PKL 11: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಗೂಳಿಗಳು; ಬೆಂಗಳೂರು ಬುಲ್ಸ್ ವಿರುದ್ಧ 37-29 ಅಂತದಿಂದ ಗೆದ್ದ ತೆಲುಗು ಟೈಟಾನ್ಸ್
ಬೆಂಗಳೂರು ತಂಡದ ಭರವಸೆಯ ರೈಡರ್ ಪರ್ದೀಪ್ ನರ್ವಾಲ್, ಮೊದಲ ಪಂದ್ಯದಲ್ಲೇ ನಿರಾಶೆ ಮೂಡಿಸಿದರು. ಕೇವಲ 3 ಅಂಕಗಳೊಂದಿಗೆ ಕಳೆದ ಆವೃತ್ತಿಯಂತೆ ಕಳಪೆ ಪ್ರದರ್ಶನ ಮುಂದುವರೆಸಿದರು. ಸಾಂಘಿಕ ಹೋರಾಟದಲ್ಲಿ ವಿಫಲವಾದ ಬುಲ್ಸ್ ಸೋಲಿನ ಆರಂಭ ಪಡೆಯಿತು.
ಪ್ರೊ ಕಬಡ್ಡಿ ಲೀಗ್ (Pro Kabaddi League) ಸೀಸನ್ 11ರ ಉದ್ಘಾಟನಾ ಪಂದ್ಯದಲ್ಲೇ ಬೆಂಗಳೂರು ಬುಲ್ಸ್ (Bengaluru Bulls) ಮುಗ್ಗರಿಸಿದೆ. ಹೈದರಾಬಾದ್‌ನ ಗಚಿಬೌಲಿಯ ಜಿಎಂಸಿಬಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಿಕೆಎಲ್ 2024ನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಬೆಂಗಳೂರು ಬುಲ್ಸ್ ತಂಡ 37-29 ಅಂಕಗಳ ಅಂತರದಿಂದ ಸೋಲು ಕಂಡಿದೆ. ಆರಂಭದಿಂದಲೂ ಪಂದ್ಯದಲ್ಲಿ ಮುನ್ನಡೆ ಕಾಣಲು ವಿಫಲರಾದ ಗೂಳಿಗಳು, ದ್ವಿತಿಯಾರ್ಧದ ಆರಂಭದಲ್ಲಿ ಒಮ್ಮೆ ಸತತ ಅಂಕಗಳನ್ನು ಕಲೆ ಹಾಕಿ ಅಬ್ಬರಿಸುವ ಸೂಚನೆ ನೀಡಿತು. ಆದರೆ, ಪವನ್ ಸೆಹ್ರಾವತ್ ಬಳಗವವನ್ನು ಸತತ ಎರಡನೇ ಬಾರಿ ಆಲೌಟ್ ಮಾಡುವ ಮೂಲಕ ಗೆಲುವು ದೂರವಾಯ್ತು.
ಪಂದ್ಯದ ಆರಂಭದಲ್ಲೇ ಆತಿಥೇಯ ತೆಲುಗು ಟೈಟಾನ್ಸ್ ಪರ ಅಂಕಗಳ ಖಾತೆ ತೆರೆದ ಪವನ್ ಸೆಹ್ರಾವತ್, ಪಂದ್ಯದ ಅಂತ್ಯದವರೆಗೂ ಪಾಯಿಂಟ್ ಬೇಟೆ ಮುಂದುವರೆಸಿದರು. ಒಟ್ಟು 13 ರೈಡ್ ಪಾಯಿಂಟ್ ಕಲೆಹಾಕುವುದರೊಂದಿಗೆ ಸೀಸನ್ 11ರ ಮೊದಲ ಸೂಪರ್ 10 ಪೂರ್ಣಗೊಳಿಸಿದರು. ಇದು ತೆಲುಗು ತಂಡಕ್ಕೆ ಟೂರ್ನಿಯ ಆರಂಭದಲ್ಲೇ ಆನೆಬಲ ಮೂಡಿಸಿದೆ.
ತಂಡದ ರೈಡಿಂಗ್‌ಗೆ ಟ್ಯಾಕಲ್ ಮೂಲಕ ಸಾಥ್ ಕೊಟ್ಟ ಕೃಷ್ಣನ್ 6 ಟ್ಯಾಕಲ್ ಪಾಯಿಂಟ್ ಸಂಗ್ರಹಿಸಿ ಹೈಫೈವ್ ಪೂರ್ಣಗೊಳಿಸಿದರು.
ನಿರಾಶೆ ಮೂಡಿಸಿದ ಪರ್ದೀಪ್ ನರ್ವಾಲ್
ಬೆಂಗಳೂರು ತಂಡದ ನೂತನ ನಾಯಕ ಹಾಗೂ ಹೊಸ ಭರವಸೆಯ ರೈಡರ್ ಪರ್ದೀಪ್ ನರ್ವಾಲ್, ಮೊದಲ ಪಂದ್ಯದಲ್ಲೇ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು. ಯಶಸ್ವಿ ರೈಡಿಂಗ್‌ಗೆ ಸತತ ವಿಫಲರಾದ ಅವರು, ಕೇವಲ 3 ಅಂಕಗಳೊಂದಿಗೆ ಮೊದಲ ಪಂದ್ಯ ಮುಗಿಸಿದರು. ಇದೇ ವೇಳೆ ಡಿಫೆಂಡರ್ ಸುರಿಂದರ್ ಸಿಂಗ್ 5 ಅಂಕ ಗಳಿಸಿದರು. ಜತಿನ್ ಫೋಗತ್ ನಾಲ್ಕು ಪಾಯಿಂಟ್ ಸಂಗ್ರಹಿಸಿದರು.
ಬುಲ್ಸ್ ಆಕ್ರಮಣಕಾರಿ ಆಟ
ತೆಲುಗು ಟೈಟಾನ್ಸ್ ತಂಡವು ಮೊದಲಾರ್ಧದ ಅಂತ್ಯಕ್ಕೆ 20:11 ಅಂಕಗಳ ಮುನ್ನಡೆ ಸಾಧಿಸಿತ್ತು. ಇದರಲ್ಲಿ ಒಂದು ಬಾರಿ ಎದುರಾಳಿಯನ್ನು ಆಲೌಟ್ ಮಾಡಿತು. ಎರಡನೇ ಸುತ್ತಿನ ಆರಂಭದಲ್ಲಿ ಆಕ್ರಮಣಕಾರಿ ಆಟವಾಡಿದ ಬುಲ್ಸ್, ತೆಲುಗು ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಯ್ತು. ಅಷ್ಟರಲ್ಲಿ ಅಂಕ 24-22ರೊಂದಿಗೆ ಪಂದ್ಯದ ಕುತೂಹಲ ಹೆಚ್ಚಿತು. ಮರುಕ್ಷಣದಲ್ಲೇ 24-23ರೊಂದಿಗೆ ಕೇಲವ ಒಂದು ಅಂಕದ ವ್ಯತ್ಯಾಸ ಕಂಡಿತು. ಈ ವೇಳೆ ಮತ್ತೆ ಅಬ್ಬರ ಶುರುಮಾಡಿದ ಟೈಟಾನ್ಸ್ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಮತ್ತೊಮ್ಮೆ ಬೆಂಗಳೂರು ಆಟಗಾರರನ್ನು ಆಲೌಟ್ ಮಾಡುವ ಮೂಲಕ 35-26ರಿಂದ ಮುನ್ನಡೆ ಕಾಯ್ದುಕೊಂಡಿತು. ಮತ್ತೆ ಮೇಲೇಳಲು ಶ್ರಮಪಟ್ಟ ಬುಲ್ಸ್, ಕೊನೆಗೆ 37-29 ಅಂಕಗಳಿಂದ ಸೋಲೊಪ್ಪಿತು.
ತೆಲುಗು ಟೈಟಾನ್ಸ್ ತಂಡ: ಮಂಜೀತ್, ಸಾಗರ್, ಅಜಿತ್ ಪವಾರ್, ಪವನ್ ಸೆಹ್ರಾವತ್, ವಿಜಯ್ ಮಲಿಕ್, ಕ್ರಿಶನ್, ಅಂಕಿತ್
ಬೆಂಗಳೂರು ಬುಲ್ಸ್: ಪರ್ದೀಪ್ ನರ್ವಾಲ್, ಸುರಿಂದರ್ ದಹಲ್, ಜೈ ಭಗವಾನ್, ಪಾರ್ತೀಕ್, ಅಜಿಂಕ್ಯ ಪವಾರ್, ಸೌರಭ್ ನಂದಲ್, ನಿತಿನ್ ರಾವಲ್