Umesh Yadav: ತಂದೆಯನ್ನು ಕಳೆದುಕೊಂಡು ದುಃಖದಲ್ಲಿದ್ದ ವೇಗಿಗೆ ಪತ್ರ ಬರೆದು ಧೈರ್ಯ ತುಂಬಿದ ಮೋದಿ.!
Umesh Yadav: ಇಂದೋರ್ ಟೆಸ್ಟ್‌ಗೂ ಮುನ್ನ ಉಮೇಶ್ ಯಾದವ್ ಜೀವನದಲ್ಲಿ ಘೋರ ದುರಂತ ಸಂಭವಿಸಿತ್ತು. ಅವರ ತಂದೆ ತಿಲಕ್ ಯಾದವ್ ಅನಾರೋಗ್ಯದಿಂದ ನಿಧನರಾದರು. ಕಳೆದ ಕೆಲವು ದಿನಗಳಿಂದ ಬಳಲುತ್ತಿದ್ದ ತಿಲಕಾ ಯಾದವ್ ಅವರು ಫೆಬ್ರವರಿ 22 ರಂದು ಕೊನೆಯುಸಿರೆಳೆದಿದ್ದರು.
ತಂದೆಯ ನಿಧನದಿಂದ ದುಃಖದಲ್ಲಿದ್ದ ಟೀಮ್ ಇಂಡಿಯಾ ವೇಗಿ ಉಮೇಶ್ ಯಾದವ್ ಅವರಿಗೆೆ (Umesh Yadav) ಪ್ರಧಾನಿ ನರೇಂದ್ರ ಮೋದಿ ((Prime Minister Narendra Modi)) ಅವರು ಪ್ರೇರಣೆಯ ಮಾತುಗಳ ಜೊತೆಗೆ ಸಂತಾಪ ಸೂಚಿಸಿದ್ದಾರೆ. ಫೆಬ್ರವರಿ 22ರಂದು ತಂದೆಯನ್ನು ಕಳೆದುಕೊಂಡಿದ್ದ ಉಮೇಶ್ ಯಾದವ್ಗೆ ಮೋದಿ ಪತ್ರ ಬರೆಯುವ ಮೂಲಕ ಸಾಂತ್ವನ ಹೇಳಿದ್ದಾರೆ. ಪತ್ರದಲ್ಲಿ ಹೃದಯ ತಟ್ಟುವ ಸಂದೇಶವನ್ನು ರವಾನಿಸಿದ್ದಾರೆ ಮೋದಿ.
ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಯ (Border - Gavaskar Trophy) 3ನೇ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಮುಖಭಂಗಕ್ಕೆ ಒಳಗಾಗಿದೆ. ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ಗಳ ಸೋಲು ಕಂಡಿದ್ದು, ಇದೀಗ ಅಹಮದಾಬಾದ್ ಟೆಸ್ಟ್ (Ahmedabad Test) ಮೇಲೆ ಕಣ್ಣಿಟ್ಟಿದೆ. ಸ್ಪಿನ್ ಪ್ರಾಬಲ್ಯ ಮೆರೆದ ಇಂದೋರ್ ಟೆಸ್ಟ್ನಲ್ಲಿ (Indore Test) ವೇಗಿ ಉಮೇಶ್ ಯಾದವ್ ಅದ್ಭುತ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು.
ಆಸೀಸ್ ಮೊದಲ ಇನಿಂಗ್ಸ್‌ನಲ್ಲಿ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಕಾಂಗರೂಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಉಮೇಶ್ ಮೊದಲ ಇನಿಂಗ್ಸ್‌ನಲ್ಲಿ ಕೇವಲ 5 ಓವರ್ ಬೌಲ್ ಮಾಡಿ 12 ರನ್ ಕೊಟ್ಟು 3 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಆ ಮೂಲಕ ಭಾರತದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ ಕಬಳಿಸಿದವರ ಎಲೈಟ್ ಪಟ್ಟಿಗೂ ಸೇರಿದ್ದರು. ಜೊತೆಗೆ ಬ್ಯಾಟಿಂಗ್ನಲ್ಲೂ ಎರಡು ಸಿಕ್ಸ್ ದಾಖಲೆ ಕೂಡ ಮಾಡಿದ್ದರು.
ಇಂದೋರ್ ಟೆಸ್ಟ್‌ಗೂ ಮುನ್ನ ಉಮೇಶ್ ಯಾದವ್ ತಮ್ಮ ಮನೆಯ ಆಧಾರ ಸ್ಥಂಭವನ್ನು ಕಳೆದುಕೊಂಡರು. ತಂದೆ ತಿಲಕ್ ಯಾದವ್ (Tilak Yadav) ಅನಾರೋಗ್ಯದಿಂದ ನಿಧನರಾದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತಿಲಕ್ ಯಾದವ್ ಅವರು ಫೆಬ್ರವರಿ 22ರಂದು ಕೊನೆಯುಸಿರೆಳೆದರು. ಈ ದುಃಖದ ನಡುವೆಯೂ ಉಮೇಶ್, ಟೀಮ್ ಇಂಡಿಯಾ ಸೇರಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು.
ತಂದೆಯನ್ನು ಕಳೆದುಕೊಂಡ ದುಃಖದಲ್ಲೂ ಅಮೋಘ ಬೌಲಿಂಗ್ ಪ್ರದರ್ಶಿಸಿದ ಉಮೇಶ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಏತನ್ಮಧ್ಯೆ ತಂದೆಯ ಸಾವಿನ ನೋವಿನಲ್ಲಿರುವ ಸ್ಪೀಡ್‌ಸ್ಟರ್‌ಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಧೈರ್ಯ ಹೇಳಿದ್ದಾರೆ. ಇದೇ ವೇಳೆ ಉಮೇಶ್ ಅವರ ಸಮರ್ಪಣಾ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಮೋದಿ ಬರೆದಿರುವ ಪತ್ರದಲ್ಲೇನಿದೆ.?
ತಂದೆಯ ಹಠಾತ್ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿರುವ ಮೋದಿ, ಕ್ರಿಕೆಟ್ ಜಗತ್ತಿನಲ್ಲಿ ನಿಮ್ಮ ಈವರೆಗಿನ ಪ್ರಯಾಣದಲ್ಲಿ, ನಿಮ್ಮ ತಂದೆಯ ತ್ಯಾಗ ಮತ್ತು ಸಮರ್ಪಣೆ ದೊಡ್ಡ ಪಾತ್ರವನ್ನು ವಹಿಸಿದೆ. ಅವರು ನಿಮ್ಮ ಪ್ರತಿ ನಿರ್ಧಾರದಲ್ಲೂ ವಿಶ್ವಾಸ ವ್ಯಕ್ತಪಡಿಸುತ್ತಾ ನಿಮ್ಮ ಬೆಂಬಲಕ್ಕೆ ನಿಂತವರು ಎಂದು ಪ್ರಧಾನಿ ಪತ್ರದಲ್ಲಿ ಬರೆದಿದ್ದಾರೆ. ಇನ್ನು ಧೈರ್ಯ ತುಂಬಿದ ಪ್ರಧಾನಿ ಮೋದಿ ಅವರಿಗೆ ಉಮೇಶ್ ಯಾದವ್ ಧನ್ಯವಾದ ತಿಳಿಸಿದ್ದಾರೆ.
ಕೊನೆಯ ಪಂದ್ಯಕ್ಕೆ ಮೋದಿ ಆಗಮನ.!
ಸರಣಿಯ ಕೊನೆಯ ಪಂದ್ಯ ಮಾರ್ಚ್ 9 ರಿಂದ 13 ರವರೆಗೆ ನಡೆಯಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಲಿರುವ ಫೈನಲ್ ಪಂದ್ಯವನ್ನು ಆಸ್ಟ್ರೇಲಿಯಾದ ಪ್ರಧಾನಿ ಜೊತೆಗೆ ಮೋದಿ ಅವರು ವಿಶೇಷ ಅತಿಥಿಯಾಗಿ ವೀಕ್ಷಿಸಲಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (ICC World Test Championship) ಫೈನಲ್ ಪ್ರವೇಶಿಸುವ ದೃಷ್ಟಿಯಿಂದ ಟೀಮ್ ಇಂಡಿಯಾ ಈ ಪಂದ್ಯವನ್ನು ಗೆಲ್ಲಲೇಬೇಕು.