PKL 11: ಕ್ರಿಕೆಟ್ ಪ್ರಾಬಲ್ಯದ ಭಾರತದಲ್ಲಿ ಗ್ರಾಮೀಣ ಕ್ರೀಡೆಗೆ ಬಹುಪರಾಕ್; ಪ್ರೊ ಕಬಡ್ಡಿ ಲೀಗ್‌ಗೆ ಹೇಗಿದೆ ಬೆಂಬಲ
ಕನ್ನಡ ಸುದ್ದಿ  /  ಕ್ರೀಡೆ  /  Pkl 11: ಕ್ರಿಕೆಟ್ ಪ್ರಾಬಲ್ಯದ ಭಾರತದಲ್ಲಿ ಗ್ರಾಮೀಣ ಕ್ರೀಡೆಗೆ ಬಹುಪರಾಕ್; ಪ್ರೊ ಕಬಡ್ಡಿ ಲೀಗ್‌ಗೆ ಹೇಗಿದೆ ಬೆಂಬಲ

PKL 11: ಕ್ರಿಕೆಟ್ ಪ್ರಾಬಲ್ಯದ ಭಾರತದಲ್ಲಿ ಗ್ರಾಮೀಣ ಕ್ರೀಡೆಗೆ ಬಹುಪರಾಕ್; ಪ್ರೊ ಕಬಡ್ಡಿ ಲೀಗ್‌ಗೆ ಹೇಗಿದೆ ಬೆಂಬಲ

ಗ್ರಾಮೀಣ ಭಾಗದ ಕ್ರೀಡೆ, ಅದು ಕೂಡ ಶಾಲಾ-ಕಾಲೇಜುಗಳಿಗೆ ಸೀಮಿತವಾಗಿದ್ದ ಕಬಡ್ಡಿ, ಇವತ್ತು ಇಂಡಿಯನ್ ಪ್ರೀಯರ್ ಲೀಗ್‌ಗೆ ಪೈಪೋಟಿ ಕೊಡುವ ಹಾದಿಯಲ್ಲಿ ಸಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಪ್ರೊ ಕಬಡ್ಡಿ ಲೀಗ್‌ಗೆ ಸಿಕ್ಕ ಬೆಂಬಲ ಹೇಗಿತ್ತು ಅನ್ನೋದನ್ನು ತಿಳಿಯೋಣ.

10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್‌ ನಡುವಿನ ಪಂದ್ಯದ ರೋಚಕ ಕ್ಷಣ.
10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್‌ ನಡುವಿನ ಪಂದ್ಯದ ರೋಚಕ ಕ್ಷಣ.

ಭಾರತದ ಕ್ರೀಡಾಲೋಕದಲ್ಲಿ ಕ್ರಿಕೆಟ್‌ಗೆ ಅಗ್ರಸ್ಥಾನವಿದೆ. ಆದಾಯದ ವಿಚಾರದಲ್ಲಿ ಬಿಸಿಸಿಐ ಜಗತ್ತಿಗೆ ಬಾಸ್. ಎಲ್ಲಾ ಆಯಾಮಗಳಲ್ಲೂ ಕ್ರಿಕೆಟ್ ಎಂಬ ಕುದುರೆಯ ಓಟದ ಮುಂದೆ ದೇಶದ ಕ್ರೀಡೆ ಕೂಡ ಹಿಂದೆ ಇದೆ. ಹಾಕಿಯಷ್ಟೇ ಅಲ್ಲ ಪ್ರಪಂಚದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಫುಟ್ಬಾಲ್‌ ವಿಚಾರದಲ್ಲೂ ದೊಡ್ಡ ವ್ಯತ್ಯಾಸವಿಲ್ಲ. ಭಾರತದ ಫುಟ್ಬಾಲ್ ಕ್ರೀಡಾಪಟುಗಳಿಗೆ ಹೇಳಿಕೊಳ್ಳುವಂತ ಬೆಂಬಲ ಸಿಗುತ್ತಿಲ್ಲ. ಹೀಗೆ ಅಂತಾರಾಷ್ಟ್ರೀಯ ಕ್ರೀಡೆಗಳು ಏರಳಿತಗಳ ನಡುವೆ ಕಳೆದೊಂದು ದಶಕದಿಂದ ಗ್ರಾಮೀಣ ಕ್ರೀಡೆ ಕಬಡ್ಡಿ ದೇಶದ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಆರಂಭಕದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದರೂ ವರ್ಷಗಳು ಕಳೆದಂತೆ ಪ್ರೊ ಕಬಡ್ಡಿ ಲೀಗ್ ಚಿನ್ನದ ಮೊಟ್ಟೆ ಆಟವಾಗುತ್ತಿದ್ದು, ಆರ್ಥಿಕವಾಗಿ ಬಲಿಷ್ಟಗೊಳ್ಳುತ್ತಿದೆ. ದೊಡ್ಡ ಯಶಸ್ಸಿನ ಹಾದಿಯತ್ತ ಸಾಗುತ್ತಿದೆ.

ಈ ಹಿಂದಿನಿಂದಲೂ ಭಾರತವನ್ನು ಕ್ರಿಕೆಟ್ ಮತ್ತು ಸಿನಿಮಾ ರಂಗಗಳು ಆಳುತ್ತಿವೆ. ಆದರೆ ಸಾಂಸ್ಕೃತಿ ಮತ್ತು ಪರಂಪರೆಯ ಭಾಗವಾಗಿರುವ ಈ ಎರಡೂ ಕ್ಷೇತ್ರಗಳು ಭಿನ್ನವಾಗಿವೆ. ಸಿನಿಮಾಗಳು ಸ್ಕ್ರಿಪ್ಟ್ ಆಧಾರಿತವಾಗಿರುತ್ತವೆ. ಅಂದರೆ ನಿರ್ದೇಶಕನು ನೀಡಿದ ಸ್ಕ್ರಿಪ್ಟ್‌ಗೆ ವೀಕ್ಷಕನು ನೀಡುವ ಫಲಿತಾಂಶದ ಮೇಲೆ ಸೋಲು ಗೋಲುವಿನ ಲೆಕ್ಕಾಚಾರಗಳನ್ನು ನಿರ್ಧರಿಸಲಾಗುತ್ತದೆ. ಆದರೆ ಕ್ರೀಡೆಯ ವಿಷಯ ಬೇರೆಯಾದರೂ ಇಲ್ಲಿ ಎಲ್ಲವೂ ಆಟಗಾರರ ಕೈಯಲ್ಲೇ ಇರುತ್ತದೆ. ಗೆದ್ದರಷ್ಟೇ ನೇಮು, ಫೇಮು ಹಣ ಸಿಗುತ್ತದೆ.

ಕ್ರಿಕೆಟ್ ಲೋಕದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಹೊಸ ಕ್ರೀಡಾ ಉದ್ಯಮವನ್ನು ಹುಟ್ಟುಹಾಕಿತು. ಆದರೆ ಇದೇ ಮಾರ್ಗದಲ್ಲಿ ಸಾಕಷ್ಟು ಲೀಗ್‌ಗಳು ಬಂದಿವೆಯಾದರೂ ಆರ್ಥಿಕವಾಗಿ ಹೇಳಿಕೊಳ್ಳುವಂತಹ ಹೆಸರು ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಐಪಿಎಲ್‌ನಷ್ಟೇ ಬಲಿಷ್ಠವಾಗುತ್ತಿರುವುದು ಪ್ರೊ ಕಬಡ್ಡಿ ಲೀಗ್-ಪಿಕೆಎಲ್. ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿಗೆ ಅಭಿಮಾನಿಗಳು, ಪ್ರಾಯೋಜಕರು ಹಾಗೂ ವೀಕ್ಷಕರು ವರ್ಷದಿಂದ ವರ್ಷಕ್ಕೆ ದೊಡ್ಡ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದಾರೆ. ಐಪಿಎಲ್ ಹೊರತುಪಡಿಸಿ ಇತರೆ ಲೀಗ್‌ಗಳಿಗೆ ಹೋಲಿಸಿದರೆ ಪಿಕೆಎಲ್ ಆರ್ಥಿಕವಾಗಿ ಆರೋಗ್ಯವಾಗಿದೆ.

ಆರಂಭದ ಸವಾಲುಗಳಿಂದ ಮೆಟ್ಟಿನಿಂತಿದ್ದೇ ಪ್ರೊ ಕಬಡ್ಡಿಗೆ ದೊಡ್ಡ ಗೆಲುವು

ಆರಂಭದಲ್ಲಿ ಪ್ರೊ ಕಬಡ್ಡಿ ಲೀಗ್‌ಗೆ ಸಾಕಷ್ಟು ನಕಾರಾತ್ಮಕ ಕಾಮೆಂಟ್‌ಗಳು ಬಂದವು. ಹಳ್ಳಿಗಾಡಿನ ಆಟ ಹಾಗೆ, ಹೀಗೆ ಅಂತ ಕಾಲೆಳೆದಿದ್ದೂ ಆಗಿದೆ. ಆದರೆ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತಿರುವ ಪ್ರೊ ಕಬಡ್ಡಿ ಲೀಗ್ ಇವತ್ತು ಪ್ಯಾನ್ ಇಂಡಿಯಾ ಕ್ರೀಡೆಯಾಗಿದೆ. ಆರಂಭದಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಗುರುತಿಸಿ ಲೀಗ್‌ಗೆ ಕರೆತರುವ ಪ್ರಯತ್ನನ್ನು ಆಯೋಜಕರು ಮಾಡಿದ್ದಾರೆ. ಪ್ರತಿಭಾವಂತರನ್ನು ಗುರುತಿಸುವ ನಿಟ್ಟಿನಲ್ಲಿ ಇಂದಿಗೂ ಆ ಕೆಲಸ ಮುಂದುವರಿದೆ. ಶಾಲಾ-ಕಾಲೇಜು ಮಟ್ಟದ ಕಬ್ಬಡ್ಡಿಯಲ್ಲಿ ಆಡಿದ್ದ ಆಟಗಾರರನ್ನು ಗುರುತಿಸಿ ಕರೆತಂದಿದ್ದಾರೆ. ಇವತ್ತು ದೊಡ್ಡ ದೊಡ್ಡ ಪ್ರಾಂಚೈಸಿಗಳ ನೆಚ್ಚಿನ ಆಟಗಾರರು ಇವರೇ ಆಗಿದ್ದಾರೆ.

ಕಬಡ್ಡಿಯಲ್ಲಿದ್ದ ನಿಯಮಗಳನ್ನು ಬದಲಾಯಿಸಲಾಗಿದೆ. ಹೊರಾಂಗಣಕ್ಕೆ ಸಮೀತವಾಗಿದ್ದ ಕಬಡ್ಡಿ ಲೀಗ್ ಒಳಾಂಗಣಕ್ಕೆ ಶಿಫ್ಟ್ ಆಯ್ತು, ಮಣ್ಣಿನ ಮೇಲಿನ ಆಟ ಮ್ಯಾಟ್‌ಗಳಿಗೆ ಶಿಫ್ಟ್ ಆಗಿದೆ. ಆಟಕ್ಕೆ ಸಿಗುತ್ತಿರುವ ಬೆಂಬಲದಿಂದ ಇವೆಲ್ಲವೂ ಸಾಧ್ಯವಾಗುತ್ತಿವೆ. ಮಾಧ್ಯಮಗಳೂ ಕೂಡ ಪ್ರೊ ಕಬಡ್ಡಿ ಲೀಗ್ ಹಿಂದೆ ಬಿದ್ದಿವೆ. ಪ್ರಾಯೋಜಕರು ಹೆಚ್ಚುತ್ತಿದ್ದಾರೆ. ಪ್ರತಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರ ಮೌಲ್ಯ ಆವೃತ್ತಿಯಿಂದ ಆವೃತ್ತಿಗೆ ಹೆಚ್ಚಾಗುತ್ತಿದೆ. ಪ್ರಾಂಚೈಸಿಗಳ ವಾರ್ಷಿಕ ಮೊತ್ತವೂ 10-12 ಕೋಟಿಗೆ ತಲುಪಿದೆ. ಹಾರಾಜಿನಲ್ಲಿ ಆಟಗಾರರನ್ನು ಕೋಟಿ ಕೋಟಿ ರೂಪಾಯಿಗಳ ಲೆಕ್ಕದಲ್ಲಿ ಪ್ರಾಂಚೈಗಳ ಪಾಲಾಗುತ್ತಿದ್ದಾರೆ. ನಿರೀಕ್ಷೆಗೂ ಮೀರಿದ ಅಭಿಮಾನಿಗಳ ಬೆಂಬಲ ಸಿಗುತ್ತಿದೆ.

ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಹರಿಯಾಣ ಹಾಗೂ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿದ್ದ ಕಬಡ್ಡಿ ಇದೀಗ ಗುಜರಾತ್, ರಾಜಸ್ಥಾನ ಸೇರಿದಂತೆ ಇತರೆ ರಾಜ್ಯಗಳಲ್ಲೂ ಜನಪ್ರಿಯವಾಗುತ್ತಿದೆ.ಒಟ್ಟಿನಲ್ಲಿ ಕಳೆದ 10 ವರ್ಷಗಳಲ್ಲಿ ಪ್ರೊ ಕಬಡ್ಡಿಗೆ ಸಿಕ್ಕ ಬೆಂಬಲ ನೀಡುತ್ತಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಸದ್ಯ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ ದಿನಗಣನೆ ಆರಂಭವಾಗಿದ್ದು, ಹೈದರಾಬಾದ್‌ನಲ್ಲಿ ಅಕ್ಟೋಬರ್ 18 ರಿಂದ ನವೆಂಬರ್ 9 ರವರೆಗೆ ಮೊದಲ ಸೆಕ್ಷನ್ ನಡೆಯಲಿದೆ. ಗಚ್ಚಿಬೋಲಿ ಇಂಡೋರ್ ಸ್ಟೇಡಿಯಂನಲ್ಲಿ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಅಕ್ಟೋಬರ್ 10 ರಿಂದ ನೋಯಿಡಾದಲ್ಲಿ 2ನೇ ಸೆಕ್ಷನ್, ಡಿಸೆಂಬರ್ 3 ರಿಂದ 24 ರವರೆಗೆ ಪುಣೆಯಲ್ಲಿ 3ನೇ ಸೆಕ್ಷನ್ ಆರಂವಾಗಲಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.