PKL 11: ಪ್ರೊ ಕಬಡ್ಡಿ ಹೊಸ ಆವೃತ್ತಿಗೆ ಗೂಳಿಗಳ ಬಳಗ ಹೇಗಿದೆ; ಬೆಂಗಳೂರು ಬುಲ್ಸ್ ಶಕ್ತಿ-ದೌರ್ಬಲ್ಯಗಳಿವು
Bengaluru Bulls PKL 1: ಪಿಕೆಎಲ್ 11ನೇ ಆವೃತ್ತಿಗೆ ಬೆಂಗಳೂರು ಬುಲ್ಸ್ ಹೊಸತನದೊಂದಿಗೆ ಕಣಕ್ಕಿಳಿಯಲಿದೆ. ತಂಡದ ರೈಡಿಂಗ್‌ಗೆ ಹೆಚ್ಚುವರಿ ಬಲ ಬಂದಿದೆ. ಆರಂಭದಿಂದಲೂ ಒಂದೇ ಕೋಚ್ ಜೊತೆಗೆ ಆಡುತ್ತಿರುವ ತಂಡದ ಬಲಾಬಲ ಹೇಗಿದೆ ನೋಡೋಣ.
ಪ್ರೊ ಕಬಡ್ಡಿ ಲೀಗ್ (PKL 2024) 11ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 11ರಂದು ಉದ್ಘಾಟನಾ ಪಂದ್ಯ ನಡೆಯುತ್ತಿದೆ. ಟೂರ್ನಿಯಲ್ಲಿ ಈ ಬಾರಿ ಬೆಂಗಳೂರು ಬುಲ್ಸ್ ತಂಡವು ಭಾರಿ ನಿರೀಕ್ಷೆ ಮೂಡಿಸಿದೆ. ಆರನೇ ಆವೃತ್ತಿಯ ಚಾಂಪಿಯನ್ ಆಗಿರುವ ಬೆಂಗಳೂರು ಬುಲ್ಸ್ ತಂಡ ಕಳೆದ ನಾಲ್ಕು ಆವೃತ್ತಿಗಳಲ್ಲಿ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಹೀಗಾಗಿ ಈ ಬಾರಿ ಒಂದಷ್ಟು ಹೊಸತನದೊಂದಿಗೆ ಟೂರ್ನಿಗೆ ಎಂಟ್ರಿ ಕೊಟ್ಟು ಪಿಕೆಎಲ್ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ. ಹಾಗಿದ್ದರೆ ಈ ಬಾರಿ ತಂಡದ ಬಲಾಬಲ ಹೇಗಿದೆ. ಟ್ರೋಫಿ ಗೆಲ್ಲುವ ಅವಕಾಶಗಳು ಎಷ್ಟಿವೆ ಎಂಬುದನ್ನು ನೋಡೋಣ.
ಕಳೆದ ನಾಲ್ಕು ಋತುಗಳಲ್ಲಿ ಮೂರರಲ್ಲಿ ಪ್ಲೇಆಫ್ ತಲುಪಿದ್ದ ತಂಡವು, ಕೊನೆಯ ಅಂದರೆ ಸೀಸನ್ 10ರಲ್ಲಿ ಪ್ಲೇಆಫ್ ಸ್ಥಾನ ಪಡೆಯಲು ವಿಫಲವಾಗಿತ್ತು. ಬೆಂಗಳೂರು ಗೂಳಿಗಳ ಬಳಗವು ಇದುವರೆಗೂ ಆಡಿರುವ 10 ಪಿಕೆಎಲ್ ಆವೃತ್ತಿಗಳಲ್ಲಿ 6ರಲ್ಲಿ ಪ್ಲೇಆಫ್ ಹಂತ ತಲುಪಿದೆ. ಇದರಲ್ಲಿ ಸೀಸನ್ 6ರಲ್ಲಿ ರೋಹಿತ್ ಕುಮಾರ್ ನೇತೃತ್ವದಲ್ಲಿ ತಂಡ ಚಾಂಪಿಯನ್ ಆಗಿತ್ತು. 2 ಸೀಸನ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿತ್ತು.
ಗೂಳಿಗಳು 11ನೇ ಆವೃತ್ತಿಗೆ ಎಂಟ್ರಿಕೊಡುತ್ತಿದ್ದಂತೆ ತಂಡದ ಪ್ರಮುಖ ಬಲವಾಗಿರುವುದು ಕೋಚ್. ಬೆಂಗಳೂರು ಬುಲ್ಸ್ ತಂಡದ ಮುಖ್ಯ ಕೋಚ್ ರಣಧೀರ್ ಸಿಂಗ್ ಸೆಹ್ರಾವತ್ ಪಿಕೆಎಲ್ ಉದ್ಘಾಟನಾ ಆವೃತ್ತಿಯಿಂದಲೂ ಫ್ರಾಂಚೈಸಿಯೊಂದಿಗೆ ಇರುವುದು ತಂಡದ ಅತಿ ದೊಡ್ಡ ಬಲ. ಲೀಗ್‌ನಲ್ಲಿ ದೀರ್ಘಕಾಲ ಒಂದೇ ತಂಡಕ್ಕೆ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು.
ಸೀಸನ್ 11ರ ಆರಂಭಕ್ಕೂ ಮುನ್ನ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಫ್ರಾಂಚೈಸಿಯು ಹೊಸ ಹೊಸ ಪ್ರತಿಭೆಗಳನ್ನು ತೆಕ್ಕೆಗೆ ಹಾಕಿಕೊಂಡಿದೆ. ಹೊಸ ಮುಖವುಳ್ಳ ಪ್ರಬಲ ರೈಡಿಂಗ್ ಘಟಕ ಹಾಗೂ ಟ್ಯಾಕಲ್ ಬಳಗ ಗಟ್ಟಿಯಾಗಿದೆ. ಹೊಸ ಅಭಿಯಾನದ ಆರಂಭಕ್ಕೂ ಮುನ್ನ ತಂಡದ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ನೋಡೋಣ.
ಪರ್ದೀಪ್ ಮೇಲೆ ಭಾರಿ ನಿರೀಕ್ಷೆ
ಆಟಗಾರರ ಹರಾಜಿನಲ್ಲಿ ಬುಲ್ಸ್ ತಂಡವು ಬಲಿಷ್ಠ ರೈಡರ್ ಪರ್ದೀಪ್ ನರ್ವಾಲ್ ಅವರನ್ನು ಕೇವಲ 70 ಲಕ್ಷ ರೂಪಾಯಿಗೆ ತೆಕ್ಕೆಗೆ ಹಾಕಿಕೊಂಡಿತ್ತು. ಅಜಿಂಕ್ಯ ಪವಾರ್ ಅವರನ್ನು 1.107 ಕೋಟಿ ರೂಪಾಯಿ ಕೊಟ್ಟು ಖರೀದಿಸಿತು. ರೈಡರ್ ಪರ್ದೀಪ್ ನರ್ವಾಲ್ 1690 ರೈಡ್ ಪಾಯಿಂಟ್‌ಗಳೊಂದಿಗೆ ಪಿಕೆಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ರೈಡರ್ ಆಗಿದ್ದರೆ, ಅಜಿಂಕ್ಯ ಪವಾರ್ 454 ರೈಡ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಸೀಸನ್ 2ರಲ್ಲಿ ಬುಲ್ಸ್ ಪರ ಪಿಕೆಎಲ್ ಪದಾರ್ಪಣೆ ಮಾಡಿದ ನರ್ವಾಲ್, ಇದೇ ಮೊದಲ ಬಾರಿಗೆ ಬುಲ್ಸ್ ಪರ ಆಡುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಅವರು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಮತ್ತೆ ತಮ್ಮ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.
ಈ ಬಾರಿಯ ಆಟಗಾರರ ಹರಾಜಿನಲ್ಲಿ ಏಳನೇ ಅತ್ಯಂತ ದುಬಾರಿ ಆಟಗಾರ ಹಾಗೂ ಕಳೆದ ಮೂರು ಋತುಗಳಲ್ಲಿ ಸರಾಸರಿ 100ಕ್ಕೂ ಹೆಚ್ಚು ರೈಡ್ ಪಾಯಿಂಟ್‌ಗಳನ್ನು ಗಳಿಸಿರುವ ಅಜಿಂಕ್ಯ ಪವಾರ್ ಅವರಿಂದ ತಂಡ ಭಾರಿ ನಿರೀಕ್ಷೆ ಹೊಂದಿದೆ. ರೈಡರ್ ಜೈ ಭಗವಾನ್ ಅವರನ್ನು 62 ಲಕ್ಷ ರೂಪಾಯಿಗೆ ಖರೀದಿಸಿದ ಬುಲ್ಸ್ ಮತ್ತಷ್ಟು ಬಲಿಷ್ಠವಾಗಿದೆ. ಸುಶೀಲ್ ಮತ್ತು ಅಕ್ಷಿತ್ ಅವರಂಥ ರೈಡರ್‌ಗಳು ಮತ್ತೆ ಆಕ್ರಮಣಕಾರಿ ಆಟ ಮುಂದುವರೆಸಲು ಸಿದ್ಧರಾಗಿದ್ದಾರೆ.
ಡಿಫೆನ್ಸ್‌ನಲ್ಲಿ ಅನುಭವದ ಕೊರತೆ
ಈ ಬಾರಿ ತಂಡದ ಡಿಫೆನ್ಸ್ ಆಸಕ್ತಿದಾಯಕವಾಗಿದೆ. ತಂಡದಲ್ಲಿ ನಾಯಕ ಸೌರಭ್ ನಂದಾಲ್ ಏಕೈಕ ಅನುಭವಿ ಡಿಫೆಂಡರ್ ಆಗಿದ್ದು, ಹೊಸ ಅಭಿಯಾನದಲ್ಲಿ ಡಿಫೆನ್ಸ್ ಅನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿ ಅವರಲ್ಲಿದೆ. ಪಿಕೆಎಲ್ ವೃತ್ತಿಜೀವನದಲ್ಲಿ ಬರೋಬ್ಬರಿ 246 ಟ್ಯಾಕಲ್ ಪಾಯಿಂಟ್ ಗಳಿಸಿರುವ ನಂದಾಲ್ ಅವರಿಗೆ, ಅನನುಭವಿ ಡಿಫೆನ್ಸ್ ಘಟಕದಿಂದ ಉತ್ತಮ ಬೆಂಬಲದ ಅಗತ್ಯವಿದೆ. ಇದು ತಂಡಕ್ಕೆ ದೌರ್ಬಲ್ಯವಾಗಿ ಕಾಣುತ್ತದೆ. ಪರ್ತೀಕ್, ರೋಹಿತ್ ಕುಮಾರ್ ಪಿಕೆಎಲ್‌ನ ಒಂದು ಋತುವಿನಲ್ಲಿ ಮಾತ್ರ ಆಡಿದ್ದಾರೆ. ಆಡಿದ ನಾಲ್ಕು ಋತುಗಳಲ್ಲಿ 40 ಟ್ಯಾಕಲ್ ಪಾಯಿಂಟ್ ಗಳಿಸಿರುವ ಪೊನ್ಪರ್ತಿಬನ್ ಸುಬ್ರಮಣಿಯನ್ ತಂಡಕ್ಕೆ ನೆರವಾಗಬೇಕಿದೆ.
ಗಾಯದಿಂದಾಗಿ ಸೀಸನ್ 10ರಿಂದ ಹೊರಗುಳಿದಿದ್ದ ಆಲ್‌ರೌಂಡರ್ ನಿತಿನ್ ರಾವಲ್ ತಮ್ಮ ಪಿಕೆಎಲ್ ವೃತ್ತಿಜೀವನದಲ್ಲಿ 142 ರೈಡ್ ಪಾಯಿಂಟ್ ಮತ್ತು 94 ಟ್ಯಾಕಲ್ ಪಾಯಿಂಟ್ ಗಳಿಸಿದ್ದಾರೆ. ಅವರ ರಕ್ಷಣಾತ್ಮಕ ಸಾಮರ್ಥ್ಯವು ಗೂಳಿಗಳಿಗೆ ಪ್ಲಸ್ ಪಾಯಿಂಟ್. 13 ಲಕ್ಷ ರೂ ಪಡೆದು ತಂಡಕ್ಕೆ ಬಂದ ನಿತಿನ್ ರಾವಲ್, ಸಹ ಆಲ್ರೌಂಡರ್ ಚಂದ್ರನಾಯಕ್ ಅವರೊಂದಿಗೆ ಹೇಗೆ ತಂತ್ರ ರೂಪಿಸುತ್ತಾರೆ ಎಂಬುದು ಸದ್ಯದ ಕುತೂಹಲ.
ಕಳೆದ ಬಾರಿ ತಂಡಕ್ಕೆ ರೈಡಿಂಗ್‌ನಲ್ಲಿ ಆಧಾರವಾಗಿದ್ದ ಭರತ್ ಅವರನ್ನು ಕೈಬಿಟ್ಟ ಬಳಿಕ, ಈ ಬಾರಿ ಬೆಂಗಳೂರು ಬುಲ್ಸ್ ಟೂರ್ನಿಯಲ್ಲಿ ಯಾವ ರೀತಿಯ ಆರಂಭ ಪಡೆಯಲಿದೆ ಎಂಬುದು ಪ್ರದೀಪ್ ನರ್ವಾಲ್ ಅವರ ಫಾರ್ಮ್ ಮೇಲೆ ಅವಲಂಬಿಸಿದೆ. ಕಳೆದ ಕೆಲವು ಆವೃತ್ತಿಗಳಲ್ಲಿ ಪರ್ದೀಪ್ ಅತ್ಯುತ್ತಮ ಪ್ರದರ್ಶನ ನೀಡಿರಲಿಲ್ಲ. ಇದೀಗ ರಣಧೀರ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಹೊಸತನದೊಂದಿಗೆ ಕಬಡ್ಡಿ ಅಂಗಳಕ್ಕಿಳಿಯಲು ಕಾತರರಾಗಿದ್ದಾರೆ.