ್ದರು. ಈ ಸಾಧನೆ ಮಾಡಿದ​ ವಿಶ್ವದ ಅತಿ ಕಿರಿಯ ಆಟಗಾರ ಮತ್ತು ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

2023ರಲ್ಲಿ ನಡೆದ ಚೆಸ್ ವಿಶ್ವಕಪ್​ ಫೈನಲ್​ನಲ್ಲಿ ಭಾರತದ ಚೆಸ್ ಚತುರ ಪ್ರಜ್ಞಾನಂದ ಸೋಲು ಅನುಭವಿಸಿ ನಿರಾಸೆಗೊಳಗಾಗಿದ್ದರು. ನಾರ್ವೆಯ ಮ್ಯಾಗ್ನಸ್ ಕಾರ್ಲ್​ಸೆನ್ ವಿರುದ್ಧದ ಟೈ ಬ್ರೇಕ್​ ಸುತ್ತಿನಲ್ಲಿ 1.5-0.5 ಅಂತರದಲ್ಲಿ ಸೋಲು ಕಂಡು ರನ್ನರ್​ಅಪ್ ಆಗಿದ್ದರು. ಇದೀಗ ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಗೆದ್ದು ಗಮನ ಸೆಳೆದಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.