ಪ್ರೊ ಕಬಡ್ಡಿ ಲೀಗ್‌ ಪ್ಲೇಆಫ್‌ಗೆ ಲಗ್ಗೆ ಇಟ್ಟ 6 ತಂಡಗಳು; ಸಮಯ, ವೇಳಾಪಟ್ಟಿ ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ
ಕನ್ನಡ ಸುದ್ದಿ  /  ಕ್ರೀಡೆ  /  ಪ್ರೊ ಕಬಡ್ಡಿ ಲೀಗ್‌ ಪ್ಲೇಆಫ್‌ಗೆ ಲಗ್ಗೆ ಇಟ್ಟ 6 ತಂಡಗಳು; ಸಮಯ, ವೇಳಾಪಟ್ಟಿ ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ

ಪ್ರೊ ಕಬಡ್ಡಿ ಲೀಗ್‌ ಪ್ಲೇಆಫ್‌ಗೆ ಲಗ್ಗೆ ಇಟ್ಟ 6 ತಂಡಗಳು; ಸಮಯ, ವೇಳಾಪಟ್ಟಿ ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ

ಹರಿಯಾಣ ಸ್ಟೀಲರ್ಸ್ ಮತ್ತು ದಬಾಂಗ್ ಡೆಲ್ಲಿ ಕೆಸಿ ತಂಡಗಳು ನೇರವಾಗಿ ಪಿಕೆಎಲ್‌ 11ನೇ ಆವೃತ್ತಿಯ ಸೆಮಿಫೈನಲ್ ಪ್ರವೇಶಿಸಿವೆ. ಉಳಿದಂತೆ ಪ್ರೊ ಕಬಡ್ಡಿ ಲೀಗ್‌ ಅಂಕಪಟ್ಟಿಯಲ್ಲಿ ಮೂರರಿಂದ ಆರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಪಂದ್ಯಗಳಲ್ಲಿ ಸ್ಪರ್ಧಿಸಲಿವೆ. ಪಿಕೆಎಲ್ ಪ್ಲೇಆಫ್‌ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಪ್ರೊ ಕಬಡ್ಡಿ ಲೀಗ್‌ ಪ್ಲೇಆಫ್‌ ಲಗ್ಗೆ ಇಟ್ಟ 6 ತಂಡಗಳು; ವೇಳಾಪಟ್ಟಿ-ಲೈವ್‌ ಸ್ಟ್ರೀಮಿಂಗ್ ವಿವರ
ಪ್ರೊ ಕಬಡ್ಡಿ ಲೀಗ್‌ ಪ್ಲೇಆಫ್‌ ಲಗ್ಗೆ ಇಟ್ಟ 6 ತಂಡಗಳು; ವೇಳಾಪಟ್ಟಿ-ಲೈವ್‌ ಸ್ಟ್ರೀಮಿಂಗ್ ವಿವರ

ಪ್ರೊ ಕಬಡ್ಡಿ ಲೀಗ್ (PKL 11) ಪಂದ್ಯಾವಳಿಯ ಲೀಗ್ ಹಂತದ ಪಂದ್ಯಗಳು ಪೂರ್ಣಗೊಂಡಿವೆ. ಡಿಸೆಂಬರ್‌ 24ರ ಮಂಗಳವಾರ ಲೀಗ್‌ ಹಂತಕ್ಕೆ ತೆರೆಬಿದ್ದಿದೆ. ಕೊನೆಯ ಪಂದ್ಯದಲ್ಲಿ ಯುಪಿ ಯೋಧಾಸ್‌ ಹಾಗೂ ಯು ಮುಂಬಾ ಗೆಲುವು ಒಲಿಸಿಕೊಂಡರೆ, ಬೆಂಗಳೂರು ಬುಲ್ಸ್‌ ತಂಡವು ಸೋಲಿನೊಂದಿಗೆ ಅಭಿಯಾನ ಅಂತ್ಯಗೊಳಿಸಿತು. ಒಟ್ಟು 68 ದಿನಗಳ ಕಾಲ ನಡೆದ ಪಂದ್ಯಗಳಲ್ಲಿ 132 ಪಂದ್ಯಗಳು ನಡೆದಿವೆ. ಎಲ್ಲಾ 12 ತಂಡಗಳು ತಲಾ 22 ಪಂದ್ಯಗಳನ್ನು ಆಡಿದ್ದು, ಅವುಗಳ ಪೈಕಿ ಇದೀಗ ಪ್ಲೇಆಫ್‌ ಅಂತಕ್ಕೆ ಆರು ತಂಡಗಳು ಮಾತ್ರ ಅರ್ಹತೆ ಪಡೆದಿವೆ. ಗಳಿಸಿದ ಅಂಕಗಳ ಆಧಾರದ ಮೇಲೆ ಅಂಕಪಟ್ಟಿಯಲ್ಲಿ ಅಗ್ರ ಆರು ಸ್ಥಾನ ಪಡೆದ ತಂಡಗಳು ಪಿಕೆಎಲ್‌ ಸೀಸನ್ 11ರ ಟ್ರೋಫಿ ಗೆಲ್ಲುವ ಸಮಾನ ಅವಕಾಶಗಳನ್ನು ಪಡೆಯಲಿವೆ. ಈ ವಾರದ ಅಂತ್ಯದ ವೇಳೆಗೆ ಹೊಸ ಚಾಂಪಿಯನ್ ಯಾರು ಎಂಬುದು ಬಹಿರಂಗವಾಗಲಿದೆ.

ಲೀಗ್‌ ಹಂತದ ಬಳಿಕ ಹರಿಯಾಣ ಸ್ಟೀಲರ್ಸ್ ತಂಡವು ಅತ್ಯಂತ ಬಲಿಷ್ಠ ತಂಡ ಎನಿಸಿಕೊಂಡಿದೆ. ಒಟ್ಟು 22 ಪಂದ್ಯಗಳಿಂದ 16 ಗೆಲುವು ಮತ್ತು ಆರು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಇದೇ ವೇಳೆ ದಬಾಂಗ್ ಡೆಲ್ಲಿ ಎಫ್‌ಸಿ ತಂಡವು 13 ಗೆಲುವುಗಳೊಂದಿಗೆ 84 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದಿದೆ. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಯುಪಿ ಯೋಧಾಸ್, ಒಟ್ಟು 13 ಗೆಲುವಿನಿಂದ 79 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ದಾಖಲೆಯ ಮೂರು ಬಾರಿಯ ಪಿಕೆಎಲ್ ಚಾಂಪಿಯನ್ ಪಾಟ್ನಾ ಪೈರೇಟ್ಸ್ 77 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಪ್ಲೇಆಫ್‌ಗೆ ಲಗ್ಗೆ ಇಟ್ಟ ಕೊನೆಯ ತಂಡವಾದ ಯು ಮುಂಬಾ 71 ಅಂಕಗಳೊಂದಿಗೆ ಐದನೇ ಸ್ಥಾನವನ್ನು ಗಳಿಸಿದರೆ, ಜೈಪುರ ಪಿಂಕ್ ಪ್ಯಾಂಥರ್ಸ್ 70 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.

ಪ್ಲೇಆಫ್ ಸ್ವರೂಪ

ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ನೇರವಾಗಿ ಸೆಮಿಫೈನಲ್‌ ಪ್ರವೇಶಿಸುತ್ತವೆ. ಅದರಂತೆ ಹರಿಯಾಣ ಸ್ಟೀಲರ್ಸ್ ಮತ್ತು ದಬಾಂಗ್ ಡೆಲ್ಲಿ ಕೆಸಿ ತಂಡಗಳು ಸೆಮಿಫೈನಲ್ ಹಂತವನ್ನು ಪ್ರವೇಶಿಸಿವೆ. ಅಂಕಪಟ್ಟಿಯಲ್ಲಿ ಮೂರನೇ ಮತ್ತು ಆರನೇ ಸ್ಥಾನ ಪಡೆದ ತಂಡಗಳು 2ನೇ ಎಲಿಮಿನೇಟರ್ ಪಂದ್ಯಗಳಲ್ಲಿ ಸ್ಪರ್ಧಿಸಲಿವೆ. ಇದೇ ವೇಳೆ ನಾಲ್ಕು ಮತ್ತು ಐದನೇ ಸ್ಥಾನ ಪಡೆದ ತಂಡಗಳು ಎರಡನೇ ಎಲಿಮನೇಟರ್‌ ಪಂದ್ಯದಲ್ಲಿ ಆಡಲಿವೆ. ಈ ಎರಡು ಪಂದ್ಯಗಳಲ್ಲಿ ಗೆದ್ದ ತಂಡಗಳು ಸೆಮಿಫೈನಲ್‌ ಪ್ರವೇಶಿಸುತ್ತವೆ.

ಪ್ಲೇಆಫ್‌ ಪಂದ್ಯಗಳ ವೇಳಾಪಟ್ಟಿ

ಡಿಸೆಂಬರ್ 26, 2024

  • ಎಲಿಮಿನೇಟರ್ 1: ಯುಪಿ ಯೋಧಾಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ - ಸಂಜೆ 8:00 (ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಪುಣೆ)
  • ಎಲಿಮಿನೇಟರ್ 2: ಪಾಟ್ನಾ ಪೈರೇಟ್ಸ್ vs ಯು ಮುಂಬಾ - ಸಂಜೆ 9:00 (ಬಾಲೆವಾಡಿ ಕ್ರೀಡಾ ಸಂಕೀರ್ಣ, ಪುಣೆ)

ಡಿಸೆಂಬರ್ 27, 2024

  • ಮೊದಲ ಸೆಮಿಫೈನಲ್ : ಹರಿಯಾಣ ಸ್ಟೀಲರ್ಸ್ vs TBC - ಸಂಜೆ 8:00 (ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಪುಣೆ)
  • ಎರಡನೇ ಸೆಮಿಫೈನಲ್ : ದಬಾಂಗ್ ದೆಹಲಿ ಕೆಸಿ vs TBC - ಸಂಜೆ 9:00 (ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಪುಣೆ)

ಇದನ್ನೂ ಓದಿ | ಪ್ರೊ ಕಬಡ್ಡಿ ಲೀಗ್‌ನ ಸಾರ್ವಕಾಲಿಕ ಅತ್ಯುತ್ತಮ ಪ್ಲೇಯಿಂಗ್ 7; ಬೆಂಗಳೂರು ಬುಲ್ಸ್‌ ಆಟಗಾರರೇ ಹೆಚ್ಚು

ಡಿಸೆಂಬರ್ 29, 2024

  • ಫೈನಲ್: TBC vs TBC - ಸಂಜೆ 8:00 (ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಪುಣೆ)

ಲೈವ್ ಸ್ಟ್ರೀಮಿಂಗ್‌ ವಿವರ

ಪ್ರೊ ಕಬಡ್ಡಿ ಲೀಗ್ 2024ರ ಪ್ಲೇಆಫ್‌ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ 2 ಎಚ್‌ಡಿ ಮತ್ತು ಸ್ಟಾರ್ ಸ್ಪೋರ್ಟ್ಸ್ 2 ಚಾನೆಲ್‌ನಲ್ಲಿ ನೇರಪ್ರಸಾರವಾಗಲಿದೆ. ಇದೇ ವೇಳೆ ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಇಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.