Droupadi Murmu: ಸೈನಾ ನೆಹ್ವಾಲ್ ಅವರೊಂದಿಗೆ ಬ್ಯಾಡ್ಮಿಂಟನ್ ಆಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ವಿಡಿಯೋ ವೈರಲ್
Droupadi Murmu - Saina Nehwal: ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಸೈನಾ ನೆಹ್ವಾಲ್ ಅವರು ರಾಷ್ಟ್ರಪತಿ ಭವನದಲ್ಲಿ ಬ್ಯಾಡ್ಮಿಂಟನ್ ಆಡುವ ಮೂಲಕ ಗಮನ ಸೆಳೆದಿದ್ದಾರೆ.

ಅನುಭವಿ ಷಟ್ಲರ್ ಸೈನಾ ನೆಹ್ವಾಲ್ (Saina Nehwal) ಅವರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಬ್ಯಾಡ್ಮಿಂಟನ್ ಆಡುವ ಮೂಲಕ ಕ್ರೀಡೆಯ ಮೇಲಿರುವ ಉತ್ಸಾಹವನ್ನು ತೋರಿದ್ದಾರೆ. ದೇಶಕ್ಕೆ ಸಂಬಂಧಿಸಿದ ಅನೇಕ ಕೆಲಸಗಳಲ್ಲಿ ನಿರತರಾಗಿದ್ದ ದ್ರೌಪದಿ ಮುರ್ಮು, ಬ್ಯಾಡ್ಮಿಂಟನ್ ಆಡುವ ಮೂಲಕ ಸುಂದರ ಕ್ಷಣಗಳನ್ನು ಕಳೆದಿದ್ದಾರೆ.
ಯುವ ಆಟಗಾರ್ತಿಯರನ್ನೇ ನಾಚಿಸುವಂತೆ ಬ್ಯಾಡ್ಮಿಂಟನ್ ಆಡಿದ ದ್ರೌಪದಿ ಮುರ್ಮು ಅವರ ಉತ್ಸಾಹ ಕಂಡು ಸೈನಾ ನೆಹ್ವಾಲ್ ಕೂಡ ಅಚ್ಚರಿಯಾದರು. ರಾಷ್ಟ್ರಪತಿ ಭವನದಲ್ಲಿ ಜುಲೈ 10ರಂದು ಜರುಗಿದ ಕ್ರೀಡಾ ಕಾರ್ಯಕ್ರಮದ ಅವಧಿಯಲ್ಲಿ ದ್ರೌಪದಿ ಬ್ಯಾಡ್ಮಿಂಟನ್ ಆಡಿದರು. ಅಂಕಣದಲ್ಲಿ ಎದುರಾಳಿಗಳ ಘರ್ಜಿಸುತ್ತಿದ್ದ ಸೈನಾ ವಿರುದ್ಧವೇ ಅಂಕ ಪಡೆಯುವ ಮೂಲಕ ದ್ರೌಪದಿ ಅಚ್ಚರಿ ಮೂಡಿಸಿದರು.
ರಾಷ್ಟ್ರಪತಿ ಭವನವು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಸೈನಾ ಮತ್ತು ಮುರ್ಮು ಬ್ಯಾಡ್ಮಿಂಟನ್ ಆಡಿದ ವಿಡಿಯೋವನ್ನು ಹಂಚಿಕೊಂಡಿದೆ. ದ್ರೌಪದಿ ಅವರ ಆಟಕ್ಕೆ ನೆಟ್ಟಿಗರು ಸಹ ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಾಗತಿಕ ವೇದಿಕೆಗಳಲ್ಲಿ ಮಹಿಳಾ ಕ್ರೀಡಾಪಟುಗಳು ಪ್ರಾಬಲ್ಯ ಮೆರೆಯಬೇಕು ಎಂಬುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಒಳಗೊಂಡ 'ಹರ್ ಸ್ಟೋರಿ - ಮೈ ಸ್ಟೋರಿ' ಉಪನ್ಯಾಸ ಸರಣಿಯ ಭಾಗವಾಗಿ ಪದ್ಮಶ್ರೀ ಮತ್ತು ಪದ್ಮಭೂಷಣ ಪಡೆದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಸಭಾಂಗಣದಲ್ಲಿ ನಾಳೆ ಸಂವಾದ ನಡೆಸಲಿದ್ದಾರೆ ಎಂದು ರಾಷ್ಟ್ರಪತಿ ಅವರು ಈ ಇಬ್ಬರ ಆಟದ ಫೋಟೋಗಳೊಂದಿಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ದ್ರೌಪದಿ ಮುರ್ಮು ಅವರೊಂದಿಗೆ ಬ್ಯಾಡ್ಮಿಂಟನ್ ಆಡಿದ ನಂತರ ಸೈನಾ ನೆಹ್ವಾಲ್ ಕೂಡ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಮುರ್ಮು ಅವರೊಂದಿಗೆ ಬ್ಯಾಡ್ಮಿಂಟನ್ ಆಡಿದ್ದನ್ನು ಮರೆಯಲಾಗದ ದಿನ ಎಂದಿದ್ದಾರೆ. ಇದು ನನ್ನ ಜೀವನದಲ್ಲಿ ಮರೆಯಲಾಗದ ದಿನ. ನನ್ನೊಂದಿಗೆ ಬ್ಯಾಡ್ಮಿಂಟನ್ ಆಡಿದ್ದಕ್ಕೆ ಮೇಡಂ ದ್ರೌಪದಿ ಮುರ್ಮು ಅವರಿಗೆ ತುಂಬಾ ಧನ್ಯವಾದಗಳು ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಕ್ರೀಡಾಪಟುಗಳಿಗೆ ಹಾರೈಸಿದ್ದ ಮುರ್ಮು
ಸಂಸತ್ ಜಂಟಿ ಅಧಿವೇಶನದಲ್ಲಿ ದ್ರೌಪದಿ ಮುರ್ಮು ಅವರು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದರು. ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕ್ರೀಡಾಪಟುವಿಗೂ ಶುಭವಾಗಲಿ. 2036ರ ಒಲಿಂಪಿಕ್ಸ್ಗೆ ಭಾರತ ಆತಿಥ್ಯ ವಹಿಸಲು ಭಾರತ ಒಲಿಂಪಿಕ್ ಅಸೋಸಿಯೇಷನ್ ಸಿದ್ಧತೆ ನಡೆಸುತ್ತಿದೆ ಎಂದಿದ್ದರು. ಅಲ್ಲದೆ, ಪ್ರಧಾನಿ ಮೋದಿ ಕೂಡ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ್ದರು.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಗೆದ್ದ ಪದಕಗಳೆಷ್ಟು?
ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಏಳು ಪದಕಗಳನ್ನು ಗೆದ್ದ ಸಾಧನೆ ಮಾಡಿತ್ತು. ಈ ಪೈಕಿ 1 ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ. ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿದ್ದ ಭಾರತ, ಈ ಬಾರಿ ಪದಕಗಳ ಸಂಖ್ಯೆ ಹೆಚ್ಚಿಸಲು ಸಜ್ಜಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26ರಿಂದ ಆಗಸ್ಟ್ 11ರ ತನಕ ಜರುಗಲಿದ್ದು, 10,500ಕ್ಕೂ ಅಧಿಕ ಕ್ರೀಡಾಪಟುಗಳು ಮೆಗಾ ಈವೆಂಟ್ನಲ್ಲಿ ಪಾಲ್ಗೊಳ್ಳಲಿದ್ದಾರೆ.