PKL 11: ಇಂದಿನಿಂದ ಪ್ರೊ ಕಬಡ್ಡಿ ಲೀಗ್ ಸೀಸನ್ 11 ಆರಂಭ; ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್ ಮುಖಾಮುಖಿ
ಕನ್ನಡ ಸುದ್ದಿ  /  ಕ್ರೀಡೆ  /  Pkl 11: ಇಂದಿನಿಂದ ಪ್ರೊ ಕಬಡ್ಡಿ ಲೀಗ್ ಸೀಸನ್ 11 ಆರಂಭ; ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ Vs ತೆಲುಗು ಟೈಟಾನ್ಸ್ ಮುಖಾಮುಖಿ

PKL 11: ಇಂದಿನಿಂದ ಪ್ರೊ ಕಬಡ್ಡಿ ಲೀಗ್ ಸೀಸನ್ 11 ಆರಂಭ; ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್ ಮುಖಾಮುಖಿ

Pro Kabaddi league: ಈ ಬಾರಿಯ ಪಿಕೆಎಲ್ ಆವೃತ್ತಿಯು ಮೂರು ನಗರಗಳಲ್ಲಿ ನಡೆಯಲಿದೆ. ಮೊದಲ ಹಂತದ ಸ್ಪರ್ಧೆಯು ಹೈದರಾಬಾದ್‌ನ ಗಚಿಬೌಲಿಯಲ್ಲಿರುವ ಜಿಎಂಸಿ ಬಾಲಯೋಗಿ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 9 ರವರೆಗೆ ನಡೆಯಲಿದೆ. ಮೊದಲ ಪಂದ್ಯದಲ್ಲೇ ಬೆಂಗಳೂರು ಬುಲ್ಸ್‌ ಕಣಕ್ಕಿಳಿಯುತ್ತಿದೆ.

ಪಿಕೆಎಲ್ 11ರ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್ ಮುಖಾಮುಖಿಯಾಗುತ್ತಿವೆ.
ಪಿಕೆಎಲ್ 11ರ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್ ಮುಖಾಮುಖಿಯಾಗುತ್ತಿವೆ.

ಕಳೆದ ಹತ್ತು ವರ್ಷಗಳಿಂದ ಅಭಿಮಾನಿಗಳನ್ನು ರಂಜಿಸುತ್ತಿರುವ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಐತಿಹಾಸಿಕ ಎರಡನೇ ದಶಕಕ್ಕೆ ಕಾಲಿಡುತ್ತಿದೆ. ಬಹುನಿರೀಕ್ಷಿತ ಮೆಗಾ ಲೀಗ್ ಹನ್ನೊಂದನೇ ಸೀಸನ್‌ಗೆ ಸಿದ್ಧವಾಗಿದೆ. ಅಕ್ಟೋಬರ್‌ 18ರ ಶುಕ್ರವಾರ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ನಡುವಿನ ರೋಚಕ ಮೊದಲ ಪಂದ್ಯದೊಂದಿಗೆ ಹೊಸ ಸೀಸನ್ ಪ್ರಾರಂಭವಾಗುತ್ತದೆ. ನೂತನ ಸೀಸನ್‌ನ ಆರಂಭಕ್ಕೂ ಮುನ್ನ, ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ಹಯಾತ್ ಪ್ಲೇಸ್‌ನಲ್ಲಿ ಭವ್ಯ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪಿಕೆಎಲ್ ಲೀಗ್ ಆಯುಕ್ತ ಅನುಪಮ್ ಗೋಸ್ವಾಮಿ, ತಂಡಗಳ ನಾಯಕರಾದ ಪವನ್ ಶೆರಾವತ್ (ತೆಲುಗು ಟೈಟಾನ್ಸ್) ಮತ್ತು ಪ್ರದೀಪ್ ನರ್ವಾಲ್ (ಬೆಂಗಳೂರು ಬುಲ್ಸ್) ಭಾಗವಹಿಸಿದ್ದರು. ಇತರ 10 ತಂಡಗಳ ನಾಯಕರು ಸಹ ಹಾಜರಿದ್ದರು.

ಈ ಬಾರಿ ಪಿಕೆಎಲ್ ಮೂರು-ನಗರಗಳಲ್ಲಿ ನಡೆಯಲಿದೆ. ಮೊದಲ ಹಂತದ ಸ್ಪರ್ಧೆಯು ಹೈದರಾಬಾದ್‌ನ ಗಚಿಬೌಲಿಯಲ್ಲಿರುವ ಜಿಎಂಸಿ ಬಾಲಯೋಗಿ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 18 ರಿಂದ ನವೆಂಬರ್ 9 ರವರೆಗೆ ನಡೆಯಲಿದೆ. ನೋಯ್ಡಾ ಒಳಾಂಗಣ ಕ್ರೀಡಾಂಗಣವು ನವೆಂಬರ್ 10 ರಿಂದ ಡಿಸೆಂಬರ್ 1ರವರೆಗೆ ಎರಡನೇ ಲೆಗ್ ಅನ್ನು ಆಯೋಜಿಸುತ್ತದೆ. ಪುಣೆಯ ಬಾಲೆವಾಡಿ ಕ್ರೀಡಾ ಸಂಕೀರ್ಣದಲ್ಲಿರುವ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ಮೂರನೇ ಹಂತವು ಡಿಸೆಂಬರ್ 3 ರಿಂದ ಡಿಸೆಂಬರ್ 24 ರವರೆಗೆ ನಡೆಯಲಿದೆ.

ಬೆಂಗಳೂರು vs ತೆಲುಗು ಟೈಟಾನ್ಸ್

ಪರ್ದೀಪ್ ನರ್ವಾಲ್ ಅವರು ಬೆಂಗಳೂರು ಬುಲ್ಸ್ ತಂಡಕ್ಕೆ ಮರಳಿದ್ದಾರೆ. ಪಿಕೆಎಲ್‌ ಇತಿಹಾಸದಲ್ಲೇ ಅತ್ಯುತ್ತಮ ರೈಡರ್‌ ಆಗಿರುವ ಪರ್ದೀಪ್, ಬುಲ್ಸ್ ತಂಡದ ಸ್ಟಾರ್‌ ರೈಡರ್ ಆಗಿದ್ದು ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಅತ್ತ ತೆಲುಗು ಟೈಟಾನ್ಸ್ ಪಿಕೆಎಲ್ 11 ರಲ್ಲಿ ಪವನ್ ಸೆಹ್ರಾವತ್ ಅವರ ಹೆಗಲ ಮೇಲೆ ಮತ್ತೊಮ್ಮೆ ಹೆಚ್ಚಿನ ಜವಾಬ್ದಾರಿ ನೀಡಿದೆ. ಕಳೆದ ಋತುವಿನಲ್ಲಿ ಅವರ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ, ತಂಡವು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಟೈಟಾನ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು.

ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ಪಿಕೆಎಲ್‌ನಲ್ಲಿ ಇದುವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲಿ ಬುಲ್ಸ್ ಸಂಪೂರ್ಣವಾಗಿ ಮೇಲುಗೈ ಸಾಧಿಸಿದೆ. ಉಭಯ ತಂಡಗಳು ಒಟ್ಟು 23 ಪಂದ್ಯಗಳನ್ನು ಆಡಿವೆ. ಈ ಅವಧಿಯಲ್ಲಿ ಬೆಂಗಳೂರು ಬುಲ್ಸ್ 16 ಪಂದ್ಯಗಳನ್ನು ಗೆದ್ದಿದ್ದು, ತೆಲುಗು ಟೈಟಾನ್ಸ್ ಕೇವಲ 3 ಪಂದ್ಯಗಳನ್ನು ಗೆದ್ದಿದೆಯಷ್ಟೆ. ನಾಲ್ಕು ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿವೆ. ಈ ಅಂಕಿಅಂಶಗಳನ್ನು ನೋಡಿದರೆ ತೆಲುಗು ಟೈಟಾನ್ಸ್ ವಿರುದ್ಧ ಬುಲ್ಸ್ ಸಂಪೂರ್ಣ ಮೇಲುಗೈ ಸಾಧಿಸಿದೆ.

ನೇರಪ್ರಸಾರ

ಪ್ರೊ ಕಬಡ್ಡಿ ಲೀಗ್ ಸೀಸನ್ 11ರ ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಆಗಲಿದೆ. ಇದೇ ವೇಳೆ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮ್ ವೀಕ್ಷಿಸಬಹುದು.

ಬೆಂಗಳೂರು ಬುಲ್ಸ್ ತಂಡ

ಸುಶೀಲ್, ಅಕ್ಷಿತ್, ಮಂಜೀತ್, ಪಂಕಜ್, ಅಜಿಂಕ್ಯ ಪವಾರ್, ಪರ್ದೀಪ್ ನರ್ವಾಲ್, ಪ್ರಮೋತ್ ಸೈಸಿಂಗ್, ಜೈ ಭಗವಾನ್, ಜತಿನ್, ಪೊನ್‌ಪರ್ತಿಬನ್ ಸುಬ್ರಮಣಿಯನ್, ಸೌರಭ್ ನಂದಲ್, ಆದಿತ್ಯ ಪೊವಾರ್, ಲಕ್ಕಿ ಕುಮಾರ್, ಪಾರ್ತೀಕ್, ಅರುಳ್ನಂತಬಾಬು, ರೋಹಿತ್ ಕುಮಾರ್, ಅಕ್ಷಿತ್, ಹಸುನ್ ಥೋಂಗ್‌ಕ್ರುಯಾ, ಚಂದ್ರನಾಯಕ್ ಎಂ, ನಿತಿನ್ ರಾವಲ್.

ತೆಲುಗು ಟೈಟಾನ್ಸ್ ತಂಡ

ಶಂಕರ್ ಗಡಾಯಿ, ಅಜಿತ್ ಪವಾರ್, ಅಂಕಿತ್, ಓಂಕಾರ್ ಪಾಟೀಲ್, ಪ್ರಫುಲ್ ಜವಾರೆ, ಸಂಜೀವಿ ಎಸ್, ಪವನ್ ಸೆಹ್ರಾವತ್, ಕ್ರಿಶನ್ ಧುಲ್, ವಿಜಯ್ ಮಲಿಕ್, ರೋಹಿತ್, ಸಾಗರ್, ಚೇತನ್ ಸಾಹು, ನಿತಿನ್, ಮಿಲಾದ್ ಜಬ್ಬಾರಿ, ಮೊಹಮ್ಮದ್ ಮಲಕ್, ಸುಂದರ್, ಮಂಜೀತ್, ಆಶಿಶ್ ನರ್ವಾಲ್, ಅಮಿತ್ ಕುಮಾರ್ .

ಭಾಗವಹಿಸುವ 12 ತಂಡಗಳು

ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್, ದಬಾಂಗ್ ಡೆಲ್ಲಿ, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಟ್ನಾ ಪೈರೆಟ್ಸ್, ಪುಣೇರಿ ಪಲ್ಟನ್, ತಮಿಳು ತಲೈವಾಸ್, ತೆಲುಗು ಟೈಟನ್ಸ್, ಯು ಮುಂಬಾ, ಯುಪಿ ಯೋಧಾಸ್‌.

ವರದಿ: ವಿನಯ್ ಭಟ್.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.