ಪ್ರೊ ಕಬಡ್ಡಿ ಲೀಗ್ 11ರಿಂದ ಹೊರಬಿದ್ದ ಮುಂಬೈ-ಜೈಪುರ: ಇಂದು ಸೆಮಿಫೈನಲ್; ತಂಡಗಳು-ಮುಖಾಮುಖಿ ದಾಖಲೆ ಹಾಗೂ ನೇರಪ್ರಸಾರ ವಿವರ
ಪ್ರೊ ಕಬಡ್ಡಿ ಲೀಗ್ ಸೀಸನ್ 11ರ ಸೆಮಿಫೈನಲ್ ಪಂದ್ಯಗಳಿಗೆ ಅಖಾಡ ಸಜ್ಜಾಗಿದ್ದು, ಅಂತಿಮ ನಾಲ್ಕು ತಂಡಗಳು ಟ್ರೋಫಿ ಗೆಲುವಿನ ಗುರಿ ಹೊಂದಿವೆ. ಡಿಸೆಂಬರ್ 29ರ ಭಾನುವಾರ ಪುಣೆಯಲ್ಲಿ ಫೈನಲ್ ಪಂದ್ಯ ನಡೆಯುತ್ತಿದ್ದು, ಸೆಮೀಸ್ ಗೆಲ್ಲುವ ತಂಡಗಳು ಫೈನಲ್ ಪಂದ್ಯದಲ್ಲಿ ಸೆಣಸಲಿವೆ.
ಪ್ರೊ ಕಬಡ್ಡಿ ಸೀಸನ್ 11ರ ಸೆಮಿಫೈನಲಿಸ್ಟ್ ತಂಡಗಳು ಯಾವುವು ಎಂಬುದು ಕೊನೆಗೂ ಅಂತಿಮವಾಗಿದೆ. ಲೀಗ್ ಹಂತ ಮುಕ್ತಾಯವಾದ ಬೆನ್ನಲ್ಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಹರಿಯಾಣ ಸ್ಟೀಲರ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳು ನೇರವಾಗಿ ಸೆಮೀಸ್ ಪ್ರವೇಶಿಸಿದ್ದವು. ಇದೀಗ ಡಿಸೆಂಬರ್ 26ರ ಗುರುವಾರ ನಡೆದ ಎಲಿಮನೇಟರ್ ಪಂದ್ಯಗಳಲ್ಲಿ ಗೆದ್ದ ಪಾಟ್ನಾ ಪೈರೇಟ್ಸ್ ಮತ್ತು ಯುಪಿ ಯೋಧಾಸ್ ತಂಡಗಳು ಸೆಮಿಕದನಕ್ಕೆ ಲಗ್ಗೆ ಇಟ್ಟಿವೆ. ಇದರೊಂದಿಗೆ ನಾಕೌಟ್ ಪಂದ್ಯದಲ್ಲಿ ಸೋತ ಯು ಮುಂಬಾ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.
ಡಿಸೆಂಬರ್ 27ರ ಶುಕ್ರವಾರವಾದ ಇಂದು, ಪುಣೆಯಲ್ಲಿ ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಹಾಗೂ ಹಾಗೂ ಯುಪಿ ಯೋಧಾಸ್ ಮುಖಾಮುಖಿಯಾಗಲಿವೆ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ಪಾಟ್ನಾ ಪೈರೇಟ್ಸ್ ಸೆಣಸಲಿವೆ. ಮೊದಲ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾದರೆ, ಎರಡನೇ ಪಂದ್ಯ 9 ಗಂಟೆಗೆ ನಡೆಯಲಿದೆ. ಈ ಎರಡು ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಡಿಸೆಂಬರ್ 29ರ ಭಾನುವಾರ ನಡೆಯಲಿರುವ ಅದ್ಧೂರಿ ಫೈನಲ್ ಪಂದ್ಯದಲ್ಲಿ ಆಡಲಿವೆ.
- ಮೊದಲ ಸೆಮಿಫೈನಲ್ (ಡಿಸೆಂಬರ್ 27) : ಹರಿಯಾಣ ಸ್ಟೀಲರ್ಸ್ vs ಯುಪಿ ವಾರಿಯರ್ಸ್ - ಸಂಜೆ 8:00 (ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಪುಣೆ)
- ಎರಡನೇ ಸೆಮಿಫೈನಲ್ (ಡಿಸೆಂಬರ್ 27): ದಬಾಂಗ್ ಡೆಲ್ಲಿ ಕೆಸಿ vs ಪಾಟ್ನಾ ಪೈರೇಟ್ಸ್ - ಸಂಜೆ 9:00 (ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಪುಣೆ)
- ಫೈನಲ್ (ಡಿಸೆಂಬರ್ 29): TBC vs TBC - ಸಂಜೆ 8:00 (ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಪುಣೆ)
ಹರಿಯಾಣ ಸ್ಟೀಲರ್ಸ್ vs ಯುಪಿ ವಾರಿಯರ್ಸ್ ಮುಖಾಮುಖಿ ದಾಖಲೆ
ಡಿಸೆಂಬರ್ 26ರಂದು ನಡೆದ ಎಲಿಮನೇಟರ್ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 46-18 ಅಂಕಗಳಿಂದ ಭರ್ಜರಿಯಾಗಿ ಸೋಲಿಸಿದ ಯುಪಿ ಯೋಧಾಸ್, ಸೆಮಿಫೈನಲ್ ಸ್ಥಾನ ಪಡೆದುಕೊಂಡಿದೆ. ಪಿಕೆಎಲ್ ಇತಿಹಾಸದಲ್ಲಿ, ಹರಿಯಾಣ ಸ್ಟೀಲರ್ಸ್ ಮತ್ತು ಯುಪಿ ಯೋಧಾಸ್ ತಂಡಗಳು ಒಟ್ಟು 12 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಅದರಲ್ಲಿ ಎರಡೂ ತಂಡಗಳು ಸಮಾನ ಪೈಪೋಟಿ ನೀಡಿವೆ. ಉಭಯ ತಂಡಗಳು ತಲಾ 5ರಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋಲು ಕಂಡಿದೆ. 2 ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿವೆ.
ದಬಾಂಗ್ ಡೆಲ್ಲಿ ಕೆಸಿ vs ಪಾಟ್ನಾ ಪೈರೇಟ್ಸ್ ಮುಖಾಮುಖಿ ದಾಖಲೆ
ಗುರುವಾರದ ಮತ್ತೊಂದು ಎಲಿಮನೇಟರ್ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡವು ಯು ಮುಂಬಾ ತಂಡದ ವಿರುದ್ಧ 31-23 ಅಂಕಗಳಿಂದ ಗೆದ್ದು ಬೀಗಿತು. ಇದೀಗ ತಂಡವು ಸೆಮಿಫೈನಲ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಕೆಸಿ ವಿರುದ್ಧ ಸೆಣಸಲಿದೆ. ಪಿಕೆಎಲ್ ಇತಿಹಾಸದಲ್ಲಿ ದಬಾಂಗ್ ಡೆಲ್ಲಿ ಮತ್ತು ಪಾಟ್ನಾ ಪೈರೇಟ್ಸ್ 22 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಪಾಟ್ನಾ ಪೈರೇಟ್ಸ್ 10 ಬಾರಿ ಜಯಗಳಿಸಿದರೆ, ದಬಾಂಗ್ ಡೆಲ್ಲಿ ತಂಡವು 9 ಸಂದರ್ಭಗಳಲ್ಲಿ ಗೆಲುವು ಸಾಧಿಸಿದೆ. 2 ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿವೆ.
ಲೈವ್ ಸ್ಟ್ರೀಮಿಂಗ್ ವಿವರ
ಪಿಕೆಎಲ್ ಸೀಸನ್ 11ರ ಎಲ್ಲಾ ಪಂದ್ಯಗಳು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮ್ ಆಗಲಿವೆ. ಇದೇ ವೇಳೆ ಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರೊ ಕಬಡ್ಡಿ ಸೀಸನ್ 11ರ ಪಂದ್ಯಗಳನ್ನು ವೀಕ್ಷಿಸಬಹುದು.