ಕನ್ನಡ ಸುದ್ದಿ  /  Sports  /  Pro Kabaddi League 2024 Bengaluru Bulls Ended The Campaign With Win 8th Position In The Points Table Pkl 10 Play-off Prs

ಪ್ರೊ ಕಬಡ್ಡಿ ಲೀಗ್​ಗೆ ತೆರೆ; ಕೊನೆಯ ಪಂದ್ಯದಲ್ಲಿ ಗೆದ್ದು ಅಭಿಯಾನ ಮುಗಿಸಿದ ಬೆಂಗಳೂರು ಬುಲ್ಸ್, ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿ

Pro Kabaddi League : ಪ್ರೊ ಕಬಡ್ಡಿ ಗುಂಪು ಹಂತದ ಪಂದ್ಯಗಳಿಗೆ ತೆರೆ ಬಿದ್ದಿದೆ. ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ ಗೆದ್ದು ಅಭಿಯಾನ ಮುಗಿಸಿದೆ.

ಪ್ರೊ ಕಬಡ್ಡಿ ಲೀಗ್​ಗೆ ತೆರೆ; ಕೊನೆಯ ಪಂದ್ಯದಲ್ಲಿ ಗೆದ್ದು ಅಭಿಯಾನ ಮುಗಿಸಿದ ಬೆಂಗಳೂರು ಬುಲ್ಸ್
ಪ್ರೊ ಕಬಡ್ಡಿ ಲೀಗ್​ಗೆ ತೆರೆ; ಕೊನೆಯ ಪಂದ್ಯದಲ್ಲಿ ಗೆದ್ದು ಅಭಿಯಾನ ಮುಗಿಸಿದ ಬೆಂಗಳೂರು ಬುಲ್ಸ್

10ನೇ ಆವೃತ್ತಿಯ ಪ್ರೊ ಕಬಡ್ಡಿ (Pro Kabaddi League 2024) ಗುಂಪು ಹಂತದ ಪಂದ್ಯಗಳ ಅಭಿಯಾನಕ್ಕೆ ತೆರೆ ಬಿದ್ದಿದೆ. 2023ರ ಡಿಸೆಂಬರ್ 2 ರಿಂದ ಶುರುವಾದ ಲೀಗ್ ಪಂದ್ಯಗಳು ಫೆಬ್ರವರಿ 21ರವರೆಗೂ ನಡೆದವು. ಪಿಕೆಎಲ್ ಸುಮಾರು ಎರಡೂವರೆ ತಿಂಗಳ ಕಾಲ ಅಭಿಮಾನಿಗಳನ್ನು ರಂಜಿಸಿದೆ. ಇದೀಗ ಪ್ಲೇ ಆಫ್​ ಸುತ್ತಿಗೆ ಪ್ರವೇಶಿಸಿದೆ. ಲೀಗ್​​ನ ಕೊನೆಯ ದಿನದಂದು ಡಬಲ್ ಹೆಡ್ಡರ್ ಪಂದ್ಯ ಜರುಗಿದ್ದು, ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್ಸ್ ತಂಡಗಳು ಗೆದ್ದು ಅಭಿಯಾನ ಮುಗಿಸಿವೆ.

ಗೆದ್ದು ಅಭಿಯಾನ ಮುಗಿಸಿದ ಬೆಂಗಳೂರು ಬುಲ್ಸ್

ಪಿಕೆಎಲ್ ಕೊನೆಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ನಡುವೆ ಸೆಣಸಾಟ ನಡೆಯಿತು. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ ಬುಲ್ಸ್, ಕೊನೆಯ ಹಂತದಲ್ಲಿ ತಿರುಗೇಟು ನೀಡಿತು. ಪರಿಣಾಮ 39-53 ಅಂಕಗಳ ಅಂತರದಿಂದ ಗೆದ್ದು ಬೀಗಿತು. ಸುಶೀಲ್ ಅವರ 22 ರೈಡಿಂಗ್​ ಅಂಕಗಳ ನೆರವಿನಿಂದ ಬೆಂಗಳೂರು ಗೆಲುವು ಸಾಧಿಸಿತು. ಅಕ್ಷಿತ್ ಧುಲ್ 8, ಅರುಲ್ ನಂದಾ ಬಾಬು ವೇಲುಸ್ವಾಮಿ, ಪೊನ್​ಪರ್ತಿಬನ್ ಸುಬ್ರಮಣಿಯನ್ ತಲಾ 5 ಅಂಕ ಗಳಿಸಿ ಸಾಥ್ ನೀಡಿದರು. ಹರಿಯಾಣ ಪರ ತೇಜಸ್ ಪಾಟೀಲ್ 11 ಅಂಕ ಸಂಪಾದಿಸಿ ಅವರ ತಂಡದ ಗರಿಷ್ಠ ಸ್ಕೋರರ್​ ಆಗಿದ್ದಾರೆ.

ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿ

ಬೆಂಗಳೂರು ಬುಲ್ಸ್ ಟೂರ್ನಿ ಆರಂಭಕ್ಕೂ ಮುನ್ನವೇ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಲೀಗ್​ ಆರಂಭದಲ್ಲೇ ಸತತ ಸೋಲುಗಳಿಂದ ಅಭಿಮಾನಿಗಳನ್ನು ನಿರಾಸೆಗೊಳಿಸಿತು. ಒಂದು ಹಂತದಲ್ಲಿ ಸತತ ಗೆಲುವು ದಾಖಲಿಸಿ ಪ್ಲೇ ಆಫ್​ ಪ್ರವೇಶಿಸುವ ಭರವಸೆ ಮೂಡಿಸಿತ್ತು. ಆದರೆ, ಮತ್ತೆ ಸೋಲಿನ ಹಳಿಗೆ ಮರಳಿ ಪ್ಲೇ ಆಫ್​ರೇಸ್​ನಿಂದ ಹೊರ ಬಿತ್ತು. ಲೀಗ್​ನ ಕೊನೆಯ ಪಂದ್ಯದಲ್ಲಿ ಜಯದ ನಗೆ ಬೀರಿದ ಬೆಂಗಳೂರು ಒಟ್ಟಾರೆ 22 ಪಂದ್ಯಗಳಲ್ಲಿ 8 ಗೆಲುವು, 12 ಸೋಲು, 2 ಟೈ ಆಯಿತು. ಒಟ್ಟು 53 ಅಂಕ ಪಡೆದು ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿ ಪಡೆಯಿತು.

ಮತ್ತೊಂದು ಪಂದ್ಯದಲ್ಲಿ ಪುಣೇರಿಗೆ ಜಯ

ಪ್ರೊ ಕಬಡ್ಡಿ ಲೀಗ್​ನ ಮತ್ತೊಂದು ಕೊನೆಯ ಪಂದ್ಯದಲ್ಲಿ ಯುಪಿ ಯೋಧಾಸ್ ವಿರುದ್ಧ 40-38 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು. ಇದರೊಂದಿಗೆ ಪುಣೇರಿ ಪಲ್ಟನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಅಭಿಯಾನ ಮುಗಿಸಿದೆ. ಆದರೆ ಯುಪಿ ಯೋಧಾಸ್ 11ನೇ ಸ್ಥಾನ ತೃಪ್ತಿಪಟ್ಟುಕೊಂಡಿತು. ಯೋಧಾಸ್ ಪರ ಗಗನ್​ ಗೌಡ 16 ಅಂಕ ಪಡೆದರೂ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಪುಣೇರಿ ಪರ ಪಂಕಜ್ ಮೋಹಿತೆ 12 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು

ಪ್ಲೇ ಆಫ್ ಪ್ರವೇಶಿಸಿರುವ ಟಾಪ್​-6 ತಂಡಗಳು

1. ಪುಣೇರಿ ಪಲ್ಟನ್ - 22 ಪಂದ್ಯ, 17 ಗೆಲುವು, 2 ಸೋಲು, 3 ಟೈ, 96 ಅಂಕ

2. ಜೈಪುರ ಪಿಂಕ್ ಪ್ಯಾಂಥರ್ಸ್ - 22 ಪಂದ್ಯ, 16 ಗೆಲುವು, 3, ಸೋಲು, 3 ಟೈ, 92 ಅಂಕ

3. ದಬಾಂಗ್ ಡೆಲ್ಲಿ - 22 ಪಂದ್ಯ, 13 ಗೆಲುವು, 6 ಸೋಲು, 3 ಟೈ, 79 ಅಂಕ.

4. ಗುಜರಾತ್ ಜೈಂಟ್ಸ್ - 22 ಪಂದ್ಯ, 13 ಗೆಲುವು, 9 ಸೋಲು, 70 ಅಂಕ

5. ಹರಿಯಾಣ ಸ್ಟೀಲರ್ಸ್ - 22 ಪಂದ್ಯ, 13 ಗೆಲುವು, 8 ಸೋಲು, 1 ಟೈ, 70 ಅಂಕ

6. ಪಾಟ್ನಾ ಪೈರೇಟ್ಸ್ - 22 ಪಂದ್ಯ, 11 ಗೆಲುವು, 8 ಗೆಲುವು, 3 ಟೈ, 69 ಅಂಕ.